– ಯೋಜನೆ ಪರಿಣಾಮಕಾರಿ ಅನುಷ್ಠಾನಕ್ಕೆ ಜಿಲ್ಲೆ, ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಸಮಿತಿ ನೇಮಕ
– ಮುಂಗಾರು ಅಶಧಿವೇಶನದಲ್ಲಿ 8 ಮಸೂದೆ ಮಂಡನೆ ಸಾಧ್ಯತೆ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ (Modi Cabinet) ಸಭೆಯಲ್ಲಿ 100 ಕೃಷಿ ಜಿಲ್ಲೆಗಳ ಅಭಿವೃದ್ಧಿಗೆ ನಿರ್ಧರಿಸಲಾಗಿದೆ. ಕೃಷಿ ಹಾಗೂ ಸಂಬಂಧಿತ ಕ್ಷೇತ್ರಗಳ ಅಭಿವೃದ್ಧಿಗೆ ಇನ್ನಷ್ಟು ಉತ್ತೇಜನ ನೀಡಲು ‘ಪ್ರಧಾನಮಂತ್ರಿ ಧನ-ಧಾನ್ಯ ಯೋಜನೆ’ಗೆ (PM Dhan Dhaanya Krishi Yojana) ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ.
ಪ್ರತಿ ರಾಜ್ಯದಿಂದ ಕನಿಷ್ಠ ಒಂದು ಜಿಲ್ಲೆ ನಿಗದಿಪಡಿಸಲಾಗಿದೆ. 11 ಸಚಿವಾಲಯಗಳ 36 ಯೋಜನೆಗಳನ್ನೊಳಗೊಂಡಿದ್ದು, ಈ ಯೋಜನೆಯ ಅವಧಿ ಆರು ವರ್ಷಗಳಾಗಿದ್ದು, ವಾರ್ಷಿಕ 24,000 ಕೋಟಿ ರೂ. ವೆಚ್ಚ ಒಳಗೊಂಡಿದೆ. ಈ ಯೋಜನೆಯಿಂದ 1.7 ಕೋಟಿ ರೈತರಿಗೆ (Farmers) ಅನುಕೂಲವಾಗಲಿದೆ. ಈ ಯೋಜನೆ ಬಗ್ಗೆ 2025-26ರ ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿತ್ತು. ಅಲ್ಲದೇ ನವೀಕರಿಸಬಹುದಾದ ಇಂಧನಕ್ಕೆ 27,000 ಸಾವಿರ ಕೋಟಿ ಮೀಸಲಿಟ್ಟಿದೆ.
ಕೃಷಿ ಉತ್ಪಾದಕತೆ ಹೆಚ್ಚಳ, ಬೆಳೆಗಳಲ್ಲಿ ವೈವಿಧ್ಯ, ಸುಸ್ಥಿರ ಕೃಷಿ ಪದ್ಧತಿಗಳ ಅಳವಡಿಕೆಗೆ ಉತ್ತೇಜನ, ಪಂಚಾಯಿತಿ ಮತ್ತು ಬ್ಲಾಕ್ ಮಟ್ಟದಲ್ಲಿ ಕೊಯ್ಲಿನ ನಂತರದ ಸಂಗ್ರಹಣೆ ಹೆಚ್ಚಿಸುವುದು, ನೀರಾವರಿ ಸೌಲಭ್ಯಗಳ ಸುಧಾರಣೆ, ದೀರ್ಘಾವಧಿ ಮತ್ತು ಅಲ್ಪಾವಧಿ ಸಾಲದ ಲಭ್ಯತೆ ಸುಗಮಗೊಳಿಸುವ ಗುರಿಯನ್ನು ಈ ಯೋಜನೆ ಹೊಂದಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ಯೋಜನೆಯ ಪರಿಣಾಮಕಾರಿ ಅನುಷ್ಠಾನ ಮತ್ತು ಮೇಲ್ವಿಚಾರಣೆಗಾಗಿ ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಸಮಿತಿಗಳನ್ನು ರಚಿಸಲಾಗುವುದು. ಜಿಲ್ಲಾ ಧನ ಧಾನ್ಯ ಸಮಿತಿಯು ಕೃಷಿ ಮತ್ತು ಸಂಬಂಧಿತ ಚಟುವಟಿಕೆಗಳ ಯೋಜನೆಗೆ ಅಂತಿಮ ರೂಪ ನೀಡುತ್ತದೆ. ಈ ಸಮಿತಿಯಲ್ಲಿ ಪ್ರಗತಿಪರ ರೈತರು ಇರುತ್ತಾರೆ ಎಂದರು.
ಮುಂಗಾರು ಅಶಧಿವೇಶನದಲ್ಲಿ 8 ಮಸೂದೆ ಮಂಡನೆಗೆ ತಯಾರಿ
ಇನ್ನೂ ಇದೇ ಜುಲೈ 21ರಿಂದ ಆರಂಭವಾಗಲಿರುವ ಮುಂಗಾರು ಅಧಿವೇಶನದಲ್ಲಿ ರಾಷ್ಟ್ರೀಯ ಕ್ರೀಡಾ ಆಡಳಿತ ಮಸೂದೆ, ಗಣಿ ಮತ್ತು ಖನಿಜಗಳ (ಅಭಿವೃದ್ಧಿ ಮತ್ತು ನಿಯಂತ್ರಣ) ತಿದ್ದುಪಡಿ ಮಸೂದೆ, ರಾಷ್ಟ್ರೀಯ ಉದ್ದೀಪನ ಔಷಧ ವಿರೋಧಿ ತಿದ್ದುಪಡಿ ಮಸೂದೆ, ಮಣಿಪುರ ಸರಕು ಮತ್ತು ಸೇವಾ ತಿದ್ದುಪಡಿ ಮಸೂದೆ, ಜನ ವಿಶ್ವಾಸ ತಿದ್ದುಪಡಿ ಮಸೂದೆ, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ತಿದ್ದುಪಡಿ ಮಸೂದೆ ಮತ್ತು ತೆರಿಗೆ ಕಾನೂನುಗಳ ತಿದ್ದುಪಡಿ ಮಸೂದೆಗಳು ಸೇರಿದಂತೆ ಒಟ್ಟು 8 ಮಸೂದೆಗಳು ಮಂಡನೆಯಾಗಲಿವೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಇದರೊಂದಿಗೆ ಆದಾಯ ತೆರಿಗೆ ಮಸೂದೆಯನ್ನೂ (2025) ಸರ್ಕಾರ ಮಂಡಿಸುವ ಸಾಧ್ಯತೆಯಿದೆ. ಕಳೆದ ಅಧಿವೇಶನದಲ್ಲಿ ಈ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಲಾಗಿತ್ತು. ಅದನ್ನು ಕೆಳಮನೆಯ ಆಯ್ಕೆ ಸಮಿತಿಗೆ ಉಲ್ಲೇಖಿಸಲಾಗಿತ್ತು. ಸಮಿತಿಯು ಆ ಕುರಿತ ವರದಿಯನ್ನು ಬುಧವಾರ ಅಂಗೀಕರಿಸಿದ್ದು, ಅದು ಲೋಕಸಭೆಯಲ್ಲಿ ಸೋಮವಾರ ಮಂಡನೆಯಾಗುವ ನಿರೀಕ್ಷೆಯಿದೆ.