ಅನಿರುದ್ಧ (Aniruddha) ನಿರ್ವಹಿಸುತ್ತಿದ್ದ ಆರ್ಯವರ್ಧನ್ (Aryavardhan) ಪಾತ್ರವನ್ನು ಸಾಯಿಸಲ್ಲ, ಬೇರೊಬ್ಬ ಕಲಾವಿದರನ್ನು ಆ ಪಾತ್ರಕ್ಕೆ ತರುವುದಿಲ್ಲ ಎಂದು ಜೊತೆ ಜೊತೆಯಲಿ (Jote Jotheyali) ಧಾರಾವಾಹಿಯ ನಿರ್ಮಾಪಕರು ಹೇಳಿದ್ದಾರೆ ಎನ್ನುವ ಮಾತು ಕಿರುತೆರೆ ಲೋಕದಲ್ಲಿ ಹರಿದಾಡುತ್ತಿತ್ತು. ಆದರೆ, ಎರಡೂ ಆಗಿವೆ, ಎರಡೂ ಆಗಿಲ್ಲ ಎನ್ನುವಂತೆ ಕಥೆಯಲ್ಲಿ ಬದಲಾವಣೆ ಮಾಡಿಕೊಂಡಿದೆ ಧಾರಾವಾಹಿ ತಂಡ. ಹಾಗಾಗಿ ಆರ್ಯವರ್ಧನ್ ಪಾತ್ರವನ್ನೂ ಸಾಯಿಸಿದೇ, ಆ ಪಾತ್ರಕ್ಕೆ ಅಂತ ಕಲಾವಿದನನ್ನೂ ಆಯ್ಕೆ ಮಾಡಿಕೊಳ್ಳದೇ ಜಾಣ ನಡೆ ಪ್ರದರ್ಶಿಸಿದೆ.
ಆರ್ಯವರ್ಧನ್ ಪಾತ್ರಕ್ಕೆ ಕಾರು ಅಪಘಾತ ಮಾಡಿಸುವ ಮೂಲಕ ಪಾತ್ರದ ಮುಖವನ್ನು ಅಪ್ಪಚ್ಚಿ ಮಾಡಿ, ಆ ಮುಖವನ್ನು ಸರಿ ಮಾಡಲು ಪ್ಲ್ಯಾಸ್ಟಿಕ್ ಸರ್ಜರಿಗಿಂತಲೂ ಮತ್ತೊಂದು ಹೆಜ್ಜೆ ಮುಂದೆ ಹೋಗಿ, ಫೇಸ್ ಜೋಡಿಸುವಂತಹ ಶಸ್ತ್ರ ಚಿಕಿತ್ಸೆಗೆ ಮುಂದಾಗಿ, ಆರ್ಯವರ್ಧನ್ ದೇಹಕ್ಕೆ ಹರೀಶ್ ರಾಜ್ (Harish Raj) ಮುಖ ಸೇರಿಸುವ ಮೂಲಕ ಹೊಸ ಆರ್ಯವರ್ಧನ್ ಇದೀಗ ಕಥೆಯೊಳಗೆ ಪ್ರವೇಶ ಮಾಡಿ, ಜನರೆದುರೂ ನಿಂತಿದ್ದಾನೆ. ಅಲ್ಲಿಗೆ ಕೊಟ್ಟ ಮಾತಿಗೆ ನಿರ್ಮಾಪಕರು ತಪ್ಪದಂತೆ ಆಗಿದೆ. ಇದನ್ನೂ ಓದಿ: ಸೋನು ಆಯ್ಕೆ ಮಾಡಿದ್ದಕ್ಕೆ ಗುರೂಜಿಗೆ ಕೋಪ – ನನ್ನ ವೋಟಿಗೆ ನ್ಯಾಯ ಬೇಕೆಂದು ಮನೆ ತುಂಬಾ ರಾದ್ಧಾಂತ!
ಹರೀಶ್ ರಾಜ್ ಅವರೇ ಇನ್ಮುಂದೆ ಆರ್ಯವರ್ಧನ್ ಪಾತ್ರವನ್ನು ಮಾಡಲಿದ್ದಾರೆ. ಉಳಿದಂತೆ ಅಷ್ಟೂ ಪಾತ್ರಗಳು ಇವರನ್ನೇ ಆರ್ಯವರ್ಧನ್ ಎಂದು ತಿಳಿಯುತ್ತವೆ. ಅಲ್ಲಿಗೆ ಕಥೆ ಸರಾಗವಾಗಿ ಸಾಗುತ್ತದೆ. ಇವನೇ ಆರ್ಯವರ್ಧನ್ ಎಂದು ಪ್ರೇಕ್ಷಕರನ್ನು ನಂಬಿಸಲು ಕಸರತ್ತು ಮಾಡಬೇಕಾಗಿರುವುದರಿಂದ ಅದರಲ್ಲಿ ಧಾರಾವಾಹಿ (serial) ತಂಡ ಹೇಗೆ ಗೆಲುವು ಸಾಧಿಸಲಿದೆ ಎನ್ನುವುದೇ ಸದ್ಯಕ್ಕಿರುವ ಕುತೂಹಲ. ಅನಿರುದ್ಧ ಜಾಗವನ್ನು ಹರೀಶ್ ರಾಜ್ ಅದೆಷ್ಟು ಬೇಗ ತುಂಬುತ್ತಾರೆ ಎನ್ನುವುದು ಅವರಿಗೆ ಸವಾಲಿನ ಕೆಲಸ ಕೂಡ.