ಖಲಿಸ್ತಾನಿ ನಾಯಕ ಹರ್ದೀಪ್ ಸಿಂಗ್ (Hardeep Singh Nijjar) ಹತ್ಯೆಯ ನಂತರ ಭಾರತ ಮತ್ತು ಕೆನಡಾ (India-Canada) ನಡುವಿನ ರಾಜತಾಂತ್ರಿಕ ಬಿಕ್ಕಟ್ಟು ತೀವ್ರ ಸ್ವರೂಪ ಪಡೆದಿದ್ದು, ಇನ್ನೂ ಶಮನಗೊಂಡಿಲ್ಲ. ಭಾರತ-ಕೆನಡಾ ಸಂಬಂಧ ಹಳಸಲು ಖಲಿಸ್ತಾನಿಗಳ ಸಮಸ್ಯೆಯೂ ಒಂದು. ಕೆನಡಾದಲ್ಲಿ ಸಕ್ರಿಯರಾಗಿ ಅಲ್ಲಿನ ಹಿಂದೂಗಳು ಮತ್ತು ಭಾರತದಲ್ಲಿ ಹಿಂಸಾಚಾರ ನಡೆಯುತ್ತಿದೆ. ಖಲಿಸ್ತಾನಿ ಉಗ್ರರ (Khalistani Terrorists) ಮೇಲೆ ಕ್ರಮಕೈಗೊಳ್ಳಲು ಹಿಂದೇಟು ಹಾಕುತ್ತಿರುವ ಕೆನಡಾ ಮೇಲೆ ಭಾರತಕ್ಕೆ ಮುನಿಸು. ಇಂತಹ ಸನ್ನಿವೇಶದಲ್ಲಿ, ಭಾರತದ ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ (Justin Trudeau) ಅವರು ಖಲಿಸ್ತಾನಿ ನಾಯಕ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆ ಕುರಿತು ಆಡಿದ ಮಾತುಗಳು ಎರಡು ದೇಶಗಳ ನಡುವೆ ಬಿಕ್ಕಟ್ಟು ಉಲ್ಬಣಗೊಳ್ಳಲು ಕಾರಣವಾಯಿತು.
ಅಷ್ಟಕ್ಕೂ ಭಾರತ-ಕೆನಡಾ ಬಿಕ್ಕಟ್ಟಿಗೆ ಕಾರಣವೇನು? ಕೆನಡಾದಲ್ಲಿ ಭಾರತೀಯರೆಷ್ಟಿದ್ದಾರೆ? ಯಾರು ಈ ಖಲಿಸ್ತಾನಿಗಳು? ಏನು ಇವರ ಚಳುವಳಿ? ಖಲಿಸ್ತಾನಿಗಳ ಚಳುವಳಿ ಭಾರತದಿಂದ ಕೆನಡಾಗೆ ಹೋಗಿದ್ದು ಹೇಗೆ? ಭಾರತ ಮತ್ತು ಕೆನಡಾ ನಡುವೆ ರಾಜತಾಂತ್ರಿಕ ಉಂಟಾಗಲು ಇವರು ಹೇಗೆ ಕಾರಣವಾಗುತ್ತಾರೆ? ಬನ್ನಿ ಈ ಬಗ್ಗೆ ವಿವರವಾಗಿ ತಿಳಿಯೋಣ. ಇದನ್ನೂ ಓದಿ: ಉಲ್ಟಾ ಹೊಡೆದ ಕೆನಡಾ- ಭಾರತವನ್ನು ಪ್ರಚೋದಿಸುತ್ತಿಲ್ಲವೆಂದ ಟ್ರುಡೋ
Advertisement
ಸಿಖ್ ಚಳುವಳಿಯ ಇತಿಹಾಸ
ಗುರುನಾನಕ್ ಒಬ್ಬ ದಾರ್ಶನಿಕ. ಸಿಖ್ ಧರ್ಮದ ಸಂಸ್ಥಾಪಕ. ಇವರು 15ನೇ ಶತಮಾನದಲ್ಲಿ ಸಿಖ್ ಧರ್ಮವನ್ನು ಪ್ರತಿಪಾದಿಸಿದರು. 1675 ರ ಸಂದರ್ಭದಲ್ಲಿ ಗುರು ಗೋಬಿಂದ್ ಸಿಂಗ್ ಅವರನ್ನು ಸಿಖ್ ಧರ್ಮದ ನಾಯಕರಾಗಿ ಘೋಷಿಸಲಾಯಿತು. 1947 ರಲ್ಲಿ ಬ್ರಿಟಿಷರಿಂದ ಭಾರತ ಸ್ವಾತಂತ್ರ್ಯ ಪಡೆಯಿತು. 1948 ರಲ್ಲಿ ತಾರಾ ಸಿಂಗ್ ಪಂಜಾಬಿ ಮಾತನಾಡುವ ಸ್ವಾಯತ್ತ ಸಿಖ್ ರಾಜ್ಯವನ್ನು ಸ್ಥಾಪಿಸಲು ಕರೆ ನೀಡಿದರು. 1970ರ ಬಳಿಕ ಭಾರತ ಮತ್ತು ವಿದೇಶಗಳಲ್ಲಿ ಸಿಖ್ ಸ್ವಾತಂತ್ರ್ಯ ಚಳುವಳಿ ಪ್ರಬಲವಾಗಿ ಬೆಳೆಯಲು ಪ್ರಾರಂಭಿಸಿತು. 1984ರ ಜೂನ್ ತಿಂಗಳಲ್ಲಿ ಸಿಖ್ ಧರ್ಮದ ಪವಿತ್ರ ಸ್ಥಳವಾದ ಗೋಲ್ಡನ್ ಟೆಂಪಲ್‌ನಲ್ಲಿ ಆಶ್ರಯ ಪಡೆದಿದ್ದ ಪ್ರತ್ಯೇಕತಾವಾದಿಗಳನ್ನು (Khalistani Separatists) ಹೊರಹಾಕಲು ಭಾರತೀಯ ಪಡೆಗಳು ದಾಳಿ ನಡೆಸಿದವು. 1984 ರ ಅಕ್ಟೋಬರ್ 31 ರಂದು ದೇವಾಲಯದ ಮೇಲೆ ದಾಳಿ ನಡೆಸಲು ಆದೇಶಿಸಿದ ಅಂದಿನ ಪ್ರಧಾನಿ ಇಂದಿರಾ ಗಾಂಧಿ (Indira Gandhi) ಅವರನ್ನು ಅವರ ಇಬ್ಬರು ಸಿಖ್ (Sikhs) ಅಂಗರಕ್ಷಕರು ಹತ್ಯೆ ಮಾಡಿದರು. 1985 ರಲ್ಲಿ ಕೆನಡಾ ಮೂಲದ ಖಲಿಸ್ತಾನಿ ಪ್ರತ್ಯೇಕತಾವಾದಿಗಳು ಟೊರೊಂಟೊದಿಂದ ನವದೆಹಲಿಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ ‘ಕನಿಷ್ಕಾ’ ಮೇಲೆ ಬಾಂಬ್ ಸ್ಫೋಟಿಸಿ 329 ಮಂದಿ ಹತ್ಯೆಗೈದರು. 2011 ರ ಜನಗಣತಿಯ ಪ್ರಕಾರ, 2.08 ಕೋಟಿ ಸಿಖ್ಖರು ಭಾರತದಲ್ಲಿದ್ದಾರೆ. ಭಾರತದ ಒಟ್ಟು ಜನಸಂಖ್ಯೆಯಲ್ಲಿ ಸಿಖ್ಖರು 7% ರಷ್ಟಿದ್ದಾರೆ. ಇದನ್ನೂ ಓದಿ: ಭಯೋತ್ಪಾದಕರಿಗೆ ಕೆನಡಾದಲ್ಲಿ ಸುರಕ್ಷಿತ ನೆಲೆ ಸಿಕ್ಕಿದೆ: ಟ್ರುಡೊ ವಿರುದ್ಧ ಲಂಕಾ ಸಚಿವ ವಾಗ್ದಾಳಿ
Advertisement
Advertisement
ಐತಿಹಾಸಿಕ ಪಂಜಾಬ್ ಪ್ರದೇಶವು ಭಾರತೀಯ ಉಪಖಂಡದ ಉತ್ತರ ಭಾಗದಲ್ಲಿದೆ. ಆಧುನಿಕ ಪೂರ್ವ ಪಾಕಿಸ್ತಾನ ಮತ್ತು ವಾಯುವ್ಯ ಭಾರತವನ್ನು ಒಳಗೊಂಡಿದೆ. ಭಾರತದಲ್ಲಿ ಇದು ಲುಧಿಯಾನ, ಅಮೃತಸರ, ಚಂಡೀಗಢ ಮತ್ತು ಜಲಂಧರ್‌ನಂತಹ ನಗರಗಳನ್ನು ಒಳಗೊಂಡಿದೆ. ಅಲ್ಲದೇ ಪಾಕಿಸ್ತಾನದಲ್ಲಿ ಲಾಹೋರ್, ಫೈಸಲಾಬಾದ್, ನಂಕಾನಾ ಸಾಹಿಬ್, ರಾವಲ್ಪಿಂಡಿ ಮತ್ತು ಮುಲ್ತಾನ್ ಪ್ರದೇಶ ಹೊಂದಿದೆ. ಕೆಲವು ಖಲಿಸ್ತಾನ್ ಬೆಂಬಲಿಗರು ಪಂಜಾಬ್‌ನ ಪಾಕಿಸ್ತಾನದ ಭಾಗವನ್ನು (ಭಾರತ-ಪಾಕ್ ವಿಭಜನೆ) ಸಂಯೋಜಿಸಲು ಕರೆ ನೀಡಿದ್ದಾರೆ. ಆದರೆ ಇತರ ಗುಂಪುಗಳು, ಹರಿಯಾಣ ಮತ್ತು ಹಿಮಾಚಲ ಪ್ರದೇಶದ ಕೆಲವು ಪ್ರದೇಶಗಳು ಹಾಗೂ ಭಾರತದ ಪಂಜಾಬ್‌ನ ಸುತ್ತಲಿನ ರಾಜ್ಯಗಳು ಸಹ ಉದ್ದೇಶಿತ ರಾಷ್ಟ್ರದ ಭಾಗವಾಗಬೇಕೆಂದು ವಾದಿಸುತ್ತವೆ.
Advertisement
ಕೆನಡಾದಲ್ಲಿರುವ ಸಿಖ್ಖರ ಸಂಖ್ಯೆ ಎಷ್ಟು?
ಕೆನಡಾದಲ್ಲಿನ ಒಟ್ಟು ಜನಸಂಖ್ಯೆ 3.98 ಕೋಟಿ. ಅವರ ಪೈಕಿ 16.80 ಕೋಟಿ ಮಂದಿ ಭಾರತೀಯರಿದ್ದಾರೆ. 8 ಲಕ್ಷದಷ್ಟು ಜನ ಸಿಖ್ಖರೇ ಇದ್ದಾರೆ. ಆದರೆ ಇಲ್ಲಿರುವ ಸಿಖ್ಖರಲ್ಲಿ ಖಲಿಸ್ತಾನ ಪ್ರತ್ಯೇಕತಾವಾದಿಗಳ ಪರವಾಗಿ ಇರುವವರು ಎಷ್ಟು ಎಂಬುದರ ಬಗ್ಗೆ ಮಾಹಿತಿ ಇಲ್ಲ. ಕೆನಡಾ ಜನಸಂಖ್ಯೆಯಲ್ಲಿ ಭಾರತೀಯರ ಪ್ರಮಾಣ 4% ರಷ್ಟಿದೆ. ಇಲ್ಲಿನ ಒಟ್ಟು ಭಾರತೀಯರಲ್ಲಿ 13 ಲಕ್ಷ ಮಂದಿ ಕೆನಡಾ ಪೌರತ್ವ ಪಡೆದುಕೊಂಡಿದ್ದಾರೆ. 3.80 ಲಕ್ಷ ವಿದ್ಯಾರ್ಥಿಗಳ ಸಂಖ್ಯೆ ಇಲ್ಲಿದೆ.
ಭಾರತ-ಕೆನಡಾ ಬಿಕ್ಕಟ್ಟಿಗೆ ಕಾರಣವೇನು?
2007ರಲ್ಲಿ ಪಂಜಾಬ್‌ನಲ್ಲಿ ನಡೆದಿದ್ದ ಬಾಂಬ್ ಸ್ಫೋಟ ಪ್ರಕರಣದಲ್ಲಿ ಬೇಕಾಗಿದ್ದ ಹರ್ದೀಪ್ ಸಿಂಗ್ ನಿಜ್ಜಾರ್‌ನನ್ನು ಭಾರತ ಸರ್ಕಾರ ಉಗ್ರರ ಪಟ್ಟಿಗೆ ಸೇರಿಸಿತ್ತು. ಭಾರತದಲ್ಲಿ ಉಗ್ರರ ಸಂಘಟನೆ ಎಂದು ಪಟ್ಟಿ ಮಾಡಲಾಗಿ ಖಲಿಸ್ತಾನ್ ಟೈಗರ್ ಫೋರ್ಸ್‌ನ ಅಧ್ಯಕ್ಷನಾಗಿದ್ದ ನಿಜ್ಜಾರ್ 1990 ರ ದಶಕದಲ್ಲೇ ಭಾರತ ತೊರೆದು ಕೆನಡಾ ಸೇರಿದ್ದ. ಅಲ್ಲಿನ ಪೌರತ್ವವನ್ನೂ ಪಡೆದಿದ್ದ. ಖಲಿಸ್ತಾನ ಪ್ರತ್ಯೇಕತಾವಾದಿಗಳಿಗೆ ತರಬೇತಿ ಮತ್ತಿತರ ನೆರವು ನೀಡಿದ ಆರೋಪಗಳೂ ಆತನ ಮೇಲಿದ್ದವು. ಆತನ ಹೆಸರಿದ್ದ ಉಗ್ರನ ಪಟ್ಟಿಯನ್ನು ಭಾರತ ಈಚಿನ ವರ್ಷಗಳಲ್ಲಿ ಕೆನಡಾಕ್ಕೆ ಹಸ್ತಾಂತರಿಸಿತ್ತು. ಕೆನಡಾ ಸರ್ಕಾರ ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ. ಕೆನಡಾದ ಬ್ರಿಟಿಷ್ ಕೊಲಂಬಿಯಾದ ರ‍್ರೆಯಲ್ಲಿನ ಗುರುದ್ವಾರದ ಅಧ್ಯಕ್ಷನಾಗಿದ್ದ ನಿಜ್ಜಾರ್‌ನನ್ನು ಇಬ್ಬರು ಮುಸುಕುಧಾರಿಗಳು ಇದೇ ಜೂನ್‌ನಲ್ಲಿ ಗುಂಡಿಟ್ಟು ಕೊಂದರು. ಭಾರತ ಮತ್ತು ಕೆನಡಾ ಸಂಬಂಧ ಹದಗೆಡಲು ಅಲ್ಲಿಂದ ಪ್ರಾರಂಭವಾಯಿತು.
ಯಾರೀ ಖಲಿಸ್ತಾನಿಗಳು?
ಸಿಖ್ ಪ್ರತ್ಯೇಕತಾವಾದಿಗಳು ತಮ್ಮ ತಾಯ್ನಾಡು ಖಲಿಸ್ತಾನ್, ಅಂದರೆ “ಶುದ್ಧರ ನಾಡು” ಅನ್ನು ಪಂಜಾಬ್‌ನಿಂದ ರಚಿಸಬೇಕೆಂದು ಒತ್ತಾಯಿಸುತ್ತಿದ್ದಾರೆ. ಭಾರತವನ್ನು ಹಲವು ರಾಷ್ಟ್ರಗಳಾಗಿ ವಿಭಜಿಸುವುದೇ ಅವರ ಗುರಿ. 1970 ಮತ್ತು 1980 ರ ದಶಕದ ಹಿಂಸಾತ್ಮಕ ದಂಗೆಯ ಸಮಯದಿಂದಲೂ ಬೇಡಿಕೆಯನ್ನು ಹಲವು ಬಾರಿ ಪುನರುಚ್ಚರಿಸಿದ್ದಾರೆ. ಪಂಜಾಬ್ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಭಯೋತ್ಪಾದನೆ ಚಟುವಟಿಕೆ ಹರಡುವಲ್ಲಿ ಖಲಿಸ್ತಾನಿ ನಾಯಕರು ಪ್ರಮುಖ ಸೂತ್ರಧಾರಿಗಳಾಗಿದ್ದಾರೆ.
ಖಲಿಸ್ತಾನಿಗಳ ಚಳುವಳಿ
1980 ರ ದಶಕದ ಆರಂಭದಲ್ಲಿ ಪಂಜಾಬ್‌ನಲ್ಲಿ ಖಲಿಸ್ತಾನಿ ಪ್ರತ್ಯೇಕತಾವಾದಿ ಚಳುವಳಿ ಪ್ರಾರಂಭವಾಯಿತು. ಪಂಜಾಬ್ ಮತ್ತು ಉತ್ತರ ಭಾರತದ ಇತರ ಭಾಗಗಳಲ್ಲಿ ‘ಶುದ್ಧರ ನಾಡು’ ಹೆಸರಿನಲ್ಲಿ ಸಿಖ್ ನಾಡು ರಚನೆಯೇ ಇವರ ಪ್ರಮುಖ ಉದ್ದೇಶವಾಗಿದೆ. ಖಲಿಸ್ತಾನಿಗಳಲ್ಲಿ ಹಲವು ಗುಂಪುಗಳಿವೆ. ಒಂದೊಂದು ಗುಂಪಿನ ಪ್ರಸ್ತಾಪವೂ ಭಿನ್ನವಾಗಿದೆ. ಕೆಲವರು ಇಡೀ ಭಾರತವು ಪಂಜಾಬ್ ನಾಡಾಗಬೇಕು ಎಂದು ಪ್ರತಿಪಾದಿಸುತ್ತಾರೆ. ಆದರೆ ಇತರರು ಪಾಕಿಸ್ತಾನಿ ಪಂಜಾಬ್ ಮತ್ತು ಉತ್ತರ ಭಾರತದ ಇತರ ಭಾಗಗಳಾದ ಚಂಡೀಗಢ, ಹರಿಯಾಣ ಮತ್ತು ಹಿಮಾಚಲ ಪ್ರದೇಶ ಪ್ರತ್ಯೇಕ ನಾಡು ಆಗಬೇಕೆಂದು ಪ್ರತಿಪಾದಿಸುತ್ತಾರೆ. ಇದನ್ನೂ ಓದಿ: ಜಾಗರೂಕರಾಗಿರಿ! – ಭಾರತದಲ್ಲಿರುವ ತನ್ನ ಪ್ರಜೆಗಳಿಗೆ ಕೆನಡಾ ಎಚ್ಚರಿಕೆ
ಖಲಿಸ್ತಾನದ ಬೇರುಗಳು, 1800 ರ ದಶಕದ ಕೊನೆಯಲ್ಲಿ ಮತ್ತು 1900 ರ ದಶಕದ ಆರಂಭದಲ್ಲಿ ಸಿಖ್ ಮತ್ತು ಹಿಂದೂಗಳನ್ನು ವಿಭಜಿಸಲು ಪ್ರಯತ್ನಿಸಿದ ಬ್ರಿಟಿಷ್ ವಸಾಹತುಶಾಹಿ ನೀತಿಗಳಲ್ಲಿವೆ. ಬ್ರಿಟಿಷ್ ರಾಜ್ ವಿರುದ್ಧ ಬಂಡಾಯವೆದ್ದ ಹಿಂದೂ ಆಡಳಿತಗಾರರ ವಿರುದ್ಧ ಬಳಸಲು ಸಿಖ್ಖರನ್ನು ಹೆಚ್ಚಿನ ಸಂಖ್ಯೆಯಲ್ಲಿ ಬ್ರಿಟಿಷ್ ಸೇನೆಗೆ ಸೇರಿಸಿಕೊಳ್ಳಲಾಯಿತು. ತರುವಾಯ, 1947 ರಲ್ಲಿ ಭಾರತದ ಸ್ವಾತಂತ್ರ‍್ಯದ ನಂತರ ಪಂಜಾಬ್ ರಾಜ್ಯ ಮತ್ತು ಭಾರತ ಸರ್ಕಾರದ ನಡುವೆ ಉದ್ವಿಗ್ನತೆ ಕಾಣಿಸಿಕೊಂಡಿತು. ಇದು ಭಾರತ ಸರ್ಕಾರದ ವಿರುದ್ಧ ಸಿಖ್ಖರಲ್ಲಿ ಅಸಮಾಧಾನಕ್ಕೆ ಕಾರಣವಾಯಿತು.
ಚಳುವಳಿ ಭಾರತದಿಂದ ಕೆನಡಾಗೆ ವಿಸ್ತರಿಸಿದ್ದು ಹೇಗೆ?
ಕೆನಡಾಕ್ಕೆ ಸಿಖ್ಖರ ವಲಸೆಯು 20 ನೇ ಶತಮಾನದ ಮೊದಲ ದಶಕದಲ್ಲಿ ಪ್ರಾರಂಭವಾಯಿತು. 1970 ರ ಹೊತ್ತಿಗೆ ಸಿಖ್ಖರು ಕೆನಡಾದ ಸಮಾಜದ ಭಾಗವಾಗಿದ್ದರು. ಖಲಿಸ್ತಾನಿ ಚಳುವಳಿಯು 1980-90ರ ದಶಕದಲ್ಲಿ ಉತ್ತುಂಗಕ್ಕೇರಿತು. ಹಿಂಸಾತ್ಮಕ ಕಾರ್ಯಾಚರಣೆ ಪ್ರಾರಂಭವಾಯಿತು. ಬಾಂಬ್ ದಾಳಿಗಳು, ಹತ್ಯೆ, ಅಪಹರಣ, ಟಾರ್ಗೆಟೆಡ್ ಹತ್ಯೆಗಳು ಮತ್ತು ನಾಗರಿಕರ ಹತ್ಯಾಕಾಂಡಗಳು ನಡೆದವು. ಇಂತಹ ಪ್ರಕರಣಗಳು ಪಂಜಾಬ್‌ನಲ್ಲಿ ಹೆಚ್ಚಾಗಿ ಘಟಿಸಿದವು.
1985 ರಲ್ಲಿ ಕೆನಡಾ ಮೂಲದ ಖಲಿಸ್ತಾನಿ ಪ್ರತ್ಯೇಕತಾವಾದಿಗಳು ಟೊರೊಂಟೊದಿಂದ ನವದೆಹಲಿಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ ‘ಕನಿಷ್ಕಾ’ ಮೇಲೆ ಬಾಂಬ್ ಸ್ಫೋಟಿಸಿದರು. ವಿಮಾನದಲ್ಲಿದ್ದ 13 ವರ್ಷದೊಳಗಿನ 82 ಮಕ್ಕಳು ಸೇರಿದಂತೆ ಎಲ್ಲಾ 329 ಪ್ರಯಾಣಿಕರು ಹತ್ಯೆಯಾದರು. ಈ ಹಿಂಸಾಚಾರವು ಅಂತಾರಾಷ್ಟ್ರೀಯ ಆಯಾಮ ಪಡೆದುಕೊಂಡಿತು. ಆ ಘಟನೆಯು ಕೆನಡಾದ ಇತಿಹಾಸದಲ್ಲಿ ಅತ್ಯಂತ ಭೀಕರ ಭಯೋತ್ಪಾದಕ ದಾಳಿಯಾಗಿ ಉಳಿದಿದೆ.
ಚಳುವಳಿಗೆ ಪ್ರತಿಕ್ರಿಯೆಯಾಗಿ ಮತ್ತು ರಾಜ್ಯದಲ್ಲಿ ಉಗ್ರವಾದವನ್ನು ಕೊನೆಗೊಳಿಸಲು ಭಾರತೀಯ ಭದ್ರತಾ ಪಡೆಗಳು ಮತ್ತು ಸ್ಥಳೀಯ ಪಂಜಾಬ್ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಪರಿಣಾಮವಾಗಿ 1990 ರ ದಶಕದ ಅಂತ್ಯದ ವೇಳೆಗೆ ಭಾರತದಲ್ಲಿ ಖಲಿಸ್ತಾನಿ ಚಳುವಳಿಯು ಬಹುತೇಕ ಕೊನೆಯ ಹಂತದಲ್ಲಿತ್ತು. ಆದರೆ ಕೆನಡಾದಲ್ಲಿ ಅದು ಬೆಳೆಯಿತು. 2015 ರ ಫೆಡರಲ್ ಚುನಾವಣೆಯಲ್ಲಿ ತನ್ನ ಲಿಬರಲ್ ಪಕ್ಷವನ್ನು ಬೆಂಬಲಿಸುವ ಹಲವಾರು ಖಲಿಸ್ತಾನಿ ಪರ ಗುಂಪುಗಳೊಂದಿಗೆ ಜಸ್ಟಿನ್ ಟ್ರುಡೊ ಅಧಿಕಾರಕ್ಕೆ ಬಂದಾಗ ಚಳುವಳಿ ಮತ್ತೆ ಜೀವ ಪಡೆಯಿತು.
ಕಾನಿಷ್ಕಾ ಬಾಂಬ್ ಸ್ಫೋಟ ಕರಾಳತೆ
1985ರ ಜೂ.1 ರಂದು ಭಾರತದ ಗುಪ್ತಚರ ಸಂಸ್ಥೆಗಳು ಕೆನಡಾ ಪ್ರಾಧಿಕಾರಗಳಿಗೆ ಖಲಿಸ್ತಾನಿ ಉಗ್ರವಾದಿಗಳು ನಡೆಸಬಹುದಾದ ವಿಮಾನ ದಾಳಿಯ ವಿರುದ್ಧ ಸೂಕ್ತ ಭದ್ರತಾ ಕ್ರಮ ಕೈಗೊಳ್ಳುವಂತೆ ತುರ್ತು ಸಂದೇಶ ರವಾನಿಸಿದ್ದವು. ಇದಾದ ನಂತರ, ಅದೇ ವರ್ಷದ ಜೂ.23 ರಂದು ಏರ್ ಇಂಡಿಯಾ ವಿಮಾನ (ಕಾನಿಷ್ಕಾ)ದಲ್ಲಿ ಸೂಟ್‌ಕೇಸ್ ಬಾಂಬ್ ಇರಿಸಲಾಗಿತ್ತು. ಟೊರೊಂಟೊದಿಂದ ಬ್ರಿಟನ್‌ನ ಲಂಡನ್‌ಗೆ ಪ್ರಯಾಣಿಸುತ್ತಿದ್ದ ಈ ವಿಮಾನದಲ್ಲಿ ಒಟ್ಟು 329 ಪ್ರಯಾಣಿಕರಿದ್ದರು. ಹತ್ಯೆಗೀಡಾಗಿದ್ದ ಬಹುತೇಕ ಪ್ರಯಾಣಿಕರಲ್ಲಿ ಕೆನಡಾ ಪ್ರಜೆಗಳಿದ್ದರು. ಇದನ್ನೂ ಓದಿ: ನಿಜ್ಜರ್‌ನಿಂದ ಕೆನಡಾದಲ್ಲಿ ಶಸ್ತ್ರಾಸ್ತ್ರ ತರಬೇತಿ, ಭಾರತದಲ್ಲಿ ದಾಳಿಗೆ ಧನ ಸಹಾಯ: ಗುಪ್ತಚರ ದಾಖಲೆ
ಕಾನಿಷ್ಕಾ ದಾಳಿಯ ಸೂತ್ರಧಾರಿಯಾಗಿದ್ದ ಪಾರ್ಮರ್‌ನನ್ನು 1992 ರಲ್ಲಿ ಪಂಜಾಬ್‌ನಲ್ಲಿ ಪೊಲೀಸರು ಹತ್ಯೆ ಮಾಡಿದರು. ಆದರೆ ಅದೇ ವರ್ಷ ಜೂನ್ ತಿಂಗಳಲ್ಲಿ ಕೆನಡಾದ ಹಲವು ಭಾಗಗಳಲ್ಲಿ ಪಾರ್ಮರ್‌ಗೆ ಗೌರವ ಸೂಚಿಸುವ ಹಲವಾರು ಭಿತ್ತಿ ಚಿತ್ರಗಳು ಕಾಣಿಸಿಕೊಂಡಿದ್ದವು.
ಖಲಿಸ್ತಾನಿ ಉಗ್ರರ ಪರವಾಗಿ ಕೆನಡಾ ಸಹಾನುಭೂತಿ ತೆರೆಮರೆಯಲ್ಲಿ ನಡೆದಿದೆ. ಇದರಿಂದ ಭಾರತಕ್ಕೆ ಮತ್ತೆ ಖಲಿಸ್ತಾನಿಗಳಿಂದ ಭದ್ರತಾ ಅಪಾಯ ಎದುರಾಗಿದೆ. ಏರ್ ಇಂಡಿಯಾ ಕಾನಿಷ್ಕಾ ಬಾಂಬ್ ದಾಳಿಯನ್ನು ಭಾರತ ಎಂದಿಗೂ ಮರೆಯಲು ಸಾಧ್ಯವಿಲ್ಲ. ಆದರೆ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಕೂಡ ಕಾನಿಷ್ಕಾ ಬಂಬ್ ದಾಳಿಯ ಪರಂಪರೆಯನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಈ ಬೆಳವಣಿಗೆ ಎರಡೂ ದೇಶಗಳ ನಡುವಿನ ರಾಜತಾಂತ್ರಿಕ ಬಿಕ್ಕಟ್ಟಿಗೆ ಕಾರಣವಾಗಿದೆ.
ಖಲಿಸ್ತಾನಿಗಳ ಬಗ್ಗೆ ಕೆನಡಾ ಸಹಾನುಭೂತಿ ಯಾಕೆ?
ಭಾರತದ ನಂತರ ಸಿಖ್ಖರು ಹೆಚ್ಚಿನ ಸಂಖ್ಯೆಯಲ್ಲಿರುವ ದೇಶ ಕೆನಡಾ. ಈ ಜನಸಂಖ್ಯೆಯು ಕೆನಡಾದ ರಾಜಕೀಯದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದಕ್ಕೆ ಇಂಬು ನೀಡುವಂತೆ ಪ್ರಧಾನಿ ಜಸ್ಟಿನ್ ಟ್ರುಡೋ ಅವರ ಲಿಬರಲ್ ಪಕ್ಷಕ್ಕೆ ಬೆಂಬಲ ನೀಡಿರುವುದು ಖಲಿಸ್ತಾನ ಪ್ರತ್ಯೇಕತಾ ಹೋರಾಟದಲ್ಲಿ ಭಾಗಿಯಾಗಿರುವ ಜಗಮೀತ್ ಸಿಂಗ್ ಅವರ ನ್ಯೂ ಡೆಮಾಕ್ರಟಿಕ್ ಪಕ್ಷ.
Web Stories