ಶ್ರಾವಣ ಮಾಸದ ಶುಕ್ಲಪಕ್ಷದ ಪಂಚಮಿಯಂದು ಆಚರಿಸುವ ಹಬ್ಬವೇ ‘ನಾಗರಪಂಚಮಿ’. ನಾಗರ ಪಂಚಮಿಯು ಭಾರತದ ಹಲವಾರು ಭಾಗಗಳಲ್ಲಿ ಹಿಂದೂಗಳು ಆಚರಿಸುವ ಒಂದು ಹಬ್ಬ. ಈ ದಿನದಂದು, ನಾಗ ದೇವತೆಯನ್ನು ಪೂಜಿಸಲಾಗುತ್ತದೆ. ಪೂಜೆಯ ಅಂಗವಾಗಿ ದೇವಸ್ಥಾನ ಹಾಗೂ ಹುತ್ತಗಳಿರುವ ಜಾಗಕ್ಕೆ ಹೋಗಿ ತಮ್ಮನ್ನು ರಕ್ಷಿಸಲೆಂದು ಬೇಡಿಕೊಂಡು ಜನರು ಹಾಲು ಮತ್ತು ಬೆಳ್ಳಿ ಆಭರಣಗಳನ್ನು ಅರ್ಪಿಸುತ್ತಾರೆ. ಈ ಹಬ್ಬವು ಅಣ್ಣ -ತಂಗಿ ಇಬ್ಬರೂ ಸೇರಿ ಪೂಜಿಸಲ್ಪಡುವ ಹಬ್ಬವೆಂದು ಪ್ರತೀತಿ ಸಹ ಇದೆ.
Advertisement
ಪಂಚಮಿಯ ವೈಶಿಷ್ಟ್ಯ
ಸಾತ್ತ್ವಿಕತೆ ಗ್ರಹಿಸಲು ನಾಗರಪಂಚಮಿ ಉಪಯುಕ್ತ ಕಾಲ. ಪಂಚಪ್ರಾಣಗಳೇ ಪಂಚನಾಗಗಳಾಗಿವೆ. ನಾಗರಪಂಚಮಿಯ ದಿನದಲ್ಲಿ ವಾತಾವರಣವು ಸ್ಥಿರವಾಗಿರುತ್ತದೆ. ಸಾತ್ತ್ವಿಕತೆಯನ್ನು ಗ್ರಹಿಸಲು ಈ ಕಾಲವು ಅತ್ಯಂತ ಯೋಗ್ಯ ಮತ್ತು ಬಹಳ ಉಪಯುಕ್ತವಾಗಿದೆ. ಈ ದಿನದಂದು ಶೇಷನಾಗ ಮತ್ತು ಶ್ರೀವಿಷ್ಣುವಿಗೆ ಮುಂದಿನಂತೆ ಪ್ರಾರ್ಥನೆ ಮಾಡಿದರೆ ಒಳ್ಳೆಯದು.
Advertisement
Advertisement
ಪ್ರಾರ್ಥನೆಯ ವೇಳೆ, ದೇವತೆಗಳ ಶಕ್ತಿಯು ನನ್ನ ಪಂಚಪ್ರಾಣಗಳಲ್ಲಿ ಸಂಗ್ರಹವಾಗಿ ಅದು ಈಶ್ವರ ಪ್ರಾಪ್ತಿಗಾಗಿ ಮತ್ತು ರಾಷ್ಟ್ರ ರಕ್ಷಣೆಗಾಗಿ ಉಪಯೋಗವಾಗಲಿ. ನನ್ನ ಪಂಚಪ್ರಾಣದ ಶುದ್ಧಿಯಾಗಲಿ. ನಾಗದೇವತೆಯು ಸಂಪೂರ್ಣ ಬ್ರಹ್ಮಾಂಡದ ಕುಂಡಲಿನಿಯಾಗಿದ್ದಾನೆ. ಪಂಚಪ್ರಾಣವೆಂದರೆ ಪಂಚಭೌತಿಕ ತತ್ತ್ವದಿಂದ ಉಂಟಾದ ಶರೀರದ ಸೂಕ್ಷ್ಮರೂಪವಾಗಿದೆ ಎಂದು ಪುರಾಣಗಳಲ್ಲಿ ನಂಬಲಾಗಿದೆ.
Advertisement
ಹೆಣ್ಣುಮಕ್ಕಳ ಹಬ್ಬ
ನಾಗರಪಂಚಮಿ ಮಾಂಗಲ್ಯಪ್ರದ ಹಾಗೂ ಸಂತಾನಪ್ರದ ಎಂಬ ನಂಬಿಕೆ. ಉತ್ತರ ಕರ್ನಾಟಕದಲ್ಲಿ ನಾಗರಪಂಚಮಿ ವಿಶೇಷತೆಗಳಿಂದ ಕೂಡಿರುತ್ತದೆ. `ನಾಗರ ಪಂಚಮಿ ಬಂತು, ಅಣ್ಣ ಬರುತ್ತಾನೆ ಕರೆಯಾಕ, ಕರಿ ಸೀರೆ ಉಡಿಸಾಕ’ ಎನ್ನುವ ಜಾನಪದ ಹಾಡು ಹಬ್ಬದ ವಿಶೇಷತೆ ಸಾರುತ್ತದೆ. ತವರಿಗೆ ಹೆಣ್ಣುಮಕ್ಕಳನ್ನು ಆಹ್ವಾನಿಸಿ, ಉಡುಗೊರೆ ನೀಡಿ ಗೌರವಿಸಲಾಗುತ್ತದೆ.
ಉಪವಾಸದ ಮಹತ್ವ
ನಾಗರಪಂಚಮಿಯಂದು ಮಾಡಿದ ಉಪವಾಸದ ಮಹತ್ವವೆಂದರೆ ಈ ಹಿಂದೆ ಸತ್ಯೇಶ್ವರೀ ಎಂಬ ಹೆಸರಿನ ದೇವಿಯಿದ್ದಳು. ಸತ್ಯೇಶ್ವರನು ಅವಳ ಸಹೋದರನಾಗಿದ್ದನು. ಸತ್ಯೇಶ್ವರನು ನಾಗರಪಂಚಮಿಯ ಹಿಂದಿನ ದಿನ ಮೃತ ಹೊಂದಿದನು. ಆಗ ಸಹೋದರನ ಸಾವಿನಿಂದ ಶೋಕದಲ್ಲಿ ಸತ್ಯೇಶ್ವರಿಯು ಆಹಾರವನ್ನು ಸ್ವೀಕರಿಸಲಿಲ್ಲ. ಅದಕ್ಕೆ ಸತ್ಯೇಶ್ವರಿಗೆ ಅವಳ ಸಹೋದರನು ನಾಗರೂಪದಲ್ಲಿ ಕಂಡನು. ಅದಕ್ಕೆ ಆ ದಿನ ಮಹಿಳೆಯರು ಸಹೋದರನ ಹೆಸರಿನಲ್ಲಿ ಉಪವಾಸ ಮಾಡುತ್ತಾರೆ.
ಸಹೋದರನಿಗೆ ಅಖಂಡ ಆಯುಷ್ಯ ಪ್ರಾಪ್ತವಾಗಲಿ ಮತ್ತು ಅವನು ಪ್ರತಿಯೊಂದು ದುಃಖ ಮತ್ತು ಸಂಕಟಗಳಿಂದ ಪಾರಾಗಲಿ ಎನ್ನುವುದು ಸಹ ಈ ಉಪವಾಸದ ಹಿಂದಿನ ಕಾರಣವಾಗಿದೆ. ನಾಗರಪಂಚಮಿಯ ಹಿಂದಿನ ದಿನ ಪ್ರತಿಯೊಬ್ಬ ಸಹೋದರಿಯು ದೇವರಲ್ಲಿ ಮೊರೆ ಇಡುವುದರಿಂದ ಅವಳ ಸಹೋದರನಿಗೆ ಲಾಭವಾಗುತ್ತದೆ. ಅವನ ರಕ್ಷಣೆಯಾಗುತ್ತದೆ.
ಪೂಜೆ
ನಾಗರಪಂಚಮಿಯ ದಿನ ಅರಿಶಿನ ಅಥವಾ ರಕ್ತಚಂದನದಿಂದ ಮಣೆಯ ಮೇಲೆ ನವನಾಗಗಳ ಆಕೃತಿಗಳನ್ನು ಬಿಡಿಸಿ ಅವುಗಳ ಪೂಜೆಯನ್ನು ಮಾಡಿ ಹಾಲು ಮತ್ತು ಅರಳಿನ ನೈವೇದ್ಯವನ್ನು ಅರ್ಪಿಸಬೇಕು. ನವನಾಗಗಳು ಪವಿತ್ರತೆಯ ಒಂಬತ್ತು ಪ್ರಮುಖ ಗುಂಪುಗಳಾಗಿವೆ.
ನಾಗ ಪಂಚಮಿ ಜಾನಪದ ಕಥೆ
ಒಂದಾನೊಂದು ಕಾಲದಲ್ಲಿ ಒಂದು ಊರಿನಲ್ಲಿ ಒಬ್ಬಳು ತಂಗಿ ಮತ್ತು ಅವಳಿಗೆ ನಾಲ್ಕು ಜನ ಅಣ್ಣಂದಿರು ಇದ್ದರು. ಮನೆಯವರೆಲ್ಲಾ ಸೇರಿ ಒಟ್ಟಿಗೆ ನಾಗರ ಪಂಚಮಿಯಂದು ಪೂಜಾ ಕಾರ್ಯಕ್ರಮದಲ್ಲಿ ತೊಡಗಿದ್ದರು. ಆ ಸಮಯದಲ್ಲಿ ಅಲ್ಲಿಗೆ ಬಂದ ನಾಗರಹಾವೊಂದು ಬಂದು ನಾಲ್ಕು ಜನ ಅಣ್ಣಂದಿರನ್ನು ಬಲಿ ತೆಗೆದುಕೊಂಡಿತು.
ನಂತರ ಆ ತಂಗಿಯು ಅಣ್ಣಂದಿರನ್ನು ಕಳೆದುಕೊಂಡ ನೋವನ್ನು ತಡೆಯಲಾರದೆ ಆ ನಾಗರಹಾವಿಗೆ ಹೇಳಿದಳು, ನನ್ನ ನಾಲ್ಕು ಜನ ಅಣ್ಣಂದಿರಲ್ಲಿ ಒಬ್ಬರನ್ನಾದರೂ ಬದುಕಿಸಿಕೊಡು. ನಾನು ಯಾರನ್ನು ಅಣ್ಣ ಎಂದು ಕರೆಯಲಿ ಎಂದು ಕಣ್ಣೀರಿಟ್ಟಳು. ತದ ನಂತರ ಆ ನಾಗರ ಹಾವು ಆಕೆಯ ಮಾತಿಗೆ ಕಿವಿಗೊಟ್ಟು ಅಣ್ಣಂದಿರ ಬಳಿ ಬಂದು ಒಬ್ಬ ಅಣ್ಣನನ್ನು ಪ್ರಾಣಾಪಾಯದಿಂದ ಕಾಪಾಡಿತು. ನಂತರ ಅಣ್ಣ – ತಂಗಿ ಇಬ್ಬರು ಸೇರಿ ನಾಗರಪಂಚಮಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.