ಇಸ್ರೇಲ್ (Israel) ಹಾಗೂ ಹಮಾಸ್ ಉಗ್ರರ ನಡುವಿನ ಯುದ್ಧ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆಯುತ್ತಿದೆ. ಹಮಾಸ್, ಹಿಜ್ಬುಲ್ಲಾ (Hezbollah) ಮತ್ತು ಇತರ ಇರಾನ್ ಪೋಷಿತ ಉಗ್ರ ಸಂಘಟನೆಗಳನ್ನು ನಾಶಮಾಡುವ ಹೊರಟಿರುವ ಇಸ್ರೇಲ್ ದೇಶವು ಎರಡೂ ಗುಂಪುಗಳ ಹಲವಾರು ಪ್ರಮುಖ ನಾಯಕರನ್ನು ಹತ್ಯೆ ಮಾಡಿದೆ. ಇನ್ನೂ ಅಮೆರಿಕ (America) ಸಹ ಇಸ್ರೇಲ್ ಬೆಂಬಲಕ್ಕೆ ನಿಂತಿದ್ದು, ಥಾಡ್ ಕ್ಷಿಪಣಿ ನಿರೋಧಕ ವ್ಯವಸ್ಥೆಯನ್ನು ಇಸ್ರೇಲ್‌ಗೆ ಕಳುಹಿಸಿದೆ.
Advertisement
ಥಾಡ್ ಎಂದರೇನು?
Advertisement
THAAD ಎಂದರೆ ಟರ್ಮಿನಲ್ ಹೈ ಆಲ್ಟಿಟ್ಯೂಡ್ ಏರಿಯಾ ಡಿಫೆನ್ಸ್ (ಥಾಡ್) ಕ್ಷಿಪಣಿ ನಿರೋಧಕ ವ್ಯವಸ್ಥೆ ಎಂದರ್ಥ. ಇದು ಖಂಡಾಂತರ ಕ್ಷಿಪಣಿ, ಡ್ರೋನ್ ಹಾಗೂ ರಾಕೆಟ್ ದಾಳಿಯನ್ನು ತಡೆಯಬಲ್ಲ ಶಕ್ತಿಯನ್ನು ಹೊಂದಿದೆ. ಇಷ್ಟೇ ಅಲ್ಲದೇ ಹೈಪರ್ ಸಾನಿಕ್ ಕ್ಷಿಪಣಿಗಳನ್ನು ಸಹ ಇದು ಹೊಡೆದುರುಳಿಸಬಲ್ಲ ಸಾಮರ್ಥ್ಯ ಹೊಂದಿದೆ.
Advertisement
ಥಾಡ್ ಅಮೆರಿಕ ಹೊಂದಿರುವ ಅತ್ಯಾಧುನಿಕ, ಬಿಗಿ ಭದ್ರತೆಯ ವಾಯು ರಕ್ಷಣಾ ವ್ಯವಸ್ಥೆ. ಇದನ್ನು ಬಳಸಲು 100 ತುಕಡಿಗಳು ಬೇಕಾಗುತ್ತವೆ. ಈ ವ್ಯವಸ್ಥೆಯಲ್ಲಿ ಬೃಹತ್ ಗಾತ್ರದ ಬ್ಯಾಟರಿಗಳು, ಕ್ಷಿಪಣಿಗಳನ್ನು ಉಡಾಯಿಸಬಲ್ಲ 6 ಟ್ರಕ್‌ಗಳು, ಪ್ರತಿ ಟ್ರಕ್ ಜೊತೆಯಲ್ಲೇ 8 ಇಂಟರ್‌ಸೆಪ್ಟರ್‌ಗಳು ಹಾಗೂ ಅತ್ಯಾಧುನಿಕ ರಾಡಾರ್ ವ್ಯವಸ್ಥೆ ಇರಲಿದೆ. ಇದು ಶಕ್ತಿಶಾಲಿ ರಾಡಾರ್‌ನ್ನೂ ಇದು ಹೊಂದಿರುತ್ತದೆ. ಅಮೆರಿಕದ ಲಾಕ್ ಹೀಡ್ ಮಾರ್ಟಿನ್ ಕಂಪನಿ ಇದನ್ನು ಅಭಿವೃದ್ಧಿಪಡಿಸಿದೆ. ಅಲ್ಪ, ಮಧ್ಯಮ ದೂರದ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಇದು ಹೊಡೆದುರುಳಿಸುವ ಸಾಮರ್ಥ್ಯ ಹೊಂದಿದೆ. ಭೂ ವಾತಾವರಣದಿಂದ ಹೊರಗಿರುವ ಹಾಗೂ ಒಳಗಿರುವ ಎರಡೂ ಬಗೆಯ ಎದುರಾಳಿಗಳ ಕ್ಷಿಪಣಿಯನ್ನು ಹೊಡೆದುರುಳಿಸಬಲ್ಲದು. ಇಸ್ರೇಲ್ ಈಗಾಗಲೇ ವಾಯು ರಕ್ಷಣಾ ವ್ಯವಸ್ಥೆಯನ್ನು ಹೊಂದಿದ್ದು, ಥಾಡ್‌ನಿಂದ ಮತ್ತಷ್ಟು ಬಲ ಸಿಕ್ಕಂತಾಗುತ್ತದೆ.
Advertisement
ಥಾಡ್ ಇಸ್ರೇಲ್ ವಾಯು ಗಡಿ ಪ್ರವೇಶಿಸುವ ಕ್ಷಿಪಣಿಗಳನ್ನು ಪತ್ತೆ ಮಾಡುವ ಸಾಮರ್ಥ್ಯ ಹೊಂದಿದೆ. ಈ ಥಾಡ್ ವ್ಯವಸ್ಥೆಯನ್ನು ನಿರ್ವಹಿಸಲು 100 ಮಂದಿಯ ಅಗತ್ಯತೆ ಇದೆ. ಅಮೆರಿಕದಿಂದಲೇ 100 ಮಂದಿಯ ತಂಡವನ್ನೂ ರವಾನೆ ಮಾಡಲು ನಿರ್ಧರಿಸಲಾಗಿದೆ. THAAD – ಅಲ್ಪ-ಶ್ರೇಣಿಯ (1,000 ಕಿಮೀ ವರೆಗೆ), ಮಧ್ಯಮ-ಶ್ರೇಣಿಯ (1,000-3,000 ಕಿಮೀ), ಮತ್ತು ಸೀಮಿತ ಮಧ್ಯಂತರ-ಶ್ರೇಣಿಯ (3,000-5,000 ಕಿಮೀ) ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿಯನ್ನು ತಡೆಯುವ ಸಾಮರ್ಥ್ಯ ಹೊಂದಿದೆ.
ಥಾಡ್‌ನ್ನು ಇಸ್ರೇಲ್‌ಗೆ ಏಕೆ ಕಳುಹಿಸಲಾಗಿದೆ?
ಅಮೆರಿಕ ಹಾಗೂ ಇಸ್ರೇಲ್ ಒಪ್ಪಂದದ ಪ್ರಕಾರ ಕಳಿಸಲಾಗಿದೆ. ಇಸ್ರೇಲ್ ರಕ್ಷಣೆ ಮತ್ತು ಇರಾನ್ ದಾಳಿಯಿಂದ ಅಮೆರಿಕನ್ನರನ್ನು ರಕ್ಷಿಸಲು ಎಂದು ಅಮೆರಿಕ ಹೇಳಿಕೊಂಡಿದೆ.
ಈಗಾಗಲೇ ಇಸ್ರೇಲ್ ಬಳಿ ಕ್ಷಿಪಣಿ, ರಾಕೆಟ್ ದಾಳಿ ತಡೆಯುವ ಐರನ್ ಡೋಮ್ ವ್ಯವಸ್ಥೆ ಇದೆಯಾದರೂ, ಇತ್ತೀಚೆಗೆ ಇರಾನ್, ಲೆಬನಾನ್, ಹೌತಿ ಉಗ್ರರು, ಇರಾಕ್‌ನಲ್ಲಿರುವ ಹಮಾಸ್ ಬೆಂಬಲಿಗರು ಏಕಕಾಲಕ್ಕೆ ದಾಳಿ ನಡೆಸಿದ ವೇಳೆ ಒಂದಿಷ್ಟು ಕ್ಷಿಪಣಿ, ರಾಕೆಟ್‌ಗಳು ಐರನ್ ಡೋಂ ವ್ಯವಸ್ಥೆ ದಾಟುವಲ್ಲಿ ಯಶಸ್ವಿಯಾಗಿದ್ದ ಕಾರಣ ಅಮೆರಿಕ ಹೆಚ್ಚುವರಿಯಾಗಿ ಥಾಡ್ ವ್ಯವಸ್ಥೆ ಕಳುಹಿಸಿ ಕೊಡುತ್ತಿದೆ.
ಅಮೆರಿಕದ ಈ ಬೆಂಬಲದಿಂದ ಇರಾನ್ ವಿರುದ್ಧ ಪ್ರತೀಕಾರಕ್ಕೆ ಹಾತೊರೆಯುತ್ತಿದ್ದ ಇಸ್ರೇಲ್‌ಗೆ ಸಾವಿರ ಆನೆಗಳ ಬಲ ಸಿಕ್ಕಿದೆ. ಮೊದಲಿಗೆ ಇಸ್ರೇಲ್ ದೇಶದ ಆಂತರಿಕ ರಕ್ಷಣೆಗೆ ಆದ್ಯತೆ ನೀಡಲಾಗಿದ್ದು, ಇರಾನ್‌ನಿಂದ ಹಾರಿ ಬರುವ ಖಂಡಾಂತರ ಕ್ಷಿಪಣಿಗಳ ದಾಳಿ ತಡೆಯಲು ಕ್ಷಿಪಣಿ ನಿರೋಧಕ ವ್ಯವಸ್ಥೆ ಬಲಪಡಿಸಲು ಅಮೆರಿಕ ಮುಂದಾಗಿದೆ. ಈಗಾಗಲೇ ಅಮೆರಿಕ ಅಧ್ಯಕ್ಷ ಜೋ ಬೈಡನ್, ಇಸ್ರೇಲ್ ದೇಶ ತನ್ನನ್ನು ತಾನು ರಕ್ಷಿಸಿಕೊಳ್ಳುವ ಹಕ್ಕು ಹೊಂದಿದೆ. ಈ ನಿಟ್ಟಿನಲ್ಲಿ ಇರಾನ್ ದೇಶದಿಂದ ಎದುರಾಗುವ ಯಾವುದೇ ಪ್ರಕಾರದ ವಾಯು ದಾಳಿ ತಡೆಯಲು ಶಕ್ತವಾದ ವ್ಯವಸ್ಥೆಯನ್ನು ಇಸ್ರೇಲ್‌ಗೆ ನೀಡಲು ಅಮೆರಿಕ ತೀರ್ಮಾನಿಸಿದೆ ಎಂದು ಘೋಷಿಸಿದ್ದರು. ಅ.1 ರಂದು ಇಸ್ರೇಲ್ ಮೇಲೆ ಇರಾನ್ ಏಕಾಏಕಿ 180ಕ್ಕೂ ಹೆಚ್ಚು ಖಂಡಾಂತರ ಕ್ಷಿಪಣಿಗಳ ಪ್ರಯೋಗ ಮಾಡಿದ ಹಿನ್ನೆಲೆಯಲ್ಲಿ ಅಮೆರಿಕ ಈ ನಿರ್ಧಾರ ಕೈಗೊಂಡಿತ್ತು.
ಇದರ ಜೊತೆಯಲ್ಲೇ ಅಮೆರಿಕ ಸರ್ಕಾರ ಇರಾನ್ ವಿರುದ್ಧ ಯಾವುದೇ ಪ್ರತೀಕಾರದ ದಾಳಿಯನ್ನು ನಡೆಸದಂತೆ ಇಸ್ರೇಲ್ ದೇಶಕ್ಕೆ ಒತ್ತಡ ಹೇರಿದೆ. ಅದರಲ್ಲೂ ಇರಾನ್‌ನ ಅಣ್ವಸ್ತ್ರ ನೆಲೆಗಳು ಹಾಗೂ ಇಂಧನ ಮೂಲ ಸೌಕರ್ಯಗಳ ಮೇಲೆ ದಾಳಿ ನಡೆಸಲು ಇಸ್ರೇಲ್ ತಯಾರಿ ನಡೆಸಿದೆ ಎಂಬ ಮಾಹಿತಿಯ ಆಧಾರದ ಮೇಲೆ ಅಮೆರಿಕ ಈ ಮುನ್ನೆಚ್ಚರಿಕೆ ವಹಿಸಿತ್ತು.
ಅಮೆರಿಕದ ನಿರ್ಧಾರಕ್ಕೆ ಇರಾನ್ ಕೆಂಡ
ಇಸ್ರೇಲ್‌ಗೆ ಥಾಡ್ ರಕ್ಷಣಾ ವ್ಯವಸ್ಥೆ ನೀಡುವ ಅಮೆರಿಕದ ನಿರ್ಧಾರಕ್ಕೆ ಇರಾನ್ ಆಕ್ರೋಶ ವ್ಯಕ್ತಪಡಿಸಿದೆ. ನಿಮ್ಮ ಸೈನಿಕರ ಜೀವವನ್ನು ನೀವು ಅಪಾಯಕ್ಕೆ ತಳ್ಳುತ್ತಿದ್ದೀರಿ ಎಂದು ಎಚ್ಚರಿಸಿದೆ. ಈ ಕುರಿತಾಗಿ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಇರಾನ್‌ನ ವಿದೇಶಾಂಗ ಸಚಿವ ಅಬ್ಬಾಸ್ ಅರಾಕ್ಚಿ, ‘ನಾವು ಮಧ್ಯ ಪ್ರಾಚ್ಯದಲ್ಲಿ ದೊಡ್ಡದೊಂದು ಯುದ್ಧ ತಡೆಯಲು ಎಲ್ಲ ರೀತಿಯಲ್ಲೂ ಪ್ರಯತ್ನ ಮಾಡುತ್ತಿದ್ದೇವೆ. ಆದರೆ ನಮ್ಮನ್ನು ಪ್ರಚೋದನೆ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಉಕ್ರೇನ್‌ಗೆ ಥಾಡ್ ನಿರಾಕರಿಸಿದ್ದ ಅಮೆರಿಕ
ರಷ್ಯಾ ವಿರುದ್ಧ ತನ್ನನ್ನು ತಾನು ರಕ್ಷಿಸಿಕೊಳ್ಳಲು ಉಕ್ರೇನ್ ದೀರ್ಘಕಾಲದವರೆಗೆ THAADನ್ನು ಕೇಳಿತ್ತು ಆದರೆ ಅಮೆರಿಕ ನಿರಾಕರಿಸಿತ್ತು. THAAD ಅನ್ನು ಬಳಸಲು ತುಂಬಾ ದುಬಾರಿ ಮಾತ್ರವಲ್ಲ, ಅದನ್ನು ನಿರ್ವಹಿಸಲು ತರಬೇತಿ ಪಡೆದ ಅಮೆರಿಕದ ಸಿಬ್ಬಂದಿಯ ಅಗತ್ಯವಿದೆ.