ಜೀ ಕನ್ನಡ ವಾಹಿನಿಯ ಜನಪ್ರಿಯ ಟಾಕ್ ಶೋ ವೀಕೆಂಡ್ ವಿತ್ ರಮೇಶ್ ಸೀಸನ್ 5 (Weekend with Ramesh) ಅತೀ ಶೀಘ್ರದಲ್ಲೇ ಶುರುವಾಗಲಿದೆ. ಮಾರ್ಚ್ 25ರಿಂದ ಪ್ರಸಾರವಾಗಲಿದೆ ಎನ್ನಲಾದ ಈ ಕಾರ್ಯಕ್ರಮದ ಮೊದಲ ಅತಿಥಿಯಾಗಿ ರಿಷಬ್ ಶೆಟ್ಟಿ (Rishabh Shetty) ಬರುತ್ತಾರೆ ಎಂದು ಹೇಳಲಾಗಿತ್ತು. ಈಗಾಗಲೇ ರಿಷಬ್ ಬಗ್ಗೆ ರಮೇಶ್ (Ramesh Arvind) ತಂಡ ಸಂಶೋಧನೆ ನಡೆಸಿದ್ದಾರೆ ಎಂಬ ಮಾಹಿತಿ ಇತ್ತು. ಅಲ್ಲದೇ, ರಿಷಬ್ ಮೊದಲನೇ ಎಪಿಸೋಡ್ ಗಾಗಿ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ ಎನ್ನುವ ಸುದ್ದಿಯಿತ್ತು. ಆದರೆ, ಮೊದಲ ಎಪಿಸೋಡಿನಲ್ಲಿ ಬರುವ ಅತಿಥಿ ಬದಲಾಗಿದ್ದಾರೆ.
ನಿನ್ನೆಯಿಂದ ವೀಕೆಂಡ್ ವಿತ್ ರಮೇಶ್ ಸೀಸನ್ 5ರ ಚಿತ್ರೀಕರಣ ಶುರುವಾಗಿದ್ದು, ಮೊದಲನೇ ಅತಿಥಿಯಾಗಿ ಖ್ಯಾತ ನೃತ್ಯ ನಿರ್ದೇಶಕ, ನಿರ್ದೇಶಕ, ನಟ ಪ್ರಭುದೇವ (Prabhudeva) ಆಗಮಿಸಿದ್ದಾರೆ. ಸೀಸನ್ 5ರ ಮೊದಲ ಅತಿಥಿಯಾಗಿ ಪ್ರಭುದೇವ ಕಾಣಿಸಿಕೊಳ್ಳಲಿದ್ದಾರೆ. ನಿನ್ನೆ ಬೆಂಗಳೂರಿನ ಅಬ್ಬಯ್ಯ ನಾಯ್ಡು ಸ್ಟುಡಿಯೋದಲ್ಲಿ ನಡೆದ ಚಿತ್ರೀಕರಣದಲ್ಲಿ ಪ್ರಭುದೇವ ಪಾಲ್ಗೊಂಡಿದ್ದಾರೆ. ಇದನ್ನೂ ಓದಿ: ಬರ್ತ್ಡೇ ಸಂಭ್ರಮದ ಫೋಟೋ ಹಂಚಿಕೊಂಡ ರಾಧಿಕಾ ಪಂಡಿತ್
ಮೈಸೂರು ಮೂಲದ ಪ್ರಭುದೇವ ಕನ್ನಡ, ತಮಿಳು ಮತ್ತು ಹಿಂದಿ ಸಿನಿಮಾ ರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು. ನಿರ್ದೇಶನ, ನಟನೆ, ನೃತ್ಯ ನಿರ್ದೇಶನ, ನಿರ್ಮಾಣ ಹೀಗೆ ಸಿನಿಮಾ ರಂಗದ ಹಲವಾರು ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರು. ಪ್ರಭುದೇವ ಅವರ ತಂದೆ, ಸಹೋದರರು ಸಿನಿಮಾ ರಂಗದಲ್ಲೇ ದುಡಿದವರು. ಅಲ್ಲದೇ, ಪ್ರಭುದೇವ ಅವರ ಬದುಕು ವರ್ಣರಂಜಿತವಾದದ್ದು. ಹಾಗಾಗಿ ಸಹಜವಾಗಿಯೇ ಇವರ ಎಪಿಸೋಡ್ ಕುತೂಹಲದಿಂದ ಕೂಡಿರಲಿದೆ.
ಸೀಸನ್ 5ರಲ್ಲಿ ಕೇವಲ ಸೆಲೆಬ್ರಿಟಿಗಳಿಗೆ ಮಾತ್ರವಲ್ಲ, ಸಾಮಾನ್ಯ ಸಾಧಕರಿಗೂ ಅವಕಾಶ ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ಕ್ರಿಕೆಟ್, ರಾಜಕಾರಣಿಗಳು, ಸಿನಿಮಾ, ಕಿರುತೆರೆ, ರಂಗಭೂಮಿ ಹೀಗೆ ಬೇರೆ ಬೇರೆ ಕ್ಷೇತ್ರಗಳ ಸಾಧಕರು ಈ ಬಾರಿ ವೀಕೆಂಡ್ ಕುರ್ಚಿಯ ಮೇಲೆ ಕೂತು, ತಮ್ಮ ಕಥೆಯನ್ನು ಹೇಳಿಕೊಳ್ಳಲಿದ್ದಾರೆ. ಎಂದಿನಂತೆ ರಮೇಶ್ ಅರವಿಂದ್ ಅವರ ಮಾತಿಗೆ ಕಿವಿಯಾಗಲಿದ್ದಾರೆ.