ಬೆಂಗಳೂರು: ವಿಶ್ವಾಸಮತ ಯಾಚನೆಗೆ ಅತೃಪ್ತ ಶಾಸಕರು ಹೋಗಲೇ ಬೇಕೆಂದಿಲ್ಲ ಎಂದು ಸುಪ್ರೀಂ ಕೋರ್ಟ್ ಈಗಾಗಲೇ ಮಧ್ಯಂತರ ಆದೇಶ ಪ್ರಕಟಿಸಿದೆ. ಈ ಬೆನ್ನಲ್ಲೇ ಅತೃಪ್ತರು ಕೂಡ ನಾವು ವಾಪಸ್ ಬೆಂಗಳೂರಿಗೆ ಹೋಗುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹಾಗಿದ್ರೆ ಅತೃಪ್ತ ಮುಂದಿನ ನಡೆಯೇನು ಎಂಬುದು ಇದೀಗ ಕುತೂಹಲ ಹುಟ್ಟಿಸಿದೆ.
ಹೌದು. ಸುಪ್ರೀಂ ತೀರ್ಪು ಹೊರಬೀಳುತ್ತಿದ್ದಂತೆಯೇ ಅತೃಪ್ತ ಶಾಸಕರೆಲ್ಲರೂ ಮುಂಬೈನಲ್ಲಿ ಹೋಟೆಲ್ ನಲ್ಲಿ ಒಟ್ಟಿಗೆ ನಿಂತು, ಸುಪ್ರೀಂಕೋರ್ಟ್ ತೀರ್ಪನ್ನು ನಾವು ಗೌರವಿಸುತ್ತೇವೆ ಮತ್ತು ಸಂತೋಷಗೊಂಡಿದ್ದೇವೆ. ನಾವೇನು ನಿರ್ಧಾರ ಮಾಡಿದ್ದೇವೆ ಅದಕ್ಕೆ ಬದ್ಧವಾಗಿದ್ದೇವೆ. ಯಾವುದೇ ಕಾರಣಕ್ಕೂ ನಾವು ವಾಪಸ್ ಹೋಗುವ ಪ್ರಶ್ನೆಯೇ ಇಲ್ಲ. ನಾವು ಅಧಿವೇಶನಕ್ಕೆ ಹೋಗುವ ಪ್ರಶ್ನೆಯೇ ಇಲ್ಲ ಎಂದು ಹೇಳುವ ಮೂಲಕ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.
ಹಾಗಿದ್ರೆ ಮುಂದಿನ ನಡೆಯೇನು?
ಸ್ಪೀಕರ್ ವಿಚಾರಣೆಗೆ ಕರೆದರೆ ಹಾಜರಾಗಲು ಸಮಯ ಕೇಳಬಹುದು. ವಿಶ್ವಾಸಮತ ಮುಗಿಯುವ ತನಕ ಮುಂಬೈನಲ್ಲೇ ಇರಬಹುದು. ವಿಪ್ ಜಾರಿಗೊಳಿಸಿದರೂ ಸುಪ್ರೀಂಕೋರ್ಟ್ ಮಧ್ಯಂತರ ಆದೇಶವನ್ನೇ ರಕ್ಷಣೆಯಾಗಿ ಪಡೆಯಬಹುದು. ಅನರ್ಹತೆಯ ಅಸ್ತ್ರ ಪ್ರಯೋಗಿಸಿದರೂ ರಾಜೀನಾಮೆ ನೀಡಿದ ನಂತರ ತಮ್ಮನ್ನು ಬೆದರಿಸಲು ಅನರ್ಹತೆ ಅಸ್ತ್ರ ಪ್ರಯೋಗಿಸಿದ್ದಾರೆ ಎಂದು ಕಾರಣ ನೀಡಿ ಸ್ಪೀಕರ್ ನಿರ್ಧಾರವನ್ನು ಪ್ರಶ್ನಿಸಬಹುದು. ವಿಚಾರಣೆ ನಡೆಸದೇ ಅನರ್ಹತೆ ಮಾಡಲು ಸಾಧ್ಯವಿಲ್ಲ ಎನ್ನುವ ಅಂಶವನ್ನು ಪ್ರಸ್ತಾಪಿಸಿ ಕಾನು ಸಮರ ಆರಂಭಿಸಬಹುದು.
ತೀರ್ಪು ಏನು?
ಗುರುವಾರ ವಿಶ್ವಾಸಮತಯಾಚನೆ ಮಾಡಬಹುದು. ರಾಜೀನಾಮೆ ನೀಡಿರುವ 15 ಶಾಸಕರು ಕಲಾಪಕ್ಕೆ ಭಾಗವಹಿಸುವುದು ಕಡ್ಡಾಯವಲ್ಲ. ಹಾಜರಾಗಬೇಕೋ ಬೇಡವೋ ಎನ್ನುವುದು ಶಾಸಕರ ವಿವೇಚನೆಗೆ ಬಿಟ್ಟ ವಿಚಾರ. ಅತೃಪ್ತ ಶಾಸಕರನ್ನು ಒತ್ತಾಯಪೂರ್ವಕವಾಗಿ ಕರೆತರುವ ಹಾಗಿಲ್ಲ ಎಂದು ಸುಪ್ರೀಂ ಮಧ್ಯಂತರ ಆದೇಶವನ್ನು ಪ್ರಕಟಿಸುವ ಮೂಲಕ ಅತೃಪ್ತರಿಗೆ ಬಿಗ್ ರಿಲೀಫ್ ನೀಡಿದೆ.
ತನ್ನ ಆದೇಶಲ್ಲಿ ಶಾಸಕರ ಅನರ್ಹತೆಯ ಬಗ್ಗೆ ಯಾವುದೇ ವಿಚಾರವನ್ನು ಪ್ರಸ್ತಾಪ ಮಾಡದ ಕೋರ್ಟ್ ಶಾಸಕರ ರಾಜೀನಾಮೆಯನ್ನು ನಿಗದಿತ ಅವಧಿಯ ಒಳಗಡೆ ಇತ್ಯರ್ಥ ಮಾಡಬೇಕು ಎಂದು ಸ್ಪೀಕರ್ ಅವರಿಗೆ ಸೂಚಿಸಿದೆ. ಈ ಮೂಲಕ ರಮೇಶ್ ಕುಮಾರ್ ಅವರಿಗೆ ಕೋರ್ಟ್ ಪೂರ್ಣ ಅಧಿಕಾರವನ್ನು ನೀಡಿದ್ದು ಸ್ಪೀಕರ್ ರಾಜೀನಾಮೆ ಅಂಗೀಕರಿಸುತ್ತಾರೋ ಅಥವಾ ಅನರ್ಹತೆ ನಿರ್ಧಾರ ಪ್ರಕಟಿಸುತ್ತಾರೋ ಎನ್ನುವ ಕುತೂಹಲ ಹೆಚ್ಚಾಗಿದೆ.
ರಾಜೀನಾಮೆ ಅಂಗೀಕರಿಸಿಲ್ಲ ಎಂದು ಸ್ಪೀಕರ್ ವಿರುದ್ಧ 15 ಅತೃಪ್ತ ಶಾಸಕರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಮಂಗಳವಾರ ಸುಮಾರು 212 ನಿಮಿಷ ನಡೆದಿತ್ತು. ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್, ನ್ಯಾ. ದೀಪಕ್ ಗುಪ್ತಾ ಹಾಗೂ ಅನಿರುದ್ಧ್ ಬೋಸ್ ಅವರಿದ್ದ ತ್ರಿಸದಸ್ಯ ಪೀಠದ ಎದುರು ಮುಕುಲ್ ರೊಹ್ಟಗಿ, ಅಭಿಷೇಕ್ ಸಿಂಘ್ವಿ, ರಾಜೀವ್ ಧವನ್ ನಡುವೆ ಅಕ್ಷರಶಃ ವಾಗ್ಯುದ್ಧವೇ ನಡೆದಿತ್ತು. ಸುಮಾರು 3 ಗಂಟೆ 45 ನಿಮಿಷಗಳ ವಾದ ವಿವಾದಗಳನ್ನು ಆಲಿಸಿದ ತ್ರಿಸದಸ್ಯ ಪೀಠ ತೀರ್ಪನ್ನು ಬುಧವಾರ ಬೆಳಗ್ಗೆ 10.30ಕ್ಕೆ ಕಾಯ್ದಿರಿಸಿತ್ತು.