ಲಕ್ನೋ: ಶೂ ಕಳ್ಳತನ ಮಾಡಿದ್ದಾರೆಂದು ಅನುಮಾನಿಸಿ ಮದುಮಗ ಮತ್ತು ಆತನ ನಾಲ್ವರು ಸ್ನೇಹಿತರು ಸೇರಿ ಮದುವೆಗೆ ಬಂದಿದ್ದ ಅತಿಥಿಯನ್ನೇ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಬದೌನ್ ಜಿಲ್ಲೆಯಲ್ಲಿ ನಡೆದಿದೆ.
ಬುಧವಾರದಂದು ಇಲ್ಲಿನ ಸೂರಜ್‍ಪುರ್ ಗ್ರಾಮದಲ್ಲಿ ವರ ಸುರೇಂದ್ರ ಮದುವೆ ಸಮಾರಂಭ ನಡೆಯುತ್ತಿತ್ತು. ವಿವಾಹಪೂರ್ವ ಶಾಸ್ತ್ರಗಳು ಮುಗಿದ ನಂತರ ಸುರೇಂದ್ರನ ಶೂಗಳು ಎಲ್ಲೂ ಕಾಣಿಸುತ್ತಿರಲಿಲ್ಲ. ಆಗ ಸುರೇಂದ್ರ ಮತ್ತು ಅವನ ಸ್ನೇಹಿತರು ಮದುವೆಗೆ ಬಂದಿದ್ದ ರಾಮ್‍ಶರಣ್(42) ಶೂ ಕದ್ದಿದ್ದಾರೆಂದು ಶಂಕಿಸಿ ಅವರಿಗೆ ಥಳಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಗಲಾಟೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ರಾಮ್‍ಶರಣ್ ಅವರನ್ನು ಸಮೀಪದ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ರಾಮ್‍ಶರಣ್ ಅವರು ಮೃತಪಟ್ಟಿದ್ದಾರೆ ಎಂದು ಪೊಲೀಸ್ ಠಾಣೆಯ ಉಸ್ತುವಾರಿ ಉಪೇಂದ್ರ ಕುಮಾರ್ ದೇಶವಾರ ತಿಳಿಸಿದ್ದಾರೆ.
ಮೃತ ವ್ಯಕ್ತಿಯ ಪತ್ನಿ ಸಲ್ಲಿಸಿದ ದೂರಿನ ಆಧಾರದ ಮೇಲೆ ಸುರೇಂದ್ರ ಮತ್ತು ಇತರ ನಾಲ್ವರು ಸ್ನೇಹಿತರ ವಿರುದ್ಧ ಕೊಲೆ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.