ಹಿಜಬ್ ಗಲಾಟೆಯ ಬಳಿಕ ಮುಸ್ಲಿಂ ವರ್ತಕರಿಗೆ ಹಿಂದೂಗಳ ಜಾತ್ರೆಯಲ್ಲಿ ಬಹಿಷ್ಕಾರ ಹಾಕಲಾಯಿತು. ಬಹಿಷ್ಕಾರದ ಮುಂದುವರಿದ ಭಾಗವಾಗಿ ಈಗ ಹಲಾಲ್ ಮಾಂಸಗಳನ್ನು ಬಹಿಷ್ಕರಿಸುವಂತೆ ಹಿಂದೂ ಜಾಗರಣ ವೇದಿಕೆ ಕರೆ ನೀಡಿದೆ.
ಯುಗಾದಿ ಮರು ದಿವಸ ಕರ್ನಾಟಕದ ಕೆಲ ಭಾಗಗಳಲ್ಲಿ ಆಚರಿಸುವ ಹೊಸತೊಡಕು ವೇಳೆ ಮಾಂಸ ತಿನ್ನಲಾಗುತ್ತದೆ. ಈ ವೇಳೆ ಹಲಾಲ್ ಮಾಂಸವನ್ನು ಸೇವಿಸದಂತೆ ಕರೆ ನೀಡಿದೆ. ಮುಸ್ಲಿಮ್ ದೇವರಿಗೆ ಅರ್ಪಣೆ ಮಾಡಿದ ಬಳಿಕ ಹಿಂದೂ ದೇವರಿಗೆ ಅರ್ಪಣೆ ಮಾಡುವುದು ಸರಿಯಲ್ಲ ಎಂದು ಹಿಂಜಾವೇ ಹೇಳಿದೆ. ಹೀಗಾಗಿ ಇಲ್ಲಿ ಹಲಾಲ್ ಮಾಂಸದ ಬಗ್ಗೆ ಕಿರು ಮಾಹಿತಿಯನ್ನು ನೀಡಲಾಗಿದೆ. ಇದನ್ನೂ ಓದಿ: ಯುಗಾದಿ ವೇಳೆ ಹಲಾಲ್ ಮಾಂಸ ಬಹಿಷ್ಕರಿಸಿ – ಹಿಂದೂ ಜನಜಾಗೃತಿ ಸಮಿತಿ ಕರೆ
ಹಲವು ಮಾಂಸದಂಗಡಿಗಳು ಹಾಗೂ ಮುಸ್ಲಿಂ ಅಂಗಡಿಗಳ ಬ್ಯಾನರ್‍ಗಳಲ್ಲಿ ಹಲಾಲ್ ಪದ ಇರುತ್ತದೆ. ಮಾಂಸಗಳ ಗುಣಮಟ್ಟ ತೋರಿಸಲು ಹಲವು ಕಂಪನಿಗಳು ಹಲಾಲ್ ಕಟ್ ಪದವನ್ನು ಉಪಯೋಗಿಸುತ್ತವೆ. ಆದರೆ ಚೀನಾ ದೇಶದಲ್ಲಿ ಹಲಾಲ್ ಮಾಂಸವನ್ನು ನಿಷೇಧಿಸಿದೆ. ಈ ಹಿನ್ನೆಲೆಯಲ್ಲಿ ಹಲಾಲ್ ಮಾಂಸ, ಹಲಾಲ್ ಕಟ್ ಅಂದರೇನು ಎಂಬ ಪ್ರಶ್ನೆ ಸಹಜವಾಗಿಯೇ ಉದ್ಭವಿಸುತ್ತದೆ. ಇದನ್ನೂ ಓದಿ: ಎಚ್‍ಡಿಡಿ ಪತ್ನಿಗೆ ಐಟಿ ನೋಟಿಸ್
ಹಲಾಲ್ ಮಾಂಸ ಯಾವುದು?
ಇಸ್ಲಾಮ್ ಧರ್ಮಬದ್ಧವಾಗಿರುವ ಆಹಾರ ಕ್ರಮವೇ ಹಲಾಲ್. ಇಸ್ಲಾಮ್ ಧರ್ಮದಲ್ಲಿ ಪರಿಶುದ್ಧ ಆಹಾರವೆಲ್ಲವೂ ಹಲಾಲ್ ಎಂದು ಪರಿಗಣಿಸಲಾಗಿದೆ. ಪರಿಶುದ್ಧತೆ ಇಲ್ಲದ ಆಹಾರವು ಇಸ್ಲಾಮ್‍ನಲ್ಲಿ ನಿಷಿದ್ಧ. ಮಾಂಸದ ವಿಚಾರಕ್ಕೆ ಬಂದರೆ ಹಂದಿ, ಮನುಷ್ಯ, ಹುಲಿ, ಸಿಂಹ ಇತ್ಯಾದಿ ಮಾಂಸಗಳು ನಿಷಿದ್ಧವಾಗಿವೆ. ಕಾನೂನುಬದ್ಧವೆನಿಸಿದ ಕುರಿ, ಕೋಳಿ, ಒಂಟೆ, ದನ, ಮೀನು ಇತ್ಯಾದಿ ಪ್ರಾಣಿಗಳ ಮಾಂಸವು ಹಲಾಲ್ ಎನಿಸುತ್ತವೆ. ವಧಿಸುವ ಮೊದಲೇ ಸತ್ತಿದ್ದ ಪ್ರಾಣಿಗಳು ಹಾಗೂ ವಧಿಸುವ ವೇಳೆ ರೋಗ, ಅನಾರೋಗ್ಯದಿಂದ ಬಳಲುತ್ತಿರುವ ಪ್ರಾಣಿಗಳನ್ನು ಮುಸ್ಲಿಮರು ತಿನ್ನುವಂತಿಲ್ಲ.
ಹಲಾಲ್ ಕಟ್ ಎಂದರೇನು?
ತಿನ್ನುವ ಪ್ರಾಣಿಗಳನ್ನ ಕೊಲ್ಲುವುದಕ್ಕೂ ಇಸ್ಲಾಮ್‍ನಲ್ಲಿ ನಿರ್ದಿಷ್ಟ ಕ್ರಮ ಮತ್ತು ನಿಯಮಗಳಿವೆ. ಒಂದೊಂದು ಪ್ರಾಣಿಯ ವಧೆಗೂ ಪ್ರತ್ಯೇಕ ನಿಯಮವಿರುತ್ತದೆ. ಒಂದು ಸಾಮಾನ್ಯ ನಿಯಮವೆಂದರೆ ವಧಿಸಲ್ಪಟ್ಟ ಪ್ರಾಣಿಯ ದೇಹದಿಂದ ರಕ್ತವೆಲ್ಲವೂ ಹೊರಬರಬೇಕು. ಸೌದಿಯಲ್ಲಿರುವ ಮೆಕ್ಕಾ ಮಸೀದಿಯತ್ತ ಮುಖ ಮಾಡಿ ಪ್ರಾಣಿಯನ್ನು ವಧಿಸಲಾಗುತ್ತದೆ.
ವಧಿಸುವ ವ್ಯಕ್ತಿಯು ಅಲ್ಲಾಹುವಿನ ನಾಮೋಚ್ಛಾರ ಮಾಡುತ್ತಾ ವಧಿಸಬೇಕು. ತಲೆಯನ್ನು ಒಡೆಯದೇ ಗಂಟಲು ಸೀಳಿ ಸಾಯಿಸಬೇಕು ಎಂಬಿತ್ಯಾದಿ ನಿಯಮಗಳು ಕುರಾನ್‍ನಲ್ಲಿ ತಿಳಿಸಲಾಗಿದೆ. ಕೋಳಿ ಅಥವಾ ಕುರಿಯನ್ನು ಕಡಿಯುವ ಮುಂಚೆ ಮುಸ್ಲಿಂ ಧರ್ಮದಲ್ಲಿ ಕುರಾನಿನ ಕೆಲ ಸಾಲುಗಳನ್ನು ಉಚ್ಚರಿಸಿ ಕೊಲ್ಲಲಾಗುತ್ತದೆ.
ಹಿಂದೂ ಸಂಪ್ರದಾಯದಲ್ಲಿ ಪ್ರಾಣಿಗಳನ್ನು ನೇರವಾಗಿಯೇ ವಧಿಸುತ್ತಾರೆ. ಆದರೆ ಮುಸ್ಲಿಂ ಧರ್ಮದಲ್ಲಿ ಕೆಲ ರೀತಿ ರಿವಾಜುಗಳಿವೆ. ಮುಸ್ಲಿಂ ಧರ್ಮಗಳಲ್ಲಿ ಏಡಿಯನ್ನು ಹೆಚ್ಚಾಗಿ ತಿನ್ನಲು ಬಯಸುವುದಿಲ್ಲ. ಏಕೆಂದರೆ ತಲೆ ಇಲ್ಲದ ಪ್ರಾಣಿಗಳನ್ನು ತಿನ್ನುವುದು ಅವರಲ್ಲಿ ಮಹಾ ಪಾಪ ಎಂಬುವ ವಾಡಿಕೆಯಿದೆ. ಮುಸ್ಲಿಂ ಮಾಂಸದಂಗಡಿಗಳಲ್ಲಿ ಪ್ರಾಣಿಯನ್ನು ವಧಿಸುವ ಮೊದಲು ಅದರ ಬಾಯಿಗೆ ನೀರು ಹಾಕುತ್ತಾರೆ. ನಂತರ ಆ ಪ್ರಾಣಿಯ ಕತ್ತನ್ನು ಕತ್ತರಿಸುತ್ತಾರೆ. ಒಂದೊಂದು ಪ್ರಾಣಿಯನ್ನು ಸಾಯಿಸುವ ಕ್ರಮದಲ್ಲಿ ವ್ಯತ್ಯಾಸವಿರುತ್ತದೆ. ಆಯಾ ಪ್ರಾಣಿಗೆ ಅನುಗುಣವಾಗಿ ಈ ನಿಯಮವನ್ನು ಮಾಡಲಾಗಿದೆ.