ವಾರಾಂತ್ಯ ರಸ್ತೆ ಬದಿ ಉತ್ಸವಕ್ಕೆ ದ.ಕ. ಜಿಲ್ಲಾಡಳಿತ ಯೋಜನೆ

Public TV
3 Min Read
dakshina kannada dc

– ಸ್ಥಳೀಯ ಕಲಾವಿದರು, ವ್ಯಾಪಾರಿಗಳಿಗೆ ವೇದಿಕೆ
– ಪ್ರವಾಸೋದ್ಯಮ, ಬೀಚ್ ಮೂಲ ಸೌಕರ್ಯ ಅಭಿವೃದ್ಧಿಗೆ ಕ್ರಮ
– ಪ್ರವಾಸಿಗರನ್ನು ಸೆಳೆಯಲು ವಿವಿಧ ರೀತಿಯ ಯೋಜನೆ

ಮಂಗಳೂರು: ಕೊರೊನಾ 2ನೇ ಅಲೆ ತಗ್ಗುತ್ತಿರುವಂತೆಯೇ ಜಿಲ್ಲೆಯಲ್ಲಿ ಸ್ಥಳೀಯ ಕಲಾವಿದರು ಹಾಗೂ ವ್ಯಾಪಾರಿಗಳಿಗೆ ವೇದಿಕೆಯ ಜೊತೆಗೆ ಜಿಲ್ಲೆಯ ಜನರಿಗೆ ವೀಕೆಂಡ್ ಮನರಂಜನೆಗೆ ಜಿಲ್ಲಾಡಳಿತ ಯೋಜನೆ ರೂಪಿಸಿದೆ.

ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಇಂದು ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿ ಕುರಿತು ಆಯೋಜಿಸಲಾದ ಜಿಲ್ಲಾಧಿಕಾರಿ ಜತೆಗಿನ ಸಂವಾದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಮಾತನಾಡಿ, ನಗರದ ಪ್ರಮುಖ ರಸ್ತೆಗಳಾದ ಕದ್ರಿ ಪಾರ್ಕ್ ಎದುರು ಹಾಗೂ ಕ್ಲಾಕ್‍ಟವರ್ ನಿಂದ ಎ.ಬಿ.ಶೆಟ್ಟಿ ಸರ್ಕಲ್ ರಸ್ತೆಯಲ್ಲಿ ವಾರಾಂತ್ಯ ರಸ್ತೆ ಬದಿ ಉತ್ಸವ (Weekend Street Festival Mangaluru) ನಡೆಸುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದರು.

mng cng beach bandipur

ವಾರಾಂತ್ಯದ ದಿನಗಳಲ್ಲಿ (ಶನಿವಾರ, ಭಾನುವಾರ) ನಿಗದಿತ ರಸ್ತೆಯುದ್ದಕ್ಕೂ ಸ್ಥಳೀಯ ಆಹಾರ, ಕರಕುಶಲ ವಸ್ತುಗಳು ಸೇರಿದಂತೆ ತಾತ್ಕಾಲಿಕ ವ್ಯಾಪಾರ ಮಳಿಗೆಗಳು ಹಾಗೂ ಸ್ಥಳೀಯ ಕಲಾವಿದರಿಂದ ಮನರಂಜನಾ ಕಾರ್ಯಕ್ರಮಗಳ ಮೂಲಕ ಜನರಿಗೆ ಮನರಂಜನೆಯ ಜೊತೆಗೆ ಸಣ್ಣಪುಟ್ಟ ವ್ಯಾಪಾರಸ್ಥರಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗಿದೆ. ಈ ಉತ್ಸವ ವರ್ಷಪೂರ್ತಿ ವಾರಾಂತ್ಯದಲ್ಲಿ ನಿರಂತರ ನಡೆಸಲು ಚಿಂತನೆ ಮಾಡಲಾಗಿದೆ. ಕೊರೊನಾ ಪಾಸಿಟಿವಿಟಿ ದರ ಇನ್ನಷ್ಟು ಕಡಿಮೆಯಾಗುವ ಜೊತೆಗೆ ಮೂರನೇ ಅಲೆಯ ಆತಂಕವಿಲ್ಲದಿದ್ದರೆ ಇದನ್ನು ಶೀಘ್ರದಲ್ಲೇ ಆರಂಭಿಸಲಾಗುವುದು ಎಂದು ಅವರು ಹೇಳಿದರು. ಇದನ್ನೂ ಓದಿ: ಅ. 1ರಿಂದ ಥಿಯೇಟರ್‌ಗಳು ಹೌಸ್‍ಫುಲ್- ಕಂಡೀಷನ್ಸ್ ಅಪ್ಲೈ

ಬೀಚ್‍ಗಳ ಅಭಿವೃದ್ಧಿಗೆ ಕ್ರಮ: ತಣ್ಣೀರುಬಾವಿ, ಪಣಂಬೂರು ಸೇರಿದಂತೆ ದ.ಕ. ಜಿಲ್ಲೆಯ ಬೀಚ್‍ಗಳಲ್ಲಿ ಮೂಲಭೂತ ಸೌಕರ್ಯದೊಂದಿಗೆ ಪ್ರವಾಸಿಗರನ್ನು ಸೆಳೆಯಲು ವಿಭಿನ್ನ ರೀತಿಯ ಕ್ರಮಗಳನ್ನು ರೂಪಿಸಲಾಗಿದೆ. ಪ್ರವಾಸಿಗರಿಗೆ ಮಂಗಳೂರಿನ ಒಳಗಡೆ ಇರುವ ಬೀಚ್‍ಗಳನ್ನು ಸಂಪರ್ಕಿಸಲು ಅನುಕೂಲವಾಗುವಂತೆ ಬಸ್ ವ್ಯವಸ್ಥೆ ಬಗ್ಗೆ ಸೆ.27ರಂದು ಪ್ರವಾಸೋದ್ಯಮ ದಿನದ ಅಂಗವಾಗಿ ನಡೆಯುವ ಸಭೆಯಲ್ಲಿ ಚರ್ಚಿಸಲಾಗುವುದು. ಬೀಚ್‍ಗಳಿಗೆ ಆಗಮಿಸುವವರಿಗೆ ಶೌಚಾಲಯ, ವಿಶ್ರಾಂತಿ ಕೊಠಡಿ ಜೊತೆಗೆ ಹೋಟೆಲ್ ಮಾದರಿಯ ಊಟೋಪಾಚರ ವ್ಯವಸ್ಥೆಗೆ ಕ್ರಮ ವಹಿಸಲಾಗುವುದು ಎಂದರು.

ಬೆಂಗ್ರೆ ಬೀಚ್‍ನಲ್ಲಿ ಗಾಲ್ಫ್ ಕಾರ್ಸ್ ಗಾಗಿ 2007-08ನೇ ಸಾಲಿನಲ್ಲಿ ಓಪಸ್ ಲಗೂನಾ ಸಂಸ್ಥೆ ಟೆಂಡರ್ ವಹಿಸಿದ್ದು, ಸಂಸ್ಥೆಗೆ ಇದೀಗ ಸಿಆರ್ ಝಡ್ ಅನುಮತಿ ದೊರಕಿದೆ. ಇಲ್ಲಿ ಜಮೀನು ಒತ್ತುವರಿ ಸಮಸ್ಯೆ ಇರುವುದರಿಂದ ಸೂಕ್ತ ಕ್ರಮಗಳೊಂದಿಗೆ ರೆಸಾರ್ಟ್ ಮಾದರಿಯಲ್ಲಿ ಅಭಿವೃದ್ಧಿಪಡಿಸಿದರೆ ಸ್ಥಳೀಯ ಸುಮಾರು 800 ಮಂದಿಗೆ ಉದ್ಯೋಗವೂ ದೊರಕಲಿದೆ. ಈ ಕುರಿತಂತೆ ಕಳೆದ ಎರಡು ತಿಂಗಳ ಅವಧಿಯಲ್ಲಿ 6 ಸಭೆಗಳನ್ನು ನಡೆಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಇದನ್ನೂ ಓದಿ: ಎರಡು ತಿಂಗಳು ಕೊಡಗಿನಲ್ಲಿ ಪ್ರವಾಸೋದ್ಯಮ ಸಂಪೂರ್ಣ ಸ್ಥಗಿತಗೊಳಿಸಿ- ಸ್ಥಳೀಯರ ಆಗ್ರಹ

ಸಸಿಹಿತ್ಲು ಹಾಗೂ ತಣ್ಣೀರುಬಾವಿ ಬೀಚ್‍ನಲ್ಲಿ ಸರ್ಕಾರಿ ಸರ್ಫಿಂಗ್ ಸ್ಕೂಲ್ ಆರಂಭಿಸುವ ಪ್ರಸ್ತಾವನೆ ಇದೆ. ಸಸಿಹಿತ್ಲು ಬೀಚ್ ಅಭಿವೃದ್ಧಿಗೆ ಈಗಾಗಲೇ 5 ಕೋಟಿ ರೂ. ಬಿಡುಗಡೆಯಾಗಿದೆ. ಆದರೆ ಅಲ್ಲಿ ಯಾವುದೇ ರೀತಿಯ ತಾತ್ಕಾಲಿಕ ಮೂಲಭೂತ ಸೌಕರ್ಯಗಳನ್ನು ಮಾಡಿದರೂ ಕಡಲ್ಕೊರೆತದಿಂದ ಸಮಸ್ಯೆಯಾಗುವ ಕಾರಣ, ಅದನ್ನು ತಡೆಯುವ ನಿಟ್ಟಿನಲ್ಲಿ ಕ್ರಮಕ್ಕೆ ಚಿಂತನೆ ನಡೆಸಲಾಗಿದೆ ಎಂದರು.

ಜಂಗಲ್ ಲಾಡ್ಜ್ ಮಾದರಿಯಲ್ಲಿ ತಾತ್ಕಾಲಿಕ ಸಾಂಪ್ರದಾಯಿಕ ಗುಡಿಸಲುಗಳ ನಿರ್ಮಾಣ, ಮೇಲ್ಛಾವಣಿ ರಹಿತ ರೆಸ್ಟೋರೆಂಟ್‍ಗಳ ನಿರ್ಮಾಣ ಮಾಡುವ ಯೋಜನೆಯೂ ಇದೆ. ಪಿಲಿಕುಳ ಜೈವಿಕ ಉದ್ಯಾನವನವಾಗಿದ್ದು, ನೈಸರ್ಗಿಕ ರೀತಿಯಲ್ಲಿ ಇಲ್ಲಿ ಪ್ರಾಣಿ, ಪಕ್ಷಿಗಳ ವಾಸಕ್ಕೆ ಅವಕಾಶವಿದೆ. ಈಗಿರುವ ವನ್ಯಜೀವಿಗಳಿಗೆ ವಿಶೇಷ ಆಕರ್ಷಣೆಯಾಗಿ ಜಿರಾಫೆ, ಝೀಬ್ರಾ ಹಾಗೂ ಆನೆಗಳನ್ನು ಸೇರ್ಪಡೆಗೊಳಿಸಲು ಚಿಂತಿಸಲಾಗಿದೆ. ಇದೇ ವೇಳೆ ಜಿಲ್ಲೆಯ ಪ್ರಮುಖ ಆಕರ್ಷಣೆಯಾದ ಕಂಬಳವನ್ನು ಪಿಲಿಕುಳದಲ್ಲಿ ಮತ್ತೆ ನಡೆಸುವುದು, ನದಿ ಉತ್ಸವವನ್ನು ಆರಂಭಿಸುವ ಬಗ್ಗೆಯೂ ಆಲೋಚನೆ ಇದೆ ಎಂದು ವಿವರಿಸಿದರು. ಸಂವಾದದಲ್ಲಿ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಹರೀಶ್ ಮೋಟುಕಾನ ಇದ್ದರು.

Share This Article
Leave a Comment

Leave a Reply

Your email address will not be published. Required fields are marked *