ಬಾಗಲಕೋಟೆ: ಜಿಲ್ಲೆಯ ಬನಹಟ್ಟಿಯಲ್ಲಿ (Banahatti) ಕೆಹೆಚ್‌ಡಿಎಸಿ ನೇಕಾರರು ಕೈಗೊಂಡ ಅನಿರ್ದಿಷ್ಟಾವಧಿ ಪ್ರತಿಭಟನೆ (Weavers’ protest) ಗುರುವಾರ ಒಂಬತ್ತನೇ ದಿನಕ್ಕೆ ಕಾಲಿಟ್ಟಿದೆ.
ಪ್ರತಿಭಟನಾ ನಿರತ ನೇಕಾರರು ಬನಹಟ್ಟಿ ಪಟ್ಟಣದ ಭಾಂಗಿ ವೃತ್ತದ ಮುಖ್ಯ ರಸ್ತೆಯನ್ನು ಬಂದ್ ಮಾಡಿ, ರಸ್ತೆಯಲ್ಲಿಯೇ ಜಂತರದ ಮೂಲಕ ನೂಲು ಸುತ್ತಿ, ಅಲ್ಲಿಯೇ ಉಪಹಾರ ಸೇವಿಸಿ ಆಕ್ರೋಶ ಹೊರಹಾಕಿದರು. ಇದನ್ನೂ ಓದಿ: ಬಿಎಸ್‌ವೈಗೆ ಮತ್ತೊಂದು ಸಂಕಷ್ಟ- 2020ರ ಕೇಸ್‌ಗೆ ಮತ್ತೆ ಜೀವ
ನೇಕಾರ ಮುಖಂಡ ಶಿವಲಿಂಗ ಟರ್ಕಿ ಮಾತನಾಡಿ, ದೇಶದ ಜನರ ಮಾನಮುಚ್ಚುವ ನೇಕಾರರು ಇಂದು ಬೀದಿಗೆ ಬಿದ್ದು, ರಸ್ತೆಯಲ್ಲಿಯೇ ಉಪಹಾರ ಮಾಡುವಂತಾಗಿದ್ದು, ಶೋಚನಿಯ ಸ್ಥಿತಿಯಾಗಿದೆ.
ಎಂಟು ದಿನ ಕಳೆದರೂ ಯಾವೊಬ್ಬ ಜನಪ್ರತಿನಿಧಿ ಬಾರದೇ ನಿರ್ಲಕ್ಷ್ಯ ತೋರಿಸುತ್ತಿರುವುದು ನೇಕಾರರ ಮೇಲೆ ಆಗುತ್ತಿರುವ ಅನ್ಯಾಯವಾಗಿದೆ. ಮುಂದಿನ ದಿನಗಳಲ್ಲಿ ಪ್ರಮುಖ ರಸ್ತೆಗಳನ್ನು ಬಂದ್ ಮಾಡಿ ಪ್ರತಿಭಟಿಸಲಾಗುವುದು ಎಂಬ ಎಚ್ಚರಿಕೆಯನ್ನು ಅವರು ನೀಡಿದರು.
ರಸ್ತೆ ಬಂದ್ ಆಗಿದ್ದರಿಂದ ಬೈಕ್ ಸವಾರರು ಸೇರಿದಂತೆ ವಾಹನ ಸವಾರರು ಬೇರೆ ದಾರಿಗಳತ್ತ ಸಾಗುವ ದೃಶ್ಯ ಸಾಮಾನ್ಯವಾಗಿತ್ತು. ಅನೇಕ ನೇಕಾರರು ಘೋಷಣೆಗಳನ್ನು ಕೂಗಿ ಸರ್ಕಾರ ಮತ್ತು ಶಾಸಕರ ವಿರುದ್ಧ ಆಕ್ರೋಶ ಹೊರಹಾಕಿದರು.