– ಯಾರು ಈ ಲಾರೆನ್ಸ್ ಬಿಷ್ಣೋಯ್? – ಪಾತಕ ಲೋಕಕ್ಕೆ ಎಂಟ್ರಿ ಕೊಟ್ಟಿದ್ಹೇಗೆ?
– ಜೈಲಿನಿಂದಲೇ ಬಿಷ್ಣೋಯ್ ಆಪರೇಷನ್ ಮಾಡೋದು ಹೇಗೆ?
– ಟಾರ್ಗೆಟ್ ಲಿಸ್ಟ್‌ನಲ್ಲಿ ಇರೋದ್ಯಾರು?
ಇದುವರೆಗೆ ತಣ್ಣಗಾಗಿದ್ದ ಮುಂಬೈ ಭೂಗತಲೋಕ ಮತ್ತೆ ಸಕ್ರಿಯವಾಗಿದೆ. 90ರ ದಶಕದಲ್ಲಿ ದಾವೂದ್ ಇಬ್ರಾಹಿಂ ಭಯದಲ್ಲಿದ್ದ ಮುಂಬೈ ಈಗ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ಗೆ ಹೆದರುವಂತಾಗಿದೆ. ಇತ್ತೀಚೆಗೆ ನಗರದಲ್ಲಿ ನಡೆದ ಎನ್‌ಸಿಪಿ ನಾಯಕ ಹಾಗೂ ಮಾಜಿ ಸಚಿವ ಬಾಬಾ ಸಿದ್ದಿಕಿ ಹತ್ಯೆಯು ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಸದಸ್ಯರೇ ಈ ಕೊಲೆ ಮಾಡಿದ್ದಾರೆಂಬುದನ್ನು ಮುಂಬೈ ಪೊಲೀಸರು ಖಚಿತಪಡಿಸಿದ್ದಾರೆ. ಮುಂಬೈನಲ್ಲಿ ಮತ್ತೊಂದು ಭೂಗತ ಗ್ಯಾಂಗ್ ಹುಟ್ಟಿಕೊಂಡಿತೇ ಎಂಬ ಪ್ರಶ್ನೆಯನ್ನು ಈ ಪ್ರಕರಣ ಹುಟ್ಟುಹಾಕಿದೆ.
Advertisement
90ರ ದಶಕದಲ್ಲಿ ಇಡೀ ಮುಂಬೈ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಭಯದಲ್ಲಿತ್ತು. ಸರಣಿ ಬಾಂಬ್ ಸ್ಫೋಟ ಹಾಗೂ ಇನ್ನಿತರೆ ಕಾನೂನು ಸುವ್ಯವಸ್ಥೆ ಹದಗೆಡಿಸುವ ಕೃತ್ಯಗಳನ್ನು ನಡೆಸುತ್ತಾ ದಾವೂದ್ ಗ್ಯಾಂಗ್ ನಗರದಲ್ಲಿ ಸಕ್ರಿಯವಾಗಿತ್ತು. ಈತನ ಭೂಗತ ಚಟುವಟಿಕೆಗಳನ್ನು ಹಂತಹಂತವಾಗಿ ನಿಯಂತ್ರಣಕ್ಕೆ ತರುತ್ತಿದ್ದಂತೆ ವಿದೇಶಕ್ಕೆ ಪರಾರಿಯಾಗಿದ್ದ. ನಂತರ ವಿದೇಶದಲ್ಲೇ ಕುಳಿತು ಮುಂಬೈನಲ್ಲಿ ಪಾತಕ ಕೃತ್ಯಗಳನ್ನು ನಡೆಸುತ್ತಿದ್ದ. ಈಗ ಆತನ ಪ್ರಭಾವ ಕ್ಷೀಣಿಸಿದೆ. ಮುಂಬೈ ಈಗ ಶಾಂತಿವಾಗಿದೆ ಎನ್ನುವಷ್ಟರಲ್ಲೇ ಮತ್ತೊಂದು ಗ್ಯಾಂಗ್ ಎಂಟ್ರಿ ಕೊಟ್ಟಿರುವುದು ಆತಂಕ ಮೂಡಿಸಿದೆ. ಸದ್ಯ ದೇಶದಲ್ಲೆಡೆ ಚರ್ಚೆಯಲ್ಲಿರುವ ವಿಷಯವೆಂದರೆ ಅದು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್. ಮಾಜಿ ಸಚಿವರ ಹತ್ಯೆ ಕಾರಣಕ್ಕಷ್ಟೇ ಅಲ್ಲ, ಬಾಲಿವುಡ್ ಸ್ಟಾರ್ ನಟ ಸೇರಿದಂತೆ ಅನೇಕ ಸೆಲೆಬ್ರಿಟಿಗಳನ್ನು ಟಾರ್ಗೆಟ್ ಮಾಡಿರುವುದಕ್ಕೆ ಈ ಗ್ಯಾಂಗ್ ದೇಶದ ಗಮನ ಸೆಳೆದಿದೆ.
Advertisement
ಅಷ್ಟಕ್ಕೂ ಯಾರೀ ಲಾರೆನ್ಸ್ ಬಿಷ್ಣೋಯ್? ಏನಿದು ಆತನ ಗ್ಯಾಂಗ್? ಮಹಾರಾಷ್ಟ್ರದ ಮಾಜಿ ಸಚಿವನ ಹತ್ಯೆಗೂ ಈ ಗ್ಯಾಂಗ್‌ಗೂ ಏನು ಸಂಬಂಧ? ಇವರು ಟಾರ್ಗೆಟ್ ಮಾಡಿರುವ ಆ ಬಾಲಿವುಡ್ ಸ್ಟಾರ್ ಯಾರು? ಗ್ಯಾಂಗ್‌ನ ಹಿಟ್ ಲಿಸ್ಟ್‌ನಲ್ಲಿರುವ ಖ್ಯಾತನಾಮರು ಯಾರು?… ಇತ್ಯಾದಿ ಹಲವು ಪ್ರಶ್ನೆಗಳಿಗೆ ಇಲ್ಲಿದೆ ನೋಡಿ ವಿವರ.
Advertisement
ಯಾರು ಈ ಲಾರೆನ್ಸ್ ಬಿಷ್ಣೋಯ್?
31 ವಯಸ್ಸಿನ ಲಾರೆನ್ಸ್ ಬಿಷ್ಣೋಯ್ ಉತ್ತರ ಭಾರತ ಭಾಗದವನು. ಪಂಜಾಬ್‌ನ ಫಿರೋಜ್‌ಪುರ ಜಿಲ್ಲೆಯ ಧತ್ತರನ್‌ವಾಲಿ ಗ್ರಾಮದವನು. 1993ರ ಫೆಬ್ರವರಿ 12 ರಂದು ಉತ್ತಮ ಕೃಷಿಕ ಕುಟುಂಬವೊಂದರಲ್ಲಿ ಜನಿಸಿದ. ಈತನ ತಂದೆ ಒಬ್ಬ ಪೊಲೀಸ್ ಕಾನ್‌ಸ್ಟೇಬಲ್. ಲಾರೆನ್ಸ್, ಬಿಷ್ಣೋಯ್ ಸಮುದಾಯಕ್ಕೆ ಸೇರಿದವ. ಈ ಸಮುದಾಯದ ಜನರು ಪಂಜಾಬ್, ಹರಿಯಾಣ ಮತ್ತು ರಾಜಸ್ಥಾನದ ಹಲವು ಭಾಗಗಳಲ್ಲಿ ನೆಲೆಸಿದ್ದಾರೆ. ಬಿಷ್ಣೋಯ್ 12 ನೇ ತರಗತಿಯವರೆಗೆ ಅಧ್ಯಯನ ಮಾಡಿದ್ದ. ನಂತರ ಕಾಲೇಜು ಶಿಕ್ಷಣವನ್ನು ಮುಂದುವರಿಸಲು 2010 ರಲ್ಲಿ ಚಂಡೀಗಢಕ್ಕೆ ಬಂದ. ವಿದ್ಯಾರ್ಥಿ ದಿಸೆಯಲ್ಲೇ ರಾಜಕೀಯವಾಗಿ ಸಕ್ರಿಯನಾಗಿದ್ದ. 2011 ಮತ್ತು 2012 ರ ನಡುವೆ ಪಂಜಾಬ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷನಾಗಿದ್ದ.
Advertisement
ವಿದ್ಯಾರ್ಥಿ ದಿಸೆಯಲ್ಲೇ ಭೂಗತ ಲೋಕಕ್ಕೆ ಎಂಟ್ರಿ
ಲಾರೆನ್ಸ್ ಬಿಷ್ಣೋಯ್ ವಿದ್ಯಾರ್ಥಿಯಾಗಿದ್ದಾಗಲೇ ಅಪರಾಧ ಕೃತ್ಯದಲ್ಲಿ ತೊಡಗಿಸಿಕೊಂಡಿದ್ದ. ಕೊಲೆ ಯತ್ನಕ್ಕೆ ಸಂಬಂಧಿಸಿದಂತೆ ಈತನ ವಿರುದ್ಧ ದಾಖಲಾದ ಮೊದಲ ಎಫ್‌ಐಆರ್. ನಂತರ ಏಪ್ರಿಲ್ 2010 ರಲ್ಲಿ ಅತಿಕ್ರಮಣಕ್ಕಾಗಿ ಮತ್ತೊಂದು ಎಫ್‌ಐಆರ್ ದಾಖಲಾಯಿತು. ಫೆಬ್ರವರಿ 2011 ರಲ್ಲಿ ಆತನ ವಿರುದ್ಧ ಹಲ್ಲೆ ಮತ್ತು ಸೆಲ್‌ಫೋನ್ ದರೋಡೆ ಪ್ರಕರಣವನ್ನು ದಾಖಲಿಸಲಾಯಿತು. ಈ ಮೂರೂ ಪ್ರಕರಣಗಳು ವಿದ್ಯಾರ್ಥಿ ಬಿಷ್ಣೋಯ್ ರಾಜಕೀಯಕ್ಕೆ ಸಂಬಂಧಿಸಿದವು. ಕೊನೆಗೆ, ಜಸ್ವಿಂದರ್ ಸಿಂಗ್ ಅಲಿಯಾಸ್ ರಾಕಿ ಗ್ಯಾಂಗ್‌ಗೆ ಬಿಷ್ಣೋಯ್ ಸೇರಿದ. ರಾಕಿ ಎಂಬಾತ ಪಂಜಾಬ್‌ನ ಫಾಜಿಲ್ಕಾದಲ್ಲಿ ದರೋಡೆಕೋರನಾಗಿದ್ದ. ನಂತರ ರಾಜಕಾರಣಿಯಾದ. ಈತನ ಗ್ಯಾಂಗ್ ರಾಜಸ್ಥಾನದ ಕೆಲವು ಭಾಗಗಳು, ರಾಜಸ್ಥಾನ-ಪಂಜಾಬ್ ಗಡಿಯಲ್ಲಿರುವ ಶ್ರೀ ಗಂಗಾ ನಗರ ಮತ್ತು ಭರತ್‌ಪುರದಲ್ಲಿ ಸಕ್ರಿಯವಾಗಿತ್ತು. ಕ್ರಿಮಿನಲ್ ಹಿನ್ನೆಲೆಯುಳ್ಳ ರಾಕಿಯನ್ನು ಮೇ 2016 ರಲ್ಲಿ ಹಿಮಾಚಲ ಪ್ರದೇಶದ ಪರ್ವಾನೂ ಬಳಿ ಹತ್ಯೆ ಮಾಡಲಾಗಿತ್ತು. ಕುಖ್ಯಾತ ದರೋಡೆಕೋರ ಜೈಪಾಲ್ ಭುಲ್ಲಾರ್ ಕೊಲೆಯ ಹೊಣೆಯನ್ನು ಹೊತ್ತುಕೊಂಡ. ನಂತರ ಜೂನ್ 2020 ರಲ್ಲಿ ಕೋಲ್ಕತ್ತಾದಲ್ಲಿ ಭುಲ್ಲಾರ್‌ನನ್ನು ಗುಂಡಿಕ್ಕಿ ಕೊಲ್ಲಲಾಯಿತು.
ಹಲವು ವರ್ಷಗಳು ಪೈಪೋಟಿಯ ಭಾಗವಾಗಿ ಪ್ರತೀಕಾರದ ಹತ್ಯೆಗಳ ಪ್ರಕರಣಗಳಲ್ಲಿ ಈ ಗ್ಯಾಂಗ್‌ನ್ನು ಹೆಸರಿಸಲಾಯಿತು. ಬಿಷ್ಣೋಯ್ ಕೊಲೆ, ಕೊಲೆ ಯತ್ನ, ಸುಲಿಗೆ ಮತ್ತು ಇತರೆ 20ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ಪ್ರಸ್ತುತ ಆತನನ್ನು ಅಹಮದಾಬಾದ್‌ನ ಸಬರಮತಿ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿದೆ. ಸದ್ಯ ಜೈಲಿನಲ್ಲಿದ್ದರೂ ಅಲ್ಲಿಂದಲೇ, ತನ್ನ ಗ್ಯಾಂಗ್ ಅನ್ನು ನಿರ್ವಹಿಸುತ್ತಿದ್ದಾನೆ ಎನ್ನಲಾಗಿದೆ. ಗಡಿಯಾಚೆಗಿನ ಮಾದಕವಸ್ತು ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈತನನ್ನು ಬಂಧಿಸಿ ರಾಜ್ಯದ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಸಬರಮತಿ ಕಾರಾಗೃಹದಲ್ಲಿರಿಸಿದೆ.
ಬಿಷ್ಣೋಯ್ ಗ್ಯಾಂಗ್‌ನಲ್ಲಿ 700 ಶಾರ್ಪ್ ಶೂಟರ್ಸ್?
2022 ರಲ್ಲಿ ಪಂಜಾಬಿನ ಮಾನ್ಸಾ ಜಿಲ್ಲೆಯಲ್ಲಿ ನಡೆದ ಜನಪ್ರಿಯ ಪಂಜಾಬಿ ಗಾಯಕ ಸಿಧು ಮೂಸೆ ವಾಲಾ ಅವರ ಕೊಲೆಯು ದರೋಡೆಕೋರ ಲಾರೆನ್ಸ್ ಬಿಷ್ಣೋಯ್‌ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕುಖ್ಯಾತಿ ತಂದಿತು. ಅದಾದ ಒಂದೆರಡು ವರ್ಷಗಳಲ್ಲಿ ಮತ್ತೆ ಈತನ ಗ್ಯಾಂಗ್ ಸುದ್ದಿಯಲ್ಲಿದೆ. ಅದೇ, ಮುಂಬೈನ ಹಿರಿಯ ರಾಜಕೀಯ ನಾಯಕ ಬಾಬಾ ಸಿದ್ದಿಕ್ ಅವರ ಹತ್ಯೆ. ಸಿದ್ದಿಕಿ ಅವರ ಹತ್ಯೆ ಮಾರನೇ ದಿನವೇ ಕೃತ್ಯದ ಹೊಣೆಯನ್ನು ಈತನ ಗ್ಯಾಂಗ್ ಹೊತ್ತುಕೊಂಡಿತು.
ಬಿಷ್ಣೋಯ್ ಗ್ಯಾಂಗ್ ಯಾವುದೋ ಒಂದು ಪ್ರದೇಶ ಅಥವಾ ರಾಜ್ಯಕ್ಕೆ ಸೀಮಿತವಾಗಿಲ್ಲ. ಪಂಜಾಬ್, ಹರಿಯಾಣ, ರಾಜಸ್ಥಾನ, ದೆಹಲಿ ಮತ್ತು ಹಿಮಾಚಲ ಪ್ರದೇಶ ಸೇರಿದಂತೆ ಹಲವು ಭಾರತೀಯ ರಾಜ್ಯಗಳಲ್ಲಿ ಗ್ಯಾಂಗ್ ಹರಡಿಕೊಂಡಿದೆ. ಹೊರದೇಶಗಳ ಗ್ಯಾಂಗ್‌ಗಳ ನಂಟು ಕೂಡ ಬಿಷ್ಣೋಯ್‌ಗೆ ಇದೆ. ಜಾಗತಿಕ ಕುಖ್ಯಾತ ಪಾತಕಿ ಗೋಲ್ಡಿ ಬ್ರಾರ್ ಕೂಡ ಈತನಿಗೆ ಸಾಥ್ ನೀಡುತ್ತಾನೆ. ಕೆನಡಾದಲ್ಲೂ ಈತನ ಗ್ಯಾಂಗ್ ಜಾಲ ವಿಸ್ತರಿಸಿದೆ. ಎನ್‌ಐಎ ಪ್ರಕಾರ, ಬಿಷ್ಣೋಯ್ ಗ್ಯಾಂಗ್‌ನಲ್ಲಿ 700 ಶೂಟರ್ಸ್ ಇದ್ದಾರೆ. ಈ ಪೈಕಿ 300 ಶೂಟರ್ಸ್ ಪಂಜಾಬ್‌ನಲ್ಲಿದ್ದಾರೆ. ಸುಲಿಗೆ, ಕೊಲೆ ಮತ್ತು ಶಸ್ತ್ರಾಸ್ತ್ರ ಕಳ್ಳಸಾಗಣೆಯಲ್ಲಿ ಬಿಷ್ಣೋಯ್ ಗ್ಯಾಂಗ್ ಸಕ್ರಿಯವಾಗಿದೆ. ಪಂಜಾಬಿ ಗಾಯಕರು, ಮದ್ಯದ ಮಾಫಿಯಾ, ಉದ್ಯಮಿಗಳು ಮತ್ತು ಪ್ರಸಿದ್ಧ ವ್ಯಕ್ತಿಗಳೇ ಈ ಗ್ಯಾಂಗ್‌ನ ಟಾರ್ಗೆಟ್. ಅಪರಾಧ ಕೃತ್ಯಗಳಿಗೆ ವೃತ್ತಿಪರ ಶೂಟರ್‌ಗಳನ್ನು ಬಳಸಿಕೊಳ್ಳುತ್ತಿದೆ.
ಜೈಲಿನಿಂದಲೇ ಭೂಗತ ಕಾರ್ಯಾಚರಣೆ!
ಅದು ಗುಜರಾತ್‌ನ ಸಬರಮತಿ ಜೈಲೇ ಆಗಿರಲಿ ಅಥವಾ ದೆಹಲಿಯ ತಿಹಾರ್ ಜೈಲೇ ಆಗಿರಲಿ, ಲಾರೆನ್ಸ್ ಬಿಷ್ಣೋಯ್ ಜೈಲಿನಿಂದಲೇ ಭೂಗತ ಕಾರ್ಯಾಚರಣೆಗಳನ್ನು ನಡೆಸುತ್ತಾನೆ. ಸಂವಹನಕ್ಕಾಗಿ ಮೊಬೈಲ್ ಫೋನ್‌ಗಳನ್ನು ಬಳಸುತ್ತಾನೆ. ಅದಕ್ಕಾಗಿ ಈತನನ್ನು ಒಂದು ಜೈಲಿನಿಂದ ಇನ್ನೊಂದಕ್ಕೆ ಸ್ಥಳಾಂತರಿಸಲಾಯಿತು. ಏಕಾಂತ ಸೆರೆಮನೆಯಲ್ಲಿ ಇರಿಸಲಾಗಿದೆ. ಈತ ಕಾರ್ಯಾಚರಣೆಗಳಿಗಾಗಿ ಉನ್ನತ ಮಟ್ಟದ ವಿಪಿಎನ್ ನೆಟ್‌ವರ್ಕ್‌ಗಳನ್ನು ಬಳಸುತ್ತಾನೆ. ಸಿಗ್ನಲ್ ಮತ್ತು ಟೆಲಿಗ್ರಾಮ್‌ನಂತಹ ಅಪ್ಲಿಕೇಶನ್‌ಗಳನ್ನು ಬಳಸಿ ದೇಶ-ವಿದೇಶಗಳಲ್ಲಿರುವ ತನ್ನ ಸಹವರ್ತಿಗಳೊಂದಿಗೆ ಸಂವಹನ ನಡೆಸುತ್ತಾನೆ. ಬಿಷ್ಣೋಯ್ ಗ್ಯಾಂಗ್ ಸ್ಥಳೀಯ ದರೋಡೆಕೋರರೊಂದಿಗೆ ಸಂಪರ್ಕದಲ್ಲಿರುತ್ತದೆ. ಈ ಸ್ಥಳೀಯ ಗುಂಪುಗಳು ಶಸ್ತ್ರಾಸ್ತ್ರ ತರಬೇತಿ ಪಡೆಯುವ ಶೂಟರ್‌ಗಳನ್ನು ನೇಮಿಸಿಕೊಳ್ಳುತ್ತವೆ. ಬಿಷ್ಣೋಯ್ ಗ್ಯಾಂಗ್ ಆದೇಶದ ಯಾವುದೇ ಒಪ್ಪಂದದ ಹತ್ಯೆ ಬಳಿಕ ಹಣವನ್ನು ಪಡೆಯುತ್ತವೆ.
ಬಡವರು, ಅಪ್ರಾಪ್ತ ವಯಸ್ಸಿನ ಹುಡುಗರು, ತುರ್ತಾಗಿ ಹಣದ ಅವಶ್ಯಕತೆ ಇರುವವರನ್ನೇ ಗುರುತಿಸಿ ಗ್ಯಾಂಗ್‌ಗೆ ಸೇರಿಸಿಕೊಳ್ಳಲಾಗುತ್ತದೆ. ಶೂಟರ್‌ಗಳಿಗೆ ತಾವು ಯಾರಿಗಾಗಿ ಕೆಲಸ ಮಾಡುತ್ತಿದ್ದೇವೆ ಎಂಬುದೇ ತಿಳಿದಿರುವುದಿಲ್ಲ. ಅವರಿಗೆ ಒಂದು ಟಾರ್ಗೆಟ್ ನೀಡಲಾಗಿರುತ್ತದೆ. ಅದನ್ನು ಮುಗಿಸಬೇಕಷ್ಟೆ. ಅದರಾಚೆಗೆ ಬೇರೆ ಯಾವುದೇ ರೀತಿಯ ಒಡನಾಟ ಅವರೊಂದಿಗೆ ಇರುವುದಿಲ್ಲ. ದಾವೂದ್ ಇಬ್ರಾಹಿಂನ ಡಿ-ಕಂಪನಿ ಹೇಗೆ ಕಾರ್ಯನಿರ್ವಹಿಸುತ್ತದೆಯೋ ಹಾಗೆಯೇ ಬಿಷ್ಣೋಯ್ ಗ್ಯಾಂಗ್ ಕಾರ್ಪೊರೇಟ್ ಕಂಪನಿಯಂತೆ ಕಾರ್ಯನಿರ್ವಹಿಸುತ್ತದೆ ಎನ್ನುತ್ತಾರೆ ಪೊಲೀಸರು. ಬಿಷ್ಣೋಯ್ ಗ್ಯಾಂಗ್ ಶಾರ್ಪ್‌ಶೂಟರ್ಸ್ ಅಷ್ಟೇ ಅಲ್ಲ, ಲಾಜಿಸ್ಟಿಕ್ಸ್, ಕಾನೂನು ಮತ್ತು ಮಾಹಿತಿ ಸಂಗ್ರಹಣೆಯನ್ನು ನೋಡಿಕೊಳ್ಳುವ ಪ್ರತ್ಯೇಕ ವಿಭಾಗಗಳನ್ನೂ ಹೊಂದಿದೆ.
ಸಲ್ಮಾನ್ ಖಾನ್ ಟಾರ್ಗೆಟ್ ಯಾಕೆ?
ಬಿಷ್ಣೋಯ್ ಸಮುದಾಯಕ್ಕೂ ಕೃಷ್ಣಮೃಗಕ್ಕೂ ಅವಿನಾಭಾವ ಸಂಬಂಧ. ಇವರು ಕೃಷ್ಣಮೃಗವನ್ನು ದೇವರೆಂದೇ ಪರಿಗಣಿಸುತ್ತಾರೆ. ಅಂತಹ ಪ್ರಾಣಿಯನ್ನು ಸಲ್ಮಾನ್ ಖಾನ್ ಬೇಟೆಯಾಡಿದ ಎಂಬುದು ಬಿಷ್ಣೋಯ್ ಆಕ್ರೋಶ. ಕೃಷ್ಣಮೃಗ ಬೇಟೆಯಾಡಿದ ಆರೋಪದಲ್ಲಿ 2018ರಲ್ಲಿ ರಾಜಸ್ಥಾನದ ಸ್ಥಳೀಯ ಕೋರ್ಟ್ ಸಲ್ಮಾನ್ ಖಾನ್‌ಗೆ 5 ವರ್ಷ ಜೈಲು ಶಿಕ್ಷೆ ವಿಧಿಸಿತು. ಬಾಲಿವುಡ್ ನಟ ಈಗ ಜಾಮೀನಿನ ಮೇಲೆ ಹೊರಗಿದ್ದಾರೆ. ಆದರೆ ನಟನ ಮೇಲೆ ಲಾರೆನ್ಸ್ ಬಿಷ್ಣೋಯ್ ಹಗೆ ಸಾಧಿಸುತ್ತಿದ್ದಾನೆ. ಕೃಷ್ಣಮೃಗ ಬೇಟೆಯಾಡಿದ್ದಕ್ಕೆ ಸಾರ್ವಜನಿಕವಾಗಿ ಕ್ಷಮೆ ಕೇಳುವವರೆಗೆ ನಿನ್ನನ್ನು ಬಿಡಲ್ಲ ಎಂದು ಬಿಷ್ಣೋಯ್ ಶಪಥ ಮಾಡಿದ್ದಾನೆ. ಬಿಷ್ಣೋಯ್ ಗ್ಯಾಂಗ್‌ನಿಂದ ಸಲ್ಮಾನ್ ಖಾನ್ ಹತ್ಯೆಗೆ ಹಲವು ಬಾರಿ ಯತ್ನಗಳು ನಡೆದಿವೆ. ಅದೃಷ್ಟವಶಾತ್ ನಟ ಪಾರಾಗಿದ್ದಾನೆ. ಆತಂಕದಲ್ಲಿರುವ ಖಾನ್ ರಕ್ಷಣೆಗಾಗಿ ಹೆಚ್ಚಿನ ಭದ್ರತೆ ತೆಗೆದುಕೊಂಡಿದ್ದಾರೆ. ಈ ಹೊತ್ತಿನಲ್ಲೇ ಸಲ್ಮಾನ್ ಖಾನ್ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಮಾಜಿ ಸಚಿವ ಬಾಬಾ ಸಿದ್ದಿಕಿ ಹತ್ಯೆಯಾಗಿದೆ. ಇದು ಸಹಜವಾಗಿ ನಟನಲ್ಲಿ ಆತಂಕ ಹೆಚ್ಚಿಸಿದೆ. ಸಿನಿಮಾ ರಂಗದಲ್ಲಿ ತಮ್ಮದೇ ಛಾಪು ಮೂಡಿಸಿರುವ ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್ ಸಂಬAಧ ಅಷ್ಟಾಗಿ ಚೆನ್ನಾಗಿರಲಿಲ್ಲ. ವೈಮನಸ್ಸು ಮರೆತು ಇಬ್ಬರು ಒಂದಾಗುವAತೆ ಮಾಡಿದವರೇ ಬಾಬಾ ಸಿದ್ದಿಕಿ. ಇವರು ಸಲ್ಮಾನ್ ಖಾನ್ ಜೊತೆಗೆ ಹೆಚ್ಚು ಒಡನಾಟ ಹೊಂದಿದ್ದರು. ಅದೇ ಕಾರಣಕ್ಕೆ ಅವರ ಹತ್ಯೆ ಮಾಡಲಾಗಿದೆ ಎಂದು ಈಗ ಬಿಷ್ಣೋಯ್ ಗ್ಯಾಂಗ್ ಬಹಿರಂಗಪಡಿಸಿದೆ. ಖಾನ್ ಜೊತೆಗೆ ಒಡನಾಟ ಇರುವವರನ್ನು ಯಾರೂ ಬಿಡಲ್ಲ ಎಂದು ಕೂಡ ಎಚ್ಚರಿಕೆ ನೀಡಿದೆ.
ಬಿಷ್ಣೋಯ್ ಗ್ಯಾಂಗ್ ಹಿಟ್‌ಲಿಸ್ಟ್‌ನಲ್ಲಿ ಯಾರಿದ್ದಾರೆ?
ಕುಖ್ಯಾತ ದರೋಡೆಕೋರ ಲಾರೆನ್ಸ್ ಬಿಷ್ಣೋಯ್ ಹಿಟ್‌ಲಿಸ್ಟ್‌ನಲ್ಲಿರುವ ಹೆಸರುಗಳನ್ನು ಬಹಿರಂಗಪಡಿಸಲಾಗಿದೆ. ಈ ಪಟ್ಟಿಯಲ್ಲಿ ಬಾಲಿವುಡ್ ಸೆಲೆಬ್ರಿಟಿಗಳು, ಹಾಸ್ಯನಟರು, ರಾಜಕಾರಣಿಗಳು ಮತ್ತು ಇತರರು ಇದ್ದಾರೆ.
ಸಲ್ಮಾನ್ ಖಾನ್
ಬಿಷ್ಣೋಯ್ ಸಮುದಾಯವು ಪ್ರಾಣಿಯನ್ನು ಪವಿತ್ರ ಎಂದು ಪರಿಗಣಿಸಿದೆ. ಕೃಷ್ಣಮೃಗ ಬೇಟೆಯ ಪ್ರಕರಣದಲ್ಲಿ ಭಾಗಿಯಾಗಿದ್ದಕ್ಕಾಗಿ ಸಲ್ಮಾನ್ ಖಾನ್ ಅವರು ಮೊದಲು ಬಿಷ್ಣೋಯ್ ಕೋಪಕ್ಕೆ ಗುರಿಯಾದರು. ಬಿಷ್ಣೋಯ್, ಖಾನ್ ಅವರನ್ನು ಮೇಲ್ವಿಚಾರಣೆ ಮಾಡಲು ತನ್ನ ಸಹಾಯಕ ಸಂಪತ್ ನೆಹ್ರಾನನ್ನು ಕಳುಹಿಸಿದ್ದ. ಆದರೆ ಆತನನ್ನು ಪೊಲೀಸರು ಬಂಧಿಸಿದರು. ಈ ನಡುವೆ ಬಾಲಿವುಡ್ ಸ್ಟರ್ ನಟನ ಹತ್ಯೆಗೆ ಹಲವು ವಿಫಲ ಯತ್ನಗಳು ನಡೆದಿವೆ.
ಜೀಶನ್ ಸಿದ್ದಿಕಿ
ದಿವಂಗತ ಬಾಬಾ ಸಿದ್ದಿಕಿ ಅವರ ಪುತ್ರ ಮತ್ತು ಶಾಸಕ ಜೀಶಾನ್ ಕೂಡ ಬಿಷ್ಣೋಯ್ ಗ್ಯಾಂಗ್‌ನ ಟಾರ್ಗೆಟ್ ಲಿಸ್ಟ್‌ನಲ್ಲಿದ್ದಾರೆ. ಬಾಬಾ ಸಿದ್ದಿಕ್ಕಿ ಅವರನ್ನು ಹತ್ಯೆ ಮಾಡಿದ ಶೂಟರ್ ಫೋನ್‌ನಲ್ಲಿ ಸಿದ್ದಿಕಿ ಪುತ್ರನ ಫೋಟೊ ಪತ್ತೆಯಾಗಿದ್ದು, ಅವರಲ್ಲಿ ಆತಂಕ ಮೂಡಿಸಿದೆ.
ಮುನಾವರ್ ಫಾರುಕಿ
ಹಾಸ್ಯನಟ ಕೂಡ ಬಿಷ್ಣೋಯ್ ಅವರ ಹಿಟ್ ಲಿಸ್ಟ್‌ನಲ್ಲಿದ್ದಾರೆ. ದೆಹಲಿಯಲ್ಲಿ ನಡೆದ ಮದುವೆಯೊಂದರಲ್ಲಿ ಆತನ ವಿರುದ್ಧ ದಾಳಿ ನಡೆಸಲು ಯೋಜಿಸಲಾಗಿತ್ತು. ಆದರೆ ಗುಪ್ತಚರ ಸಂಸ್ಥೆಗಳು ಮಧ್ಯಪ್ರವೇಶಿಸಿ, ಹೆಚ್ಚಿನ ಭದ್ರತೆಯಲ್ಲಿ ಅವರನ್ನು ಮುಂಬೈಗೆ ಸ್ಥಳಾಂತರಿಸಿದವು. ಸಮಾರಂಭವೊಂದರಲ್ಲಿ ಹಿಂದೂ ದೇವತೆಗಳನ್ನು ಅಪಹಾಸ್ಯ ಮಾಡಿದ ಎಂಬ ಕಾರಣಕ್ಕೆ ಅವರನ್ನು ಟಾರ್ಗೆಟ್ ಮಾಡಲಾಗಿದೆ.
ಶಗನ್‌ಪ್ರೀತ್ ಸಿಂಗ್
ದಿವಂಗತ ಗಾಯಕ ಸಿದು ಮೂಸೆವಾಲಾ ಅವರ ಮ್ಯಾನೇಜರ್ ಶಗನ್‌ಪ್ರೀತ್ ಕೂಡ ಬಿಷ್ಣೋಗ್ ಗ್ಯಾಂಗ್ ಟಾರ್ಗೆಟ್‌ನಲ್ಲಿದ್ದಾರೆ. ಇವರು ಆಗಸ್ಟ್ 2021 ರಲ್ಲಿ ಮೊಹಾಲಿಯಲ್ಲಿ ಕೊಲೆಯಾದ ಬಿಷ್ಣೋಯ್ ಅವರ ನಿಕಟ ಸಹವರ್ತಿ ವಿಕ್ಕಿ ಮಿದ್ದುಖೇರಾ ಅವರ ಹಂತಕರಿಗೆ ಆಶ್ರಯ ನೀಡಿದ್ದರು ಎನ್ನಲಾಗಿದೆ.
ಕೌಶಲ್ ಚೌಧರಿ
ಬಿಷ್ಣೋಯ್ ಗ್ಯಾಂಗ್‌ನ ಪ್ರತಿಸ್ಪರ್ಧಿ ಬಂಬಿಹಾ ಗ್ಯಾಂಗ್‌ನ ಸದಸ್ಯ ಈತ. ಮಿದ್ದುಖೇರಾನನ್ನು ಕೊಂದ ವ್ಯಕ್ತಿಗಳಿಗೆ ಶಸ್ತ್ರಾಸ್ತ್ರಗಳನ್ನು ಪೂರೈಸಿದ ಆರೋಪ ಚೌಧರಿ ಮೇಲಿದೆ.
ಅಮಿತ್ ಡಾಗರ್
ಕೌಶಲ್ ಚೌಧರಿಯೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಡಾಗರ್, ಮಿದ್ದುಖೇರಾನ ಕೊಲೆಯಲ್ಲಿ ಭಾಗಿಯಾಗಿದ್ದ. ಈತ ಕೂಡ ಬಿಷ್ಣೋಯ್ ಗ್ಯಾಂಗ್‌ನ ಟಾರ್ಗೆಟ್ ಲಿಸ್ಟ್‌ನಲ್ಲಿದ್ದಾನೆ.