ನವದೆಹಲಿ: ಪಶ್ಚಿಮ ಬಂಗಾಳಕ್ಕೆ (West Bengal) ಬರಬೇಕಿದ್ದ ಕೇಂದ್ರ ಸರ್ಕಾರದಿಂದ ಹಣಕಾಸು ನೆರವು ನಿರಾಕರಿಸಿದ ವಿಷಯವನ್ನು ಪ್ರಸ್ತಾಪಿಸಿದಾಗ ತಮ್ಮ ಮೈಕ್ ಅನ್ನು ಮ್ಯೂಟ್ ಮಾಡಲಾಗಿದೆ ಎಂದು ಆರೋಪಿಸಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಪ್ರಧಾನಿ ನರೇಂದ್ರ ಮೋದಿ (Narendra Modi) ನೇತೃತ್ವದಲ್ಲಿ ನಡೆಯುತ್ತಿದ್ದ ನೀತಿ ಆಯೋಗದ ಸಭೆಯಿಂದ (NITI Aayog Meeting) ಹೊರ ನಡೆದಿದ್ದಾರೆ.
ರಾಷ್ಟ್ರಪತಿ ಭವನದ ಸಾಂಸ್ಕೃತಿನ ಭವನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನೀತಿ ಆಯೋಗದ ಸಭೆ ನಡೆಯುತ್ತಿದ್ದು ಸಭೆಯಲ್ಲಿ ಎಲ್ಲ ರಾಜ್ಯದ ಮುಖ್ಯಮಂತ್ರಿಗಳು ಮತ್ತು ಕೇಂದ್ರ ಸಚಿವರು ಭಾಗಿಯಾಗಿದ್ದರು. ತಮಿಳುನಾಡು, ಕರ್ನಾಟಕ, ಕೇರಳ, ದೆಹಲಿ, ತೆಲಂಗಾಣ, ಪಂಜಾಬ್ ಸಿಎಂಗಳು ಮೊದಲೇ ಸಭೆಯನ್ನು ಬಹಿಷ್ಕರಿಸಿದ್ದರು.
ಇಂಡಿಯಾ (INDIA) ಒಕ್ಕೂಟ ಆಡಳಿತ ರಾಜ್ಯಗಳ ಪೈಕಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಾತ್ರ ಸಭೆಯಲ್ಲಿ ಭಾಗಿಯಾಗಿದ್ದರು. ಸಭೆಯಲ್ಲಿ ಮಾತನಾಡಲು ಸರಿಯಾದ ಸಮಯ ನೀಡಿಲ್ಲ. ನನಗೂ ಮೊದಲು ಮಾತನಾಡಿದ ಸಿಎಂಗಳಿಗೆ 20 ನಿಮಿಷಕ್ಕೆ ಸಮಯ ನೀಡಲಾಗಿತ್ತು. ನನ್ನ ಸರದಿಯಲ್ಲಿ ಕೇವಲ ಐದು ನಿಮಿಷ ನೀಡಲಾಯಿತು. ನೆರವು ನಿರಾಕರಿಸಿದ ವಿಷಯ ಪ್ರಸ್ತಾಪಿಸಿದ್ದಂತೆ ಮೈಕ್ ಮ್ಯೂಟ್ ಮಾಡಲಾಯಿತು ಎಂದು ಅವರು ಆರೋಪಿಸಿದ್ದಾರೆ. ಇದನ್ನೂ ಓದಿ: ದೇಶದಲ್ಲಿ ಅತಿಹೆಚ್ಚು ಸ್ಟಾರ್ಟಪ್‌ಗಳು ನೋಂದಣಿಯಾಗಿರುವ ಎರಡನೇ ರಾಜ್ಯ ಕರ್ನಾಟಕ
ಸರ್ಕಾರದ ಈ ಕ್ರಮವನ್ನು ಬಂಗಾಳ ಮತ್ತು ಎಲ್ಲಾ ಪ್ರಾದೇಶಿಕ ಪಕ್ಷಗಳಿಗೆ ಅವಮಾನ ಮಾಡಿದಂತೆ. ನನ್ನನ್ನು ಏಕೆ ತಡೆದಿದ್ದೀರಿ, ಏಕೆ ತಾರತಮ್ಯ ಮಾಡುತ್ತಿದ್ದೀರಿ? ವಿರೋಧ ಪಕ್ಷದಿಂದ ನಾನು ಮಾತ್ರ ಇಲ್ಲಿ ಪ್ರತಿನಿಧಿಸುತ್ತಿದ್ದೇನೆ ಮತ್ತು ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸಬೇಕು ಎಂಬ ಹೆಚ್ಚಿನ ಆಸಕ್ತಿಯಿಂದ ಈ ಸಭೆಗೆ ಹಾಜರಾಗಿದ್ದೆ ಎಂದು ಅವರು ಗುಡುಗಿದರು.
ಇದೇ ವೇಳೆ ನೀತಿ ಆಯೋಗವನ್ನು ರದ್ದುಪಡಿಸುವ ಮತ್ತು ಯೋಜನಾ ಆಯೋಗವನ್ನು ಮರುಸ್ಥಾಪಿಸುವ ತನ್ನ ಬೇಡಿಕೆಯನ್ನು ಅವರು ಪುನರುಚ್ಚರಿಸಿದರು. ನೀತಿ ಆಯೋಗಕ್ಕೆ ಯಾವುದೇ ಹಣಕಾಸಿನ ಅಧಿಕಾರವಿಲ್ಲ, ಅದು ಹೇಗೆ ಕೆಲಸ ಮಾಡುತ್ತದೆ? ಅದಕ್ಕೆ ಹಣಕಾಸಿನ ಅಧಿಕಾರ ನೀಡಿ ಅಥವಾ ಯೋಜನಾ ಆಯೋಗವನ್ನು ಮರಳಿ ತನ್ನಿ ಎಂದು ಅವರು ಆಗ್ರಹಿಸಿದರು. ಇದನ್ನೂ ಓದಿ: ಬೆಂಗಳೂರು ಪಿಜಿಯಲ್ಲಿ ಯುವತಿಯ ಹತ್ಯೆ – ತಲೆಮರೆಸಿಕೊಂಡಿದ್ದ ಆರೋಪಿ ಮಧ್ಯಪ್ರದೇಶದಲ್ಲಿ ಅರೆಸ್ಟ್