ಹನುಮಂತು ಕೆ.
ರಾಮನಗರ: ಕಸದಿಂದ ರಸ ಎನ್ನೋದು ನಾಣ್ಣುಡಿ, ಅದ್ರಂತೆ ಅನುಪಯುಕ್ತ ಹಸಿ ತ್ಯಾಜ್ಯ ಈಗ ಬೀದಿ ದೀಪಗಳಲ್ಲಿ ಬೆಳಕಾಗಿ ಉರಿಯಲಿದೆ. ಹೌದು ಕಸದಿಂದ ರಸವಾಗಿ ಇದೀಗ ವಿದ್ಯುತ್ ಉತ್ಪಾದನೆ ರೇಷ್ಮೆನಗರಿ ರಾಮನಗರದ ದ್ಯಾವರಸೇಗೌಡನ ದೊಡ್ಡಿ ಗ್ರಾಮದ ಬಳಿ ನಡೆಯುತ್ತಿದೆ.
Advertisement
ನಮಗೆ ಬೇಡವೆಂದು ಬಿಸಾಡುವ ಊಟ, ಸೊಪ್ಪು, ತರಕಾರಿ ತಾಜ್ಯ ಸೇರಿದಂತೆ ಹಸಿ ತ್ಯಾಜ್ಯಗಳು ಇನ್ಮುಂದೆ ನಗರದ ಬೀದಿ ದೀಪಗಳನ್ನು ಬೆಳಗಿಸಲಿವೆ. ಪ್ರತಿನಿತ್ಯ ಮನೆ, ಹೋಟೆಲ್, ಕಲ್ಯಾಣ ಮಂಟಪಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯಗಳನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವರ್ತಿಸುವ ಮೂಲಕ ಕಸದಿಂದ ರಸ ಎನ್ನುವ ನಾಣ್ಣುಡಿಯನ್ನು ರಾಮನಗರ ನಗರಸಭೆ ಕಸದಿಂದ ವಿದ್ಯುತ್ ಎಂದು ಬದಲಾಯಿಸಿ ಕಾರ್ಯಾರೂಪಕ್ಕಿಳಿಸಿದೆ.
Advertisement
Advertisement
ನಗರಸಭೆಯ 1ನೇ ವಾರ್ಡಿನ ದ್ಯಾವರಸೇಗೌಡನ ದೊಡ್ಡಿಯಲಿ ಮಿಥೇನ್ ಬಯೋ ಎಲೆಕ್ಟ್ರಿಸಿಟಿ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡಿರುವ ನಗರಸಭೆ ಪ್ರತಿನಿತ್ಯ 10 ಕೆ.ವಿ ವಿದ್ಯುತ್ ಉತ್ಪಾದಿಸುವ ಪ್ರಾಯೋಗಿಕ ಚಾಲನೆಯಲ್ಲಿ ಯಶಸ್ವಿಯಾಗಿದೆ. ಈ ತಂತ್ರಜ್ಞಾನ ಬಿಬಿಎಂಪಿ ಸೇರಿದಂತೆ ಮಂಗಳೂರು, ಮೈಸೂರು ಮಹಾನಗರ ಪಾಲಿಕೆಗಳಲ್ಲಿ ಚಾಲ್ತಿಯಲ್ಲಿದ್ದರೂ ನಗರಸಭೆ, ಪುರಸಭೆಗಳ ಹಂತದಲ್ಲಿ ಈ ಪ್ರಯತ್ನ ಯಶಸ್ವಿಯಾಗಿರುವುದು ಇದೇ ಮೊದಲು ಎಂದು ರಾಮನಗರ ನಗರಸಭೆ ಆಯುಕ್ತ ಮಾಯಣ್ಣಗೌಡ್ರು ಹೇಳುತ್ತಾರೆ.
Advertisement
ದ್ಯಾವರಸೇಗೌಡನ ದೊಡ್ಡಿಯಲ್ಲಿ ನಿರ್ಮಾಣ ಮಾಡಿರುವ ಮಿಥೇನ್ ಬಯೋ ಎಲೆಕ್ಟ್ರಿಸಿಟಿ ಉತ್ಪಾದನೆ ಘಟಕದಲ್ಲಿ ಪ್ರತಿನಿತ್ಯ 10 ಕಿಲೋ ವೋಲ್ಟ್ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಘಟಕಕ್ಕೆ ಬೇಕಾದ ವಿದ್ಯುತ್‍ನ್ನು ಇಲ್ಲಿಂದಲೇ ಬಳಸಿಕೊಳ್ಳುವ ಜೊತೆಗೆ ದ್ಯಾವರಸೇಗೌಡನದೊಡ್ಡಿಯ ಪಾರ್ಕ್, ಬೀದಿ ದೀಪಗಳೂ ಸಹ ಬೆಳಗುತ್ತಿವೆ.
ವೆಚ್ಚ ಎಷ್ಟು? ಘಟಕವನ್ನು 20 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. 12 ಲಕ್ಷ ರೂ. ನಿರ್ಮಾಣ ಕಾಮಗಾರಿಗೆ, 8 ಲಕ್ಷ ರೂ. ಯಂತ್ರೋಪಕರಣ ಅಳವಡಿಕೆ ಮತ್ತು ಸಂಪರ್ಕ ವ್ಯವಸ್ಥೆಗೆ ಬಳಸಲಾಗಿದೆ. ಪ್ರತಿನಿತ್ಯ 1.5 ಟನ್ ಹಸಿ ತ್ಯಾಜ್ಯವನ್ನು ವಿದ್ಯುತ್ ಶಕ್ತಿಯಾಗಿ ಪರಿವರ್ತಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ರಾಮನಗರದ ಪೂಲ್ಬಾಗ್ ಪ್ರದೇಶದಲ್ಲಿ 4 ಟನ್ ಸಾಮರ್ಥ್ಯದ ಘಟಕ ನಿರ್ಮಿಸಲು ಉದ್ದೇಶಿಸಲಾಗಿದೆ.
ವಿದ್ಯುತ್ ಉತ್ಪಾದನೆ ಹೇಗೆ?: ಹಸಿ ತ್ಯಾಜ್ಯವನ್ನು ವಿಂಗಡನೆ ಮಾಡಿ, ಬಯೋ ಗ್ಯಾಸ್ ತೊಟ್ಟಿಯಲ್ಲಿ ಸುರಿಯಲಾಗುವುದು. ಇದರಿಂದ ಮಿಥೇನ್ ಗ್ಯಾಸ್, ಇಂಗಾಲ ಡೈ ಆಕ್ಸೈಡ್ ಅನಿಲಗಳು ಹೊರಹೊಮ್ಮುತ್ತವೆ. ಮಿಥೇನ್ ಗ್ಯಾಸನ್ನು ಪ್ರತ್ಯೇಕಿಸಿ, ಮಿಥೇನ್ ಬಯೋ ಎಲೆಕ್ಟ್ರಿಸಿಟಿ ಜನೆರೇಟರ್‍ಗೆ ಹಾಯಿಸುವ ಮೂಲಕ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಜೊತೆಗೆ ಅನಿಲ ಘಟಕದಿಂದ ಹೊರ ಬರುವ ತ್ಯಾಜ್ಯ ಉತ್ತಮ ಸಾವಯವ ಗೊಬ್ಬರವಾಗಿ ಪರಿವರ್ತನೆಯಾಗುತ್ತದೆ.
ಎಷ್ಟು ಉಳಿತಾಯ?: ಇಲ್ಲಿ ಉತ್ಪಾದನೆಯಾಗುವ ವಿದ್ಯುತ್‍ನ್ನು ಆರ್ಥಿಕವಾಗಿ ಲೆಕ್ಕಾಚಾರ ಮಾಡುವುದಾದರೆ 10 ಕೆ.ವಿ. ವಿದ್ಯುತ್ ಬೆಲೆ ಪ್ರಸ್ತುತ ಮಾರುಕಟ್ಟೆ ದರ 1.20 ರೂ. ಆಗಲಿದೆ. ಅಲ್ಲದೇ ಗೃಹ ಬಳಕೆಗೆ ಬಳಸಬಹುದಾದರೆ ಸುಮಾರು 200 ಮನೆಗಳಿಗೆ ಬಳಸಬಹುದು. ಪ್ರತಿದಿನ ಒಂದು ಸಾವಿರ ರೂ. ವಿದ್ಯುತ್ ಬಿಲ್ ಉಳಿತಾಯವಾದರೆ, ತಿಂಗಳಿಗೆ 30 ಸಾವಿರ, ವಾರ್ಷಿಕ 3.60 ಲಕ್ಷ ಉಳಿತಾಯ ಮಾಡಬಹುದಾಗಿದೆ.
ಒಟ್ಟಾರೆ ಪಟ್ಟಣ ಹಾಗೂ ನಗರ ಪ್ರದೇಶಗಳಲ್ಲಿ ತ್ಯಾಜ್ಯ ವಿಲೇವಾರಿ ಮಾಡುವುದು ದೊಡ್ಡ ಸಮಸ್ಯೆಯಾಗಿದೆ. ಹಸಿರು ತ್ಯಾಜ್ಯ ಮತ್ತು ಮನೆ, ಹೊಟೇಲ್ ಹಾಗೂ ಕಲ್ಯಾಣ ಮಂಟಪಗಳಲ್ಲಿ ಉತ್ಪತ್ತಿಯಾಗುವ ಅನುಪಯುಕ್ತ ಹಸಿ ಕಸ ನಗರದ ನೈರ್ಮಲ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಇದನ್ನು ಈಗ ಮಿಥೇನ್ ಬಯೋ ಎಲೆಕ್ಟ್ರಿಸಿಟಿ ತಂತ್ರಜ್ಞಾನದ ಮೂಲಕ ಹಸಿ ತ್ಯಾಜ್ಯಕ್ಕೆ ಮುಕ್ತಿ ಹಾಡಲು ಮುಂದಾಗಿರೋದು ಶ್ಲಾಘನೀಯವಾಗಿದೆ.