– ವಿದ್ಯಾರ್ಥಿಗಳನ್ನು ಪಾಸ್ ಮಾಡುವ ನಿಯಮವನ್ನ ಕೇಂದ್ರ ರದ್ದುಗೊಳಿಸಿದ್ಯಾಕೆ?
ಶೈಕ್ಷಣಿಕ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರ ಮಹತ್ವದ ಬದಲಾವಣೆ ತಂದಿದೆ. ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಶೈಕ್ಷಣಿಕ ಏಳಿಗೆಗಾಗಿ ನೀತಿಯಲ್ಲಿ ಮೇಜರ್ ಸರ್ಜರಿ ಮಾಡಿದೆ. ತನ್ನ ಅಡಿಯಲ್ಲಿ ಬರುವ ಶಾಲೆಗಳಲ್ಲಿ 5, 8ನೇ ತರಗತಿಯ ವಿದ್ಯಾರ್ಥಿಗಳಿಗೆ ‘ನೋ-ಡಿಟೆನ್ಷನ್ ಪಾಲಿಸಿ’ (ಅನುತ್ತೀರ್ಣ ರಹಿತ ನೀತಿ) ರದ್ದುಗೊಳಿಸುವ ನಿರ್ಧಾರವನ್ನು ಕೈಗೊಂಡಿದೆ. ಇನ್ಮುಂದೆ ಪರೀಕ್ಷೆಯನ್ನು ಸರಿಯಾಗಿ ಬರೆಯದಿದ್ದರೂ ಪಾಸ್ ಆಗಬಹುದು ಎಂದುಕೊಂಡಿದ್ದ ವಿದ್ಯಾರ್ಥಿಗಳಿಗೆ ಕೇಂದ್ರದ ಈ ಕ್ರಮ ಬಿಸಿ ತುಪ್ಪವಾಗಿದೆ.
ಏನಿದು ಕೇಂದ್ರದ ಹೊಸ ನೀತಿ? ಈ ಪಾಲಿಸಿ ವ್ಯಾಪ್ತಿಗೆ ಯಾವ ವಿದ್ಯಾರ್ಥಿಗಳು ಬರುತ್ತಾರೆ? ಯಾವ ರಾಜ್ಯಗಳಿಗೆ ನೀತಿ ಅನ್ವಯಿಸುತ್ತೆ ಮತ್ತು ಅನ್ವಯಿಸಲ್ಲ ಎಂಬೆಲ್ಲ ಪ್ರಶ್ನೆಗಳಿಗೆ ವಿವರ ಇಲ್ಲಿದೆ. ಇದನ್ನೂ ಓದಿ: INDIA ಒಕ್ಕೂಟದಿಂದ ಕಾಂಗ್ರೆಸ್ ಉಚ್ಚಾಟಿಸಿ – ಆಪ್ ಬಂಡಾಯ!
ನೋ-ಡಿಟೆನ್ಷನ್ ಪಾಲಿಸಿ, ಏನಿದು?
ಕೇಂದ್ರದ ವ್ಯಾಪ್ತಿಗೆ ಬರುವ ಶಾಲೆಗಳಲ್ಲಿ 5, 8ನೇ ತರಗತಿಯ ವಿದ್ಯಾರ್ಥಿಗಳಿಗೆ ‘ನೋ-ಡಿಟೆನ್ಷನ್ ಪಾಲಿಸಿ’ (No-Detention Policy) ರದ್ದುಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ. ವಾರ್ಷಿಕ ಪರೀಕ್ಷೆಯಲ್ಲಿ ಪಾಸಾಗದ 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳನ್ನು ಅನುತ್ತೀರ್ಣಗೊಳಿಸಬಹುದು. ಅವರು ಪರೀಕ್ಷೆಗಳನ್ನು ಪುನಃ ತೆಗೆದುಕೊಳ್ಳಬೇಕಾಗುತ್ತದೆ.
ಪಾಲಿಸಿ ರದ್ದು ಯಾಕೆ?
ಕಲಿಕೆಯಲ್ಲಿ ವಿದ್ಯಾರ್ಥಿಗಳ ಏಳಿಗೆಗಾಗಿ ಕೇಂದ್ರ ಸರ್ಕಾರ ಈ ಕ್ರಮಕೈಗೊಂಡಿದೆ. ಅನುತ್ತೀರ್ಣಗೊಂಡ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಸಲಹೆ, ಸೂಚನೆಗಳ ಜೊತೆಗೆ 2 ತಿಂಗಳ ಒಳಗಾಗಿ ಮರುಪರೀಕ್ಷೆ ನಡೆಸಲಾಗುತ್ತದೆ. ಆಗಲೂ ಪಾಸ್ ಆಗದಿದ್ದರೆ ಅವರನ್ನು ಫೇಲ್ ಎಂದೇ ಪರಿಗಣಿಸಲಾಗುತ್ತದೆ. ಅವರನ್ನು 5 ಮತ್ತು 8ನೇ ತರಗತಿಯಲ್ಲೇ ಉಳಿಸಿಕೊಳ್ಳಲಾಗುತ್ತದೆ. ಅನುತ್ತೀರ್ಣಗೊಂಡ ವಿದ್ಯಾರ್ಥಿ ಮತ್ತು ಅಗತ್ಯಬಿದ್ದರೆ ಪೋಷಕರಿಗೆ ತರಗತಿ ಶಿಕ್ಷಕರು ಹೆಚ್ಚುವರಿ ಸಲಹೆ, ಸೂಚನೆಗಳನ್ನು ನೀಡುತ್ತಾರೆ ಎಂದು ಸರ್ಕಾರ ತನ್ನ ಅಧಿಸೂಚನೆಯಲ್ಲಿ ತಿಳಿಸಿದೆ. ಇದನ್ನೂ ಓದಿ: ಬಿಜೆಪಿಗೆ 2,244 ಕೋಟಿ, ಕಾಂಗ್ರೆಸ್‌ಗೆ 289 ಕೋಟಿ – ಯಾವ ಪಕ್ಷಕ್ಕೆ ಎಷ್ಟು ದೇಣಿಗೆ ಸಿಕ್ಕಿದೆ?
ಆರ್‌ಟಿಇ 2019 ಕಾಯ್ದೆಗೆ ತಿದ್ದುಪಡಿ
ಹೊಸ ನೀತಿ ಜಾರಿಗೊಳಿಸಲು ಕೇಂದ್ರ ಸರ್ಕಾರವು ಉಚಿತ ಮತ್ತು ಕಡ್ಡಾಯ ಶಿಕ್ಷಣದ ಹಕ್ಕು (ಆರ್‌ಟಿಇ) 2019 ಕಾಯ್ದೆಗೆ ತಿದ್ದುಪಡಿ ತಂದಿದೆ. ಶಿಕ್ಷಣ ಹಕ್ಕು ಕಾಯ್ದೆ 2009ರ ಸೆಕ್ಷನ್ 16, 8ನೇ ತರಗತಿವರೆಗೆ ವಿದ್ಯಾರ್ಥಿಗಳನ್ನು ಒಂದೇ ತರಗತಿಯಲ್ಲಿ ಕೂರಿಸುವುದಕ್ಕೆ ನಿರ್ಬಂಧಿಸಿದೆ. ಈ ನೋ-ಡಿಟೆನ್ಷನ್ ನೀತಿಯನ್ನು ಹಿಂತೆಗೆದುಕೊಳ್ಳುವ ಮಸೂದೆಯನ್ನು ಈಚೆಗೆ ಲೋಕಸಭೆಯಲ್ಲಿ ಮಂಡಿಸಲಾಯಿತು. ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವಡೇಕರ್ ಇದನ್ನು ಹೆಚ್ಚಿನ ರಾಜ್ಯ ಸರ್ಕಾರಗಳು ಬೆಂಬಲಿಸಿದ ಪ್ರಮುಖ ಸುಧಾರಣೆ ಎಂದು ಬಣ್ಣಿಸಿದ್ದಾರೆ.
ನೀತಿಯ ರದ್ದತಿಯು ಪ್ರಾಥಮಿಕ ಶಿಕ್ಷಣಕ್ಕೆ ಹೊಣೆಗಾರಿಕೆಯನ್ನು ತರುತ್ತದೆ. ಶಾಲೆಗಳು ಕೇವಲ ಮಧ್ಯಾಹ್ನದ ಊಟದ ಶಾಲೆಗಳಾಗಿ ಮಾರ್ಪಟ್ಟಿವೆ. ವಿದ್ಯಾರ್ಥಿಗಳು ಅಧ್ಯಯನವನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಇಲ್ಲಿ ಶಿಕ್ಷಣ ಮತ್ತು ಕಲಿಕೆ ಕಾಣೆಯಾಗಿದೆ ಎಂಬುದು ಕೇಂದ್ರದ ಅಭಿಪ್ರಾಯ.
ನೋ-ಡಿಟೆನ್ಷನ್ ಪಾಲಿಸಿ ಬಂದಿದ್ಯಾವಾಗ?
ಶಿಕ್ಷಣ ಹಕ್ಕು ಕಾಯ್ದೆಯಡಿ 2009ರಲ್ಲಿ ‘ನೋ ಡಿಟೆನ್ಷನ್ ಪಾಲಿಸಿ’ಯನ್ನು ಪರಿಚಯಿಸಲಾಯಿತು. ಭಾರತದ ಪ್ರತಿ ವಿದ್ಯಾರ್ಥಿಯು 8ನೇ ತರಗತಿ ವರೆಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಒದಗಿಸುವ ಗುರಿಯನ್ನು ಇದು ಹೊಂದಿತ್ತು. ವಿವಿಧ ಹಿನ್ನೆಲೆಯ ಮಕ್ಕಳಿಗೆ ಸಮಾನ ಶಿಕ್ಷಣದ ಅವಕಾಶ ಕಲ್ಪಿಸುವ ಗುರಿ ಹೊಂದಲಾಗಿತ್ತು. ಶೈಕ್ಷಣಿಕ ಸವಾಲುಗಳನ್ನು ಲೆಕ್ಕಿಸದೇ ಪ್ರಾಥಮಿಕ ಶಿಕ್ಷಣವನ್ನು ಪೂರ್ಣಗೊಳಿಸಲು ಅವರಿಗೆ ಅನುವು ಮಾಡಿಕೊಟ್ಟಿತ್ತು. ಮಕ್ಕಳು ಶಾಲೆ ಬಿಡುವುದನ್ನು ತಡೆಗಟ್ಟಲು ಮತ್ತು ಹಾಜರಾತಿ ಪ್ರಮಾಣ ಹೆಚ್ಚಿಸಲು ಈ ನೀತಿ ನಿರ್ಣಾಯಕವಾಗಿತ್ತು ಎಂದು ಶಿಕ್ಷಣ ತಜ್ಞರು ಆಗ ನೀತಿ ಬಗ್ಗೆ ಸಕಾರಾತ್ಮಕ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: ವಾಜಪೇಯಿ ಜನ್ಮದಿನಕ್ಕೆ ಮೋದಿ ಗಿಫ್ಟ್ – ದೇಶದ ಮೊದಲ ನದಿ ಜೋಡಣೆ ಯೋಜನೆಗೆ ಶಿಲಾನ್ಯಾಸ
ಆದಾಗ್ಯೂ, ಹಲವು ರಾಜ್ಯಗಳು ಈ ನೀತಿಯನ್ನು ವಿರೋಧಿಸಿದವು. ಇದು ವಿದ್ಯಾರ್ಥಿಗಳನ್ನು ಬೋರ್ಡ್ ಪರೀಕ್ಷೆಗಳಿಗೆ ಸರಿಯಾಗಿ ತಯಾರಾಗದಂತೆ ಮಾಡಿದೆ. 10ನೇ ತರಗತಿಯಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ವೈಫಲ್ಯಕ್ಕೆ ಕಾರಣವಾಗಿದೆ ಎಂದು ವಾದಿಸಿದ್ದವು. ಪರಿಣಾಮವಾಗಿ 2015ರಲ್ಲಿ ಸಿಎಬಿಇ ಸಭೆಯಲ್ಲಿ 28ರ ಪೈಕಿ 23 ರಾಜ್ಯಗಳು ನೀತಿಯನ್ನು ರದ್ದುಗೊಳಿಸಲು ಶಿಫಾರಸು ಮಾಡಿದವು. 5 ಮತ್ತು 8ನೇ ತರಗತಿಗಳಲ್ಲಿ ನಿಯಮಿತ ಪರೀಕ್ಷೆಗಳನ್ನು ನಡೆಸಲು ರಾಜ್ಯಗಳಿಗೆ ಅವಕಾಶ ಮಾಡಿಕೊಟ್ಟವು.
ಯಾವ ರಾಜ್ಯಗಳಲ್ಲಿ ಈಗಾಗಲೇ ನೀತಿ ರದ್ದು?
15ಕ್ಕೂ ಹೆಚ್ಚು ರಾಜ್ಯಗಳು ನೋ-ಡಿಟೆನ್ಷನ್ ನೀತಿಯನ್ನು ರದ್ದುಗೊಳಿಸಿವೆ. ಅಸ್ಸಾಂ, ಬಿಹಾರ, ಗುಜರಾತ್, ಹಿಮಾಚಲ ಪ್ರದೇಶ, ಜಮ್ಮು-ಕಾಶ್ಮೀರ, ಜಾರ್ಖಂಡ್, wಮಧ್ಯಪ್ರದೇಶ, ಮೇಘಾಲಯ, ನಾಗಾಲ್ಯಾಂಡ್, ಪಂಜಾಬ್, ರಾಜಸ್ಥಾನ, ಸಿಕ್ಕಿಂ, ತ್ರಿಪುರಾ, ಉತ್ತರಾಖಂಡ ಮತ್ತು ಪಶ್ಚಿಮ ಬಂಗಾಳ ನೀತಿ ಜಾರಿಯಲ್ಲಿಲ್ಲ.
ಯಾವ ರಾಜ್ಯಗಳಲ್ಲಿ ನೀತಿ ಜಾರಿಯಲ್ಲಿದೆ?
ಆಂಧ್ರಪ್ರದೇಶ, ಅರುಣಾಚಲ ಪ್ರದೇಶ, ಛತ್ತೀಸಗಢ, ಗೋವಾ, ಕರ್ನಾಟಕ, ಕೇರಳ, ಮಹಾರಾಷ್ಟ್ರ, ಮಣಿಪುರ, ಮಿಜೋರಾಂ, ಒಡಿಶಾ, ತೆಲಂಗಾಣ, ಉತ್ತರ ಪ್ರದೇಶ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಚಂಡೀಗಢ, ಲಡಾಖ್‌ನಲ್ಲಿ ನೋ-ಡಿಟೆನ್ಷನ್ ಪಾಲಿಸಿ ಇನ್ನೂ ಜಾರಿಯಲ್ಲಿದೆ. ಮುಖ್ಯವಾಗಿ, ಹರಿಯಾಣ ಮತ್ತು ಪುದುಚೇರಿ ಈ ನೀತಿಯ ಅನುಷ್ಠಾನದ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಇದನ್ನೂ ಓದಿ: Hand Luggage On Flights | ಇನ್ಮುಂದೆ 7 ಕೆಜಿ ಮೀರದ ಕೇವಲ 1 ಬ್ಯಾಗ್‌ಗೆ ಮಾತ್ರ ಅನುಮತಿ
ಪರಿಣಾಮ ಯಾರ ಮೇಲೆ?
ಕೇಂದ್ರೀಯ ವಿದ್ಯಾಲಯಗಳು, ಜವಾಹರ ನವೋದಯ ವಿದ್ಯಾಲಯಗಳು, ಸೈನಿಕ ಶಾಲೆಗಳು (ರಕ್ಷಣಾ ಸಚಿವಾಲಯದ ಅಡಿಯಲ್ಲಿ), ಏಕಲವ್ಯ ಮಾದರಿ ವಸತಿ ಶಾಲೆಗಳು (ಬುಡಕಟ್ಟು ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿ) ಸೇರಿದಂತೆ ಕೇಂದ್ರ ಸರ್ಕಾರ ನಡೆಸುತ್ತಿರುವ ಸುಮಾರು 3,000 ಕ್ಕೂ ಹೆಚ್ಚು ಶಾಲೆಗಳಿಗೆ ಈ ನಿಯಮ ಅನ್ವಯವಾಗಲಿದೆ.