ತಿರುವನಂತಪುರಂ: ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯರ ಅಶ್ಲೀಲ ಫೋಟೋಗಳನ್ನು ಹರಿಬಿಟ್ಟ ಆರೋಪದ ಅಡಿಯಲ್ಲಿ ಫೋಟೋಗ್ರಾಫರ್ ನನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ.
ಕೋಝಿಕೋಡ್‍ನ ವದಕಾರಾದಲ್ಲಿರುವ ಸದ್ಯಮ್ ಶೂಟ್ ಆ್ಯಂಡ್ ಎಡಿಟ್ ಸ್ಟುಡಿಯೋ ವಿರುದ್ಧ ದೂರು ದಾಖಲಾಗಿತ್ತು. ಆ ಸ್ಟುಡಿಯೋದಲ್ಲಿ ಮಹಿಳೆಯರ ಫೋಟೋಗಳನ್ನು ಎಡಿಟ್ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತಿದ್ದರು ಎನ್ನುವ ಆರೋಪ ಕೇಳಿ ಬಂದಿತ್ತು.
ಸದ್ಯಮ್ ಸ್ಟುಡಿಯೋವನ್ನು ಪೊಲೀಸರು ಸೀಜ್ ಮಾಡಿ ಕೆಲವು ದಾಖಲೆಗಳನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಅಷ್ಟೇ ಅಲ್ಲದೇ ಸ್ಟುಡಿಯೋ ಮಾಲೀಕ ಬೀಬೇಶ್ ಜೊತೆಗೆ ದಿನೇಶನ್, ಸತೀಶನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಕೇರಳ ಸಿಎಂ ಪಿನರಾಯಿ ವಿಜಯನ್ ವಿಧಾನಸಭೆಯಲ್ಲಿ ತಿಳಿಸಿದರು.
ಕುಟುಂಬವೊಂದು ಮದುವೆಗಾಗಿ ಈ ಸ್ಟುಡಿಯೋವನ್ನು ಸಂಪರ್ಕಿಸಿತ್ತು. ಮದುವೆಯಲ್ಲಿ ತೆಗೆದ ಫೋಟೋಗಳನ್ನು ಅಶ್ಲೀಲ ಫೋಟೋಗಳನ್ನಾಗಿ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದನ್ನು ಗಮನಿಸಿದ ಕುಟುಂಬದವರು ಪೊಲೀಸರಿಗೆ ದೂರು ನೀಡಿದ ನಂತರ ಆರೋಪಿಗಳ ಕೃತ್ಯ ಬೆಳಕಿಗೆ ಬಂದಿದೆ.