ಇದು ಡಿಜಿಟಲ್ ಯುಗ. ಜಗತ್ತಿನ ಅಷ್ಟೂ ಜ್ಞಾನ ಭಂಡಾರ ತಂತ್ರಜ್ಞಾನವೆಂಬ ಪೆಟ್ಟಿಗೆಯಲ್ಲಿ ಅಡಕವಾಗಿದೆ. ಈಗ ಜ್ಞಾನಕ್ಕಾಗಿ ದೇಶ ಸುತ್ತಿ ಕೋಶ ಓದಬೇಕಿಲ್ಲ. ನೀವಿದ್ದಲ್ಲೇ ಕ್ಷಣಾರ್ಧದಲ್ಲಿ ನಿಮಗೆ ಬೇಕಾದ ವಿಷಯವನ್ನು ಅಧ್ಯಯನ ಮಾಡಬಹುದು. ಅದಕ್ಕೊಂದು ವೇದಿಕೆ ರೂಪಿಸಲು ಕೇಂದ್ರ ಸರ್ಕಾರ ಯೋಜನೆಯೊಂದಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದೆ. ಅದೇ ‘ಒಂದು ದೇಶ, ಒಂದು ಚಂದಾದಾರಿಕೆ’ (ಒನ್ ನೇಷನ್, ಒನ್ ಸಬ್‌ಸ್ಕ್ರಿಪ್ಷನ್). ‘ಒಂದು ದೇಶ, ಒಂದು ಚುನಾವಣೆ’ ಮಾದರಿಯಲ್ಲೇ ಈ ಯೋಜನೆ ಇದೆ. ಇಡೀ ದೇಶಕ್ಕೆ ಒಂದೇ ಬಾರಿಗೆ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆ ನಡೆಸುವುದು ‘ಒನ್ ನೇಷನ್, ಒನ್ ಎಲೆಕ್ಷನ್’ ಉದ್ದೇಶ. ಅಂತೆಯೇ ಜಗತ್ತಿನ ಪ್ರಮುಖ ಸಂಶೋಧನಾ ವರದಿಗಳು ಒಂದೇ ತಂತ್ರಜ್ಞಾನ ವೇದಿಕೆಯಲ್ಲಿ ಲಭ್ಯವಾಗುವಂತೆ ಮಾಡುವುದು ಒಂದು ದೇಶ, ಒಂದು ಚಂದಾದಾರಿಕೆ ಯೋಜನೆ ಧ್ಯೇಯವಾಗಿದೆ.
ಕೇಂದ್ರ ಸಚಿವ ಸಂಪುಟವು ಈಚೆಗೆ 6,000 ಕೋಟಿ ರೂ. ಬಜೆಟ್ ಹಂಚಿಕೆಯನ್ನು ‘ಒನ್ ನೇಷನ್, ಒನ್ ಸಬ್‌ಸ್ಕ್ರಿಪ್ಷನ್’ (ಒಎನ್‌ಒಎಸ್) ಎಂಬ ಉಪಕ್ರಮಕ್ಕೆ ಅನುಮೋದಿಸಿದೆ. ಇದು ದೇಶಾದ್ಯಂತ ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ಸಂಶೋಧಕರಿಗೆ ಅಂತಾರಾಷ್ಟ್ರೀಯ ವಿದ್ವತ್ಪೂರ್ಣ ನಿಯತಕಾಲಿಕೆಗಳು ಒಂದೇ ವೇದಿಕೆಯಲ್ಲಿ ಸಿಗುವಂತೆ ಮಾಡುತ್ತದೆ. ಇನ್ಮುಂದೆ 2025ರ ಜನವರಿಯಿಂದ ನಡೆಯುವ ಉನ್ನತ ಗುಣಮಟ್ಟದ ಜಾಗತಿಕ ಸಂಶೋಧನಾ ಲೇಖನಗಳಿಗೆ ರಾಷ್ಟ್ರವ್ಯಾಪಿ ಒಂದು ಪ್ರವೇಶವನ್ನು ನೀಡುವ ಮೂಲಕ ಭಾರತದಲ್ಲಿ ಶೈಕ್ಷಣಿಕ ಸಂಶೋಧನಾ ಕ್ರಾಂತಿಗೆ ನಾಂದಿ ಹಾಡುವ ಗುರಿಯನ್ನು ಹೊಂದಿದೆ.
Advertisement
ಏನಿದು ಯೋಜನೆ? ಈ ಯೋಜನೆಯ ಅಗತ್ಯವೇನು? ಇದರಿಂದಾಗುವ ಅನುಕೂಲಗಳೇನು? ಪ್ರಯೋಜನ ಯಾರಿಗೆ? ಬನ್ನಿ ತಿಳಿಯೋಣ.
Advertisement
ಒಂದು ದೇಶ, ಒಂದು ಚಂದಾದಾರಿಕೆ ಅಂದ್ರೇನು?
ದೇಶದ ಎಲ್ಲಾ ವಿಶ್ವವಿದ್ಯಾಲಯಗಳು ತಮ್ಮ ಸಂಶೋಧನಾ ಸಂಪನ್ಮೂಲಗಳನ್ನು ‘ಒಂದು ದೇಶ, ಒಂದು ಚಂದಾದಾರಿಕೆ’ಯ ಮೂಲಕ ಹಂಚಿಕೊಳ್ಳುತ್ತವೆ. ಅಂತಾರಾಷ್ಟ್ರೀಯ ವಿದ್ವತ್ಪೂರ್ಣ ಸಂಶೋಧನಾ ಲೇಖನಗಳು ಮತ್ತು ಜರ್ನಲ್‌ಗಳನ್ನು ದೇಶಾದ್ಯಂತ ಶಿಕ್ಷಣ ಹಾಗೂ ಸಂಶೋಧನಾ ಸಂಸ್ಥೆಗಳು ಒಎನ್‌ಒಎಸ್ ಯೋಜನೆ ಮೂಲಕ ಬಳಸಿಕೊಳ್ಳಬಹುದಾಗಿದೆ. ಇದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ನಿರ್ವಹಿಸಲ್ಪಡುವ ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ಸಂಶೋಧಕರಿಗೆ ಸಂಶೋಧನಾ ವಿಷಯಗಳನ್ನು ಪೂರೈಸುತ್ತದೆ.
Advertisement
ಈ ಪರಿಕಲ್ಪನೆ ಬಂದಿದ್ದು ಹೇಗೆ?
ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ 2020)ಯಿಂದ ಹುಟ್ಟಿಕೊಂಡಿತು. ಇದು ಶಿಕ್ಷಣ ಮತ್ತು ರಾಷ್ಟ್ರೀಯ ಅಭಿವೃದ್ಧಿಯಲ್ಲಿ ಉತ್ಕೃಷ್ಟತೆ ಸಾಧಿಸಲು ಸಂಶೋಧನೆ ಒಂದು ಮೂಲಾಧಾರ ಎಂಬುದನ್ನು ಒತ್ತಿ ಹೇಳುತ್ತದೆ. ಮುಂಬರುವ ದಶಕಗಳಲ್ಲಿ ಭಾರತವು ಸಂಶೋಧನಾ ವಲಯದಲ್ಲಿ ಕ್ರಾಂತಿಕಾರಕ ಬೆಳವಣಿಗೆ ಕಾಣಲು ಈ ಉಪಕ್ರಮದ ಅಗತ್ಯವಿದೆ.
Advertisement
ಯೋಜನೆ ಜಾರಿ ಯಾವಾಗ?
ಒಎನ್‌ಒಎಸ್ ಬರುವ 2025ರ ಜನವರಿ 1 ರಿಂದ ಪ್ರಾರಂಭವಾಗಲಿದೆ. INFLIBNET ನಿರ್ವಹಿಸುವ ರಾಷ್ಟ್ರೀಯ ಚಂದಾದಾರಿಕೆ ಮೂಲಕ ಜರ್ನಲ್ ಪಡೆದುಕೊಳ್ಳಲು ಅನುವು ಮಾಡಿಕೊಡುತ್ತದೆ. ಇದು ವಿಶ್ವವಿದ್ಯಾಲಯದ ಧನಸಹಾಯ ಆಯೋಗದ (ಯುಜಿಸಿ) ಅಡಿಯಲ್ಲಿ ಬರುವ ಮಾಹಿತಿ ಮತ್ತು ಗ್ರಂಥಾಲಯ ನೆಟ್‌ವರ್ಕ್ ಕೇಂದ್ರವಾಗಿದೆ. ಸಂಪೂರ್ಣ ಡಿಜಿಟಲ್ ಮಾದರಿಯದ್ದಾಗಿದೆ.
ಯಾರಿಗೆ ಅನುಕೂಲ?
ಈ ಯೋಜನೆಯಿಂದ ವಿದ್ಯಾರ್ಥಿಗಳು, ಅಧ್ಯಾಪಕರು, ಸಂಶೋಧಕರು ಮತ್ತು ವಿಜ್ಞಾನಿಗಳು ಸೇರಿದಂತೆ ಸುಮಾರು 1.8 ಕೋಟಿ ಜನರಿಗೆ ಪ್ರಯೋಜನಕಾರಿಯಾಗಲಿದೆ. ಈ ಯೋಜನೆಯು ಉನ್ನತ ಶ್ರೇಣಿಯ ಅಂತರರಾಷ್ಟ್ರೀಯ ನಿಯತಕಾಲಿಕೆಗಳಿಗೆ ವೇದಿಕೆಯನ್ನು ಒದಗಿಸುತ್ತದೆ. ಆ ಮೂಲಕ ಕೋರ್ ಮತ್ತು ಅಂತರ್‌ಶಿಸ್ತೀಯ ಕ್ಷೇತ್ರಗಳಲ್ಲಿ ಸಂಶೋಧನೆಯನ್ನು ಉತ್ತೇಜಿಸುತ್ತದೆ.
ಯೋಜನೆಯಲ್ಲಿ ಎಲ್ಸೆವಿಯರ್, ಸ್ಟ್ರಿಂಗರ್ ನೇಚರ್, ವೈಲಿ ಬ್ಲ್ಯಾಕ್‌ವೇಲ್, ಟೇಲರ್, ಫ್ರಾನ್ಸಿಸ್ ಮತ್ತು ಆಕ್ಸ್ಫರ್ಡ್ ಯೂನಿವರ್ಸಿಟಿ ಪ್ರೆಸ್ ಸೇರಿ ಒಟ್ಟು 30 ಪ್ರಮುಖ ಅಂತರರಾಷ್ಟ್ರೀಯ ಪ್ರಕಾಶಕರನ್ನು ಸೇರಿಸಲಾಗಿದೆ. ಈ ಪ್ರಕಾಶಕರು ಪ್ರಕಟಿಸಿರುವ ಸುಮಾರು 13,000 ಇ-ಜರ್ನಲ್‌ಗಳನ್ನು ಸರ್ಕಾರಿ ಉನ್ನತ ಶಿಕ್ಷಣ ಸಂಸ್ಥೆಗಳು ಹಾಗೂ ಕೇಂದ್ರದ ಆರ್&ಡಿ ಸಂಸ್ಥೆಗಳು ಬಳಸಿಕೊಳ್ಳಬಹುದು. ಇದಕ್ಕಾಗಿ ಎಲ್ಲಾ ಸಂಸ್ಥೆಗಳು ನೋಂದಾಯಿಸಿಕೊಳ್ಳಬೇಕು. 6,300 ಕ್ಕೂ ಹೆಚ್ಚು ಸರ್ಕಾರಿ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಗಳು ಇದರ ಪ್ರಯೋಜನ ಪಡೆಯಬಹುದು. ಶೈಕ್ಷಣಿಕ ಬೆಳವಣಿಗೆಗೆ ವ್ಯಾಪಕವಾದ ಸಂಪನ್ಮೂಲಗಳನ್ನು ಒದಗಿಸುತ್ತದೆ. ಅನುಸಂಧನ್ ನ್ಯಾಷನಲ್ ರಿಸರ್ಚ್ ಫೌಂಡೇಶನ್ ಈ ಯೋಜನೆಯ ಮೇಲ್ವಿಚಾರಣೆ ಮಾಡುತ್ತದೆ.
ಈಗ ಸಿಸ್ಟಮ್ ಹೇಗಿದೆ?
ಪ್ರಸ್ತುತ, ಉನ್ನತ ಶಿಕ್ಷಣ ಸಂಸ್ಥೆಗಳು ವಿವಿಧ ಸಚಿವಾಲಯಗಳ ಆಡಳಿತಾತ್ಮಕ ನಿಯಂತ್ರಣದಲ್ಲಿರುವ 10 ಬೇರೆ ಬೇರೆ ಗ್ರಂಥಾಲಯ ಒಕ್ಕೂಟಗಳ ಮೂಲಕ ಜರ್ನಲ್‌ಗಳನ್ನು ಪಡೆದುಕೊಳ್ಳಬಹುದು. ಲೈಬ್ರರಿ ಕನ್ಸೋರ್ಟಿಯಮ್ ಎನ್ನುವುದು ಎರಡು ಅಥವಾ ಹೆಚ್ಚಿನ ಲೈಬ್ರರಿಗಳ ಗುಂಪಾಗಿದೆ. ಉದಾಹರಣೆಗೆ, ಗಾಂಧೀನಗರದಲ್ಲಿರುವ ಮಾಹಿತಿ ಮತ್ತು ಗ್ರಂಥಾಲಯ ನೆಟ್‌ವರ್ಕ್ ಕೇಂದ್ರದಲ್ಲಿರುವ ಆಯ್ದ ವಿದ್ವತ್ಪೂರ್ಣ ಎಲೆಕ್ಟ್ರಾನಿಕ್ ಜರ್ನಲ್‌ಗಳನ್ನು ಮಾತ್ರ ಪಡೆಯಬಹುದು. ಉನ್ನತ ಶಿಕ್ಷಣ ಸಂಸ್ಥೆಗಳು ಹಲವಾರು ಜರ್ನಲ್‌ಗಳಿಗೆ ಪ್ರತ್ಯೇಕವಾಗಿ ಚಂದಾದಾರರಾಗಿವೆ. ಆದರೆ, ಒಎನ್‌ಒಎಸ್ ಯೋಜನೆಯಿಂದ ಜರ್ನಲ್ ಪ್ರವೇಶಕ್ಕೆ ಇರುವ ಪ್ರತ್ಯೇಕ ಚಂದಾದಾರಿಕೆ ಎಂಬ ತ್ರಾಸದಾಯಕ ವಿಧಾನಕ್ಕೆ ಅಂತ್ಯ ಹಾಡಬಹುದು. ಈ ಯೋಜನೆಯಿಂದ ಒಂದೇ ವೇದಿಕೆಯಲ್ಲಿ ಸಾವಿರಾರು ಜರ್ನಲ್‌ಗಳನ್ನು ತಂದು ಕ್ರೋಢೀಕರಿಸಬಹುದು.
ಯೋಜನೆ ಅಗತ್ಯವೇನು?
* ಸುಮಾರು 6,300 ಸರ್ಕಾರಿ ವಿವಿಗಳು, ಕಾಲೇಜುಗಳು, ಸಂಶೋಧನಾ ಸಂಸ್ಥೆಗಳು ಮತ್ತು ರಾಷ್ಟ್ರೀಯ ಪ್ರಾಮುಖ್ಯತೆ ಸಂಸ್ಥೆಗಳಲ್ಲಿ 1.8 ಕೋಟಿಯಷ್ಟು ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ಸಂಶೋಧಕರಿಗೆ 55 ಲಕ್ಷ ಅತ್ಯುತ್ತಮ ನಿಯತಕಾಲಿಕೆಗಳಿಗೆ ಪ್ರವೇಶವನ್ನು ವಿಸ್ತರಿಸಬಹುದು.
* ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜರ್ನಲ್ ಚಂದಾದಾರಿಕೆಗಳ ನಕಲು ಮಾಡುವುದನ್ನು ತಪ್ಪಿಸುತ್ತದೆ.
* ಸಂಶೋಧನಾ ಪ್ರಬಂಧಗಳು ಮತ್ತು ಜರ್ನಲ್‌ಗಳನ್ನು ಹುಡುಕಲು ವಿದ್ಯಾರ್ಥಿಗಳು ನಾನಾ ಕಡೆ ಅಲೆಯುವುದು ತಪ್ಪುತ್ತದೆ.