ಬೆಂಗಳೂರು: ಚುನಾವಣೆ ಹತ್ತಿರ ಬರುತ್ತಿದ್ದಂತೆ ಕಾಂಗ್ರೆಸ್ ನಲ್ಲಿ ಗೆಲುವಿನ ಲೆಕ್ಕಾಚಾರ ಶುರುವಾಗಿದೆ. ಆದರೆ ಎಷ್ಟು ಸ್ಥಾನ ಗೆಲ್ಲುತ್ತೀರಿ ಎನ್ನುವ ರಾಹುಲ್ ಗಾಂಧಿ ಅವರ ಪ್ರಶ್ನೆಗೆ ಒಬ್ಬೊಬ್ಬ ನಾಯಕರು ಒಂದೊಂದು ಉತ್ತರ ನೀಡಿದ್ದಾರೆ ಎನ್ನುವ ಸುದ್ದಿ ಮೂಲಗಳಿಂದ ಪಬ್ಲಿಕ್ ಟಿವಿಗೆ ಸಿಕ್ಕಿದೆ.
ದೆಹಲಿಯಲ್ಲಿ ಎಐಸಿಸಿ ಅಧಿವೇಶನದಲ್ಲಿ ಕರ್ನಾಟಕ ಚುನಾವಣೆಯ ಹಿನ್ನೆಲೆಯಲ್ಲಿ ಕೈ ನಾಯಕರ ಜೊತೆ ರಾಹುಲ್ ಗಾಂಧಿ ಸಭೆ ನಡೆಸಿದ್ದಾರೆ. ಈ ವೇಳೆ ಮುಂದೆ ನಡೆಯಲಿರುವ ಚುನಾವಣೆಯಲ್ಲಿ ಕಾಂಗ್ರೆಸ್ ಎಷ್ಟು ಸ್ಥಾನ ಗೆಲ್ಲುತ್ತೆ ಎಂದು ಕ್ವಿಜ್ ಮಾದರಿಯಲ್ಲಿ ರಾಹುಲ್ ಗಾಂಧಿ ಪ್ರಶ್ನೆ ಮಾಡಿದ್ದಾರೆ.
Advertisement
ಈ ಪ್ರಶ್ನೆಗೆ ಇಂಧನ ಸಚಿವ ಡಿ.ಕೆ.ಶಿವಕುಮಾರ್ ನಮಗೆ 100 ಸೀಟ್ ಸಿಗಲಿದೆ ಎಂದು ಹೇಳಿದರೆ, ಲೋಕಸಭೆಯ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ 90 ಸೀಟ್ ಸಿಗಬಹುದು ಎಂದು ಉತ್ತರಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ 80 ಸೀಟ್ ಸಿಗಬಹುದು ಎಂದಿದ್ದಾರೆ.
Advertisement
Advertisement
Advertisement
ಕಾಂಗ್ರೆಸ್‍ಗೆ ಬಹುಮತ ಸಿಗುವುದು ಕಷ್ಟ ಎನ್ನುವ ಅಭಿಪ್ರಾಯಕ್ಕೆ ರಾಜ್ಯ ನಾಯಕರು ಬಂದಿದ್ದರೆ, ಸಿಎಂ ಸಿದ್ದರಾಮಯ್ಯ ಮಾತ್ರ ನಮಗೆ ಪಕ್ಕಾ 128 ಸ್ಥಾನ ಸಿಗುತ್ತೆ ಎಂದು ಉತ್ತರಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಮಾತಿಗೆ ರಾಹುಲ್ ಗಾಂಧಿ ಫುಲ್ ಖುಷ್ ಆಗಿ, ನೋಡಿ ಸಿದ್ದರಾಮಯ್ಯನವರೇ ನೀವು ಒಬ್ಬರೇ ವಿಶ್ವಾಸದಿಂದ ಇದ್ದೀರಿ. ಉಳಿದವರೆಲ್ಲ ಮೈತ್ರಿ ಸರ್ಕಾರದ ಮೇಲೆ ಕಣ್ಣಿಟ್ಟು ಕುರ್ಚಿ ಆಸೆಪಟ್ಟಿದ್ದಾರೆ. ನೀವು ಒಬ್ಬರೇ ನಮ್ಮದು ಸ್ವತಂತ್ರ ಸರ್ಕಾರ ಬರುತ್ತೆ ಎಂದು ಹೇಳಿ ಶಹಬ್ಬಾಸ್ ಎಂದಿದ್ದಾರೆ.
ನಂತರ 128 ಸ್ಥಾನ ಬಂದೇ ಬರುತ್ತೆ ಎಂದು ಪಕ್ಕಾ ಹೇಗೆ ಹೇಳುತ್ತೀರಿ ಎಂದು ರಾಹುಲ್ ಗಾಂಧಿ ಸಿದ್ದರಾಮಯ್ಯನವರಿಗೆ ಮರುಪ್ರಶ್ನೆ ಹಾಕಿದ್ದಾರೆ. ಇದಕ್ಕೆ, ನೋಡಿ ನಾನು ಎಂಟು ಹಿಂದಿನ ಸರ್ಕಾರಗಳನ್ನು ನೋಡಿದ್ದೇನೆ. ಚುನಾವಣೆಗೆ ಹೋಗಿರುವ ಸನ್ನಿವೇಶಗಳನ್ನ ನೋಡಿದ್ದೇನೆ. ಹಿಂದಿನ ಸರ್ಕಾರಗಳಂತೆ ನಮ್ಮ ಸರ್ಕಾರದ ಆಡಳಿತಕ್ಕೆ ಅಷ್ಟೊಂದು ವಿರೋಧ ಬಂದಿಲ್ಲ. ನಮ್ಮ ಅಭಿವೃದ್ಧಿ ಯೋಜನೆಗಳು, ಅನ್ನಭಾಗ್ಯದಂತಹ ಜನಪರ ಯೋಜನೆಗಳಿವೆ. ಹೀಗಾಗಿ ನಮ್ಮ ಸರ್ಕಾರ ಬಂದೇ ಬರುತ್ತೆ. ಡೋಂಟ್‍ವರಿ ಎಂದು ಸಿಎಂ ತನ್ನ ಉತ್ತರಕ್ಕೆ ಸಮರ್ಥನೆ ನೀಡಿದರು ಎಂದು ಮೂಲಗಳು ತಿಳಿಸಿವೆ.