ಮಂಗಳೂರು: ಜಿಲ್ಲೆಯ ಗೋಲಿಬಾರ್ ನಲ್ಲಿ ಮೃತಪಟ್ಟ ಇಬ್ಬರ ಕುಟುಂಬಸ್ಥರಿಗೆ ಕರ್ನಾಟಕ ಸರ್ಕಾರ ಘೋಷಿಸಿದ್ದ ಪರಿಹಾರವನ್ನು ವಾಪಾಸ್ ಪಡೆದ ನಡುವೆಯೇ ಪಶ್ಚಿಮ ಬಂಗಾಳ ಸರ್ಕಾರ ಘೊಷಿಸಿದ್ದ ಪರಿಹಾರ ಮೊತ್ತದ ಚೆಕ್ ಅನ್ನು ಇಂದು ವಿತರಿಸಲಾಯಿತು.
ಗೋಲಿಬಾರ್ ನಡೆದು ದೇಶಾದ್ಯಂತ ಸುದ್ದಿಯಾದಾಗಲೇ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗೋಲಿಬಾರ್ ನಲ್ಲಿ ಮೃತಪಟ್ಟ ಇಬ್ಬರು ಅಮಾಯಕರು. ಹೀಗಾಗಿ ಅವರ ಕುಟುಂಬಕ್ಕೆ ನೆರವಾಗುವಂತೆ ಪಶ್ಚಿಮ ಬಂಗಾಳ ಸರ್ಕಾರ ತಲಾ ಐದು ಲಕ್ಷ ರೂ. ಪರಿಹಾರ ನೀಡುತ್ತೇನೆ ಎಂದು ಘೋಷಿಸಿದ್ದರು. ಅದರಂತೆ ಇಂದು ಗೋಲಿಬಾರ್ ನಲ್ಲಿ ಮೃತಪಟ್ಟ ಇಬ್ಬರ ಮನೆಗಳಿಗೆ ಪಶ್ಚಿಮ ಬಂಗಾಳ ಸರ್ಕಾರದ ನಿಯೋಗ ಭೇಟಿ ನೀಡಿದೆ.
Advertisement
Advertisement
ಮಾಜಿ ಕೇಂದ್ರ ಸಚಿವ ದಿನೇಶ್ ತ್ರಿವೇದಿ ಹಾಗೂ ರಾಜ್ಯಸಭಾ ಸದಸ್ಯ ನದೀಮುಲ್ ಹಕ್, ಗೋಲಿಬಾರ್ ಘಟನೆಯಲ್ಲಿ ಮೃತಪಟ್ಟ ನೌಶೀನ್ ಕುದ್ರೋಳಿ ಮತ್ತು ಜಲೀಲ್ ಕಂದಕ್ ಮನೆಗಳಿಗೆ ತೆರಳಿ, ಕುಟುಂಬಕ್ಕೆ ಸಾಂತ್ವನ ಹೇಳಿದರು. ಇದೇ ವೇಳೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಘೋಷಣೆ ಮಾಡಿದ್ದ ಪರಿಹಾರದ ಚೆಕ್ಕನ್ನು ವಿತರಣೆ ಮಾಡಿದರು. ಇಬ್ಬರು ಕುಟುಂಬಸ್ಥರಿಗೂ ತಲಾ ಐದು ಲಕ್ಷದ ಪರಿಹಾರದ ಚೆಕ್ ನೀಡಿದರು.
Advertisement
ಇದೇ ವೇಳೆ ಮಾಧ್ಯಮಕ್ಕೆ ಮಾತನಾಡಿದ ದಿನೇಶ್ ತ್ರಿವೇದಿ, ಪೊಲೀಸ್ ಬಲದಿಂದ ಯಾರು ಕೂಡ ಹತ್ಯೆಗೀಡಾಗಬಾರದು. ಮಾನವೀಯ ರಹಿತ ಸಮಾಜದಲ್ಲಿ ಮಾತ್ರ ಪೊಲೀಸರಿಂದ ಸಾಯುವುದು. ಮಂಗಳೂರಿನ ಈ ಗೋಲಿಬಾರನ್ನು ಖಂಡಿಸುತ್ತೇನೆ ಎಂದರು. ಪೌರತ್ವ ಕಾಯ್ದೆ ವಿಚಾರದಲ್ಲಿ ಸಮಸ್ಯೆ ನಿವಾರಿಸುವಂತೆ ಪ್ರಧಾನಿಗೆ ಮನವಿ ಮಾಡುತ್ತೇನೆ ಎಂದು ಹೇಳಿದರು.