ಮೈಸೂರು: ಕಳೆದ ಬಾರಿ ದಸರಾಗೆ ಬಂದ ಕ್ಯಾಪ್ಟನ್ ಅರ್ಜುನ ನೇತೃತ್ವದ ಗಜಪಡೆ ನಾಡಿನಲ್ಲಿ ಸಿಕ್ಕ ಅದ್ಧೂರಿ ಅತಿಥ್ಯದಿಂದ ತಮ್ಮ ದೇಹ ತೂಕ ಹೆಚ್ಚಿಸಿಕೊಂಡು ಕಾಡಿಗೆ ಹೋಗಿದ್ದವು. ಈಗ ಕಾಡಿನಿಂದ ದಸರಾಗಾಗಿ ಬಂದ ಇದೇ ಗಜಪಡೆಯ ದೇಹ ತೂಕದಲ್ಲಿ ಭಾರೀ ಇಳಿಕೆ ಕಂಡಿದೆ.
ಇಂದು ಗಜಪಡೆಯ ದೇಹ ತೂಕ ಹಾಕುವ ಪ್ರಕ್ರಿಯೆ ನಡೆಯಿತು. ಈ ವೇಳೆ ಕಳೆದ ವರ್ಷ ದಸರಾ ಮುಗಿಸಿ ಕಾಡಿಗೆ ಹೋಗುವಾಗ ಇದ್ದ ಆನೆಗಳ ತೂಕಕ್ಕೂ ಇವತ್ತಿನ ತೂಕಕ್ಕೂ ವ್ಯತ್ಯಾಸ ಕಾಣುತ್ತಿದೆ. ಕಾಡಿನಲ್ಲಿ ಆನೆಗಳ ತೂಕ ಗಮನಾರ್ಹ ರೀತಿಯಲ್ಲಿ ಕಡಮೆ ಆಗಿದೆ. ಕಳೆದ ಬಾರಿ ಕ್ಯಾಪ್ಟನ್ ಅರ್ಜುನ 5,870 ಕೆಜಿ ಇದ್ದ. ಈಗ 5,250 ಕೆಜಿ ಇದ್ದಾನೆ. ಅಲ್ಲಿಗೆ 620 ಕೆಜಿ ಕಡಿಮೆ ಆಗಿದ್ದಾನೆ.
Advertisement
Advertisement
ದಸರಾ ಗಜಪಡೆಯ ಮಾಜಿ ಕ್ಯಾಪ್ಟನ್ ಬಲರಾಮ ಆನೆ ಕಳೆದ ವರ್ಷ 5,570 ಕೆಜಿ ಇದ್ದ. ಈಗ 4,990 ಕೆಜಿ ಆಗಿದ್ದಾನೆ. ಅಲ್ಲಿಗೆ 580 ಕೆಜಿ ಕಡಿಮೆ ಆಗಿದ್ದಾನೆ. ಇದೇ ರೀತಿ ವಿಜಯ ಆನೆ ಕಳೆದ ವರ್ಷ 2,855 ಕೆಜಿ ಇತ್ತು. ಈಗ 2770 ಕೆಜಿಗೆ ಇಳಿದಿದೆ. ಅಭಿಮನ್ಯು ಆನೆ ಕಳೆದ ವರ್ಷ 5,290 ಕೆಜಿ ಇತ್ತು. ಈಗ 4850 ಕೆಜಿ ಆಗಿದೆ. ಈ ಬಾರಿಯ ದಸರಾ ಗಜಪಡೆಯ ಕಿರಿಯ ಸದಸ್ಯ 17 ವರ್ಷದ ಭೀಮ 3,410 ಕೆಜಿ ಇದ್ದಾನೆ. ಭವಿಷ್ಯದಲ್ಲಿ ದಸರಾ ಗಜಪಡೆಯ ಕ್ಯಾಪ್ಟನ್ ಆಗುವ ರೀತಿಯ ಬೆಳವಣಿಗೆ ಭೀಮನಲ್ಲಿ ಕಂಡಿದೆ. ಆ ನಿಟ್ಟಿನಲ್ಲೇ ತಯಾರಿ ಕೂಡ ಸಾಗಿದೆ.