Connect with us

Cinema

ರೋಚಕ ಕಥೆಯೊಂದಿಗೆ ಮೋಹಕ ಅನುಭವ ನೀಡೋ `ವೀಕೆಂಡ್’!

Published

on

ಬೆಂಗಳೂರು: ಶೃಂಗೇರಿ ಸುರೇಶ್ ನಿರ್ದೇಶನದ ವೀಕೆಂಡ್ ಚಿತ್ರ ತೆರೆ ಕಂಡಿದೆ. ಬಿಡುಗಡೆಯ ಕಡೆಯ ಕ್ಷಣದಲ್ಲಿ ಈ ಸಿನಿಮಾ ಬಗ್ಗೆ ಗಾಢವಾದೊಂದು ಕುತೂಹಲ ಹುಟ್ಟಿಕೊಂಡಿತ್ತಲ್ಲಾ? ಅದನ್ನು ಎಲ್ಲ ದಿಕ್ಕುಗಳಿಂದಲೂ ತಣಿಸುವಂಥಾ ಎಲಿಮೆಂಟುಗಳೊಂದಿಗೆ, ಆರಂಭದಿಂದ ಕ್ಲೈಮ್ಯಾಕ್ಸ್ ವರೆಗೂ ನೋಡುಗರನ್ನು ಸೆಳೆದಿಟ್ಟುಕೊಂಡು ಸಾಗುವ ವೀಕೆಂಡ್ ಒಂದೊಳ್ಳೆ ಚಿತ್ರವಾಗಿ ಎಲ್ಲರನ್ನೂ ತಾಕಿದೆ. ಸಾಮಾನ್ಯವಾಗಿ ಸಾಮಾಜಿಕ ಸಂದೇಶವನ್ನು ಕಮರ್ಶಿಯಲ್ ಜಾಡಿನಲ್ಲಿಯೇ ಹೇಳೋದು ಅಪರೂಪ. ಆದರೆ ಭರ್ಜರಿ ಕಾಮಿಡಿ, ಆಕ್ಷನ್, ಲವ್ ಸೇರಿದಂತೆ ಎಲ್ಲ ಅಂಶಗಳನ್ನೂ ಒಳಗೊಂಡಿರೋ ವೀಕೆಂಡಿನಲ್ಲಿ ನಮ್ಮ ನಡುವಿದ್ದೂ ನಾವ್ಯಾರೂ ಹೆಚ್ಚಾಗಿ ತಲೆ ಕೆಡಿಸಿಕೊಳ್ಳದ ವಿಚಾರಗಳನ್ನು ಪರಿಣಾಮಕಾರಿಯಾಗಿಯೇ ದೃಷ್ಯೀಕರಿಸಲಾಗಿದೆ.

ಹೊರ ಜಗತ್ತಿನಲ್ಲಿ ಇವರಿಗೇನೂ ಕಮ್ಮಿ ಇಲ್ಲ ಎಂಬಂಥಾ ಇಮೇಜು, ಅದಕ್ಕೆ ಸರಿಯಾಗಿ ರೂಢಿಸಿಕೊಂಡ ಥಳುಕು ಬಳುಕಿನ ಲೈಫ್ ಸ್ಟೈಲ್… ಆದರೆ ಬದುಕಿನ ನೆತ್ತಿಯ ಮೇಲೆ ಸದಾ ನೇತಾಡುತ್ತಲೇ ಇರುವ ಅನಿಶ್ಚಿತತೆಯ ತೂಗುಗತ್ತಿ. ಯಾವುದೇ ಕ್ಷಣದಲ್ಲಿಯಾದರೂ ನೆಚ್ಚಿಕೊಂಡ ಕೆಲಸವನ್ನು ಬಿಟ್ಟು ಬೀದಿಯಲ್ಲಿ ನಿಲ್ಲಬಹುದಾದ ಬದುಕು… ಇದು ಐಟಿ ಬಿಟ ವಲಯದಲ್ಲಿ ಕೆಲಸ ಮಾಡೋರ ಸಾಮಾನ್ಯ ಗೋಳು. ಇಂಥಾ ಅಕ್ಷರಸ್ಥರೇ ಬದುಕಿನ ಅನಿವಾರ್ಯತೆಗೆ ಸಿಕ್ಕಿ ಅಡ್ಡ ದಾರಿ ಹಿಡಿದರೆ, ಕ್ರಿಮಿನಲ್ಲುಗಳಾದರೆ ಅದರ ಪರಿಣಾಮ ಘೋರ. ಇಂಥಾ ವಾಸ್ತವವನ್ನು ಸವರಿಕೊಂಡು ಹೋದಂತೆ ಭಾಸವಾಗುವ ರೋಚಕ ಕಥೆಯನ್ನು ವೀಕೆಂಡ್ ಚಿತ್ರ ಹೊಂದಿದೆ.

ನಾಯಕ ಅಜೆಯ್ ಸಾಫ್ಟ್‍ವೇರ್ ಕ್ಷೇತ್ರದಲ್ಲಿಯೇ ಕಾರ್ಯ ನಿರ್ವಹಿಸುವಾತ. ಈತನ ಮೇಲೆ ಸಹೋದ್ಯೋಗಿಯೊಬ್ಬಳು ಮೋಹಗೊಂಡಿದ್ದರೆ ಈತ ಮಾತ್ರ ನಾಯಕಿಯ ಹಿಂದೆ ಬಿದ್ದಿರುತ್ತಾನೆ. ಈ ಪ್ರೇಮದ ಹಿನ್ನೆಲೆಯಲ್ಲಿಯೇ ನಿರ್ದೇಶಕರು ಐಟಿ ಬಿಟಿ ಕ್ಷೇತ್ರದ ಅಷ್ಟೂ ವಿಚಾರಗಳನ್ನು ಪರಿಣಾಮಕಾರಿಯಾಗಿ ಚಿತ್ರಿಸುವ ಜಾಣ್ಮೆ ತೋರಿದ್ದಾರೆ. ಅಲ್ಲಿನ ಕೆಲಸದೊತ್ತಡ, ಸಂಬಳ ಪಡೆಯಲು ಮಾಡಬೇಕಾದ ಅನಿವಾರ್ಯ ಸರ್ಕಸ್ಸುಗಳೆಲ್ಲವನ್ನು ಕೂಡಾ ಮನ ಮುಟ್ಟುವಂತೆ ದೃಷ್ಯದ ಚೌಕಟ್ಟಿಗೆ ಒಗ್ಗಿಸಲಾಗಿದೆ.

ಇಂಥಾ ಎಲ್ಲ ಸರ್ಕಸ್ಸುಗಳಾಚೆಗೂ ಕೆಲಸ ಕಳೆದುಕೊಂಡಾಗ ಈ ಐಟಿ ಉದ್ಯೋಗಿಗಳ ಬದುಕು ಹೇಗಿರುತ್ತೆ? ಎಂಥೆಂಥಾ ಅವಘಡಗಳು ಸಂಭವಿಸಬಹುದೆಂಬುದನ್ನು ನಿರ್ದೇಶಕರು ರುಚಿಕಟ್ಟಾಗಿಯೇ ನಿರೂಪಿಸಿದ್ದಾರೆ. ಹಾಗಂತ ಈ ಸಿನಿಮಾ ಇಂಥಾ ಒಳತೋಟಿ, ತಲ್ಲಣಗಳಲ್ಲಿಯೇ ಕಳೆದು ಹೋಗಿದೆ ಅಂದುಕೊಳ್ಳಬೇಕಿಲ್ಲ. ಕಾಮಿಡಿ, ಪ್ರೀತಿ ಸೇರಿದಂತೆ ಎಲ್ಲೆಲ್ಲಿ ಯಾವುದನ್ನು ಬೆರೆಸಬೇಕೋ ಅದನ್ನು ಅಚ್ಚುಕಟ್ಟಾಗಿಯೇ ಮಾಡಲಾಗಿದೆ. ಆದ್ದರಿಂದಲೇ ವೀಕೆಂಡ್ ಎಂಬುದು ಸಂಪೂರ್ಣ ಎಂಟರ್‍ಟೈನ್ಮೆಂಟ್ ಪ್ಯಾಕೇಜಿನಂತೆ ಮೂಡಿ ಬಂದಿದೆ. ಒಂದಿಡೀ ಚಿತ್ರ ಇಷ್ಟೊಂದು ಪರಿಣಾಮಕಾರಿಯಾಗಿ ಮೂಡಿ ಬರಲು ಬೇರೇನೇ ಕಾರಣಗಳಿದ್ದರೂ ಅನಂತ್ ನಾಗ್ ಎಂಬ ಮೇರು ನಟ ಈ ಚಿತ್ರದ ಪ್ರಧಾನ ಆಕರ್ಷಣೆ. ಅವರಿಲ್ಲಿ ಸಾಫ್ಟ್‍ವೇರ್ ಮೊಮ್ಮಗನ ತಾತನಾಗಿ, ತಪ್ಪಾದಾಗ ತಿದ್ದುವ ಹಿರಿಯನ ಪಾತ್ರವನ್ನು ಎಂದಿನಂತೆಯೇ ಮನಸೂರೆಗೊಳ್ಳುವಂತೆ ನಿರ್ವಹಿಸಿದ್ದಾರೆ.

ವಿಶೇಷವೆಂದರೆ ಈ ಚಿತ್ರವನ್ನು ನಿರ್ಮಾಣ ಮಾಡಿರುವ ಮಂಜುನಾಥ್ ಡಿ ಅವರೇ ಪೊಲೀಸ್ ಅಧಿಕಾರಿಯಾಗಿಯೂ ಅಬ್ಬರಿಸಿದ್ದಾರೆ. ಈ ಪಾತ್ರವೂ ಸೇರಿದಂತೆ ಗೋಪಿನಾಥ್ ಭಟ್, ರಘು ನೀನಾಸಂ ಸೇರಿದಂತೆ ಎಲ್ಲ ಪಾತ್ರಗಳೂ ಮನಮುಟ್ಟುವಂತಿವೆ. ಮಿಲಿಂದ್ ಮತ್ತು ಸಂಜನಾ ಬುರ್ಲಿ ಕೂಡಾ ತಂತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಶಶಿಧರ್ ಅವರ ಛಾಯಾಗ್ರಹಣ ಕಥೆಗೆ ಹೊಸಾ ಓಘವನ್ನೇ ನೀಡಿದೆ. ಹೀಗೆ ಕಮರ್ಶಿಯಲ್ ವೇನಲ್ಲಿ ರೋಚಕವಾದ ಕಥೆ ಹೇಳೋ ಈ ಚಿತ್ರ ಮನಮಿಡಿಯುವಂಥಾ ಒಂದು ಸಂದೇಶವನ್ನೂ ರವಾನಿಸುತ್ತದೆ. ಇಡೀ ಸಿನಿಮಾ, ಶ್ರಮ ಸಾರ್ಥಕ ಅನ್ನಿಸೋದು ಈ ಕಾರಣದಿಂದಲೇ. ಒಟ್ಟಾರೆಯಾಗಿ ವೀಕೆಂಡ್ ಒಂದೊಳ್ಳೆ ಚಿತ್ರ ನೋಡಿದ ಖುಷಿಯನ್ನು ನೋಡುಗರೆಲ್ಲರ ಮನಸಿಗಿಳಿಯುವಂತೆ ಮಾಡುತ್ತದೆ.

ರೇಟಿಂಗ್: 3.5/5 

Click to comment

Leave a Reply

Your email address will not be published. Required fields are marked *