ಕ್ಯಾನ್ಸರ್ (Cancer) ಎಂಬ ಮಹಾಮಾರಿ ರೋಗ ಸದ್ಯ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಕಾಡುತ್ತಿದೆ. ಕೆಲವು ಮಕ್ಕಳಿಗೆ ಹುಟ್ಟಿದ ಕೆಲವು ದಿನಗಳು, ತಿಂಗಳಲ್ಲಿ ಕ್ಯಾನ್ಸರ್ ರೋಗ ಅಂಟಿಕೊಂಡರೆ ಇನ್ನುಳಿದವರಿಗೆ ಯಾವಾಗ ಬರುತ್ತದೆ? ಹೇಗೆ ಬರುತ್ತದೆ ಎಂಬುದನ್ನು ಹೇಳಲು ಅಸಾಧ್ಯ. ಕ್ಯಾನ್ಸರ್ ರೋಗದಲ್ಲಿ ಅನೇಕ ರೀತಿಯ ವಿಧಗಳಿದ್ದು, ನಾಲ್ಕು ಹಂತಗಳಲ್ಲಿರುತ್ತದೆ. ಈ ರೋಗ ಮೊದಲನೆಯ ಹಂತ ಮತ್ತು ಎರಡನೆಯ ಹಂತದಲ್ಲಿದ್ದರೆ ಅದನ್ನು ಆಪರೇಷನ್ ಅಥವಾ ಔಷಧಿಗಳ ಮೂಲಕ ಸರಿಪಡಿಸಬಹುದು ಎಂದು ಡಾಕ್ಟರ್ ಹೇಳುತ್ತಾರೆ. ಕ್ಯಾನ್ಸರ್ ರೋಗಿಗಳಿಗೆ ಕಿಮೋಥೆರಪಿ (Chemotherapy) ಎಂಬ ಚಿಕಿತ್ಸೆಯನ್ನು ನೀಡುತ್ತಾರೆ ಎಂಬುದನ್ನು ನೀವೆಲ್ಲರೂ ತಿಳಿದಿರಬಹುದು. ಆದರೆ ಇದು ಮಾನವ ದೇಹದಲ್ಲಿ ಹೇಗೆ ಕೆಲಸ ಮಾಡುತ್ತದೆ ಎನ್ನುವುದರ ಬಗ್ಗೆ ಇಲ್ಲಿ ವಿವರ ನೀಡಲಾಗಿದೆ.
ಕಿಮೋಥೆರಪಿ ಎಂದರೆ ಮಾನವ ದೇಹದಲ್ಲಿ ಉಂಟಾಗುವ ಕ್ಯಾನ್ಸರ್ ಜೀವಕೋಶವನ್ನು ನಾಶಪಡಿಸಲು ಬಳಸುವ ಒಂದು ಔಷಧಿಯಾಗಿದೆ. ಈ ಚಿಕಿತ್ಸೆಯನ್ನು ನೀಡುವುದರಿಂದ ದೇಹದಲ್ಲಿ ಕ್ಯಾನ್ಸರ್ ಕೋಶ ಬೆಳೆಯದಂತೆ ಹಾಗೂ ಕೋಶ ಬೆಳೆದು ವಿಭಜನೆಯಾಗದಂತೆ ಕಿಮೋಥೆರಪಿ ತಡೆಗಟ್ಟುತ್ತದೆ. ಇದು ರಕ್ತದ ಮುಖಾಂತರ ಮಾನವ ದೇಹಕ್ಕೆ ಹೊಕ್ಕು, ದೇಹದ ಎಲ್ಲಾ ಭಾಗವನ್ನು ಆವರಿಸಿಕೊಳ್ಳುತ್ತದೆ. ಕಿಮೋಥೆರಪಿಯಲ್ಲಿ ಅನೇಕ ರೀತಿಯ ವಿಧಗಳಿವೆ. ಈ ಚಿಕಿತ್ಸೆಗೆ ಬಳಸುವ ಔಷಧಿಗಳು ಪವರ್‌ಫುಲ್ ಆಗಿದ್ದು ಕ್ಯಾನ್ಸರ್ ಕೋಶಗಳ ವಿರುದ್ಧ ಹೋರಾಡುತ್ತದೆ. ಕ್ಯಾನ್ಸರ್ ಜೀವಕೋಶಗಳು ಅತಿವೇಗವಾಗಿ ಮಾನವ ದೇಹದಲ್ಲಿ ಹರಡಿಕೊಳ್ಳುತ್ತದೆ. ಆದ್ದರಿಂದ ಕಿಮೋಥೆರಪಿ ಇದನ್ನು ತಡೆಗಟ್ಟುವಲ್ಲಿ ಅತ್ಯಂತ ಸಹಕಾರಿಯಾಗಿದೆ.
Advertisement
Advertisement
ಕಿಮೋಥೆರಪಿ ಚಿಕಿತ್ಸೆ ರಕ್ತದ ಮೂಲಕ ಇಡೀ ದೇಹವನ್ನು ಆವರಸಿಕೊಳ್ಳುವ ಸಂದರ್ಭ ಸಾಮಾನ್ಯ ಜೀವಕೋಶಗಳಿಗೆ ಹಾನಿಯುಂಟಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇದರಿಂದಾಗಿ ಕ್ಯಾನ್ಸರ್ ರೋಗಿ ಹಲವು ಅಡ್ಡ ಪರಿಣಾಮವನ್ನು ಎದರಿಸುತ್ತಾರೆ. ಅಂದರೆ ಕಿಮೋಥೆರಪಿ ಚಿಕಿತ್ಸೆಗೆ ಒಳಗಾಗುವ ರೋಗಿಯ ತಲೆ ಕೂದಲು ಸಂಪೂರ್ಣವಾಗಿ ಉದುರುತ್ತದೆ. ಅಲ್ಲದೇ ವಾಕರಿಕೆ, ತಲೆಸುತ್ತು, ಸುಸ್ತು ಮುಂತಾದ ಅಡ್ಡಪರಿಣಾಮಗಳನ್ನು ಎದುರಿಸುತ್ತಾರೆ. ಈ ಥೆರಪಿಯನ್ನು ಕೆಲವು ಡಾಕ್ಟರ್‌ಗಳು ಆಪರೇಷನ್ ಬಳಿಕ ಮಾಡುತ್ತಾರೆ. ಇನ್ನೂ ಕೆಲವರು ಆಪರೇಷನ್‌ಗೂ ಮುನ್ನ ಚಿಕಿತ್ಸೆ ನೀಡಿ ಕ್ಯಾನ್ಸರ್ ಕೋಶಗಳು ಹರಡದಂತೆ ತಡೆಗಟ್ಟಿ ನಂತರ ಆಪರೇಷನ್‌ಗೆ ಮುಂದಾಗುತ್ತಾರೆ.
Advertisement
ಕಿಮೋಥೆರಪಿ ಚಿಕಿತ್ಸೆಯನ್ನು ಎರಡು ರೀತಿಯಲ್ಲಿ ನೀಡಬಹುದಾಗಿದೆ. ಮೊದಲನೆಯದು ಇಂಜೆಕ್ಷನ್ ರೂಪದಲ್ಲಿ ಇದನ್ನು ನೀಡಬಹುದು. ಪ್ರಸ್ತುತ ಇದು ಮಾತ್ರೆಗಳ ರೂಪದಲ್ಲಿ ಕೂಡಾ ಲಭ್ಯವಿದೆ. ಕ್ಯಾನ್ಸರ್ ರೋಗಕ್ಕೆ ಮಾತ್ರವಲ್ಲದೇ ಬೇರೆ ರೋಗಗಳಿಗೂ ಈ ಕಿಮೋಥೆರಪಿ ಚಿಕಿತ್ಸೆಯನ್ನು ನೀಡಲಾಗುತ್ತದೆ. ಕಿಮೋಥೆರಪಿ ಎಂಬುದು ಸುಮಾರು 40-50 ವರ್ಷಗಳ ಹಿಂದೆ ಆವಿಷ್ಕಾರವಾಗಿರುವಂತಹ ಚಿಕಿತ್ಸೆಯಾಗಿದೆ.
Advertisement
ಕಿಮೋಥೆರಪಿ ಎಂಬುದು ಕೇವಲ ಒಂದು ಡ್ರಗ್ಸ್ ಅನ್ನು ಒಳಗೊಂಡಿಲ್ಲ. ಇದು ಸುಮಾರು ಎರಡರಿಂದ ಮೂರು ಹೈ ಡೋಸೇಜ್ ಡ್ರಗ್ಸ್ ಅನ್ನು ಒಳಗೊಂಡಿದ್ದು, ಮಾನವ ದೇಹದಲ್ಲಿ ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಇದನ್ನು ನಾಲ್ಕನೇ ಹಂತದಲ್ಲಿರುವ ಕ್ಯಾನ್ಸರ್ ರೋಗಿಗಳಿಗೆ ಅಗತ್ಯವಾಗಿ ಕೊಡಲಾಗುತ್ತದೆ. ಕಿಮೋಥೆರಪಿ ಚಿಕಿತ್ಸೆ ಸುಮಾರು 90% ಕ್ಯಾನ್ಸರ್ ರೋಗವನ್ನು ಗುಣಪಡಿಸುತ್ತದೆ. ಕಿಡ್ನಿ ಕ್ಯಾನ್ಸರ್ ಮತ್ತು ಚರ್ಮ ಕ್ಯಾನ್ಸರ್‌ಗಳಂತಹ ರೋಗಗಳಿಗೆ ಇದು ಹೆಚ್ಚು ಪರಿಣಾಮಕಾರಿಯಾಗುವುದಿಲ್ಲ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಸ್ತನ ಕ್ಯಾನ್ಸರ್, ಧ್ವನಿಪೆಟ್ಟಿಗೆ ಕ್ಯಾನ್ಸರ್‌ನಂತಹ ಕೆಲವು ಕ್ಯಾನ್ಸರ್ ರೋಗಗಳಿಗೆ ಕಿಮೋಥೆರಪಿ ಚಿಕಿತ್ಸೆ ನೀಡಿದರೆ ಆಪರೇಷನ್ ಮಾಡುವ ಅಗತ್ಯವಿಲ್ಲ. ಇದರಲ್ಲಿಯೇ ಕ್ಯಾನ್ಸರ್ ರೋಗ ವಾಸಿಯಾಗುತ್ತದೆ. ಕಿಮೋಥೆರಪಿಯೊಂದಿಗೆ ರೇಡಿಯೇಷನ್ ಚಿಕಿತ್ಸೆಯನ್ನು ಕೊಡುವುದರಿಂದ ಕೆಲವು ಕ್ಯಾನ್ಸರ್ ರೋಗಿಗಳಿಗೆ ಆಪರೇಷನ್ ಮಾಡುವುದನ್ನು ತಪ್ಪಿಸಬಹುದಾಗಿದೆ.
ಕಿಮೋಥೆರಪಿ ಚಿಕಿತ್ಸೆ ನೀಡುವ ಸಂದರ್ಭದಲ್ಲಿ ಇನ್ಫೆಕ್ಷನ್ ಆಗದ ರೀತಿಯಲ್ಲಿ ಎಚ್ಚರವಹಿಸುವುದು ತುಂಬಾ ಅಗತ್ಯವಾಗಿರುತ್ತದೆ. ಈ ರೀತಿಯಾದಲ್ಲಿ ರೋಗಿ ತುಂಬಾ ಸೀರಿಯಸ್ ಆಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಈ ಸಮಯದಲ್ಲಿ ತುಂಬಾ ಜಾಗೃತರಾಗಿರಬೇಕು. ಕಿಮೋಥೆರಪಿ ಚಿಕಿತ್ಸೆಯಿಂದ ಬಿಳಿ ರಕ್ತಕಣ, ಕೆಂಪು ರಕ್ತಕಣ ಅಥವಾ ಪ್ಲೇಟ್‌ಲೆಟ್ ಕೌಂಟ್ ಕೂಡಾ ಕಡಿಮೆಯಾಗುವ ಸಂಭವವಿದೆ. ಕಿಮೋಥೆರಪಿ ಚಿಕಿತ್ಸೆ ಎಂಬುದು ದಿನಾ ನೀಡುವ ಚಿಕಿತ್ಸೆಯಲ್ಲ. ಇದನ್ನು ಎರಡರಿಂದ ಮೂರು ವಾರಗಳಿಗೊಮ್ಮೆ ನೀಡಲಾಗುತ್ತದೆ. ಮಾತ್ರೆಗಳು ಕೂಡಾ ಎರಡು ವಾರಗಳಿಗೊಮ್ಮೆ ನೀಡಲಾಗುತ್ತದೆ.
ಸುಮಾರು 30ರಿಂದ 40%ನಷ್ಟು ಕ್ಯಾನ್ಸರ್ ರೋಗಗಳು ಕೇವಲ ಕಿಮೋಥೆರಪಿ ಚಿಕಿತ್ಸೆಯಿಂದ ಗುಣವಾದರೆ 60ರಿಂದ 70%ನಷ್ಟು ಕ್ಯಾನ್ಸರ್ ರೋಗಗಳು ಆಪರೇಷನ್, ಕಿಮೋಥೆರಪಿ ಮತ್ತು ರೇಡೀಯೇಷನ್ ಚಿಕಿತ್ಸೆಯನ್ನು ನೀಡುವ ಮೂಲಕ ಗುಣಪಡಿಸಬಹುದು. ಕಿಮೋಥೆರಪಿ ಎಂದಾಗ ಜನರು ಭಯಬೀಳುವುದು ಜಾಸ್ತಿ. ಕಿಮೋಥೆರಪಿ ಚಿಕಿತ್ಸೆಗೆ ಯಾರೂ ಭಯಪಡಬೇಕಾದ ಅಗತ್ಯವಿಲ್ಲ. ಇದು ಕ್ಯಾನ್ಸರ್ ರೋಗವನ್ನು ಗುಣಪಡಿಸುತ್ತದೆ ಮತ್ತು ಕಿಮೋಥೆರಪಿ ಚಿಕಿತ್ಸೆಯಿಂದ ಉಂಟಾಗುವ ಸೈಡ್ ಎಫೆಕ್ಟ್ಸ್‌ಗೂ ಚಿಕಿತ್ಸೆಗಳು ಆಸ್ಪತ್ರೆಗಳಲ್ಲಿ ಲಭ್ಯವಿದೆ. ಆದ್ದರಿಂದ ಭಯಪಡದೇ ಚಿಕಿತ್ಸೆಯನ್ನು ಪಡೆದುಕೊಂಡು ಕಾಯಿಲೆಗಳನ್ನು ಬಗೆಹರಿಸಿಕೊಳ್ಳುವುದು ಉತ್ತಮ. ಇದನ್ನೂ ಓದಿ: ಅಮೆರಿಕದ ಟಾಪ್ ಸೀಕ್ರೆಟ್ ಪ್ಲೇಸ್ – ಅಂಥಾದ್ದೇನಿದೆ ಏರಿಯಾ 51ರಲ್ಲಿ?
Web Stories