‌Congress MLA; ಬೇಲೆಕೇರಿ ಅದಿರು ನಾಪತ್ತೆ ಕೇಸ್‌ನಲ್ಲಿ ಸತೀಶ್ ಸೈಲ್ ದೋಷಿ – ಏನಿದು ಪ್ರಕರಣ?

Public TV
3 Min Read
satish sail

ಕಾರವಾರ: ರಾಜ್ಯದಲ್ಲಿ 2010 ರಲ್ಲಿ ನಡೆದ ಬೇಲೆಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಕಾರವಾರದ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ (Satish Sail) ಆರೋಪಿ ಎಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ.

ನಾಳೆಗೆ ಶಿಕ್ಷೆ ಪ್ರಮಾಣವನ್ನೂ ಕಾಯ್ದಿರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕೂಡಲೇ ಶಾಸಕ ಸತೀಶ್ ಸೈಲ್ ಅವರನ್ನು ವಶಕ್ಕೆ ಪಡೆಯುವಂತೆ ಕೋರ್ಟ್‌ನಿಂದ ಸೂಚನೆ ನೀಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 6 ಪ್ರಕರಣಗಳಲ್ಲಿ ಇಂದು ಅಂತಿಮ ಆದೇಶ ಹೊರಡಿಸಲಾಗಿದೆ.

ಸಿಬಿಐನಿಂದ ಬೇಲೆಕೇರಿ ಅದಿರು ನಾಪತ್ತೆಗೆ ಸಂಬಂಧಿಸಿದಂತೆ ದಾಖಲಾದ 6 ಪ್ರಕರಣಗಳ ಬಗ್ಗೆ ತನಿಖೆ ನಡೆಸಿ ಚಾರ್ಜ್‌ಶೀಟ್ ಸಲ್ಲಿಕೆ ಮಾಡಲಾಗಿತ್ತು. ನ್ಯಾಯಾಧೀಶರಾದ ಸಂತೋಷ್ ಗಜಾನನ ಭಟ್ ಅವರು ವಾದ ಪ್ರತಿವಾದ ಆಲಿಸಿ ಅಂತಿಮ ಆದೇಶವನ್ನು ಹೊರಡಿಸಿದ್ದಾರೆ.

SATISH SAIL

ಎಷ್ಟು ಆರೋಪಿಗಳು? ಎಷ್ಟು ಪ್ರಕರಣ?
ಶಾಸಕ ಸೈಲ್‌ರನ್ನು ಮೊದಲ ಪ್ರಕರಣದಲ್ಲಿ ದೋಷಿ ಎಂದು ತೀರ್ಪು ನೀಡಲಾಗಿದೆ. ಈ ಪ್ರಕರಣದಲ್ಲಿ A1 ಆರೋಪಿ ಮಹೇಶ್ ಬಿಳಿಯಾ, A2 ಆರೋಪಿ ಸತೀಶ್ ಸೈಲ್, A3 ಇವರಿಗೆ ಸೇರಿದ ಕಂಪನಿ.

ಎರಡನೇ ಪ್ರಕರಣದಲ್ಲಿ A1 ಆರೋಪಿ ಮಹೇಶ್ ಬಿಳಿಯಾ, A2 ಚೇತನ್ ಷಾ, A3 ಆರೋಪಿ ಸತೀಶ್ ಸೈಲ್.

ಮೂರನೇ ಪ್ರಕರಣದಲ್ಲಿ A1 ಮಹೇಶ್ ಬಿಳಿಯ, A2 ಆರೋಪಿ ಸೋಮಶೇಖರ್, A3 ಆರೋಪಿ ಸತೀಶ್ ಸೈಲ್.

ನಾಲ್ಕನೇ ಪ್ರಕರಣದಲ್ಲಿ A1 ಮಹೇಶ್ ಬಿಳಿಯೇ, A2 ಸ್ವಸ್ತಿಕ್ ನಾಗರಾಜ್, A3 KVN ಗೋವಿಂದರಾಜು, A4 ಸತೀಶ್ ಸೈಲ್.

ಐದನೇ ಪ್ರಕರಣದಲ್ಲಿ A1 ಮಹೇಶ್ ಬಿಳಿಯೇ, A2 ಮಹೇಶ್ ಕುಮಾರ್ ಕೆ, A3 ಸತೀಶ್ ಸೈಲ್.

ಆರನೇ ಪ್ರಕರಣದಲ್ಲಿ A1 ಮಹೇಶ್ ಬಿಳಿಯೇ, A2 ಪ್ರೇಮಚಂದ್ ಗರ್ಗ, A3 ಸುಶೀಲ್ ಕುಮಾರ್ ವಲೇಚ, A4 ಸತೀಶ್ ಸೈಲ್, A5 ರಾಜ್ ಕುಮಾರ್.

ಶಾಸಕ ಸತೀಶ್ ಸೈಲ್, ಅರಣ್ಯ ಸಂರಕ್ಷಣಾಧಿಕಾರಿ ಆಗಿದ್ದ ಮಹೇಶ್ ಬಿಳೆಯಿ, ಶಾಸಕ ಸತೀಶ್ ಸೇರಿ ಎಲ್ಲಾ ಆರೋಪಿಗಳು ದೋಷಿಗಳು ಎಂದು ಕೋರ್ಟ್ ತೀರ್ಪು ನೀಡಿದೆ.

congress flag

ಸೈಲ್ ಮೇಲಿದ್ದ ಪ್ರಕರಣ ಏನು?
ಶಾಸಕ ಸತೀಶ್ ಸೈಲ್ ಮಾಲೀಕತ್ವದ ಕಂಪನಿ ವಿರುದ್ಧ 2013ರ ಸೆ.13 ರಂದು ಸಿಬಿಐ ಪ್ರಥಮ ಮಾಹಿತಿ ವರದಿ ದಾಖಲಿಸಿತ್ತು. ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ 2009ರ ಆರಂಭದಿಂದ 2010 ರ ಮೇ ತಿಂಗಳ ನಡುವೆ ರಾಜ್ಯದಲ್ಲಿ ನಡೆದ ಅಕ್ರಮ ಗಣಿಗಾರಿಕೆ ಹಾಗೂ ಅದಿರು ಸಾಗಣೆ ಕುರಿತು ತನಿಖೆ ಆರಂಭಿಸಲಾಗಿತ್ತು.

ಈ ಸಮಯದಲ್ಲೇ ಸಿಬಿಐ ದಾಖಲಿಸಿದ್ದ ಐದು ಪ್ರತ್ಯೇಕ ಎಫ್‌ಐಆರ್‌ಗಳ ಪೈಕಿ ಶಾಸಕ ಸತೀಶ್ ಸೈಲ್ ಮಾಲೀಕತ್ವ ಹೊಂದಿರುವ ‘ಮಲ್ಲಿಕಾರ್ಜುನ ಶಿಪ್ಪಿಂಗ್ ಪ್ರೈ. ಲಿ.’ ಪ್ರಮುಖ ಸ್ಥಾನ ಪಡೆದುಕೊಂಡಿದ್ದು. ಆರ್‌ಸಿ 16 ‘ಎ’ ಹೆಸರಿನಲ್ಲಿ ಸಿಬಿಐ ದಾಖಲಿಸಿದ್ದ ಎಫ್‌ಐಆರ್, ‘ಎಂಟು ತಿಂಗಳ ಅವಧಿಯಲ್ಲಿ ಸೈಲ್ ಮಾಲೀಕತ್ವದ ಕಂಪನಿ ಸುಮಾರು 7.23 ಲಕ್ಷ ಟನ್ ಮೆಟ್ರಿಕ್ ಅದಿರನ್ನು ಬೇಲೆಕೇರಿ ಮೂಲಕ ವಿದೇಶಕ್ಕೆ ರಫ್ತು ಮಾಡಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ’ ಎಂದು ತಿಳಿಸಿತ್ತು.

2009ರಿಂದ 2010ರ ಮೇ ತಿಂಗಳವರೆಗೆ ಬೇಲೆಕೇರಿ ಬಂದರಿನ ಮೂಲಕ ಸುಮಾರು 88.06 ಲಕ್ಷ ಮೆಟ್ರಿಕ್ ಟನ್ ಅದಿರು, 73 ರಫ್ತು ಕಂಪನಿಗಳ ಮೂಲಕ ವಿದೇಶಕ್ಕೆ ಹೋಗಿತ್ತು ಎಂಬುದನ್ನು ಸಿಇಸಿ ವರದಿಯಲ್ಲಿ ಪಟ್ಟಿ ಮಾಡಲಾಗಿತ್ತು.

ಇಷ್ಟು ಪ್ರಮಾಣ ಅದಿರುವು ರಫ್ತಾಗಿದ್ದರೂ, ಕೇವಲ 38.22 ಲಕ್ಷ ಮೆಟ್ರಿಕ್ ಟನ್‌ನಷ್ಟು ಅದಿರಿಗೆ ಮಾತ್ರವೇ ಅದಿರು ಕಳುಹಿಸಲು ಪರವಾನಗಿ (ಎಂಡಿಪಿ)ಯನ್ನು ಪಡೆಯಲಾಗಿತ್ತು. ಒಟ್ಟಾರೆ ಸುಮಾರು 50 ಲಕ್ಷ ಮೆಟ್ರಿಕ್‌ನಷ್ಟು ಅದಿರು ಅಕ್ರಮವಾಗಿ ವಿದೇಶಗಳಿಗೆ ಹೋಗಿತ್ತು ಎಂಬುದನ್ನು ತನಿಖೆ ವೇಳೆ ಕಂಡುಕೊಳ್ಳಲಾಗಿತ್ತು.

ಹೀಗೆ ರಫ್ತಾಗಿರುವ ಅದಿರನಲ್ಲಿ 7.23 ಲಕ್ಷ ಮೆಟ್ರಿಕ್ ಟನ್ ಅದಿರನ್ನು ಕಳುಹಿಸಿರುವುದು ಸತೀಶ್ ಸೈಲ್ ಒಡೆತನದ ಮಲ್ಲಿಕಾರ್ಜುನ ಶಿಪ್ಪಿಂಗ್ ಪ್ರೈ. ಲಿ. ಎಂಬುದು ಆರೋಪ. ಜುಂಜುನ್‌ಬೈಲ್ ಸ್ಟಾಕ್‌ಯಾರ್ಡ್ ಸೇರಿದಂತೆ ಇತರೆ ಅದಿರು ಸಾಗಣೆದಾರರ ಜತೆ ಮಲ್ಲಿಕಾರ್ಜುನ ಶಿಪ್ಪಿಂಗ್ ಕಂಪನಿ ನಿಕಟ ವ್ಯವಹಾರ ನಡೆಸಿತ್ತು ಎಂಬುದಕ್ಕೆ ಸಿಬಿಐ ತನಿಖಾ ತಂಡ ದಾಖಲೆಗಳನ್ನು ಕಲೆ ಹಾಕಿ ವರದಿ ಸಲ್ಲಿಸಿತ್ತು.

ಶಾಸಕರಾಗಿದ್ದಾಗಲೇ ಸೈಲ್ ಎರಡನೇ ಬಾರಿ ಬಂಧನ!
ಅದಿರು ಅಕ್ರಮ ರಫ್ತು ಪ್ರಕರಣದಲ್ಲಿ ಸಿಬಿಐ 2012 ರ ಸೆ. 16 ರಂದು ಕಾರವಾರ- ಅಂಕೋಲಾ ಶಾಸಕ ಸತೀಶ್ ಸೈಲ್ ಮನೆಯ ಮೇಲೆ ದಾಳಿ ಮಾಡಿ ಮಹತ್ವದ ದಾಖಲೆ ವಶಪಡಿಸಿಕೊಂಡಿತ್ತು.

ಇದರ ನಂತರ 2013ರ ಸೆ.20 ರಂದು ಸೈಲ್ ಅವರನ್ನು ಬಂಧಿಸಿತ್ತು. ಇದರಿಂದಾಗಿ ಸೈಲ್ ವರ್ಷಕ್ಕೂ ಅಧಿಕ ಕಾಲ ಜೈಲು ವಾಸ ಅನುಭವಿಸಬೇಕಾಯಿತು. ಅದರ ನಂತರ 2014ರ ಡಿ.16 ಕ್ಕೆ ಜಾಮೀನು ಪಡೆದು ಹೊರಬಂದಿದ್ದರು.

ನಂತರ ಕಾಂಗ್ರೆಸ್ ಪಕ್ಷದಿಂದ ಚುನಾವಣೆಯಲ್ಲಿ ಸ್ಪರ್ಧಿಸಿ ಬಿಜೆಪಿಯ ರೂಪಾಲಿ ನಾಯ್ಕ ವಿರುದ್ಧ ಸೋತಿದ್ದರು. ಈ ಬಾರಿಯ 2023 ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಪಡೆದು ಕಾರವಾರ ವಿಧಾನಸಭಾ ಕ್ಷೇತ್ರದಿಂದ ಗೆಲುವು ಕಂಡಿದ್ದರು.

Share This Article