ತಿಮಿಂಗಿಲ ವಾಂತಿ ಮಾರಾಟಕ್ಕೆ ಯತ್ನ ಕೇಸ್‌ – ಮಫ್ತಿಯಲ್ಲಿದ್ದ ಅಧಿಕಾರಿಗಳನ್ನೇ ಹಿಡಿದು ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು

Public TV
1 Min Read
UDP AMBER GREECE AV 5

ಉಡುಪಿ: ಕುಂದಾಪುರ ಕೋಡಿ ಸಮುದ್ರ ತೀರದಲ್ಲಿ ತಿಮಿಂಗಿಲ ವಾಂತಿಯ ಅಕ್ರಮ ಮಾರಾಟದ ಖಚಿತ ಮಾಹಿತಿ ಮೇರೆಗೆ ಶೋಧ ಕಾರ್ಯಾಚರಣೆಗೆ ಮಫ್ತಿಯಲ್ಲಿ ಬಂದ ಸಿಐಡಿ ಅಧಿಕಾರಿಗಳ ಬಗ್ಗೆ ಸ್ಥಳೀಯರು ತಪ್ಪು ಗ್ರಹಿಕೆಯಿಂದ ಅಧಿಕಾರಿಗಳನ್ನೇ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ.

ಉಡುಪಿ ಜಿಲ್ಲೆಯ ಕುಂದಾಪುರ ಕೋಡಿಯಲ್ಲಿ ಅಂಬರ್ ಗ್ರೀಸ್ ಡೀಲ್ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಯುನಿಫಾರ್ಮ್ ಇಲ್ಲದೆ, ಮೂರು ಕಾರಿನಲ್ಲಿ ಬಂದ ಅರಣ್ಯ ಇಲಾಖೆಯ ಸಿಐಡಿ ವಿಭಾಗದ ಅಧಿಕಾರಿಗಳು ಶೋಧ ಕಾರ್ಯಾಚರಣೆಯಲ್ಲಿ ನಾಲ್ವರನ್ನು ವಶಕ್ಕೆ ಪಡೆದುಕೊಳ್ಳಲು ಮುಂದಾಗಿದ್ದಾರೆ. ಸ್ಥಳೀಯರ ತಪ್ಪು ಗ್ರಹಿಕೆಯಿಂದ ಅಧಿಕಾರಿಗಳನ್ನೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಈ ವೇಳೆ ಸುತ್ತಮುತ್ತಲಿನ ಜನ ಸೇರಿದ್ದರಿಂದ ತಳ್ಳಾಟ ನಡೆದಿದೆ. ಇದರಿಂದಾಗಿ ಅಧಿಕಾರಿಗಳಿಗೆ ಗಾಯಗಳಾಗಿ ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆರು ತಿಂಗಳ ಹಿಂದೆ ಕೋಟ ಮಣೂರಿನಲ್ಲಿ ಸಿಐಡಿ ಸೋಗಿನಲ್ಲಿ ದರೋಡೆಕೋರರು ಬಂದು ಮನೆ ದರೋಡೆಗೆ ವಿಫಲ ಪ್ರಯತ್ನ ಮಾಡಿದ್ದರು. ಸಿಸಿಟಿವಿ ಕ್ಯಾಮೆರಾದಲ್ಲಿ ದರೋಡೆ ಯತ್ನದ ದೃಶ್ಯ ಸೆರೆಯಾಗಿತ್ತು. ಈ ಘಟನೆ ನೆನಪಿಸಿಕೊಂಡ ಜನರು ಇದು ಕೂಡ ಅಂತಹದ್ದೇ ಮತ್ತೊಂದು ದರೋಡೆ ಯತ್ನ ಎಂದು ತಪ್ಪು ತಿಳಿದು ಅಧಿಕಾರಿಗಳ ಜೊತೆಗೆ ಘರ್ಷಣೆಗೆ ಇಳಿದಿದ್ದರು ಎನ್ನಲಾಗಿದೆ.

ಅಂಬರ್ ಗ್ರೀಸ್ ವ್ಯವಹಾರ ನಡೆಯುತ್ತಿದ್ದು, ಸದ್ಯದಲ್ಲೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ. ತಕ್ಷಣ ಕುಂದಾಪುರದ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Share This Article