– ಸುರಕ್ಷತಾ ಕ್ರಮ ಕಡೆಗಣಿಸಿತಾ ದೇವಸ್ಥಾನ ಆಡಳಿತ ಮಂಡಳಿ
– ರಾಷ್ಟ್ರಪತಿ ದ್ರೌಪದಿ ಮುರ್ಮು ಸಂತಾಪ
ಅಮರಾವತಿ: ದೇಶದಲ್ಲಿ ಎಷ್ಟೇ ಕಾಲ್ತುಳಿತ (Stampede) ದುರಂತಗಳು ಸಂಭವಿಸಿದರೂ ಜನರಿಗೆ ಮಾತ್ರ ಬುದ್ಧಿ ಬಂದಂತೆ ಕಾಣ್ತಿಲ್ಲ. ಕಣ್ಣೆದುರೇ ಅತಿಯಾಗಿ ಕಿಕ್ಕಿರಿದು ಜನಸ್ತೋಮ ಇದ್ದರೂ ಜನ ಮುಗಿಬೀಳೋದು ತಪ್ಪುತ್ತಿಲ್ಲ. ಸೆ.27ರಂದು ತಮಿಳುನಾಡಿನ ಕರೂರಿನಲ್ಲಿ ಟಿವಿಕೆ (TVK) ಮುಖ್ಯಸ್ಥ ವಿಜಯ್ ಚುನಾವಣಾ ರ‍್ಯಾಲಿಯಲ್ಲಿ ಕಾಲ್ತುಳಿತವಾಗಿ 41 ಜನ ಸಾವನ್ನಪ್ಪಿದ್ದಾರೆ. ದುರ್ಘಟನೆ ಸಂಭವಿಸಿ 1 ತಿಂಗಳು ಕಳೆದಿದೆ. ಆಗಲೇ ದೇಶದಲ್ಲಿ ಮತ್ತೊಂದು ಕಾಲ್ತುಳಿತ ಪ್ರಕರಣ ಸಂಭವಿಸಿದೆ.
Shocked to learn about the loss of lives in a tragic incident at Sri Venkateswara Swamy Temple in Srikakulam, Andhra Pradesh. I extend my deepest condolences to the bereaved families and pray for quick recovery of those injured.
— President of India (@rashtrapatibhvn) November 1, 2025
ಆಂಧ್ರಪ್ರದೇಶದ ಶ್ರೀಕಾಕುಳಂನಲ್ಲಿರುವ (Srikakulam) ಕಾಶಿಬುಗ್ಗ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ (Sri Venkateswara Temple) ಕಾಲ್ತುಳಿತ ಸಂಭವಿಸಿ 12 ಮಂದಿ ಸಾವನ್ನಪ್ಪಿದ್ದಾರೆ. ಇಬ್ಬರು ಮಕ್ಕಳು ಸೇರಿ 10 ಮಹಿಳೆಯರು ಸಾವನ್ನಪ್ಪಿದ್ದಾರೆ. 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಕಾರ್ತಿಕ ಮಾಸದ ಏಕಾದಶಿ ಶನಿವಾರ ಬಂದಿದ್ದರಿಂದ ದೇವರ ದರ್ಶನಕ್ಕೆ ಜನ ಮುಗಿಬಿದ್ದಿದ್ದಾರೆ. ಈ ವೇಳೆ, ಮಹಿಳೆಯರಿಬ್ಬರು ವಾಕ್ಸಮರ ನಡೆಸಿಕೊಂಡ ಬೆನ್ನಲ್ಲೇ ತಳ್ಳಾಟ ನೂಕಾಟ ಸಂಭವಿಸಿ ಕಾಲ್ತುಳಿತ ದುರಂತ ಘಟಿಸಿದೆ. ದೇವಸ್ಥಾನದ ಆವರಣದಲ್ಲಿ ಭಕ್ತರ ಶವಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಭಯಾನಕ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಘಟನೆಯ ಬಗ್ಗೆ ಜಿಲ್ಲಾ ಅಧಿಕಾರಿಗಳು ಸಂಪೂರ್ಣ ತನಿಖೆಗೆ ಆದೇಶಿಸಿದ್ದಾರೆ. ಕಾಲ್ತುಳಿತ ದುರಂತಕ್ಕೆ ಸಿಎಂ ಚಂದ್ರಬಾಬು ನಾಯ್ಡು, ಪ್ರಧಾನಿ ಮೋದಿ ಆಘಾತ ವ್ಯಕ್ತಪಡಿಸಿದ್ದ, ಪರಿಹಾರವನ್ನೂ ಘೋಷಿಸಿದ್ದಾರೆ.
ಕಾಲ್ತುಳಿತ ದುರಂತಕ್ಕೆ ಕಾರಣಗಳೇನು..?
* ದರ್ಶನಕ್ಕೆ ಹೋಗಲು, ವಾಪಾಸ್ ಬರಲು ಒಂದೇ ಕ್ಯೂ ಲೈನ್ ಇರುವುದು
* ದೇಗುಲದ ನಿರ್ಮಾಣದ ಕಾಮಗಾರಿ ಇನ್ನು ಮುಗಿದಿರಲಿಲ್ಲ
* ಏಕಾದಶಿ ಆಚರಣೆಗೆ ಅನುಮತಿ ಪಡೆದಿರಲಿಲ್ಲ
* ದೇಗುಲ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದ ಜಾಗದಲ್ಲೇ ಕಾಲ್ತುಳಿತ
* ಕ್ಯೂ ಲೈನ್‌ನಲ್ಲಿ ಹೆಚ್ಚಿನ ಭಕ್ತರು ಜಮಾಯಿಸಿರುವುದು
* ದೇವಸ್ಥಾನ ಆಡಳಿತ ಮಂಡಳಿ ಸುರಕ್ಷತಾ ಕ್ರಮಗಳ ಬಗ್ಗೆ ಗಮನ ಹರಿಸದಿರುವುದು
* ಸ್ವಯಂ ಸೇವಕರನ್ನ ನಿಯೋಜನೆ ಮಾಡಿಕೊಳ್ಳದೇ ಇರುವುದು
* ಭಕ್ತರ ಸಂಖ್ಯೆ ಹೆಚ್ಚಿದ್ರೂ ಬಂದೋಬಸ್ತ್ ಗಾಗಿ ಪೊಲೀಸರ ಸಹಾಯ ಪಡೆಯದೇ ಇರೋದು ದುರಂತಕ್ಕೆ ಕಾರಣವಾಗಿದೆ.
ರಾಷ್ಟ್ರಪತಿ ಮುರ್ಮು ಸಂತಾಪ
ಇನ್ನೂ ಕಾಶಿಬುಗ್ಗ ದೇವಾಲಯದ ಕಾಲ್ತುಳಿತ ಪ್ರಕರಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಂತಾಪ ಸೂಚಿಸಿದ್ದಾರೆ. ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಮುರ್ಮು ಅವರು, ಆಂಧ್ರದ ಶ್ರೀಕಾಕುಳಂನಲ್ಲಿರುವ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ನಡೆದ ದುರಂತ ಘಟನೆಯಲ್ಲಿ ಜೀವಹಾನಿ ಸಂಭವಿಸಿದ ಸುದ್ದಿ ತಿಳಿದು ಆಘಾತವಾಗಿದೆ. ಮೃತರ ಕುಟುಂಬಗಳಿಗೆ ನನ್ನ ತೀವ್ರ ಸಂತಾಪ ಸೂಚಿಸುತ್ತೇನೆ. ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ ಪೋಸ್ಟ್ ಹಂಚಿಕೊಂಡಿದ್ದಾರೆ.
