ಹವಾಮಾನದಿಂದಾಗಿ ಪ್ರಪಂಚದಾದ್ಯಂತ ಅನಿರೀಕ್ಷಿತವಾದ ಹಲವಾರು ಬದಲಾವಣೆಗಳನ್ನು ಉಂಟುಮಾಡುತ್ತದೆ. ಹೀಗಾಗಿ ನಿಖರವಾದ ಹವಾಮಾನ ಮುನ್ಸೂಚನೆಗಾಗಿ ಕೃತಕ ಬುದ್ಧಿಮತ್ತೆಯಂತಹ ಅತ್ಯಾಧುನಿಕ ಸಾಧನಗಳನ್ನು ಬಳಸಿಕೊಂಡು ಕೇಂದ್ರ ಸರ್ಕಾರ `ಮಿಷನ್ ಮೌಸಮ್’ ಎಂಬ ಸಾಧನವನ್ನು ತರಲು ಸಿದ್ಧವಾಗಿದೆ.
ಭಾರತೀಯ ಹವಾಮಾನ ಇಲಾಖೆ 1875 ಜ.15 ರಂದು ಪ್ರಾರಂಭವಾಯಿತು. ಇತ್ತೀಚಿಗೆ ಪ್ರಧಾನಿ ನರೇಂದ್ರ ಮೋದಿಯವರು ಐಎಂಡಿಯ 150ನೇ ಸಂಭ್ರಮಾಚರಣೆಯಲ್ಲಿ `ಮಿಷನ್ ಮೌಸಮ್’ ಅನ್ನು ಉದ್ಘಾಟಿಸಿದರು. ಕೇಂದ್ರ ಸರ್ಕಾರ ಈ ಯೋಜನೆಯನ್ನು ಐದು ವರ್ಷಗಳಲ್ಲಿ 2 ಸಾವಿರ ಕೋಟಿ ರೂ.ಗಳಿಂದ ಅನುಷ್ಠಾನಕ್ಕೆ ತರಲು ಸಿದ್ಧತೆ ನಡೆಸಿದೆ.
Advertisement
Advertisement
ಹವಾಮಾನ ಪರಿಸ್ಥಿತಿ, ಪ್ರವಾಹ, ಚಂಡಮಾರುತ, ಅತೀವೃಷ್ಠಿ, ಅನಾವೃಷ್ಠಿ, ಗುಡುಗು ಸೇರಿದಂತೆ ಇನ್ನಿತರ ಮುನ್ಸೂಚನೆ ನೀಡಲು ಇದನ್ನು ವಿನ್ಯಾಸಗೊಳಿಸಲಾಗಿದೆ. ಈ ಮೂಲಕ ಕಳೆದ 10 ದಿನಗಳ ಹಾಗೂ ಮುಂದಿನ ಹತ್ತು ದಿನಗಳ ಹವಾಮಾನ ಹೇಗಿರಲಿದೆ ಎಂದು ತಿಳಿಯಬಹುದು. ಜೊತೆಗೆ ಭಾರತವನ್ನು ಕ್ಲೈಮೇಟ್ ಸ್ಮಾರ್ಟ್ ರಾಷ್ಟ್ರವಾಗಿಸಲು ಇದನ್ನು ಜಾರಿಗೆ ತರಲಾಗಿದೆ.
Advertisement
ಮೀನುಗಾರರು, ರೈತರಿಗೆ ಈ ಯೋಜನೆ ಪ್ರಯೋಜನಕಾರಿಯಾಗಲಿದೆ. ಮುಂಚೆ ಶೇ.10 ರಷ್ಟು ರೈತರು ಹಾಗೂ ಮೀನುಗಾರರು ಹವಾಮಾನಕ್ಕೆ ಸಂಬಂಧಿಸಿದಂತೆ ಮಾಹಿತಿಯನ್ನು ಪಡೆಯುತ್ತಿದ್ದರು. ಆದರೆ ಸದ್ಯ ಈ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳವಾಗಿದ್ದು, ಶೇ.50 ರಷ್ಟು ಜನ ಸ್ಮಾರ್ಟ್ಫೋನ್, ವಾಟ್ಸಪ್ ಮೂಲಕ ಮಾಹಿತಿ ಪಡೆಯುತ್ತಿದ್ದಾರೆ.
Advertisement
ಇದರ ಸ್ಥಾಪನೆ ಹೇಗೆ?
ಮೊದಲ ಹಂತದ ಭಾಗವಾಗಿ ಸುಮಾರು 70 ಡಾಪ್ಲರ್ ರಾಡಾರ್‌ಗಳು, ಸೂಪರ್ ಕಂಪ್ಯೂಟರ್‌ಗಳು, 10 ವಿಂಡ್ ಪ್ರೊಫೈಲರ್‌ಗಳು ಮತ್ತು 10 ರೇಡಿಯೊಮೀಟರ್‌ಗಳನ್ನು ಮಾರ್ಚ್ 2026ರವರೆಗೆ ಅಳವಡಿಸಲಾಗುವುದು. ಇಲ್ಲಿಯವರೆಗೆ ಭಾರತೀಯ ಹವಾಮಾನ ಇಲಾಖೆಯು 39 ಡಾಪ್ಲರ್ ರಾಡಾರ್‌ಗಳನ್ನು ಸ್ಥಾಪಿಸಿದೆ. ಡಾಪ್ಲರ್ ರಾಡಾರ್‌ಗಳು ಎಂದರೆ ದೂರದಲ್ಲಿನ ಹವಾಮಾನ ಕುರಿತು ದತ್ತಾಂಶ ನೀಡುತ್ತದೆ. ಇದು ಹವಾಮಾನದ ಚಲನೆಯ ಮಾಹಿತಿಯನ್ನು ಒದಗಿಸುತ್ತದೆ.
ಇನ್ನೂ ಎರಡನೇ ಹಂತದಲ್ಲಿ, ವೀಕ್ಷಣಾಲಯಗಳನ್ನು ಮತ್ತಷ್ಟು ಬಲಪಡಿಸಲು ಉಪಗ್ರಹಗಳು ಮತ್ತು ವಿಮಾನಗಳನ್ನು ಬಳಸಲಾಗುತ್ತದೆ. ತಾಪಮಾನ ಹೆಚ್ಚಾದಂತೆ ಮೋಡಗಳಲ್ಲಿ ನಡೆಯುವ ಪ್ರಕ್ರಿಯೆಗಳನ್ನು ಅಧ್ಯಯನ ಮಾಡಲು ಪುಣೆಯ ಭಾರತೀಯ ಹವಾಮಾನ ಸಂಸ್ಥೆಯಲ್ಲಿ ಕ್ಲೌಡ್ ಚೇಂಬರ್ ಸ್ಥಾಪಿಸಲಾಗುವುದು. ಇದು ಮುಂದಿನ ಒಂದೂವರೆ ವರ್ಷದಲ್ಲಿ ಪೂರ್ಣಗೊಳ್ಳಲಿದೆ. ಮುಂದಿನ ಐದು ವರ್ಷಗಳಲ್ಲಿ ಎರಡು ಹಂತಗಳಲ್ಲಿ ಈ ಕಾರ್ಯಾಚರಣೆಯನ್ನು ಕೈಗೊಳ್ಳಲಾಗುವುದು ಎಂದು ಕೇಂದ್ರ ಸರ್ಕಾರ ಘೋಷಿಸಿದೆ.
ಒಟ್ಟಾರೆಯಾಗಿ ಮಧ್ಯಮ ವ್ಯಾಪ್ತಿಯ ಹವಾಮಾನ ಮುನ್ಸೂಚನೆಗಳ ನಿಖರತೆಯನ್ನು ಶೇ.5 ರಿಂದ 10ಕ್ಕೆ ಹೆಚ್ಚಿಸುವ ಗುರಿಯನ್ನು ಈ ಯೋಜನೆ ಹೊಂದಿದೆ. ಜೊತೆಗೆ ಇದು ಗ್ರಾಮೀಣ ಪ್ರದೇಶಗಳಿಗೆ ಹವಾಮಾನ ಮುನ್ಸೂಚನೆಯನ್ನು ನೀಡುತ್ತದೆ. ಕೃಷಿಗೆ ಅಗತ್ಯವಾದ, ನಿಖರವಾದ ಮುನ್ಸೂಚನೆಗಳನ್ನು ಒದಗಿಸುವ ನಿರೀಕ್ಷೆಯಿದೆ.
ಇನ್‌ಸ್ಟಂಟ್ ಎಸ್ಟಿಮೇಟ್ಸ್ ಪ್ರಕಾರ ಸದ್ಯ ಮೂರು ಗಂಟೆಗಳ ಮೊದಲಿನ ಹವಾಮಾನ ಪರಿಸ್ಥಿತಿಯನ್ನು ತಿಳಿಸುತ್ತದೆ. ಈ ಯೋಜನೆಯ ಮೂಲಕ ಒಂದು ಗಂಟೆಗೆ ಇಳಿಸುವ ನಿರೀಕ್ಷೆಯನ್ನು ಹೊಂದಿದೆ. ಭಾರತೀಯ ಹವಾಮಾನ ಇಲಾಖೆ, ಉಷ್ಣವಲಯದ ಹವಾಮಾನ ಶಾಸ್ತ್ರದ ಕೇಂದ್ರ ಮತ್ತು ಮಧ್ಯಮ ಶ್ರೇಣಿಯ ಹವಾಮಾನ ಮುನ್ಸೂಚನೆಯ ಕೇಂದ್ರ ಜಂಟಿಯಾಗಿ ಈ ಯೋಜನೆಯನ್ನು ಕಾರ್ಯಗತಗೊಳಿಸುತ್ತವೆ.