ಲೀಗ್‌ ಹಂತದಲ್ಲೇ ಹಲವು ಸಮಸ್ಯೆ – ಈ ಸಲ ಕಪ್‌ ಗೆಲ್ಲುತ್ತಾ RCB?

Public TV
2 Min Read
RCB Virat Kohli

ಬೆಂಗಳೂರು: ಪ್ರತಿಬಾರಿ ಐಪಿಎಲ್‌ ಟೂರ್ನಿ (IPL 2023) ಆರಂಭವಾಗುತ್ತಿದ್ದಂತೆ ʻಈ ಸಲ ಕಪ್‌ ನಮ್ದೆʼ ಅಂತಾ ಉತ್ಸಾಹದೊಂದಿಗೆ ಕಣಕ್ಕಿಳಿಯುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡಕ್ಕೆ ಈ ಬಾರಿ ಹಲವು ಸಮಸ್ಯೆಗಳು ಎದುರಾಗಿವೆ.

ಈ ಆವೃತ್ತಿಯಲ್ಲಿ ಫಾಫ್‌ ಡು ಪ್ಲೆಸಿಸ್‌ (Faf du Plessis) ನಾಯಕತ್ವದ ಆರ್‌ಸಿಬಿ ತಂಡ 6 ಪಂದ್ಯಗಳ ಪೈಕಿ 3 ರಲ್ಲಿ ಜಯ ಸಾಧಿಸಿ, 6 ಅಂಕಗಳೊಂದಿಗೆ 5ನೇ ಸ್ಥಾನ ಪಡೆದುಕೊಂಡಿದೆ. ಈ ಟೂರ್ನಿಯಲ್ಲಿ ಆರ್‌ಸಿಬಿಗೆ ಇನ್ನೂ 8 ಪಂದ್ಯಗಳು ಬಾಕಿ ಇವೆ. ಈ 8 ಪಂದ್ಯಗಳ ಪೈಕಿ 5ರಲ್ಲಿ ಗೆದ್ದರೆ ಪ್ಲೇ ಆಫ್‌ ಕನಸು ಬಹುತೇಕ ಜೀವಂತವಾಗಲಿದೆ. ಈ ನಿಟ್ಟಿನಲ್ಲಿ ಫಾಫ್‌ ಡು ಪ್ಲೆಸಿಸ್‌ ನಾಯಕತ್ವದ ಆರ್‌ಸಿಬಿ ಕಠಿಣ ಹೋರಾಟ ನಡೆಸಲಿದೆ. ಈ ನಡುವೆ ಆರ್‌ಸಿಬಿಗೆ ಗಾಯಾಳುಗಳದ್ದೇ ಸಮಸ್ಯೆ ಹೆಚ್ಚಾಗಿದೆ.

Royal Challengers Bangalore

ಕಳೆದ ಬಾರಿ ಪ್ಲೇ ಆಫ್‌ ಪಂದ್ಯದಲ್ಲಿ ಒಂದು ಶತಕ ಹಾಗೂ ಅರ್ಧಶತಕ ಗಳಿಸಿದ್ದ ರಜತ್ ಪಾಟಿದಾರ್‌ ಈ ಬಾರಿ ಒಂದೇ ಒಂದು ಪಂದ್ಯವಾಡದೆ ಟೂರ್ನಿಯಿಂದ ಹೊರ ಬಿದ್ದಿದ್ದಾರೆ. ಜೋಶ್‌ ಹೇಝಲ್‌ವುಡ್‌ ತಂಡದಲ್ಲಿದ್ದರೂ ಸಂಪೂರ್ಣ ಫಿಟ್‌ ಇಲ್ಲದ ಕಾರಣ ಆಯ್ಕೆಗೆ ಲಭ್ಯರಾಗುತ್ತಿಲ್ಲ. ಇನ್ನೂ ಬೆಂಗಳೂರಿನಲ್ಲಿ ಮುಂಬೈ ಇಂಡಿಯನ್ಸ್ (Mumbai Indians) ವಿರುದ್ಧ ನಡೆದ ಮೊದಲ ಪಂದ್ಯದಲ್ಲೇ ಫೀಲ್ಡಿಂಗ್ ವೇಳೆ ಭುಜದ ಗಾಯಕ್ಕೆ ತುತ್ತಾದ ಇಂಗ್ಲೆಂಡ್‌ ವೇಗಿ ರೀಸ್‌ ಟಾಪ್ಲೀ ಟೂರ್ನಿಯಿಂದ ಈಗಾಗಲೇ ಹೊರ ಬಿದ್ದಿದ್ದಾರೆ. ಇದೀಗ ನಾಯಕ ಫಾಫ್‌ ಡು ಪ್ಲೆಸಿಸ್‌ಗೂ ಗಾಯದ ಭೀತಿ ಎದುರಾಗಿದೆ.

Mohammed Siraj

ಕಳೆದ ಆವೃತ್ತಿಯಂತೆ ಈ ಬಾರಿಯೂ ಆರ್‌ಸಿಬಿ ತಂಡದ ಪರ ಇನಿಂಗ್ಸ್ ಆರಂಭಿಸುತ್ತಿರುವ ವಿರಾಟ್‌ ಕೊಹ್ಲಿ (Virat Kohli) ಹಾಗೂ ಫಾಫ್‌ ಡು ಪ್ಲೆಸಿಸ್ (Faf du Plessis) ಅದ್ಭುತ ಪ್ರದರ್ಶನ ತೋರುತ್ತಿದ್ದಾರೆ. ಈ ಇಬ್ಬರೂ ಆಡಿದ 6 ಪಂದ್ಯಗಳಿಂದ ಮುರಿಯದ ಮೊದಲ ವಿಕೆಟ್‌ಗೆ 473 ರನ್‌ಗಳ ಜೊತೆಯಾಟ ಆಡಿದ್ದಾರೆ. ಪ್ಲೆಸಿಸ್‌ 4 ಅರ್ಧಶತಕಗಳೊಂದಿಗೆ 343 ರನ್‌ ಗಳಿಸಿ ಆರೆಂಜ್‌ ಕ್ಯಾಪ್‌ ಹೊಂದಿದ್ದರೆ, ವಿರಾಟ್‌ ಕೊಹ್ಲಿ 6 ಇನಿಂಗ್ಸ್‌ಗಳಿಂದ 4 ಅರ್ಧಶತಕಗಳೊಂದಿಗೆ 279 ರನ್‌ಗಳನ್ನು ಗಳಿಸಿ 3ನೇ ಸ್ಥಾನದಲ್ಲಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ನಾಯಕ ಡೇವಿಡ್‌ ವಾರ್ನರ್‌ 6 ಪಂದ್ಯಗಳಿಂದ 285 ರನ್‌ ಗಳಿಸಿ 2ನೇ ಸ್ಥಾನದಲ್ಲಿದ್ದಾರೆ.

Virat Kohli 1

ಆರ್‌ಸಿಬಿ ತಂಡಕ್ಕೆ ಇದೀಗ ಗಾಯಾಳುಗಳೊಂದಿಗೆ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮ್ಯಾನ್‌ಗಳ ಸಮಸ್ಯೆಯೂ ಎದುರಾಗಿದೆ. ಆರಂಭಿಕರಾದ ವಿರಾಟ್‌ ಕೊಹ್ಲಿ ಹಾಗೂ ಡುಪ್ಲೆಸಿಸ್‌ ಅಬ್ಬರಿಸಿದ್ದು ಬಿಟ್ಟರೆ, ಮಧ್ಯಮ ಕ್ರಮಾಂಕದಲ್ಲಿ ಬಂದ ಗ್ಲೇನ್‌ ಮ್ಯಾಕ್ಸ್‌ವೆಲ್‌ (Glenn Maxwell), ದಿನೇಶ್‌ ಕಾರ್ತಿಕ್‌, ಮಹಿಪಾಲ್‌ ಲೋಮ್ರೋರ್‌ ಸೇರಿದಂತೆ ಪ್ರಮುಖ ಬ್ಯಾಟ್ಸ್‌ಮ್ಯಾನ್‌ಗಳು ವಿಫಲರಾಗಿದ್ದಾರೆ. ಗ್ಲೇನ್‌ ಮ್ಯಾಕ್ಸ್‌ವೆಲ್‌ ಲಖನೌ ಸೂಪರ್‌ ಜೈಂಟ್ಸ್‌ ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್ ವಿರುದ್ಧದ ಪಂದ್ಯಗಳಲ್ಲಿ ಕ್ರಮವಾಗಿ 59 ರನ್‌ ಹಾಗೂ 76 ರನ್‌ ಗಳಿಸಿದ್ದು ಬಿಟ್ಟರೆ ಉಳಿದ ಪಂದ್ಯಗಳಲ್ಲಿ ಫ್ಲಾಪ್‌ ಪ್ರದರ್ಶನ ನೀಡಿದ್ದಾರೆ. ಗುರುವಾರ ಪಂಜಾಬ್‌ ಕಿಂಗ್ಸ್‌ ವಿರುದ್ಧ ನಡೆದ ಪಂದ್ಯದಲ್ಲೂ ಒಂದೇ ಎಸೆತದಲ್ಲಿ ಡಕೌಟ್‌ ಆಗಿದ್ದಾರೆ. ಇದರಿಂದ ಆರ್‌ಸಿಬಿ ಮುಂದಿನ ಪಂದ್ಯಗಳಲ್ಲಿ ಆರಂಭಿಕರು ಔಟಾದರೂ ಅಧಿಕ ರನ್‌ ಗಳಿಸುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕಿದೆ.

Share This Article