ಚಾಮರಾಜನಗರ: ಬೆಂಗಳೂರಿನಿಂದ ತಮಿಳುನಾಡಿಗೆ ಕಾರಿನಲ್ಲಿ ತಿಮಿಂಗಿಲದ ವಾಂತಿ (ಅಂಬರ್ ಗ್ರೀಸ್) ಅಕ್ರಮವಾಗಿ ಸಾಗಿಸುತ್ತಿದ್ದ ಇಬ್ಬರನ್ನು ಕೊಳ್ಳೇಗಾಲ ಪೊಲೀಸರು ಕೊಳ್ಳೇಗಾಲದ ಹೊಸ ಅಣಗಳ್ಳಿ ಸಮೀಪ ಬಂಧಿಸಿದ್ದಾರೆ.
ಮೈಸೂರು ಆಶೋಕಪುರಂ ನಿವಾಸಿ ವಸಂತ ಕುಮಾರ್ (50), ರಾಮನಗರ ಜಿಲ್ಲೆಯ ಮೂಲದ ವೈರಮುಡಿ (40) ಬಂಧಿತರಾಗಿದ್ದಾರೆ.
ಅಂಬರ್ ಗ್ರೀಸ್ ಸಾಗಾಟದ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರನ್ನು ತಡೆದು ಪರಿಶೀಲಿಸಿದಾಗ ಕಾರಿನ ಡಿಕ್ಕಿಯಲ್ಲಿಟ್ಟಿದ್ದ 4.386 ಕೆಜಿ ತಿಮಿಂಗಿಲ ವಾಂತಿ ವಶಪಡಿಸಿಕೊಂಡಿದ್ದಾರೆ.
ಪ್ರಕರಣ ದಾಖಲಿಸಿರುವ ಪೊಲೀಸರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.
ತಿಮಿಂಗಿಲ ವಾಂತಿಗೆ ಯಾಕಿಷ್ಟು ಬೇಡಿಕೆ?
ಅಂಬರ್ ಗ್ರೀಸ್ ಎಂಬ ವಸ್ತುವು ಮೇಣದಂಥ ವಸ್ತುವಾಗಿದ್ದು, ಇದನ್ನ ಸುಗಂಧ ದ್ರವ್ಯಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಕಚ್ಚಾವಸ್ತುವಾಗಿದ್ದಾಗಲೂ ಅಂಬರ್ ಗ್ರೀಸ್ ಕೊಂಚ ಸುವಾಸನೆ ಬೀರುವಂಥದ್ದಾಗಿರುತ್ತದೆ. ಕೆಲವು ದೇಶಗಳಲ್ಲಿ ಕಾಮೋತ್ತೇಜಕ ವಸ್ತುಗಳ ತಯಾರಿಕೆಯಲ್ಲೂ ಇದನ್ನ ಬಳಸಲಾಗುತ್ತದೆ. ಹಾಗಾಗಿ ತಿಮಿಂಗಲ ವಾಂತಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯಿದೆ.