ಹೇಳಿಕೇಳಿ ಇದು ಪ್ರಯೋಗಾತ್ಮಕ ಸಿನಿಮಾಗಳ ಯುಗ. ಅದರ ಮುಂದುವರೆದ ಭಾಗವಾಗಿ ತಯಾರಾಗಿರುವ ಸಿನಿಮಾ ವೆಡ್ಡಿಂಗ್ ಗಿಫ್ಟ್. ಹೊಡಿಬಡಿ ಸಿನಿಮಾಗಳ ಮಧ್ಯೆ ಸಮಾಜಕ್ಕೊಂದು ಉತ್ತಮ ಸಂದೇಶ ಕೊಡುವ, ಜನರಿಗೆ ಕಾನೂನುಗಳ ಬಗ್ಗೆ ಅರಿವೂ ಮುಡಿಸುವ, ಫ್ಯಾಮಿಲಿ, ಪ್ರೀತಿ, ಪ್ರೇಮ, ಮದುವೆ, ಪತಿ-ಪತ್ನಿ, ಕೋರ್ಟ್ ಡ್ರಾಮಾ ಹೀಗೆ ಎಲ್ಲಾ ಅಂಶಗಳನ್ನು ಹದವಾಗಿ ಬೆರೆಸಿ ತಯಾರಾಗಿರುವ ಸಿನಿಮಾ ವೆಡ್ಡಿಂಗ್ ಗಿಫ್ಟ್.
ಈಗಾಗಲೇ ಟೀಸರ್ ಹಾಗೂ ಹಾಡುಗಳ ಮೂಲಕ ತನ್ನ ಘಮಲು ಪಸರಿಸಿರುವ ವೆಡ್ಡಿಂಗ್ ಗಿಫ್ಟ್ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ವೆಡ್ಡಿಂಗ್ ಗಿಫ್ಟ್ ಸಿನಿಮಾದ ಟ್ರೇಲರ್ ಪರಿಣಾಮಕಾರಿಯಾಗಿ ಮೂಡಿಬಂದಿದೆ. ನಮ್ಮ ಸುತ್ತಮುತ್ತ ನಡೆಯುವ ನೈಜ ಘಟನೆಯನ್ನು ಹೆಕ್ಕಿ ತೆಗೆದು ನಿರ್ದೇಶಕ ವಿಕ್ರಂ ಪ್ರಭು ಸಿನಿಮಾ ಮಾಡಿದ್ದಾರೆ. ನಿರ್ದೇಶನದ ಜೊತೆಗೆ ತಾವೇ ಸಿನಿಮಾಗೆ ಕಥೆ ಬರೆದು ನಿರ್ಮಾಣ ಮಾಡಿರುವ ವಿಕ್ರಂ ಪ್ರಭು, ಸ್ತ್ರೀ ರಕ್ಷಣೆಗೆ ಇರುವ ಕಾನೂನುಗಳು ಪುರುಷರಿಗೆ ಹೇಗೆಲ್ಲಾ ಮಾರಕವಾಗುತ್ತದೆ. ಆ ಕಾನೂನುಗಳನ್ನು ಸ್ತ್ರೀ ಹೇಗೆಲ್ಲಾ ದುರುಪಯೋಗಪಡಿಸಿಕೊಳ್ಳುತ್ತಾಳೆ? ಈ ಸಂಕಷ್ಟದಿಂದ ಪುರುಷ ಪಾರಾಗಲು ಎಷ್ಟೆಲ್ಲಾ ಹೆಣಗಾಟ ನಡೆಸಬೇಕು ಎಂಬ ಸೂಕ್ಷ್ಮ ಎಳೆಯನ್ನೂ ಅಷ್ಟೇ ಸೊಗಸಾಗಿ ಟ್ರೇಲರ್‌ನಲ್ಲಿ ಕಟ್ಟಿಕೊಡಲಾಗಿದೆ. ಇದನ್ನೂ ಓದಿ: ಕುಟುಂಬ ಕಲಹದ ಕಥೆ ಹೊತ್ತು ಬಂದ ವೆಡ್ಡಿಂಗ್ ಗಿಫ್ಟ್ ಟೀಸರ್
ವೆಡ್ಡಿಂಗ್ ಗಿಫ್ಟ್ ಟ್ರೇಲರ್ ನೋಡ್ತಿದ್ರೆ ಸ್ಯಾಂಡಲ್‍ವುಡ್ ಅಂಗಳಕ್ಕೆ ಮತ್ತೊಬ್ಬ ಪ್ರತಿಭಾನ್ವಿತ ನಿರ್ದೇಶಕನ ಆಗಮನವಾದಂತಿದೆ. ಗಾಂಧಿನಗರದ ಅಂಗಳದ ಹಿರಿಯ ನಿರ್ದೇಶಕರ ಗರಡಿಯಲ್ಲಿ ಪಳಗಿರುವ ವಿಕ್ರಮ್ ಪ್ರಭು ಬಹು ವರ್ಷಗಳ ಕನಸನ್ನು ನನಸು ಮಾಡಿಕೊಳ್ಳುತ್ತಿದ್ದಾರೆ. ಮೊದಲ ಬಾರಿಯೇ ಚಾಲೆಂಜಿಂಗ್ ಕಥೆಗೆ ಆಕ್ಷನ್ ಕಟ್ ಹೇಳಿದ್ದಾರೆ. ಅಷ್ಟೇ ನೈಜವಾಗಿ ಪ್ರತಿ ಪಾತ್ರಗಳು ಪ್ರೇಕ್ಷಕರನ್ನು ಆವರಿಸಿಬಿಡುತ್ತವೆ. ಲಾಯರ್‌ಗಳಾಗಿ ಪ್ರೇಮಾ ಹಾಗೂ ಅಚ್ಯುತ್ ಕುಮಾರ್ ತಮ್ಮ ವಾದವನ್ನು ಅಚ್ಚುಕಟ್ಟಾಗಿ ಮಂಡಿಸಿದ್ದಾರೆ. ತನ್ನ ಹೆಂಡತಿಯಿಂದಲೇ ಸಂಕಷ್ಟಕ್ಕೆ ಸಿಲುಕುವ ಪತಿಯಾಗಿ ನಿಶಾನ್, ಗಂಡನನ್ನೇ ದ್ವೇಷಿಸುವ ನಾಯಕಿಯಾಗಿ ಸೋನು ಗೌಡ ನಟಿಸಿದ್ದಾರೆ. ವಿಕ್ರಂ ಪ್ರಭು ಫಿಲ್ಮಂಸ್ ಬ್ಯಾನರ್ ನಡಿ ನಿರ್ಮಾಣ ಮಾಡಿರುವ ವೆಡ್ಡಿಂಗ್ ಗಿಫ್ಟ್ ಸಿನಿಮಾಗೆ ಉದಯ್ ಲೀಲಾ ಕ್ಯಾಮೆರಾ, ಬಾಲಚಂದ್ರ ಪ್ರಭು ಸಂಗೀತ ನಿರ್ದೇಶನ, ವಿಜೇತ್ ಚಂದ್ರ ಸಂಕಲನ ಸಿನಿಮಾಕ್ಕಿದೆ. ಸದ್ಯ ಸ್ಯಾಂಪಲ್ಸ್‌ನಲ್ಲಿ ನಿರೀಕ್ಷೆ ಹೆಚ್ಚಿಸಿರುವ ವೆಡ್ಡಿಂಗ್ ಗಿಫ್ಟ್ ಸಿನಿಮಾ ಜುಲೈ 8 ರಂದು ತೆರೆಗೆ ಬರ್ತಿದೆ.