ಚಾಮರಾಜನಗರ: ನೆರೆಯ ಕೇರಳ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಕಡಿಮೆಯಾಗದ ಹಿನ್ನೆಲೆಯಲ್ಲಿ, ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಆಗಸ್ಟ್ 30ರ ಬೆಳಗ್ಗೆ 6 ಗಂಟೆ ತನಕ ವೀಕೆಂಡ್ ಕರ್ಫ್ಯೂ ಸೇರಿದಂತೆ ಕೆಲವು ಹೆಚ್ಚುವರಿ ನಿರ್ಬಂಧಗಳನ್ನು ವಿಧಿಸಲಾಗಿದೆ.
ದೈನಂದಿನ ಬಳಕೆಗೆ ಅಗತ್ಯ ಇರುವ ಕೆಲವು ಚಟುವಟಿಕೆ ಹಾಗೂ ವೈದ್ಯಕೀಯ ಸೇವೆಗಳನ್ನು ಹೊರತುಪಡಿಸಿ ಉಳಿದ ಚಟುವಟಿಕೆಗಳನ್ನು ನಿಷೇಧಿಸಿ ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಆದೇಶ ಹೊರಡಿಸಿದ್ದಾರೆ. ಈ ಆದೇಶದ ಪ್ರಕಾರ, ಥಿಯೇಟರ್, ಸಿನಿಮಾ ಹಾಲ್, ಪಬ್ ಗಳಿಗೆ ಅವಕಾಶ ಇರುವುದಿಲ್ಲ. ತರಬೇತಿ ಉದ್ದೇಶ ಹೊರತುಪಡಿಸಿ ಸ್ವಿಮ್ಮಿಂಗ್ ಪೂಲ್ ಗಳಿಗೂ ಸಹ ನಿರ್ಬಂಧ ಹೇರಲಾಗಿದೆ. ಸಾಮಾಜಿಕ, ಸಾಂಸ್ಕೃತಿಕ, ಮನರಂಜನೆ, ರಾಜಕೀಯ, ಧಾರ್ಮಿಕ ಸಭೆ ಸಮಾರಂಭಗಳನ್ನು ನಿಷೇಧಿಸಲಾಗಿದೆ. ಮದುವೆಗಳಿಗೆ ನೂರು ಜನರು ಹಾಗೂ ಅಂತ್ಯಕ್ರಿಯೆಗೆ 20 ಜನರು ಮಾತ್ರ ಭಾಗವಹಿಸಲು ಅವಕಾಶ ನೀಡಲಾಗಿದೆ. ಇದನ್ನೂ ಓದಿ: ಡಾ.ಜಿ ಪರಮೇಶ್ವರ್ ಮುಂದಿನ ಮುಖ್ಯಮಂತ್ರಿಯಾಗಬೇಕು: ಜೆಡಿಎಸ್ ಶಾಸಕ
ಜಿಲ್ಲೆಯ ಮಲೈ ಮಹದೇಶ್ವರ ಬೆಟ್ಟ, ಮುಜರಾಯಿ ಇಲಾಖೆ ಹಾಗೂ ಖಾಸಗಿ ಸೇರಿದಂತೆ ಎಲ್ಲಾ ದೇವಸ್ಥಾನಗಳಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಮಾತ್ರ ದರ್ಶನಕ್ಕೆ ಅವಕಾಶ ಇರಲಿದೆ. ಎಲ್ಲಾ ರೀತಿಯ ಉತ್ಸವ, ಸೇವೆ, ತೀರ್ಥ ಪ್ರಸಾದ, ದಾಸೋಹ, ಮುಡಿ-ಸೇವೆಗಳಿಗೆ ನಿರ್ಬಂಧ ವಿಧಿಸಲಾಗಿದೆ. ಶನಿವಾರ ಮತ್ತು ಭಾನುವಾರ ಅರ್ಚಕರಿಂದ ಸಾಂಪ್ರದಾಯಿಕ ಪೂಜೆಗೆ ಅವಕಾಶ ನೀಡಲಾಗಿದ್ದು, ಭಕ್ತರ ಪ್ರವೇಶ ನಿಷೇಧಿಸಲಾಗಿದೆ. ಇದನ್ನೂ ಓದಿ: ಕೇಂದ್ರ ಸಚಿವ ಖೂಬಾಗೆ ಗನ್ ಸ್ವಾಗತ
ಶನಿವಾರ ಭಾನುವಾರ ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳಾದ ಭರಚುಕ್ಕಿ ಜಲಪಾತ, ಹೊಗೇನಕಲ್ ಜಲಪಾತಗಳಿಗೆ ಪ್ರವಾಸಿಗರ ಪ್ರವೇಶ ನಿರ್ಬಂಧಿಸಲಾಗಿದೆ. ಬಂಡೀಪುರ ಹಾಗೂ ಬಿ.ಆರ್ .ಟಿ ಹುಲಿರಕ್ಷಿತಾರಣ್ಯಗಳಲ್ಲಿ ವಾರಾಂತ್ಯದಲ್ಲಿ ಸಫಾರಿ ನಿಷೇಧಿಸಲಾಗಿದೆ. ರೆಸಾರ್ಟ್, ಲಾಡ್ಜ್, ಹೋಂಸ್ಟೇ, ಅರಣ್ಯ ವಸತಿಗೃಹಗಳಲ್ಲಿ ತಂಗುವವರು, ಸಫಾರಿಗೆ ತೆರಳುವವರು 72 ಗಂಟೆಯೊಳಗೆ ಮಾಡಿಸಿರುವ ಆರ್.ಟಿ.ಪಿ.ಸಿ.ಆರ್ ನೆಗೆಟಿವ್ ಪ್ರಮಾಣ ಪತ್ರ ಹೊಂದಿರಬೇಕು.
ಕೇರಳ ಹಾಗೂ ತಮಿಳುನಾಡಿನಿಂದ ಬರುವವರು ಸಹ ಎರಡು ಡೋಸ್ ಕೋವಿಡ್ ಲಸಿಕೆ ಪಡೆದಿದ್ದರೂ 72 ಗಂಟೆಯೊಳಗಿನ ಆರ್.ಟಿ.ಪಿ.ಸಿ.ಆರ್ ನೆಗೆಟಿವ್ ವರದಿ ಇದ್ದರೆ ಮಾತ್ರ ಪ್ರವೇಶಾವಕಾಶ ಇರಲಿದೆ. ಸರ್ಕಾರಿ ಇಲಾಖೆಗಳಿಗೆ ಸಂಬಂಧಿಸಿದಂತೆ ಶಂಕುಸ್ಥಾಪನೆ, ಉದ್ಘಾಟನೆ, ಸಭೆ ಸಮಾರಂಭಗಳನ್ನು ನಿರ್ಬಂಧಿಸಲಾಗಿದೆ.