ರಾಯಚೂರು: ಜಿಲ್ಲೆಯಲ್ಲಿರುವ ರಿಮ್ಸ್ ಆಸ್ಪತ್ರೆಯ ಅಧಿಕಾರಿಗಳು ರೋಗಿಗಳ ಬಗ್ಗೆ ನಿರ್ಲಕ್ಷ್ಯ ತೋರಿ ಬೇಜವಾಬ್ದಾರಿತನ ಮೆರೆದಿದ್ದಾರೆ.
ರೋಗಿಗಳ ಆರೋಗ್ಯದ ಬಗ್ಗೆ ಕಾಳಜಿ ವಹಿಸದೇ ಆಸ್ಪತ್ರೆಯ ಜನರಲ್ ವಾರ್ಡ್ ನಲ್ಲಿ ವೆಲ್ಡಿಂಗ್ ಕೆಲಸ ಮಾಡಿದ್ದಾರೆ. ರೋಗಿಗಳಿಗೆ ತೊಂದರೆ ಆಗುತ್ತೆ ಅನ್ನೋ ಕನಿಷ್ಠ ಅರಿವಿಲ್ಲದೆ ಆಡಳಿತ ಮಂಡಳಿ, ಅಧಿಕಾರಿಗಳು, ವೈದ್ಯರು ರೋಗಿಗಳನ್ನು ಬೇರೆ ವಾರ್ಡ್ ಗೆ ಶಿಫ್ಟ್ ಮಾಡದೇ ವೆಲ್ಡಿಂಗ್ ಕೆಲಸ ಮಾಡಿಸಿದ್ದಾರೆ.
ಧೂಳು, ಶಬ್ದ, ಬೆಂಕಿ ಕಿಡಿಗಳ ಮಧ್ಯೆ ಮಲಗಿರುವ ರೋಗಿಗಳು ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಕಿರಿಕಿರಿ ಅನುಭವಿಸಿದ್ದಾರೆ. ಇದೇ ತಿಂಗಳು 14 ರಂದು ಆರೋಗ್ಯ ಸಚಿವ ಶ್ರೀರಾಮುಲು ಆಸ್ಪತ್ರೆಗೆ ಭೇಟಿ ನೀಡಿ ವಿವಿಧ ವಾರ್ಡ್ ಗಳ ವೀಕ್ಷಣೆ ಮಾಡಿ ಆಸ್ಪತ್ರೆ ಅವ್ಯವಸ್ಥೆ ಬಗ್ಗೆ ಗರಂ ಆಗಿದ್ದರು.
ರಾತ್ರಿ ಆಸ್ಪತ್ರೆಯಲ್ಲಿ ಸಚಿವರು ವಾಸ್ತವ್ಯ ಕೂಡ ಹೂಡಿದ್ರು. ಆಸ್ಪತ್ರೆಯಲ್ಲಿನ ಅವ್ಯವಸ್ಥೆ, ವೈದ್ಯರ ನಿರ್ಲಕ್ಷದ ಬಗ್ಗೆ ರೋಗಿಗಳ ಸಂಬಂಧಿಕರು ಸಚಿವರ ಮುಂದೆ ಸಮಸ್ಯೆ ಹೇಳಿಕೊಂಡಿದ್ದರು. ಇದೀಗ ಸಚಿವರ ಭೇಟಿ ನಂತರವೂ ಮತ್ತೆ ಆಡಳಿತ ಮಂಡಳಿ ತನ್ನ ಹಳೆಯ ಚಾಳಿಯನ್ನೇ ಮುಂದುವರಿಸಿದೆ. ವೈದ್ಯರ ಬೇಜವಾಬ್ದಾರಿ ವರ್ತನೆಗೆ ಆಸ್ಪತ್ರೆ ರೋಗಿಗಳು, ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.