ಇಂದಿನ ಆಧುನಿಕ ಜಗತ್ತಿನಲ್ಲಿ ದುಡ್ಡು ಎಂದರೆ ಅತ್ಯಂತ ಬಲಶಾಲಿಯಾದದ್ದು ಎನ್ನಬಹುದು. ದುಡ್ಡು ಒಂದಿದ್ದರೆ ಸಾಕು ಜಗತ್ತಿನಲ್ಲಿ ಏನು ಬೇಕಾದರೂ ಕೊಂಡುಕೊಳ್ಳಬಹುದು. ಆದರೆ ಅಷ್ಟೊಂದು ಸುಲಭವಾಗಿ ದುಡ್ಡು ಗಳಿಸುವುದು ಸಾಧ್ಯವಿಲ್ಲ. ದುಡ್ಡಿಗಾಗಿ ಹಗಲು ರಾತ್ರಿ ನಿದ್ದೆ ಇಲ್ಲದೆ ಕಷ್ಟಪಡಬೇಕಾಗುತ್ತದೆ. ಆದರೆ ಇಲ್ಲಿ ಒಬ್ಬರು ಕೇವಲ ಮಕ್ಕಳನ್ನು ನೋಡಿಕೊಂಡು ದಿನಕ್ಕೆ 88,000 ರೂಪಾಯಿಯನ್ನು ಗಳಿಸುತ್ತಾರೆ. ಸುಳ್ಳಲ್ಲ ಇದು ನಿಜವಾಗಿಯೂ ನಡೆದ ಘಟನೆ.
ಹೌದು, ನೀವು ನ್ಯೂಯಾರ್ಕ್ (Newyork) ನಗರದಲ್ಲಿ ನಡೆದ ನಿಜ ಸಂಗತಿ ಇದು. ಮದುವೆಯಲ್ಲಿ ಮಕ್ಕಳನ್ನು ನೋಡಿಕೊಳ್ಳುವುದೇ ಇವರದೊಂದು ಉದ್ಯಮ. ಇದನ್ನೇ ಬಂಡವಾಳವಾಗಿಟ್ಟುಕೊಂಡು ಈ ಉದ್ಯಮವನ್ನು ದೊಡ್ಡ ಮಟ್ಟದಲ್ಲಿ ಶುರು ಮಾಡಿ ಇದೀಗ ಕೇವಲ ಒಂದು ದಿನದಲ್ಲಿ ಅಂದರೆ ಬೆಳಿಗ್ಗೆಯಿಂದ ಸಂಜೆವರೆಗೆ ಸುಮಾರು ಎಂಟು ಗಂಟೆಗಳ ಅವಧಿಯಲ್ಲಿ ಭಾರಿ ಮೊತ್ತದ ಹಣವನ್ನು ಸಂಪಾದಿಸುತ್ತಾರೆ. ಯಾರಿದು? ಇದು ಶುರುವಾದದ್ದು ಹೇಗೆ? ಎಲ್ಲದರ ಕುರಿತು ಮಾಹಿತಿ ಇಲ್ಲಿದೆ.
ಮದುವೆ ಹಾಗೂ ಇನ್ನಿತರ ಸಮಾರಂಭಗಳಲ್ಲಿ ಹಿರಿಯರು ಅಥವಾ ತಂದೆ ತಾಯಿ ಇವರೆಲ್ಲರೂ ತಮ್ಮದೇ ಆದ ಕೆಲಸಗಳಲ್ಲಿ ತೊಡಗಿಕೊಂಡಿರುತ್ತಾರೆ. ಇನ್ನು ಚಿಕ್ಕ ಚಿಕ್ಕ ಮಕ್ಕಳನ್ನು ಹೊಂದಿರುವವರು ಸಮಾರಂಭಗಳನ್ನ ಆನಂದಿಸುವುದಕ್ಕಿಂತ ಹೆಚ್ಚಾಗಿ ಮಕ್ಕಳನ್ನು ನೋಡಿಕೊಳ್ಳುವುದರಲ್ಲಿ ಕಾಲ ಕಳೆಯುತ್ತಾರೆ. ಇದರಿಂದ ಅವರಿಗೆ ಮದುವೆಯ ಅಥವಾ ಯಾವುದೇ ಸಮಾರಂಭದಲ್ಲಿ ಕಾಲ ಕಳೆಯಲು ಅವಕಾಶವೇ ಇರುವುದಿಲ್ಲ. ಹೀಗಾಗಿ ಇದೇ ವಿಚಾರವನ್ನು ಇಟ್ಟುಕೊಂಡು ಸಾಂಡ್ರಾ ವೀರ್ ಎಂಬುವವರು ಈ ಒಂದು ಉದ್ಯಮವನ್ನು ಆರಂಭಿಸಿದ್ದರು. ಸುಮಾರು 11ಕ್ಕೂ ಅಧಿಕ ವರ್ಷಗಳಿಂದ ಶಿಶುಪಾಲನಾ ಕೇಂದ್ರವನ್ನ ನಡೆಸುತ್ತಿದ್ದ ಇವರ ಜೀವನವು ಕೇವಲ 2024ರಲ್ಲಿ ನಡೆದ ಒಂದು ಮದುವೆ ಸಂಪೂರ್ಣವಾಗಿ ಬದಲಾಯಿಸಿತು
2024ರಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಇವರನ್ನು ನಾಲ್ಕು ಮಕ್ಕಳನ್ನು ನೋಡಿಕೊಳ್ಳಲು ನೇಮಿಸಲಾಗಿತ್ತು. ಅಲ್ಲಿಂದ ಪ್ರಾರಂಭವಾದ ಈ ಉದ್ಯಮ ಇಂದು ದೊಡ್ಡ ಉದ್ಯಮವಾಗಿ ಬೆಳೆದು ನಿಂತಿದೆ. ಆ ಸಮಯದಲ್ಲಿ ಪ್ರಾರಂಭವಾದದ್ದೇ ವೆಡ್ಡಿಂಗ್ ನ್ಯಾನಿ (Wedding Nanny).
ಇದೀಗ ಸಾಂಡ್ರಾ ಅವರು ತಮ್ಮದೇ ಆದ ಒಂದು ದೊಡ್ಡ ತಂಡದೊಂದಿಗೆ ಕೆಲಸ ಮಾಡುತ್ತಾರೆ. ತಮ್ಮ ಗುಂಪಿಗೆ , ತಮ್ಮ ಉದ್ಯಮಕ್ಕೆ ಒಂದು ಬ್ರಾಂಡ್ ಲೋಗೋ ನೀಡಿ, ಆ ಲೋಗೋಗಳನ್ನು ಕಪ್ಪು ಟಿ-ಶರ್ಟ್ ಮೇಲೆ ಹಾಕಿ, ಅವುಗಳನ್ನು ತಾವು ಹೋಗುವ ಸಮಾರಂಭಗಳಿಗೆ ಧರಿಸಿ ಹೋಗುತ್ತಾರೆ. ಪೋಷಕರು ಅಥವಾ ತಾಯಂದಿರು ಯಾವುದೇ ಒತ್ತಡವಿಲ್ಲದೆ ಸಮಾರಂಭಗಳಲ್ಲಿ ಆನಂದಿಸುತ್ತಾರೆ. ಅಂದರೆ ಈ ಸಮಯದಲ್ಲಿ ಅವರ ಮಕ್ಕಳನ್ನು ಈ ವೆಡ್ಡಿಂಗ್ ನ್ಯಾನಿ ನೋಡಿಕೊಳ್ಳುತ್ತಿದ್ದಾರೆ ಎಂದರ್ಥ. ಕರಕುಶಲ ವಸ್ತುಗಳು, ಆಟದ ಸಾಮಾನುಗಳಿಂದ ಹಿಡಿದು ಮಕ್ಕಳು ಮಲಗುವ ತನಕ ಎಲ್ಲರೂ ಇವರೇ ನೋಡಿಕೊಳ್ಳುತ್ತಾರೆ.
12 ಗಂಟೆಗಳ ಕಾಲ ಮಕ್ಕಳನ್ನು ನೋಡಿಕೊಳ್ಳಲು 1000 ಡಾಲರ್ (ಸುಮಾರು 88,000) ಹಣವನ್ನ ಪಡೆಯುತ್ತಾರೆ. ಒಂದು ವೇಳೆ ಮಕ್ಕಳನ್ನು ನೋಡಿಕೊಳ್ಳುವ ಸಮಯ ಹೆಚ್ಚಾಗಿದ್ದರೆ, ಆಗ ಹಣ ಜಾಸ್ತಿ ಆಗುತ್ತದೆ ಮತ್ತು ಮಕ್ಕಳನ್ನು ನೋಡಿಕೊಳ್ಳುವವರ ಸಂಖ್ಯೆ ಹೆಚ್ಚಿರುತ್ತದೆ. ಸಾಮಾನ್ಯವಾಗಿ 12 ಮಕ್ಕಳಿಗೆ ನಾಲ್ಕು ಜನ ನೋಡಿಕೊಳ್ಳುತ್ತಾರೆ. ಈ ರೀತಿ ಓರ್ವ ವ್ಯಕ್ತಿಗೆ ಗಂಟೆಗೆ ಸುಮಾರು 5,800 ರೂಪಾಯಿಯನ್ನು ನೀಡಲಾಗುತ್ತದೆ.
ಕೆಲವರು ಇದು ತುಂಬಾ ದುಬಾರಿಯಾಗುತ್ತದೆ ಎಂದು ಹೇಳುತ್ತಾರೆ. ಆದರೆ ಸಾಂಡ್ರಾ ಅವರು ಹೇಳುವ ಪ್ರಕಾರ, ಮಕ್ಕಳನ್ನ ನೋಡಿಕೊಳ್ಳಲು ನಾವು ಹರಸಾಹಸ ಪಡುತ್ತೇವೆ, ಅದಕ್ಕೂ ಹೆಚ್ಚಾಗಿ ಖರ್ಚು ಜಾಸ್ತಿ ಆಗುತ್ತದೆ. ಪ್ರತಿ ಬಾರಿ ಯಾವುದೇ ಮದುವೆಗೆ ಹೋಗುವ ಮುನ್ನ ಕುಟುಂಬದೊಂದಿಗೆ ಕುಳಿತು ಮಗುವಿನ ಸುರಕ್ಷತೆ, ಅಲರ್ಜಿ ಮತ್ತು ಅದರ ವ್ಯಕ್ತಿತ್ವದ ಕುರಿತು ನಾವು ಚರ್ಚೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ
ಭಾರತದಲ್ಲಿಯೂ ಆಯಾ (ದಾದಿ) ಎಂಬ ಕಲ್ಪನೆ ಇದೆ. ಹಿಂದಿನ ಕಾಲದಲ್ಲಿ ಶ್ರೀಮಂತ ಭಾರತೀಯರು ಮತ್ತು ಬ್ರಿಟಿಷರ ಮನೆಗಳಲ್ಲಿ ಮಕ್ಕಳನ್ನು ನೋಡಿಕೊಳ್ಳಲು ಆಯಾಗಳು ಇರುತ್ತಿದ್ದರು. ಅವರು ಅದೇ ಕುಟುಂಬದವರೊಂದಿಗೆ ವಾಸವಾಗಿ ಮಕ್ಕಳನ್ನು ತಮ್ಮ ಸ್ವಂತ ಮಕ್ಕಳಂತೆ ನೋಡಿಕೊಳ್ಳುತ್ತಿದ್ದರು. ಆದರೆ ಇಂದು ಈ ವಿಷಯಗಳು ವಿಭಿನ್ನವಾಗಿವೆ. ಅವಿಭಕ್ತ ಕುಟುಂಬಗಳಿಗಿಂತ ಹೆಚ್ಚಾಗಿ ವಿಭಕ್ತ ಕುಟುಂಬಗಳೆ ಹೆಚ್ಚಾಗುತ್ತಿದೆ. ಇಂಥ ಸಮಯದಲ್ಲಿ ಕೆಲಸಕ್ಕೆ ಹೋಗುವ ಪೋಷಕರು ಮತ್ತು ನಗರ ಜೀವನದಲ್ಲಿ ವಾಸಿಸುವ ಜನರಿಗೆ ಆಯಾಗಳ ಅವಶ್ಯಕತೆ ಇದೆ. ಜೊತೆಗೆ ಈಗಿನ ಜಗತ್ತಿನಲ್ಲಿ ಆಯಗಳು ಪೋಷಕರಂತೆ ಪಾತ್ರ ವಹಿಸುತ್ತಾರೆ. ಮೊದಲು ಮಕ್ಕಳನ್ನು ನೋಡಿಕೊಳ್ಳಲು ಅಜ್ಜಿ ಅಥವಾ ಮನೆಯಲ್ಲಿ ಹೆಚ್ಚಿನ ಜನವಿರುವುದರಿಂದ ಇದರ ಅವಶ್ಯಕತೆ ಇರುತ್ತಿರಲಿಲ್ಲ.
ಇನ್ನು ನಗರ ಪ್ರದೇಶಗಳಲ್ಲಿ ಆಯಗಳನ್ನು ಇಟ್ಟುಕೊಳ್ಳುವುದು ಅಗತ್ಯ. ಮುಂಬೈ, ದೆಹಲಿ ಹಾಗೂ ಬೆಂಗಳೂರಿನಂತಹ ನಗರಗಳಲ್ಲಿ ಹೆಚ್ಚಿನ ಜನರು ಆಯಾಗಳನ್ನು ನೇಮಿಸಿಕೊಳ್ಳುತ್ತಾರೆ.
ಇನ್ನು ಆಯಾಗಳನ್ನು ಹುಡುಕುವುದು ಮಾತ್ರವಲ್ಲದೆ ತರಬೇತಿ ಪಡೆದ ಹಾಗೂ ವಿಶ್ವಾಸಾರ್ಹ ಆಯಾಗಳನ್ನು ಹುಡುಕುವುದು ದೊಡ್ಡ ಹೆಜ್ಜೆಯಾಗುತ್ತದೆ. ಈ ಹಿನ್ನೆಲೆ ಇದೀಗ ಏಜೆನ್ಸಿಗಳು ತರಬೇತಿ ಪಡೆದ, ವೃತ್ತಿಪರ ಹಾಗೂ ವಿಶ್ವಾಸಾರ್ಹ ಆಯಾಗಳ ಮೇಲೆ ಕೇಂದ್ರೀಕರಿಸುತ್ತವೆ. ಈ ಮೂಲಕ ಆನ್ಲೈನ್ ಪ್ಲಾಟ್ ಫಾರ್ಮ್ ಗಳಲ್ಲಿ ನಾವು ಆಯಾಗಳನ್ನ ಆಯ್ಕೆ ಮಾಡಿಕೊಳ್ಳಬಹುದು.





