ಚಿಕ್ಕಮಗಳೂರು: ನಗರದ ಎಸ್‌ಪಿ ಅಕ್ಷಯ್ ಎಂ.ಮಚ್ಚಿಂದ್ರಾ ಅವರು ಜಿಲ್ಲಾ ಪೊಲೀಸರಿಗೆ ಬಾಡಿ ಕರಗಿಸೋ ಟಾಸ್ಕ್ ನೀಡಿದ್ದಾರೆ. ಟಾಸ್ಕ್ ಅಂದ್ರೆ ಕಡ್ಡಾಯವಾಗಿ ಕರಗಿಸಲೇಬೇಕು ಅಂತಲ್ಲ. ದಡೂತಿ ದೇಹ ಇರುವ ಪೊಲೀಸರು ಆರೋಗ್ಯದ ಹಿತದೃಷ್ಟಿ ಜೊತೆ ಸೇವೆಯಲ್ಲೂ ಸೃಜನಶೀಲವಾಗಿರಲು ಸಹಕಾರಿಯಾಗುವಂತೆ ದೇಹದ ತೂಕವನ್ನು ಇಳಿಸುವಂತೆ ಆಫರ್ ಕೊಟ್ಟಿದ್ದಾರೆ.
ಜಿಲ್ಲೆಯಲ್ಲಿ 28 ಠಾಣೆಗಳಿದ್ದು, ಬಹುತೇಕರು ತಮ್ಮ ದೇಹದ ಹೈಟ್‌ಗಿಂತ ಹೆಚ್ಚಿನ ತೂಕ ಹೊಂದಿದ್ದಾರೆ. ಕೆಲವರು 70-80 ಕೆ.ಜಿ. ತೂಕವಿದ್ರೆ, ನೂರು ಕೆ.ಜಿ. ಮೀರಿರುವ ಪೊಲೀಸರೂ ಇದ್ದಾರೆ. ಹೀಗಾಗಿ, ಯಾರು-ಯಾರು ಹೆಚ್ಚಿನ ತೂಕ ಹೊಂದಿದ್ದಾರೋ ಅವರು ದೇಹದ ತೂಕವನ್ನು ಇಳಿಸಿಕೊಳ್ಳುವಂತೆ ಆದೇಶವಲ್ಲ, ಸೂಚಿಸಿದ್ದಾರೆ. ಅದು ಎಲ್ಲಾ ವಿಧದಲ್ಲೂ ಒಳ್ಳೆಯದು ಎಂಬ ಕಾರಣಕ್ಕೆ.
Advertisement
Advertisement
ಆದರೆ ಇಂತದ್ದೇ ಆಫರ್ ಎಂದು ಎಸ್‌ಪಿ ಹೇಳಿಲ್ಲ. ಯಾರ್ಯಾರು ದೇಹದ ತೂಕವನ್ನು ಇಳಿಸಿಕೊಳ್ಳುತ್ತಾರೋ ಅವರಿಗೆ ರಿವಾರ್ಡ್ ಕೊಡುವುದಾಗಿ ಹೇಳಿದ್ದಾರೆ. ರಿವಾರ್ಡ್ ಏನೆಂದು ಹೇಳಿಲ್ಲ, ಅದು ಸಸ್ಪೆನ್ಸ್ ಎಂದಿದ್ದಾರೆ.
Advertisement
ಈ ಹಿಂದೆ ಚಿಕ್ಕಮಗಳೂರು ಎಸ್‌ಪಿ ಆಗಿದ್ದ ಅಣ್ಣಾಮಲೈ ಕೂಡ ಇದೇ ರೀತಿ ಟಾಸ್ಕ್ ಕೊಟ್ಟಿದ್ದರು. ಆಗ ದೇಹದ ತೂಕ ಇಳಿಸಿದ ಪೊಲೀಸರಿಗೆ ಅವರು ಕೇಳಿದ ಕಡೆ ವರ್ಗಾವಣೆ ನೀಡಿದ್ದರು. ಹೀಗಾಗಿ ಈ ಬಾರಿಯೂ ಅಕ್ಷಯ್ ಸಾಹೇಬ್ರು ಅದೇ ರೀತಿ ರಿವಾರ್ಡ್ ಕೊಡಬಹುದು ಎಂದು ದಡೂತಿ ದೇಹದ ಪೊಲೀಸರು ದೇಹವನ್ನು ಕರಗಿಸಲು ಮುಂದಾಗಿದ್ದಾರೆ. ಸೇವೆಯಲ್ಲಿ ಬಿಡುವು ಸಿಕ್ಕಾಗೆಲ್ಲಾ ವಾಕಿಂಗ್, ರನ್ನಿಂಗ್, ಸೈಕ್ಲಿಂಗ್ ಅಂತೆಲ್ಲಾ ಓಡಿದ್ದೇ ಓಡಿದ್ದು, ಸೈಕಲ್ ತುಳ್ದಿದ್ದೇ ತುಳಿದಿದ್ದು. ಇದನ್ನೂ ಓದಿ: ರಸ್ತೆ ಗುಂಡಿಗೆ ಬಿದ್ದ ಕಿರುತೆರೆ ಕಲಾವಿದೆ – N.R ಕಾಲೋನಿ ಬಳಿ ನಟಿ ಸುನೇತ್ರಾ ಸ್ಕೂಟರ್ ಅಪಘಾತ
Advertisement
ಪೊಲೀಸರಿಗೆ ಎದೆ ಮುಂದಿರಬೇಕು, ಹೊಟ್ಟೆ ಹಿಂದಿರಬೇಕು ಎನ್ನೋ ಮಾತಿದೆ. ಆದರೆ ಸೇವೆಗೆಂದು ಊರೂರು ಅಲೆದುಕೊಂಡು, ಸಿಕ್ಕ ಸಿಕ್ಕಿಲ್ಲಿ ತಿಂದುಕೊಂಡು, ದೇಹದ ಹೆಚ್ಚಿನ ತೂಕ ಹೊಂದಿರುವ ಪೊಲೀಸರಿಗಾಗಿಯೇ ಎಸ್‌ಪಿ ಆಫರ್ ನೀಡಿದ್ದಾರೆ.
ಕೊರೊನಾ ವೇಳೆ ಹೆಲ್ತ್ ಬಗ್ಗೆ ಗಮನ ನೀಡದೆ ಜನರಿಗಾಗಿ ಡ್ಯೂಟಿ ಮಾಡಿದ್ದರು. ವೀಕ್ಲಿ ಪರೇಡ್‌ನಲ್ಲಿ ಹೆಚ್ಚಿನ ತೂಕದಲ್ಲಿ ಕಾಣುತ್ತಿದ್ದರು. ಕೆಲಸದ ನಿಮಿತ್ತ ಟೈಂಗೆ ಸರಿಯಾಗಿ ಊಟ-ತಿಂಡಿ ಮಾಡಲು ಸಾಧ್ಯವಾಗಲ್ಲ. ಆದ್ದರಿಂದ ಗ್ಯಾಸ್ಟಿಕ್ ಹೆಚ್ಚುವುದರ ಜೊತೆ ವಿವಿಧ ರೀತಿಯ ಖಾಯಿಲೆಗಳು ಕೂಡ ಬರುವ ಸಾಧ್ಯತೆ ಇದೆ. ರೆಗ್ಯುಲರ್ ಮೆಡಿಕಲ್ ಚೆಕಪ್‌ನಲ್ಲೂ ಇದನ್ನು ಗಮನಿಸಿದ್ದೇವೆ. ತೂಕ ಹೆಚ್ಚುವುದರಿಂದ ಕಾಲು ನೋವು, ಊದುವುದನ್ನೂ ನಾವು ಗಮನಿಸಿದ್ದೇವೆ. ಹೀಗಾಗಿ ಹೆಚ್ಚಿನ ತೂಕ ಇರುವವರು ಒಂದೆರಡು ತಿಂಗಳಲ್ಲಿ ಸೇವೆ ಜೊತೆ ಆರೋಗ್ಯದ ಕಡೆ ಗಮನ ಹರಿಸಿ, ಅವರ ದೇಹಕ್ಕೆ ತಕ್ಕಂತೆ ತೂಕವನ್ನು ಇಳಿಸಿಕೊಂಡರೆ ಅಂತವರನ್ನು ಗುರುತಿಸಿ ಬಹುಮಾನ ಕೂಡ ನೀಡಲಾಗುವುದು ಎಂದು ಸ್ವತಃ ಎಸ್‌ಪಿಯೇ ಪೊಲೀಸರಿಗೆ ಭರ್ಜರಿ ಆಫರ್ ಕೊಟ್ಟಿದ್ದಾರೆ. ಇದನ್ನೂ ಓದಿ: ಧ್ವನಿವರ್ಧಕ ಗಲಾಟೆ ಮುಗಿದಿದ್ದು, ರಾಜ್ಯದಲ್ಲಿ ಶಾಂತಿ ನೆಲೆಸಿದೆ: ಸಂಜಯ್ ರಾವತ್
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮಾತನ್ನು ಕೇಳಿ ಹೆಚ್ಚಿನ ತೂಕ ಇರುವವರು ಟೈಂ ಸಿಕ್ಕಾಗೆಲ್ಲಾ ವಾಕಿಂಗ್, ರನ್ನಿಂಗ್ ಎಂದು ದೇಹಕ್ಕೆ ಕೆಲಸ ಕೊಟ್ಟಿದ್ದಾರೆ. ಟೈಂಗೆ ಸರಿಯಾಗಿ ಊಟ-ತಿಂಡಿಯತ್ತಲೂ ಗಮನ ಹರಿಸಿದ್ದಾರೆ. ಎಸ್‌ಪಿ ನೀಡುವ ರಿವಾರ್ಡ್‌ಗಾಗಿ ಪೊಲೀಸರು ತೂಕ ಇಳಿಸಿಕೊಳ್ಳೋದಕ್ಕೆ ತಮ್ಮ ಲೈಫ್ ಸ್ಟೈಲನ್ನೇ ಚೇಂಜ್ ಮಾಡಿಕೊಂಡಿದ್ದಾರೆ. ಇದು ಒಳ್ಳೆ ಬೆಳವಣಿಗೆ ಕೂಡ. ಆದರೆ ಎಸ್‌ಪಿ ಯಾರಿಗೂ ಟೈಂ ಬಾಂಡ್ ನೀಡಿಲ್ಲ.
ಕೆಲವರು ತಿಂಗಳಿಗೆ ಐದಾರು ಕೆ.ಜಿ. ಕಡಿಮೆ ಮಾಡಬಹುದು. ಕೆಲವರಿಗೆ ಎರಡ್ಮೂರು ಕೆ.ಜಿ. ಇಳಿಸೋದು ಕಷ್ಟವಾಗುತ್ತೆ. ಹೀಗಾಗಿ ಅವರ ದೇಹದ ಶಕ್ತಿಗನುಗುಣವಾಗಿ ಇಳಿಸಿಕೊಳ್ಳಲಿ ಎಂದಿದ್ದಾರೆ. ಕೆಲ ಪೊಲೀಸರಿಗೆ ಎಸ್‌ಪಿ ಏನು ರಿವಾರ್ಡ್ ಕೊಡುತ್ತಾರೆ ಎನ್ನುವ ಕುತೂಹಲ ಶರುವಾಗಿದ್ದು, ಇನ್ನೂ ಕೆಲವರು ನಮಗೆ ನಮ್ಮೂರಿನ ಅಕ್ಕಪಕ್ಕದ ಸ್ಟೇಷನ್‌ಗೆ ಟ್ರಾನ್ಸ್ಫರ್ ಕೊಟ್ರೆ ಸಾಕಪ್ಪಾ ಅಂತಿದ್ದಾರೆ.
ಪೊಲೀಸರೆಂದರೆ ಜನರಿಗೆ ಕೆಲ ಪೊಲೀಸರ ಡೊಳ್ಳೊಟ್ಟೆಯೇ ಕಣ್ಮುಂದೆ ಬರುತ್ತಿತ್ತು. ಈ ಹೊಟ್ಟೆ ಹೊತ್ಕೊಂಡ್ ಇವ್ರು ಕಳ್ರನ್ನ ಹೇಗ್ ಹಿಡೀತಾರೆ ಎಂದು ಜನ ಮಾತನಾಡುತ್ತಿದ್ದರು. ಆದರೆ ಇನ್ನು ಮುಂದೆ ಹಾಗನ್ನುವಂತಿಲ್ಲ. ಪೊಲೀಸರು ದೇಹವನ್ನು ದಂಡಿಸುವುದರ ಜೊತೆ ವೃತ್ತಿಯಲ್ಲೂ ಕಾರ್ಯಪ್ರವೃತ್ತರಾಗಿದ್ದಾರೆ. ಬಹುಶಃ ಇನ್ನು ಮುಂದೆ ಪೊಲೀಸರಿಂದ ತಪ್ಪಿಸಿಕೊಳ್ಳಬೇಕೆಂದರೆ, ಕಳ್ಳರೂ ವರ್ಕ್ಔಟ್, ವಾಕಿಂಗ್, ರನ್ನಿಂಗ್, ಸೈಕ್ಲಿಂಗ್ ಅಂತೆಲ್ಲಾ ಕಸರತ್ತು ಮಾಡಬೇಕು. ಇಲ್ಲವಾದರೆ ಅದೇ ಮಾವನ ಮನೆಯಲ್ಲಿ ಮುದ್ದೆ ಮುರಿಯೋದು ಗ್ಯಾರಂಟಿ ಅನ್ಸುತ್ತೆ.