ಭಾರತದ ದಕ್ಷಿಣ ಭಾಗದಲ್ಲಿ ಆಚರಿಸಲಾಗುವ ಪ್ರಮುಖ ನಾಗಪೂಜಾ ವಿಧಾನಗಳಲ್ಲಿ ನಾಗಮಂಡಲ (Nagamandala) ಪೂಜೆಯು ಅತ್ಯಂತ ಪವಿತ್ರವಾದ ಹಾಗೂ ಶ್ರದ್ಧಾ ಭಕ್ತಿಯಿಂದ ಕೂಡಿರುವ ಒಂದು ಶಕ್ತಿಶಾಲಿ ಆಚರಣೆ ಆಗಿದೆ. ಕರಾವಳಿ ಕರ್ನಾಟಕದ ತುಳುನಾಡಿನಲ್ಲಿ ಇದು ವಿಶೇಷವಾಗಿ ಪ್ರಸಿದ್ಧವಾಗಿದ್ದು, ಈ ನಾಗಮಂಡಲಕ್ಕೆ ನಾನಾ ಅಧ್ಯಾತ್ಮಿಕ, ಸಾಂಸ್ಕೃತಿಕ ಹಾಗೂ ಜ್ಯೋತಿಷ್ಯಶಾಸ್ತ್ರದ ಹಿನ್ನೆಲೆಯನ್ನು ಹೊಂದಿದೆ.
ನಾಗಮಂಡಲ ಎಂದರೇನು?
ನಾಗಮಂಡಲ ಎಂದರೆ ನಾಗ ದೇವತೆಯು ನೃತ್ಯ ರೂಪದಲ್ಲಿ ಪೂಜಿಸಲ್ಪಡುವ ಒಂದು ವಿಶಿಷ್ಟ ಆಚರಣೆ. ಇದು ನಾಗದೋಷ ನಿವಾರಣೆಗೆ ಮತ್ತು ಕುಟುಂಬದ ಕ್ಷೇಮ ಸಮೃದ್ಧಿಗೆ ಮಾಡಲಾಗುವ ಒಂದು ದೇವಪೂಜೆ. ಇದರಲ್ಲಿ ಎರಡು ಪ್ರಮುಖ ಪಾತ್ರಗಳು ಇರುತ್ತವೆ. ಅವುಗಳೆಂದರೆ ವೈದ್ಯರು(ಹೆಣ್ಣು ನಾಗ) ಮತ್ತು ಪಾತ್ರಿ(ನಾಗದ ಪುರುಷನ ಪ್ರತಿನಿಧಿ).
ಆಚರಣೆ ಹೇಗೆ ನಡೆಯುತ್ತದೆ?
ಮಂಡಲ: ಪೂಜೆಗೆ ಮುನ್ನ ನೆಲದಲ್ಲಿ ನಾಗ ದೇವರಿಗೆ ಸಂಬಂಧಿಸಿದ ರಂಗೋಲಿಯನ್ನು ಬಿಡಿಸಲಾಗಿರುತ್ತದೆ. ಇದನ್ನು ನಾಗಮಂಡಲ ಎಂದು ಕರೆಯುತ್ತಾರೆ. 2-3 ಅಡಿ ಎತ್ತರದ ಚೌಕಾಕಾರದ ವೇದಿಕೆಯನ್ನು ನಿರ್ಮಿಸುತ್ತಾರೆ. ಚಪ್ಪರದ ಸುತ್ತ ರೇಷ್ಮೆ ವಸ್ತ್ರದಿಂದ ಅಲಂಕರಿಸಿರುತ್ತಾರೆ. ಚಪ್ಪರವನ್ನು ಅಡಿಕೆಯ ಹಿಂಗಾರದಿಂದ, ಅಡಿಕೆಯ ಮಾಲೆಯಿಂದ, ಬಾಳೆಗೊನೆ ಹಾಗೂ ಎಳನೀರಿನಿಂದ ಶೃಂಗರಿಸುತ್ತಾರೆ.
ಕೊಳನಾಗ: ಏಳು ಹೆಡೆಯ ದೊಡ್ಡ ಸರ್ಪದ ಚಿತ್ರಣಕ್ಕೆ ಕೊಳನಾಗ, ಗುಳಿಕ, ಅಥವಾ ಕಾಡ್ಯ ಎನ್ನುತ್ತಾರೆ.
ನಾಗಯಕ್ಷ: ಕೊಳನಾಗನ ಸಮೀಪದಲ್ಲಿಯೇ ಕೇವಲ ಹೆಡೆಯಂತೆ ಕಾಣುವ ಒಂದು ರೂಪಕ್ಕೆ ಎರಡು ಕಣ್ಣುಗಳನ್ನು ಚಿತ್ರಿಸುತ್ತಾರೆ. ಇದರ ಆಕಾರ ಶಂಖವನ್ನು ಹೋಲುತ್ತದೆ. ಇದನ್ನು ಕೆಲವರು ಮರಿನಾಗ ಎಂದರೆ ಕೆಲವರು ನಾಗಯಕ್ಷಿ ಎನ್ನುತ್ತಾರೆ.
ಬ್ರಹ್ಮ: ಕೊಳನಾಗನ ಎಡಭಾಗದಲ್ಲಿ ಕೆಳಗೆ ಒಂದು ವಿಶಿಷ್ಟ ಮಾನವಾಕೃತಿಯನ್ನು ಚಿತ್ರಿಸುತ್ತಾರೆ. ಇದಕ್ಕೆ ಕೈ ಕಾಲುಗಳಿಲ್ಲ. ಗಂಡುರೂಪ, ಮೀಸೆ ಇದೆ. ಹೊರಚಾಚಿದಂತಿರುವ ಹಲ್ಲುಗಳು, ಹಾಗೂ ಎರಡು ಕೋರೆ ಹಲ್ಲುಗಳಿವೆ. ತಲೆಗೆ ಚೂಪಾದ ಟೊಪ್ಪಿಗೆಯನ್ನು ಧರಿಸಿದಂತೆ ಕಾಣುತ್ತದೆ. ಇದನ್ನು ವೈದ್ಯರು ಬ್ರಹ್ಮಯಕ್ಷ ಎನ್ನುತ್ತಾರೆ. ತುಳುವರು ಬೆರ್ಮೆರ್ ಎನ್ನುತ್ತಾರೆ.
ತ್ರಿಶೂಲ: ನಾಗನ ಹೆಡೆಯ ಮೇಲುಭಾಗಕ್ಕೆ ಒಂದು ತ್ರಿಶೂಲವನ್ನು ಬರೆಯುತ್ತಾರೆ. ಇದರ ಕೆಳಭಾಗವು ಬಲಭಾಗಕ್ಕೆ ಸ್ವಲ್ಪ ಬಾಗಿರುತ್ತದೆ.
ಗಣಪತಿ: ಬಲತುದಿಗೆ ಸೇರಿಕೊಂಡಂತೆ ತ್ರಿಕೋನಗಳಿಂದ ರಚಿತವಾದ ವೃತ್ತಾಕಾರವಿದೆ. ಇದು ಶ್ರೀಚಕ್ರವನ್ನು ಹೋಲುತ್ತದೆ. ಇದಕ್ಕೆ ಮಂಡಲವನ್ನು ರಚಿಸುವ ವೈದ್ಯರು ಗಣಪತಿ ಎನ್ನುತ್ತಾರೆ.
ಪ್ರೇತಯಕ್ಷ: ಇದೊಂದು ಎರಡು ಕಣ್ಣುಗಳುಳ್ಳ ವಿಶಿಷ್ಟ ಆಕೃತಿಯಾಗಿದೆ.
ನಾಗಮಂಡಲ ನೃತ್ಯ: ನಾಗಮಂಡಲದ ಸುತ್ತ ನೃತ್ಯದಲ್ಲಿ ಇಬ್ಬರು ಪ್ರಧಾನ ಪಾತ್ರ ವಹಿಸುತ್ತಾರೆ. ಒಬ್ಬರು ನಾಗಪಾತ್ರಿಯಾಗಿರುತ್ತಾರೆ. ಅವರು ಮುಂಗೈಗೆ ಕಡಗ, ಮೈಗೆ ಕೆಂಪುಬಟ್ಟೆ, ಕೆದರಿದ ಕೂದಲು, ಕೊರಳಿನಲ್ಲಿ ನಾಗನ ಚಿಹ್ನೆಯ ಪದಕವಿರುವ ಹಾರವನ್ನು ಧರಿಸಿರುತ್ತಾರೆ.
ಇನ್ನೊಂದು ಪ್ರಧಾನ ಪಾತ್ರ ವೈದ್ಯರು ಎನ್ನುತ್ತಾರೆ. ವೈದ್ಯರು ಅರ್ಧನಾರಿ ವೇಷವನ್ನು ಧರಿಸಿರುತ್ತಾರೆ. ಯಕ್ಷಗಾನ ಬಡಗುತಿಟ್ಟಿನ ಸ್ತ್ರೀವೇಷವನ್ನು ಹೋಲುವ ಇವರು ಕೆಂಪುಬಣ್ಣದ ಚೌಕುಳಿಸೀರೆ, ಕಾಲಿಗೆ ಗೆಜ್ಜೆ, ಕೊರಳಿಗೆ ಗುಂಡುಸರ, ಸೊಂಟಕ್ಕೆ ಬೆಳ್ಳಿಪಟ್ಟಿ, ಕೈಗೆ ಚಿನ್ನದ ಕಡಗ, ತಲೆಗೆ ಮುಂಡಾಸು, ಜರಿರುಮಾಲು ಧರಿಸುತ್ತಾರೆ. ಹಾಡುವ ಹಿಮ್ಮೇಳದ ಮೂರು ಜನ ವೈದ್ಯರು ಬಿಳಿಧೋತರವನ್ನು ಕಚ್ಚೆ ಹಾಕಿ ಉಟ್ಟು, ಬಿಳಿ ಅಂಗಿ ತೊಟ್ಟಿರುತ್ತಾರೆ. ನಾಗಮಂಡಲದ ವೇದಿಕೆಯ ಮಧ್ಯಭಾಗದಲ್ಲಿ ರಚಿಸಿದ ಚಿತ್ತಾರದ ಸುತ್ತ ಪಾತ್ರಿ ಮತ್ತು ವೈದ್ಯರು ನರ್ತಿಸುತ್ತಾರೆ.
ನಾಗಮಂಡಲ ಪೂಜೆಯ ಹಿಂದಿನ ತಾತ್ವಿಕ ಅರ್ಥ : ನಾಗ ದೇವತೆಗಳನ್ನು ಭೂಮಿ, ಜಲ, ಅಡಿಸ್ಥಾನ ಶಕ್ತಿಗಳ ಪ್ರತಿನಿಧಿಗಳಾಗಿ ಪರಿಗಣಿಸಲಾಗುತ್ತದೆ. ಈ ಪೂಜೆಯು ದುಷ್ಟಶಕ್ತಿಗಳನ್ನು ನಿವಾರಿಸಿ ಆತ್ಮಶುದ್ಧಿಗೆ ಕಾರಣವಾಗುತ್ತದೆ. ಮನೆಯಲ್ಲಿ ಸಂತಾನ ಸಮಸ್ಯೆ, ಕುಲದ ಅಭಿವೃದ್ದಿ ಅಡಚಣೆ, ವಿವಾಹ ವಿಳಂಬ, ವ್ಯಾಧಿ ಸಮಸ್ಯೆಗಳಾಗಿದ್ದರೆ ನಾಗಮಂಡಲ ಮಾಡಿದರೆ ಶಾಂತಿ ಸಿಗುತ್ತದೆ ಎಂಬ ನಂಬಿಕೆ ಇದೆ.
ನಾಗಮಂಡಲ ಪೂಜೆಯು ಕೇವಲ ಧಾರ್ಮಿಕ ಆಚರಣೆ ಮಾತ್ರವಲ್ಲ. ಇದು ಪ್ರಕೃತಿ, ಪವಿತ್ರತೆಯ ಮಿಶ್ರಣವಾಗಿದೆ. ಪೂರ್ವಜರಿಂದ ಬಂದಿರುವ ಈ ಪಾರಂಪರಿಕ ಆಚರಣೆಯು ಕರಾವಳಿ ಭಾಗಗಳಲ್ಲಿ ಇಂದಿಗೂ ಚಾಲ್ತಿಯಲ್ಲಿದೆ.