ಚೈತ್ರಮಾಸದಲ್ಲಿ ಯುಗಾದಿಯ ನಂತರ ಬರುವ ಅತಿಮುಖ್ಯ ಹಬ್ಬವೆಂದರೆ ಅದು ಶ್ರೀರಾಮನವಮಿ. ಭಾರತ ದೇಶದಲ್ಲಿ ಆರ್ಯ ಸಂಸ್ಕೃತಿಗೆ ಸೇರಿದ ಎಲ್ಲಾ ಜನರು ಆತ್ಮೀಯತೆಯಿಂದ ಆಚರಿಸುವ ಹಬ್ಬ ಇದಾಗಿದೆ. ಹಿಂದೂಗಳ ಹೃದಯ ಸಾಮ್ರಾಟ, ಮರ್ಯಾದ ಪುರುಷೋತ್ತಮ, ದಶರಥ ನಂದನ ಶ್ರೀರಾಮ ಹುಟ್ಟಿದ ದಿನವನ್ನು ಶ್ರೀರಾಮನವಮಿ (Ram Navami) ಹಬ್ಬವೆಂದು ಆಚರಣೆ ಮಾಡಲಾಗುತ್ತದೆ.
ಪೌರಾಣಿಕ ಹಿನ್ನೆಲೆ:
ಧರ್ಮ ಶಾಸ್ತ್ರಗಳ ಪ್ರಕಾರ, ಅಯೋಧ್ಯೆಯ ರಾಜನಾದ ದಶರಥನಿಗೆ ಕೌಸಲ್ಯಾ, ಕೈಕೇಯೀ ಹಾಗೂ ಸುಮಿತ್ರೆ ಎಂಬ ಮೂರು ಜನ ಪತ್ನಿಯರಿದ್ದರು. ಆದರೆ ಯಾರಿಗೂ ಪುತ್ರ ಸಂತಾನವಾಗಿರಲಿಲ್ಲ. ನಂತರ ದಶರಥನು ಋಷಿಮುನಿಗಳ ಸಲಹೆಯಂತೆ ಪುತ್ರಕಾಮೇಷ್ಠಿ ಯಾಗವನ್ನು ಮಾಡಿಸಿದ. ಈ ಯಜ್ಞದಿಂದ ಸಂತುಷ್ಟನಾದ ಪ್ರಜಾಪತಿಯು ದಶರಥನಿಗೆ ದಿವ್ಯಪಾಯಸವನ್ನು ನೀಡುತ್ತಾನೆ. ಈ ದಿವ್ಯ ಪಾಯಸವನ್ನು ದಶರಥನು ತನ್ನ ಮೂವರು ಪತ್ನಿಯರಿಗೂ ಹಂಚುತ್ತಾನೆ. ಇದರಂತೆ ಚೈತ್ರ ಮಾಸದ ಶುಕ್ಲಪಕ್ಷದ ನವಮಿ ತಿಥಿಯಂದು ಮಧ್ಯಾಹ್ನ ಪುನರ್ವಸು ನಕ್ಷತ್ರದಲ್ಲಿ ಕೌಸಲ್ಯೆಗೆ ರಾಮನೂ, ಪುಷ್ಯನಕ್ಷತ್ರದ ದಶಮಿಯಂದು ಸೂರ್ಯೋದಯಕ್ಕೆ ಮುನ್ನ ಕೈಕೇಯಿಗೆ ಭರತನೂ, ಅದೇ ದಿನ ಆಶ್ಲೇಷಾ ನಕ್ಷತ್ರದಲ್ಲಿ ಮಧ್ಯಾಹ್ನ ಲಕ್ಷ್ಮಣ, ಶತ್ರುಘ್ನರೂ ಜನಿಸುತ್ತಾರೆ. ಹೀಗೆ ರಾಮನು ಜನಿಸಿದ ನವಮಿಯಂದು ರಾಮನವಮಿಯನ್ನಾಗಿ ಆಚರಿಸುತ್ತಾರೆ.
Advertisement
Advertisement
ಅಯೋಧ್ಯೆಯ ರಾಜ ದಶರಥ ಹಾಗೂ ಕೌಸಲ್ಯೆಯ ಪುತ್ರನಾಗಿ ಮಹಾವಿಷ್ಣುವಿನ ಏಳನೇ ಅವತಾರವಾಗಿ ಶ್ರೀರಾಮನು ಜನಿಸುತ್ತಾನೆ. ಹಿಂದೂ ಗ್ರಂಥಗಳಲ್ಲಿ ಉಲ್ಲೇಖವಿರುವಂತೆ ನಾಲ್ಕು ಯುಗಗಳಲ್ಲಿ ಒಂದಾದ ತ್ರೇತಾಯುಗದಲ್ಲಿ ರಾಮನು ಜನಿಸಿದನು. ಈ ದಿನ ಶ್ರೀರಾಮನನ್ನು ಪೂಜಿಸಿದರೆ ಕೆಟ್ಟ ಶಕ್ತಿಗಳು ನಿವಾರಣೆಯಾಗಿ, ಭೂಮಿಯ ಮೇಲೆ ದೈವೀಕ ಶಕ್ತಿಯು ನೆಲೆಸುತ್ತದೆ ಎಂಬ ನಂಬಿಕೆಯಿದೆ.
Advertisement
ಆಚರಣೆ ಹೇಗೆ?
ಅನೇಕ ಕಡೆಗಳಲ್ಲಿ ಚೈತ್ರ ಮಾಸದ ಪ್ರತಿಪಾದದಿಂದ ಒಂಭತ್ತು ದಿನಗಳವರೆಗೆ ರಾಮನವಮಿ ಉತ್ಸವವು ನಡೆಯುತ್ತದೆ. ರಾಮನವಮಿಯಂದು ಶ್ರೀರಾಮನನ್ನು ಪೂಜಿಸಿ, ಅರ್ಚಿಸಲಾಗುತ್ತದೆ. ಈ ದಿನದಂದು ಉಪವಾಸವನ್ನು ಮಾಡಿದರೆ ಅತ್ಯಂತ ಶ್ರೇಷ್ಠ. ರಾಮನವಮಿಯಂದು ಬೆಳಗ್ಗೆಯಿಂದ ಮರುದಿನ ಬೆಳಗ್ಗೆಯವರೆಗೂ ಉಪವಾಸವನ್ನು ಕೈಗೊಳ್ಳಬೇಕು. ಈ ಸಮಯದಲ್ಲಿ ಶ್ರೀರಾಮ ಜಪ, ರಾಮಾಯಣ ಪಾರಾಯಣ, ಶ್ರೀರಾಮ ಸೀತಾ ಕಲ್ಯಾಣ್ಯೋತ್ಸವವನ್ನೂ ಮಾಡಬಹುದು.
Advertisement
ಕೆಲವೆಡೆ ಪ್ರತಿಪಾದದಿಂದ ನವಮಿಯವರೆಗೂ ಒಂಭತ್ತು ದಿನಗಳಲ್ಲಿ ಭಜನೆ ಹಾಗೂ ಕೀರ್ತನೆಗಳನ್ನು ಆಯೋಜಿಸುತ್ತಾರೆ. ಈ ದಿನ ಕೆಲವು ಭಕ್ತರು ಕಟ್ಟುನಿಟ್ಟಾದ ಉಪವಾಸ ವ್ರತವನ್ನು ಆಚರಿಸುತ್ತಾರೆ ಮತ್ತು ನಿರಾಹಾರ ಉಪವಾಸವನ್ನೂ ಮಾಡುವವರಿದ್ದಾರೆ. ಕೆಲವರು ಸೌಮ್ಯವಾದ ಉಪವಾಸವನ್ನು ಆಚರಿಸಿ, ನೀರು ಹಾಗೂ ಹಣ್ಣುಗಳನ್ನು ಸೇವಿಸುತ್ತಾರೆ. ರಾಮನವಮಿಯಂದು ಶ್ರೀರಾಮನ ಜನ್ಮಸ್ಥಳವಾದ ಅಯೋಧ್ಯೆಗೆ ಭೇಟಿ ನೀಡಿ ಸರಯೂ ನದಿಯಲ್ಲಿ ಮಿಂದು ಶ್ರೀರಾಮನ ದರ್ಶನ ಮಾಡಿ ಪಾವನರಾಗುತ್ತಾರೆ.
ಅಯೋಧ್ಯೆಯಲ್ಲಿ ರಾಮನವಮಿ ಆಚರಣೆ:
ಶ್ರೀರಾಮ ಜನಿಸಿದ ಸ್ಥಳ ಅಯೋಧ್ಯೆಯಲ್ಲಿ ರಾಮನವಮಿ ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತದೆ. ಹಬ್ಬದ ದಿನದಂದು ರಾಮನ ಭಜನೆ, ಕೀರ್ತನೆ ಹಾಗೂ ಮೆರವಣಿಗಳನ್ನು ನಡೆಸಲಾಗುತ್ತದೆ. ರಾಮನವಮಿಯಂದು ಸೂರ್ಯ ದೇವನ ಪ್ರಾರ್ಥನೆಯೊಂದಿಗೆ ಹಬ್ಬ ಆರಂಭವಾಗುತ್ತದೆ. ಏಕೆಂದರೆ, ಶ್ರೀರಾಮನು ಸೂರ್ಯವಂಶಸ್ಥನಾಗಿದ್ದು, ಶಕ್ತಿಯ ಪ್ರತೀಕವಾಗಿರುವ ಸೂರ್ಯ ದೇವರ ಆರಾಧನೆ ಮೂಲಕ ರಾಮನವಮಿ ಆರಂಭವಾಗುತ್ತದೆ. ಹಬ್ಬದ ದಿನದಂದು ರಾಮನ ಸ್ತೋತ್ರ ಹಾಗೂ ಭಜನೆಗಳನ್ನು ಹಾಡುವ ಮೂಲಕ ದೇವರನ್ನು ಸಂಪ್ರೀತಿಗೊಳಿಸಲಾಗುತ್ತದೆ.
ಹಬ್ಬದ ದಿನದಂದು ಪ್ರತಿಯೊಬ್ಬರೂ ಜಾತಿ, ಧರ್ಮವೆಂಬ ಕಟ್ಟಳೆಗಳನ್ನು ಬದಿಗೊತ್ತಿ ಕೋಸಂಬರಿ, ಮಜ್ಜಿಗೆ ಹಾಗೂ ಪಾನಕಗಳನ್ನು ಹಂಚುವ ಮೂಲಕ ಸೌಹಾರ್ದತೆಯನ್ನು ಮೆರೆಯುತ್ತಾರೆ.