ತಂತ್ರಜ್ಞಾನ ಕ್ಷೇತ್ರ ಮುಂದುವರಿದಂತೆ ಅದರಿಂದ ಅನುಕೂಲತೆಗಳು ಹುಟ್ಟಿಕೊಳ್ಳುತ್ತಿವೆ. ಎಲ್ಲಾ ವ್ಯವಹಾರಗಳೂ ಡಿಜಿಟಲೀಕರಣಗೊಳ್ಳುತ್ತಿರುವ ಈ ಸಮಯದಲ್ಲಿ ಕಿಡಿಗೇಡಿಗಳು ತಂತ್ರಜ್ಞಾನ ಕ್ಷೇತ್ರದಲ್ಲೂ ತಮ್ಮ ಕೈಚಳಕ ತೋರಿಸುತ್ತಿದ್ದಾರೆ. ಮನೆ ದರೋಡೆ, ಕಳ್ಳತನಕ್ಕಿಂತ ಹೆಚ್ಚಾಗಿ ಸೈಬರ್ ಮೂಲಕವೇ ಈಗ ಹೆಚ್ಚಿನ ವಂಚನೆಗಳು ನಡೆಯುತ್ತಿದೆ. ಅಲ್ಲದೇ ಇನ್ನೂ ಅನೇಕ ರೀತಿಯ ಅಪರಾಧಗಳು ಇಂಟರ್‌ನೆಟ್ (Internet) ಮುಖಾಂತರವೇ ನಡೆಯುತ್ತಿದ್ದು ಮುಂದಿನ ದಿನಗಳಲ್ಲಿ ಇದು ಹೆಚ್ಚಾಗುವ ಆತಂಕ ಕೂಡ ಇದೆ.
ಕಳೆದ 2021-2022 ರ ಅವಧಿಯಲ್ಲಿ ಭಾರತದಲ್ಲಿ 8,84,863 ಸೈಬರ್ ಕ್ರೈಮ್ (Cybercrime )ಪ್ರಕರಣಗಳು ನಡೆದಿದ್ದು, 1,376 ಮಕ್ಕಳ ವಿರುದ್ಧದ ಸೈಬರ್ ಕ್ರೈಮ್ ಪ್ರಕರಣಗಳು ನಡೆದಿವೆ. 2023ರಲ್ಲಿ ಪ್ರತಿ ಗಂಟೆಗೆ 97 ಸೈಬರ್ ಅಪರಾಧಗಳು ಜರಗುತ್ತಿವೆ. ಅಂದರೆ ದಿನಕ್ಕೆ 2,328 ಪ್ರಕರಣಗಳು ನಡೆಯುತ್ತಿದ್ದು, ಅದರಲ್ಲಿ ಕೋಲ್ಕತ್ತಾ, ತೆಲಂಗಾಣ ಹಾಗೂ ಕರ್ನಾಟಕ ಮುಂಚೂಣಿಯಲ್ಲಿವೆ. ಇದನ್ನೂ ಓದಿ: ಹಿರಿಯ ವಕೀಲ ಮುಕುಲ್ ರೋಹಟಗಿ ಭೇಟಿಯಾದ ಡಿಸಿಎಂ
Advertisement
Advertisement
ರಾಜ್ಯದಲ್ಲಿ ಸೈಬರ್ ಕ್ರೈಮ್‍ಗಳನ್ನು ತಡೆಗಟ್ಟುವ ಉದ್ದೇಶದಿಂದ 2001ರಲ್ಲೇ ಬೆಂಗಳೂರಿನ ಸಿಐಡಿ ಕಚೇರಿಯಲ್ಲಿ ಸೈಬರ್ ಪೊಲೀಸ್ ಘಟಕವನ್ನು ಸ್ಥಾಪಿಸಲಾಗಿದೆ. ಅಲ್ಲದೇ ರಾಜ್ಯದ ಇತರ ಜಿಲ್ಲೆಗಳಲ್ಲೂ ಜನರಿಗೆ ಎದುರಾಗುವ ಸಮಸ್ಯೆಗಳನ್ನು ಅರಿತು ಜಿಲ್ಲಾ ಕೇಂದ್ರಗಳಲ್ಲೂ ಸೈಬರ್ ಪೊಲೀಸ್ ಘಟಕಗಳನ್ನು ಸ್ಥಾಪಿಸಲಾಗಿದೆ. ಅಲ್ಲದೇ ದೇಶಾದ್ಯಂತ ಸೈಬರ್ ಅಪರಾಧಗಳ ತಡೆಗೆ ಜಾಗೃತಿ ಮೂಡಿಸುವ ಕೆಲಸಗಳನ್ನು ಸರ್ಕಾರ ಮಾಡಿದೆ. ಈ ರೀತಿಯಾಗಿ ಸೈಬರ್ ಕ್ರೈಮ್ ತಡೆಯಲು ಕ್ರಮ ಕೈಗೊಂಡರು ಸಹ ಸಾರ್ವಜನಿಕರು ತಿಳುವಳಿಕೆಯ ಕೊರತೆಯಿಂದ ಸೈಬರ್ ಸುಲಿಗೆಗೆ ಒಳಗಾಗುತ್ತಿದ್ದಾರೆ.
Advertisement
Advertisement
ನಕಲಿ ಸಂದೇಶಗಳು
ವ್ಯಕ್ತಿಗೆ ಇ-ಮೇಲ್ ಅಥವಾ ಎಸ್‍ಎಂಎಸ್ ಕಳುಹಿಸಿ ನಿಮಗೆ ನಮ್ಮ ಸಂಸ್ಥೆಯಿಂದ ಉಡುಗೊರೆ ನೀಡುತ್ತೇವೆ. ಅದರ ಕೊರಿಯರ್ ವೆಚ್ಚವನ್ನು ನೀವೇ ನೀಡಬೇಕು ಎಂದು ಹಣ ವಸೂಲಿ ಮಾಡುವುದು. ಆನ್‍ಲೈನ್ ಮೂಲಕ ಹಣ ಪಾವತಿಸಿದ ಮೇಲೆ ಖಾತೆಗೆ ಕನ್ನ ಹಾಕುವುದು. ಇಂತಹ ಜಾಲದಲ್ಲಿ ಅನೇಕ ಅಮಾಯಕರು ಸಿಕ್ಕಿ ಹಣ ಕಳೆದುಕೊಳ್ಳುತ್ತಿದ್ದಾರೆ. ಕೆಲವು ಪ್ರಕರಣಗಳಲ್ಲಿ ಆರೋಪಿಗಳು ಪತ್ತೆಯಾದರೆ, ಇನ್ನೂ ಕೆಲವು ಪ್ರಕರಣಗಳಲ್ಲಿ ಆರೋಪಿಗಳ ಪತ್ತೆ ಕಠಿಣವಾಗಿರುತ್ತದೆ.
ಸಾಲದ ವಂಚನೆ
ಸಾಲದ ಬಗ್ಗೆ ಹುಡುಕಾಟದಲ್ಲಿರುವವರನ್ನು ಕಡಿಮೆ ಬಡ್ಡಿ ದರದಲ್ಲಿ ಭಾರೀ ಮೊತ್ತದ ಸಾಲ ಕೊಡಿಸುವುದಾಗಿ ವಂಚಕರು ಆಮಿಷವೊಡ್ಡುತ್ತಾರೆ. ಬಳಿಕ ಮೊಬೈಲ್ ಅಥವಾ ಇಮೇಲ್‍ಗಳ ಮೂಲಕ ಬ್ಯಾಂಕ್ ಹಾಗೂ ದಾಖಲೆಗಳ ವಿವರ ಪಡೆದು ವಂಚಿಸುತ್ತಾರೆ. ಇಲ್ಲವೇ ಒಟಿಪಿ ಕಳುಹಿಸಿ ತಿಳಿಸುವಂತೆ ಹೇಳಿ ಈ ಮೂಲಕ ಈಗಾಗಲೇ ಬ್ಯಾಂಕ್‍ನಲ್ಲಿ ಇರುವ ಹಣವನ್ನು ದೋಚುತ್ತಾರೆ.
ಒಟಿಪಿ ವಂಚನೆಗಳು
ವಂಚಕರು ಕರೆ ಮಾಡಿ ಬ್ಯಾಂಕ್‍ನಿಂದ ಕರೆ ಮಾಡುತ್ತಿರುವುದಾಗಿ ತಿಳಿಸಿ, ಈ ವೇಳೆ ಮೊಬೈಲ್‍ಗೆ ಬಂದಿರುವ ಒಟಿಪಿಯನ್ನು (OTP) ತಿಳಿಸುವಂತೆ ಸೂಚಿಸುತ್ತಾರೆ. ಈ ವೇಳೆ ಒಟಿಪಿ ಹಂಚಿಕೊಂಡರೆ ಖಾತೆಯಲ್ಲಿರುವ ಹಣ ಕ್ಷಣಾರ್ಧದಲ್ಲಿ ವಂಚಕರ ಜೇಬು ಸೇರಲಿದೆ. ಇಂಥ ಕರೆಗಳು ಬಂದಾಗ ಯಾರಿಗೂ ಒಟಿಪಿ, ಎಟಿಎಂ ಪಿನ್ ನಂಬರ್‍ಗಳನ್ನು ತಿಳಿಸಬಾರದು. ಯಾವುದೇ ಬ್ಯಾಂಕ್ ತನ್ನ ಖಾತೆದಾರರಿಗೆ ಸಿವಿವಿ, ಒಟಿಪಿ, ಎಟಿಎಂ ಪಿನ್ ಇವ್ಯಾವುದನ್ನೂ ಕೇಳುವುದಿಲ್ಲ. ಆ ರೀತಿ ಕೇಳಿ ಕರೆ ಬಂದರೆ ಅದು ವಂಚನೆಯ ಕರೆ ಎಂದು ತಿಳಿಯಬೇಕು.
ಆನ್‍ಲೈನ್ ಜಾಹಿರಾತುಗಳ ವಂಚನೆ
ಇದರಲ್ಲಿ ವಂಚಕರು ಅಸ್ತಿತ್ವದಲ್ಲೇ ಇರದ ವಾಹನ, ಆಸ್ತಿ ಮಾರಾಟಕ್ಕಿದೆ ಎಂದು ವೆಬ್‍ಸೈಟ್‍ನಲ್ಲಿ ಪ್ರಕಟಿಸಿ ಗ್ರಾಹಕರಿಂದ ಹಣ ಪಡೆದು ವಂಚನೆ ನಡೆಸುತ್ತಾರೆ. ಅಲ್ಲದೇ ಜಾಹಿರಾತನ್ನು ವಿಶ್ವಾಸಾರ್ಹ ಎಂದು ನಂಬಿಸಿ ಹಣ ಕೂಡ ಪಡೆಯುವಲ್ಲಿ ಯಶಸ್ವಿಯಾಗುತ್ತಾರೆ. ಬಳಿಕ ನಾಪತ್ತೆಯಾಗುತ್ತಾರೆ. ಇದಾದ ಮೇಲೆ ಯಾವ ಪ್ರತಿಕ್ರಿಯೆಯೂ ಇಲ್ಲದ ಬಳಿಕ ಗ್ರಾಹಕನಿಗೆ ವಂಚನೆಗೊಳಗಾಗಿರುವುದು ತಿಳಿಯುತ್ತದೆ.
ಕ್ರಿಪ್ಟೋ ಕರೆನ್ಸಿ ವಂಚನೆ
ಇದರಲ್ಲಿ ಬಿಟ್ ಕಾಯಿನ್ ರೂಪದಲ್ಲಿ ಹಣ ದ್ವಿಗುಣಗೊಳಿಸುವುದಾಗಿ ಆಮಿಷವೊಡ್ಡಲಾಗುತ್ತದೆ. ಭಾರತೀಯ ರಿಸರ್ವ್ ಬ್ಯಾಂಕ್ ಯಾರಿಗೂ ಯಾವುದೇ ಸಂಸ್ಥೆಗೂ ವರ್ಚುವಲ್ ಕರೆನ್ಸಿಯ ರೂಪದಲ್ಲಿ ಹಣ ದ್ವಿಗುಣಗೊಳಿಸುವ ವ್ಯವಹಾರಕ್ಕೆ ಲೈಸೆನ್ಸ್ ನೀಡಿಲ್ಲ.
ಹನಿಟ್ರ್ಯಾಪ್/ ಬ್ಲಾಕ್‍ಮೇಲ್ ಪ್ರಕರಣ
ಇತ್ತೀಚೆಗೆ ನಗ್ನ ಚಿತ್ರಗಳನ್ನು ಬಳಸಿ ಕಿಡಿಗೇಡಿಗಳು ವ್ಯುಕ್ತಿಗಳನ್ನು ಬ್ಲಾಕ್‍ಮೇಲ್ ಮಾಡಿ ವಂಚಿಸುವ ಹೆಚ್ಚಿನ ಪ್ರಕರಣಗಳು ನಡೆಯುತ್ತಿವೆ. ಡೇಟಿಂಗ್ ಆಪ್‍ಗಳ ಮೂಲಕ ಮಹಿಳೆಯರಿಂದ ವ್ಯಕ್ತಿಗಳಿಗೆ ವಿಡಿಯೋ ಕರೆ ಮಾಡಿ ಅದನ್ನು ಬೇಕಾದಂತೆ ತಿರುಚಿ ಹಣಕ್ಕೆ ಬೇಡಿಕೆ ಇಡುವ ಎಷ್ಟೋ ಪ್ರಕರಣಗಳು ವರದಿಯಾಗಿವೆ.
ಹ್ಯಾಕಿಂಗ್
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳನ್ನು ಹ್ಯಾಕ್ (Hacking) ಮಾಡುವ ಪ್ರಕರಣಗಳು ಹೆಚ್ಚಾಗುತ್ತಿವೆ. ಹ್ಯಾಕ್ ಮಾಡಿ ಕಿಡಿಗೇಡಿಗಳು ತಮ್ಮ ದುರುದ್ದೇಶಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಆ ಸಾಮಾಜಿಕ ಜಾಲತಾಣದ ಸಂಪರ್ಕದಲ್ಲಿರುವವರಿಂದ ಹಣಕ್ಕೆ ಬೇಡಿಕೆ ಇಡುವುದು, ಅಲ್ಲದೇ ನಿಗದಿತ ದುರುದ್ದೇಶಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅಲ್ಲದೇ ನಕಲಿ ಖಾತೆಗಳನ್ನು ಸೃಷ್ಟಿಸಿ ಕಿಡಿಗೇಡಿಗಳು ಇದೇ ರೀತಿಯಾಗಿ ಬಳಕೆ ಮಾಡಿಕೊಳ್ಳುತ್ತಾರೆ.
ಆನ್‍ಲೈನ್ ವಂಚನೆಯಾಗದಂತೆ ಸುರಕ್ಷಿತವಾಗಿ ಇಂಟರ್‌ನೆಟ್ ಬಳಕೆ ಮಾಡುವುದು ಈ ದಿನಗಳಲ್ಲಿ ಸವಾಲಾಗಿದೆ. ಆದರೂ ಸೂಕ್ತ ಮುನ್ನೆಚ್ಚರಿಕೆಯಿಂದಾಗಿ ಸೈಬರ್ ವಂಚನೆಯಿಂದ ಪಾರಾಗಲು ಅವಕಾಶವಿದೆ. ಇಂಟರ್‌ನೆಟ್ ಸಂಬಂಧಿತ ವ್ಯವಹಾರಗಳ ಪಾಸ್‍ವರ್ಡ್ ಯಾರಿಗೂ ನೀಡದಿರುವುದು, ಹಾಗೂ ಕ್ಲಿಷ್ಟಕರವಾದ ಪಾಸ್‍ವರ್ಡ್ ಇಟ್ಟುಕೊಳ್ಳುವುದು. ಸಾಮಾಜಿಕ ಜಾಲತಾಣಗಳಲ್ಲಿ ಅಪರಿಚಿತರೊಂದಿಗೆ ವ್ಯವಹರಿಸದಿರುವುದು, ಆಧಿಕೃತವಲ್ಲದ ಆಪ್‍ಗಳನ್ನು ಡೌನ್‍ಲೋಡ್ ಮಾಡದೇ ಇರುವುದು ಸೈಬರ್ ವಂಚನೆಗೆ ಒಳಗಾಗದಂತೆ ಇರುವ ಮಾರ್ಗಗಳು.
ಇದಾಗಿಯೂ ವಂಚನೆಗೆ ಒಳಗಾದರೆ ಸೈಬರ್ ಕ್ರೈಮ್ ದೂರು ದಾಖಲಿಸಿ ಪರಿಹಾರ ಪಡೆಯಲು ಅವಕಾಶ ಇದೆ. ಆದರೆ ಪ್ರಪಂಚದ ಯಾವುದೋ ಮೂಲೆಯಲ್ಲಿಂದ ನಿಮಗೆ ಅನ್ಯಾಯವಾಗಿದ್ದರೆ ಅದಕ್ಕೆ ನ್ಯಾಯ ಒದಗಿಸಲು ಸಾಧ್ಯವೇ? ಇದರಿಂದ ಸೈಬರ್ ವಿಚಾರದಲ್ಲಿ ಜಾಗ್ರತೆ ವಹಿಸುವುದೊಂದೆ ಮೊದಲ ಪರಿಹಾರವಾಗಿ ಕಾಣುತ್ತದೆ.
ಪಿಂಕ್ ವಾಟ್ಸಾಪ್ ಬಳಕೆ ಸೈಬರ್ ವಂಚನೆಗೆ ಆಹ್ವಾನ ಕೊಟ್ಟಂತೆ ಎಂದು ಆಂಡ್ರಾಯ್ಡ್ ಬಳಕೆದಾರರಿಗೆ ಮುಂಬೈ ಪೊಲೀಸರು ಇತ್ತೀಚೆಗೆ ಎಚ್ಚರಿಕೆ ನಿಡಿರುವುದನ್ನು ನಾವಿಲ್ಲಿ ಗಮನಿಸಬಹುದು. ಅಲ್ಲದೇ ಪ್ರಕರಣವೊಂದರ ತನಿಖೆ ವೇಳೆ ಫೇಸ್‍ಬುಕ್ ಖಾತೆಗಳನ್ನು ಹ್ಯಾಕ್ ಮಾಡಿ ಅವಹೇಳನಕಾರಿ ಮತ್ತು ನಿಂದನಾತ್ಮಕ ಬರಹಗಳನ್ನು ಬಿತ್ತರಿಸುವ ದೊಡ್ಡ ಜಾಲವೇ ಕೆಲಸ ಮಾಡುತ್ತಿರುವಂತಿದೆ ಎಂದು ಕರ್ನಾಟಕ ಹೈಕೋರ್ಟ್ ಶಂಕೆ ವ್ಯಕ್ತಪಡಿಸಿದ್ದು ಇಲ್ಲಿ ಗಮನಾರ್ಹ ವಿಚಾರವಾಗಿದೆ. ಇದನ್ನೂ ಓದಿ: ಅನ್ನಭಾಗ್ಯದ ದುಡ್ಡಿಗಾಗಿ ಬ್ಯಾಂಕ್ ಖಾತೆ ಜೊತೆ ಆಧಾರ್ ಲಿಂಕ್ ಕಡ್ಡಾಯ
Web Stories