ಸಾರಿಗೆ ಮತ್ತು ವಾಹನಗಳು ಆಧುನಿಕ ಜೀವನದ ಪ್ರಮುಖ ಅವಶ್ಯಕತೆಗಳಲ್ಲಿ ಒಂದಾಗಿದೆ. ವಾಹನ ಇಲ್ಲದ ಮನೆಗಳು ಕಾಣಸಿಗುವುದು ಬಲು ಅಪರೂಪವೇ ಸರಿ. ಪ್ರಸ್ತುತ ಪೆಟ್ರೋಲ್ ಮತ್ತು ಡೀಸೆಲ್ ಗಾಡಿಗಳು ಚಾಲ್ತಿಯಲ್ಲಿವೆ. ಅದರೊಂದಿಗೆ ಹೊಸದಾಗಿ ಎಲೆಕ್ಟ್ರಿಕ್ ಗಾಡಿಗಳು ಕೂಡಾ ಸೇರಿಕೊಂಡಿವೆ. ಪೆಟ್ರೋಲ್ ಮತ್ತು ಡಿಸೇಲ್ ಗಾಡಿಗಳು ಹೆಚ್ಚು ಮಾಲಿನ್ಯವನ್ನು ಉಂಟುಮಾಡುತ್ತದೆ. ಆದರೆ ಎಲೆಕ್ಟ್ರಿಕ್ ವಾಹನಗಳು (Electric Vehicles) ಇದಕ್ಕೆ ತದ್ವಿರುದ್ಧವಾಗಿದೆ. ಹಾಗಿದ್ರೆ ಇದರಿಂದಾಗುವ ಪ್ರಯೋಜನಗಳೇನು? ಇದರಲ್ಲಿ ಏನಾದರೂ ದುಷ್ಪರಿಣಾಮಗಳಿವೆಯಾ? ಇದು ಆರ್ಥಿಕತೆಯಲ್ಲಿ ಹೇಗೆ ಸಹಾಯ ಮಾಡುತ್ತದೆ ಎಂಬುದರ ಬಗ್ಗೆ ಕಿರು ವಿವರಗಳು ಇಲ್ಲಿವೆ.
ಕಡಿಮೆ ಚಾಲನೆಯ ವೆಚ್ಚಗಳು:
ಇವಿ ವಾಹನಗಳ ಚಾಲನೆಯ ವೆಚ್ಚ ಪೆಟ್ರೋಲ್ ಮತ್ತು ಡೀಸೆಲ್ ವಾಹನಕ್ಕಿಂತ ಕಡಿಮೆಯಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ಬದಲು ಇವಿ ವಾಹನಗಳು ವಿದ್ಯುಚ್ಛಕ್ತಿಯನ್ನು ಬಳಸುತ್ತದೆ. ಇವಿ ವಾಹನಗಳು ಬ್ಯಾಟರಿಗಳನ್ನು ಒಳಗೊಂಡಿದ್ದು, ಇದನ್ನು ವಿದ್ಯುತ್ ಮೂಲಕ ಚಾರ್ಜ್ ಮಾಡಿಕೊಳ್ಳಬಹುದಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಿಂತ ಕಡಿಮೆ ದರದಲ್ಲಿ ಇವಿ ವಾಹನಗಳನ್ನು ಚಾರ್ಜ್ ಮಾಡಿಕೊಳ್ಳಬಹುದು.
Advertisement
Advertisement
ತೆರಿಗೆ ಮತ್ತು ಆರ್ಥಿಕ ಪ್ರಯೋಜನಗಳು:
ಇವಿ (EV) ವಾಹನಗಳನ್ನು ಖರೀದಿಸಲು ನೋಂದಣಿ ಶುಲ್ಕ ಮತ್ತು ರಸ್ತೆ ತೆರಿಗೆ ಪೆಟ್ರೋಲ್ ಅಥವಾ ಡೀಸೆಲ್
ವಾಹನಗಳಿಗಿಂತ ಕಡಿಮೆಯಾಗಿದೆ. ನೀವು ಯಾವ ರಾಜ್ಯದಲ್ಲಿದ್ದೀರಾ ಎಂಬ ಆಧಾರದ ಮೇಲೆ ಸರ್ಕಾರವು ಅನೇಕ ನೀತಿ ನಿಯಮಗಳನ್ನು ರಚಿಸುತ್ತದೆ. ಕೆಲವು ಪ್ರೋತ್ಸಾಹದ ಕುರಿತು ಕೆಲವು ಅಂಶಗಳನ್ನು ಈ ಕೆಳಗೆ ನೀಡಲಾಗಿದೆ.
Advertisement
1)ಖರೀದಿ ಪ್ರೋತ್ಸಾಹ:
ಇವಿ ವಾಹನ ವೆಚ್ಚದಲ್ಲಿ ಬಳಕೆದಾದರಿಗೆ ನೇರ ರಿಯಾಯಿತಿಯನ್ನು ನೀಡಲಾಗುತ್ತದೆ.
2)ಕೂಪನ್:
ಮೊತ್ತವನ್ನು ನಂತರ ಮರುಪಾವತಿ ಮಾಡುವ ಹಣಕಾಸಿನ ಪ್ರೋತ್ಸಾಹವನ್ನು ನೀಡಲಾಗುತ್ತದೆ.
3)ಬಡ್ಡಿ ರಿಯಾಯಿತಿ:
ಸಾಲವನ್ನು ಪಡೆಯಬೇಕಾದರೆ ಬಡ್ಡಿ ದರದಲ್ಲಿ ರಿಯಾಯಿತಿ ನೀಡಲಾಗುತ್ತದೆ.
4)ರಸ್ತೆ ತೆರಿಗೆ ವಿನಾಯಿತಿ:
ವಾಹನ ಖರೀದಿಯ ಸಮಯದಲ್ಲಿ ರಸ್ತೆ ತೆರಿಗೆಯನ್ನು ಮನ್ನಾ ಮಾಡಲಾಗುತ್ತದೆ.
5)ನೋಂದಣಿ ಶುಲ್ಕ ವಿನಾಯಿತಿ:
ಹೊಸ ಇವಿ ವಾಹನ ಖರೀದಿ ವೇಳೆ ಅನ್ವಯವಾಗುವ ಒಂದು ಬಾರಿಯ ನೋಂದಣಿ ಶುಲ್ಕವನ್ನು ಮನ್ನಾ ಮಾಡಲಾಗುತ್ತದೆ.
6) ಇತರೆ:
ಇವಿ ವಾಹನಗಳನ್ನು ಖರೀದಿಸುವ ಸಮಯದಲ್ಲಿ ಬಡ್ಡಿ ರಹಿತ ಸಾಲಗಳು, ಟಾಪ್‌ಅಪ್ ಸಬ್ಸಿಡಿಗಳು ಮುಂತಾದವುಗಳ್ನು ಸಹಿತ ಪಡೆದುಕೊಳ್ಳಹುದು.
Advertisement
ಪೆಟ್ರೋಲ್ ಮತ್ತು ಡೀಸೆಲ್ ದುಷ್ಪರಿಣಾಮಗಳು:
ಪಳೆಯುಳಿಕೆ ಇಂಧನಗಳು ಇತ್ತೀಚಿಗೆ ಸರಿಯಾಗಿ ಲಭ್ಯವಾಗದಿರುವುದು ಒಂದೆಡೆಯಾದರೆ ಈ ಇಂಧನಗಳು ವಾಹನಗಳಿಂದ ವಿಷಕಾರಿ ಹೊಗೆಯನ್ನು ಹೊರಸೂಸುವುದರಿಂದ ಸಾರ್ವಜನಿಕರ ಮೇಲೆ ದೀರ್ಘಕಾಲೀನ ಪರಿಣಾಮಗಳು ಬೀರುತ್ತದೆ. ಇವಿ ವಾಹನಗಳಲ್ಲಿ ಈ ರೀತಿಯಾದ ವಿಷಕಾರಿ ಹೊಗೆ ಹೊರಸೂಸದಿರುವುದರಿಂದ ಪರಿಸರ ಸ್ನೇಹಿಯಾಗಿದ್ದು, ಜನರ ಆರೋಗ್ಯದ ದೃಷ್ಟಿಯಿಂದಲೂ ಉತ್ತಮವಾಗಿದೆ ಎಂದು ಹೇಳಬಹುದು. ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳು ಇವಿ ವಾಹನಗಳಿಗಿಂತ ಸುಮಾರು 3ಪಟ್ಟು ಹೆಚ್ಚು ಇಂಗಾಲದ ಡೈಆಕ್ಸೈಡ್ ಅನ್ನು ಹೊರಸೂಸುತ್ತದೆ.
ಇವಿ ವಾಹನಗಳ ಚಾಲನೆ ಸುಲಭ ಮತ್ತು ಸೌಂಡ್ ರಹಿತವಾಗಿರುತ್ತದೆ:
ಇವಿ ವಾಹನಗಳ ಚಾಲನೆ ಅತ್ಯಂತ ಸುಲಭವಾಗಿದ್ದು, ಈ ವಾಹನಗಳು ಗೇರ್‌ಗಳನ್ನು ಹೊಂದಿರುವುದಿಲ್ಲ. ಆಕ್ಸಿಲರೇಟರ್, ಬ್ರೇಕ್ ಮತ್ತು ಸ್ಟೇರಿಂಗ್ ಅನ್ನು ಹೊಂದಿರುತ್ತದೆ. ಈ ವಾಹನಗಳನ್ನು ನಾವು ಬಯಸಿದಾಗ ಚಾರ್ಜ್ ಮಾಡಿಕೊಳ್ಳಬಹುದಾಗಿದೆ. ಅಲ್ಲದೇ ಇದನ್ನು ಸಾರ್ವಜನಿಕ ಸ್ಥಳಗಳಲ್ಲಿಯೂ ಚಾರ್ಜ್ ಮಾಡಿಕೊಳ್ಳಲು ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ಈ ವಾಹನಗಳು ಯಾವುದೇ ಶಬ್ಧವನ್ನು ಹೊರಸೂಸುವುದಿಲ್ಲ. ಇದು ಶಬ್ದ ಮಾಲಿನ್ಯವನ್ನು ಕಡಿಮೆ ಮಾಡುತ್ತದೆ.
ಇವಿ ವಾಹನಗಳ ಹೆಚ್ಚಳದಿಂದಾಗಿ ಲಿಥಿಯಂ ಬೇಡಿಕೆ ಹೆಚ್ಚಾಗುತ್ತದೆ. ದೇಶಗಳು ತಮ್ಮ ಗಮನವನ್ನು ಕಚ್ಚಾ ತೈಲದಿಂದ ಲಿಥಿಯಂ ಗಣಿಗಾರಿಕೆಗೆ ಬದಲಾಯಿಸುತ್ತವೆ. ಇದರಿಂದಾಗಿ ತೈಲ ರಫ್ತು ಮತ್ತು ಆಮದು ಮಾಡುವ ದೇಶಗಳ ಮೇಲೆ ಭಾರೀ ಪರಿಣಾಮ ಬೀರುತ್ತದೆ.
ತೈಲ ಉತ್ಪಾದನೆ ಮಾಡುವ ದೇಶಗಳ ಮೇಲೆ ಏನು ಪರಿಣಾಮ?
ತೈಲ ರಫ್ತು ಮಾಡುವ ದೇಶಗಳಾದ ಯುಎಇ, ಸೌದಿ ಅರೇಬಿಯಾ, ಕುವೈತ್ ಮುಂತಾದ ದೇಶಗಳಿಗೆ ಇವಿ ವಾಹನ ಖರೀದಿಯಿಂದ ನಕರಾತ್ಮಕ ಪರಿಣಾಮ ಬೀರುತ್ತದೆ. ಏಕೆಂದರೆ ಆ ದೇಶಗಳ ಆರ್ಥಿಕತೆಯು ತೈಲ ರಫ್ತಿನ ಮೇಲೆ ಹೆಚ್ಚು ಅವಲಂಬಿತವಾಗಿರುತ್ತವೆ. ಸೌದಿ ಅರೇಬಿಯಾ ವಿಶ್ವದ 15%ನಷ್ಟು ತೈಲವನ್ನು ಒಳಗೊಂಡಿದೆ. ಇವಿ ವಾಹನಗಳ ಹೆಚ್ಚು ಬಳಕೆಯಿಂದ ತೈಲ ಬೇಡಿಕೆಗಳು ಕಡಿಮೆಯಾಗುತ್ತದೆ. ಹೀಗಾಗಿ ಯುಎಇ ತೈಲ ರಫ್ತಿನ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿದ್ದು, ಜಿಡಿಪಿಗೆ ಕೊಡುಗೆ ನೀಡುವ ಸಲುವಾಗಿ ಇತರ ಕೈಗಾರಿಕೆಗಳ ಮೇಲೆ ಕೇಂದ್ರಿಕರಿಸುತ್ತಿದೆ. ತೈಲ ಉದ್ಯಮವನ್ನು ಹೊರತುಪಡಿಸಿ ಯುಎಇ ಪ್ರವಾಸೋದ್ಯಮಕ್ಕೆ ಹೆಚ್ಚಿನ ಮಹತ್ವ ನೀಡಿದೆ.
ತೈಲ ಆಮದು ಮಾಡಿಕೊಳ್ಳುವ ದೇಶಗಳ ಮೇಲೆ ಪರಿಣಾಮ ಏನು?
ಪ್ರಸ್ತುತ ಹೆಚ್ಚಿನ ದೇಶಗಳು ತೈಲಕ್ಕೆ ಅವಲಂಬಿತವಾಗಿದ್ದು, ತೈಲವನ್ನು ಆಮದು ಮಾಡಿಕೊಳ್ಳುತ್ತಿವೆ. ಇವಿ ವಾಹನಗಳು ಹೆಚ್ಚು ಬಳಕೆಯಾದರೆ ತೈಲ ಆಮದು ಮಾಡಿಕೊಳ್ಳುವ ದೇಶಗಳು ತಮ್ಮ ಹಣಕಾಸಿನ ಕೊರತೆಯನ್ನು ಭರಿಸಬಹುದು. ಅಲ್ಲದೇ ಜಿಡಿಪಿಯನ್ನು ಹೆಚ್ಚಿಸಬಹುದು. ಲಿಥಿಯಂ ಆಮದು ಹೆಚ್ಚಾಗಿದ್ದರೂ, ಪೆಟ್ರೋಲ್ ಆಮದಿಗಿಂತ ಇದು ಉತ್ತಮವಾಗಿದೆ. ಇದರ ಜೊತೆಗೆ ಲಿಥಿಯಂ ಗಣಿಗಾರಿಕೆಗೆ ಹೆಚ್ಚಿನ ಆದ್ಯತೆ ನೀಡಿದರೆ ಭವಿಷ್ಯದಲ್ಲಿ ಲಿಥಿಯಂ ಆಮದು ಮಾಡಿಕೊಳ್ಳುವುದನ್ನು ಕಡಿಮೆ ಮಾಡಬಹುದು.
ಉದ್ಯೋಗದ ಮೇಲೆ ಪರಿಣಾಮ ಏನು?
ಇಂಧನ ಉತ್ಪಾದನೆಗಿಂತ ಎಲೆಕ್ಟ್ರಿಕ್ ವಾಹನ ಉತ್ಪಾದನೆಗೆ ವಿಭಿನ್ನ ಕೌಶಲ್ಯಗಳ ಅಗತ್ಯವಿರುವುದರಿಂದ ಕಾರ್ಮಿಕರ ಮಾರ್ಕೆಟ್‌ನಲ್ಲಿ ಹಲವಾರು ಬದಲಾವಣೆಗಳಾಗುತ್ತವೆ. ಸಾಮಾನ್ಯವಾಗಿ ಎಲೆಕ್ಟ್ರಿಕ್ ವಾಹನಗಳನ್ನು ತಯಾರಿಸಲು ಕಡಿಮೆ ಕಾರ್ಮಿಕರು ಬೇಕಾಗಿರುವುದರಿಂದ ಇದು ಉದ್ಯೋಗದ ಮೇಲೆ ನಕರಾತ್ಮಕ ಪರಿಣಾಮ ಬೀರುತ್ತದೆ.
ಕಾರ್ಪೊರೇಟ್ ವಲಯ ಮತ್ತು ಹಣಕಾಸು ಮಾರುಕಟ್ಟೆಗಳ ಮೇಲೆ ಪರಿಣಾಮ:
ಇವಿ ವಾಹನ ಬಳಕೆಯಿಂದಾಗಿ ತೈಲ ಮತ್ತು ಅನಿಲ ಪರಿಶೋಧನೆ, ತೈಲ ವ್ಯಾಪಾರ ಮತ್ತು ವಾಹನ ಬಿಡಿಭಾಗಗಳ ಲಾಭವು ಗಮನಾರ್ಹವಾಗಿ ಕಡಿಮೆಯಾಗುತ್ತಾ ಹೋಗುತ್ತದೆ. ಇದರಿಂದ ಕಂಪನಿಯ ಷೇರು ಬೆಲೆ ಕೂಡ ಕುಸಿಯುತ್ತದೆ. ಹೀಗಾಗಿ ಇದು ಹೂಡಿಕೆದಾರರನ್ನು ಆಕರ್ಷಿಸುವುದಿಲ್ಲ. ಮತ್ತೊಂದೆಡೆ ಎಲೆಕ್ಟ್ರಿಕ್ ವಾಹನ ಸಂಬಂಧಿತ ಕಂಪನಿಗಳು ಅದರಲ್ಲೂ ಬ್ಯಾಟರಿ ಕಂಪನಿಗಳು ಲಾಭ ಮತ್ತು ಷೇರು ಬೆಲೆಗಳಲ್ಲಿ ಹೆಚ್ಚಳವನ್ನು ಕಾಣುತ್ತದೆ. ಇಷ್ಟು ಮಾತ್ರವಲ್ಲದೇ ಚಾರ್ಜಿಂಗ್ ಸ್ಟೇಷನ್ ಪ್ರೊವೈಡರ್ ಕಂಪನಿಗಳು ಕೂಡಾ ಗಣನೀಯವಾಗಿ ಬೇಡಿಕೆಯಲ್ಲಿ ಹೆಚ್ಚಳವನ್ನು ಕಾಣುತ್ತದೆ.
ವಿದ್ಯುತ್ ಬೇಡಿಕೆ:
ಇವಿ ವಾಹನಗಳನ್ನು ಚಾರ್ಜ್ ಮಾಡುವ ಸಲುವಾಗಿ ಹೆಚ್ಚಿನ ವಿದ್ಯುತ್ ಬಳಕೆಯಾಗುತ್ತದೆ. ಇದರಿಂದ ವಿದ್ಯುತ್ ಬೇಡಿಕೆ ಹೆಚ್ಚಾಗುತ್ತದೆ. ವಿದ್ಯುತ್ ಪೂರೈಕೆಯು ಸೌರ, ಗಾಳಿ ಮತ್ತು ಜೈವಿಕ ಅನಿಲಗಳಿಂದ ಪೂರೈಸಿದರೆ ಉತ್ತಮ. ಯಾಕೆಂದರೆ ಹೆಚ್ಚುವರಿ ಪೂರೈಕೆಯನ್ನು ಈಡೇರಿಸಲು ಕಲ್ಲಿದ್ದಲ್ಲನ್ನು ಬಳಸಿದರೆ ಕಾರ್ಬನ್ ಅನ್ನು ಕಡಿಮೆ ಮಾಡುವ ಗುರಿಯನ್ನು ತಲುಪಲು ಸಾಧ್ಯವಿಲ್ಲ.
ಭಾರತ ಸರ್ಕಾರವು 2030ರ ವೇಳೆಗೆ ದೇಶದ ವಾಹನ ಸಮೂಹದ 30%ನಷ್ಟು ವಿದ್ಯುದ್ದೀಕರಣವನ್ನು ಸಾಧಿಸುವ ಗುರಿಯನ್ನು ಹೊಂದಿದೆ ಮತ್ತು ಇವಿ ಉದ್ಯಮದ ಬೆಳವಣಿಗೆಯನ್ನು ಬೆಂಬಲಿಸುವ ಸಲುವಾಗಿ ಹಲವಾರು ಪ್ರೋತ್ಸಾಹ ಮತ್ತು ನೀತಿಗಳನ್ನು ಪರಿಚಯಿಸಿದೆ. ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ, ಹೈಡ್ರೋಜನ್ ಇಂಧನದ ಅಳವಡಿಕೆ ಮತ್ತು ಬದಲಾಗುತ್ತಿರುವ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಸಲುವಾಗಿ ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ಉದ್ಯಮಕ್ಕೆ ಪ್ರಮುಖ ಉತ್ತೇಜನ ನೀಡಲಾಗಿದೆ. ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ 2070ರ ವೇಳೆಗೆ ಶಕ್ತಿ ಪರಿವರ್ತನೆ ಮತ್ತು ನಿವ್ವಳ ಶೂನ್ಯ ಗುರಿಗಳನ್ನು ಹೊಂದಿರುವ ನಿರ್ಣಾಯಕ ಬಂಡವಾಳ ಹೂಡಿಕೆಗಾಗಿ 35,000 ಕೋಟಿ ರೂ.ಗಳನ್ನು ಹಂಚಿಕೆ ಮಾಡಿದ್ದಾರೆ. ಇದನ್ನೂ ಓದಿ: ವಿದೇಶಕ್ಕೆ ಭಾರತದ ಬ್ರಹ್ಮೋಸ್ – ಶಸ್ತ್ರಾಸ್ತ ರಫ್ತು ಎಷ್ಟಿತ್ತು? ಎಷ್ಟು ಏರಿಕೆಯಾಗಿದೆ?
Web Stories