Connect with us

Latest

ಝೊಮೆಟೊದಲ್ಲಿ ಮತ್ತೆ ವಿವಾದ – ದನ, ಹಂದಿ ಮಾಂಸ ಡೆಲಿವರಿ ಮಾಡಲ್ಲ ಎಂದ ಸಿಬ್ಬಂದಿ

Published

on

ಕೊಲ್ಕತ್ತಾ: ಝೊಮೆಟೊ ಆನ್‍ಲೈನ್ ಫುಡ್ ಡೆಲಿವರಿ ಸಂಸ್ಥೆ ಇತ್ತೀಚಿಗೆ ಒಂದಲ್ಲ ಒಂದು ವಿವಾದಕ್ಕೆ ಸಿಲುಕಿಕೊಳ್ಳುತ್ತಿದೆ. ಕಳೆದ ತಿಂಗಳಷ್ಟೇ ಹಿಂದೂ ಗ್ರಾಹಕರೊಬ್ಬರು ಮುಸ್ಲಿಂ ಯುವಕ ಆಹಾರ ತಂದಿದಕ್ಕೆ ಆರ್ಡರ್ ಕ್ಯಾನ್ಸಲ್ ಮಾಡಿದ್ದರು. ಇದು ಧಾರ್ಮಿಕ ವಿವಾದವಾಗಿ ದೇಶದೆಲ್ಲೆಡೆ ಭಾರೀ ಚರ್ಚೆಯಾಗಿತ್ತು.

ಈಗ ಮತ್ತೆ ಇದೇ ರೀತಿಯ ಧಾರ್ಮಿಕ ವಿಚಾರದಲ್ಲೇ ಝೊಮೆಟೊ ಸಂಕಷ್ಟಕ್ಕೆ ಸಿಲುಕಿದೆ. ಈ ಸಂಸ್ಥೆಯಲ್ಲಿ ಕೆಲಸ ಮಾಡುವ ಹಿಂದೂ ಮತ್ತು ಮುಸ್ಲಿಂ ಸಿಬ್ಬಂದಿ ನಾವು ನಮ್ಮ ಧರ್ಮಕ್ಕೆ ವಿರುದ್ಧವಾದ ಗೋಮಾಂಸ ಮತ್ತು ಹಂದಿ ಮಾಂಸವನ್ನು ಡೆಲಿವರಿ ಮಾಡುವುದಿಲ್ಲ ಎಂದು ಪಟ್ಟುಹಿಡಿದಿದ್ದಾರೆ.

ಸೋಮವಾರದಿಂದ ಆಚರಣೆ ಮಾಡುವ ಬಕ್ರಿದ್ ಹಬ್ಬಕ್ಕೆ ನಾವು ಗೋಮಾಂಸ ಮತ್ತು ಹಂದಿ ಮಾಂಸವನ್ನು ಡೆಲಿವರಿ ಮಾಡುವುದಿಲ್ಲ. ಇದು ನಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುತ್ತಿದೆ. ಝೊಮೆಟೊ ಸಂಸ್ಥೆ ನಮ್ಮ ಉದ್ಯೋಗ ಮತ್ತು ಭಾವನೆಗಳ ಜೊತೆ ಆಟವಾಡುತ್ತಿದೆ ಎಂದು ಸೋಮವಾರ ಹಿಂದೂ ಮತ್ತು ಮುಸ್ಲಿಂ ಹುಡುಗರು ಝೊಮೆಟೊ ವಿರುದ್ಧ ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ.

ಈ ವಿಚಾರದ ಬಗ್ಗೆ ಮಾತನಾಡಿರುವ ಹಿಂದೂ ಆಹಾರ ವಿತರಣಾ ಸಿಬ್ಬಂದಿ ಬಜರಾಜ್ ನಾಥ್ ಬ್ರಹ್ಮ, ನಾನು ಹಿಂದೂ. ಇಲ್ಲಿ ಮುಸ್ಲಿಂ ಡೆಲಿವರಿ ಹುಡುಗರೂ ಇದ್ದಾರೆ. ಒಟ್ಟಿಗೆ ಕೆಲಸ ಮಾಡುವಲ್ಲಿ ನಮಗೆ ಯಾವುದೇ ಸಮಸ್ಯೆಗಳಿಲ್ಲ. ಝೊಮೆಟೊ ಪ್ರಸ್ತುತ ಕೆಲವು ಹೊಸ ರೆಸ್ಟೋರೆಂಟ್‍ಗಳೊಂದಿಗೆ ಸಂಬಂಧ ಹೊಂದಿದ್ದು, ಗೋಮಾಂಸ ಮತ್ತು ಹಂದಿ ಮಾಂಸವನ್ನು ವಿತರಣೆ ಮಾಡುತ್ತಿದೆ. ಇದರಿಂದ ಹಿಂದೂ ವಿತರಣಾ ಸಿಬ್ಬಂದಿ ಮತ್ತು ಮುಸ್ಲಿಂ ವಿತರಣಾ ಸಿಬ್ಬಂದಿ ಇಬ್ಬರಿಗೂ ಸಮಸ್ಯೆಯಾಗುತ್ತಿದೆ. ನಮ್ಮ ಧಾರ್ಮಿಕ ಭಾವನೆಗೆ ನೋವಾಗುತ್ತಿದೆ. ಇದ್ದರಿಂದ ತಕ್ಷಣವೇ ಈ ಯೋಜನೆಯನ್ನು ಸಂಸ್ಥೆ ನಿಲ್ಲಿಸಬೇಕು ಎಂದು ನಾವು ಕೇಳಿಕೊಳ್ಳುತ್ತೇವೆ. ಈ ವಿಚಾರವಾಗಿ ನಾವು ಸೋಮವಾರ ಕೆಲಸ ಮಾಡದೇ ಮುಷ್ಕರ ನಡೆಸುತ್ತೇವೆ ಎಂದು ಹೇಳಿದ್ದಾರೆ.

ಮುಸ್ಲಿಂ ಆಹಾರ ವಿತರಣಾ ಸಿಬ್ಬಂದಿ ಮೌಸಿರ್ ಅಖ್ತರ್ “ನಾವು ಈ ಸಮಸ್ಯೆಯ ಬಗ್ಗೆ ಸಂಸ್ಥೆಯ ಉನ್ನತ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ, ಆದರೆ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇತ್ತೀಚಿಗೆ ಕೆಲ ಮುಸ್ಲಿಂ ಹೋಟೆಲ್‍ಗಳನ್ನು ಝೊಮೆಟೊ ತನ್ನ ವಿತರಣಾ ಅಪ್ಲಿಕೇಶನ್‍ಗೆ ಸೇರಿಸಿಕೊಂಡಿದೆ. ಅಲ್ಲಿ ಮಾಡುವ ಗೋಮಾಂಸವನ್ನು ಕೆಲ ಹಿಂದೂ ಹುಡುಗರು ವಿತರಣೆ ಮಾಡುವುದಿಲ್ಲ ಎಂದು ನಿರಾಕರಿಸಿದ್ದಾರೆ. ಹಾಗೆಯೇ ನಾವು ಕೂಡ ಹಂದಿ ಮಾಂಸವನ್ನು ವಿತರಣೆ ಮಾಡುವುದಿಲ್ಲ. ಇದರಿಂದ ನಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆಗುತ್ತಿದೆ. ಈ ವಿಚಾರದ ಬಗ್ಗೆ ಕಂಪನಿಗೆ ಎಲ್ಲ ತಿಳಿದಿದ್ದರು. ನಮಗೆ ಯಾವುದೇ ಸಹಾಯ ಮಾಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಈ ವಿಚಾರದಲ್ಲಿ ಝೊಮೆಟೊ ಹುಡುಗರ ಬೆಂಬಲಕ್ಕೆ ನಿಂತಿರುವ ಪಶ್ಚಿಮ ಬಂಗಾಳದ ಸಚಿವ ಮತ್ತು ಟಿಎಂಸಿ ಶಾಸಕರ ಹೌರಾ ರಾಜೀಬ್ ಬ್ಯಾನರ್ಜಿ, ಈ ರೀತಿಯ ಯೋಚನೆಗಳನ್ನು ಸಂಸ್ಥೆ ಜಾರಿಗೆ ತರುವಾಗ ಸ್ವಲ್ಪ ಯೋಚಿಸಬೇಕು. ಯಾವ ವ್ಯಕ್ತಿಯನ್ನು ಅವರ ಧಾರ್ಮಿಕ ಭಾವನೆಗಳ ವಿರುದ್ಧ ನಡೆಸಿಕೊಳ್ಳಬಾರದು. ಇದು ತಪ್ಪು. ಈ ವಿಚಾರದ ಬಗ್ಗೆ ನನಗೆ ತಿಳಿದಿರಲಿಲ್ಲ. ಈಗ ನನ್ನ ಗಮನಕ್ಕೆ ಬಂದಿದೆ ನಾನು ಇದರ ಬಗ್ಗೆ ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿದ್ದಾರೆ.

Click to comment

Leave a Reply

Your email address will not be published. Required fields are marked *