ಬೆಂಗಳೂರು: ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ರಂಗೆರುತ್ತಿದೆ. ಆದರೆ, ಚುನಾವಣೆಗೆ ವರುಣನ ಅಡ್ಡಿ ಉಂಟು ಮಾಡುವ ಸಾಧ್ಯತೆಗಳಿವೆ. ಇದೇ 13 ರಂದು ದೇಶದ ವಿವಿಧ ಭಾಗದಲ್ಲಿ ಚಂಡಮಾರುತ ಬೀಸಲಿದ್ದು, ದಕ್ಷಿಣ ಭಾಗದ ಹಲವು ಭಾಗದಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ
ಈಗಾಗಲೇ ಭಾರತದ ವಾಯವ್ಯ ಮತ್ತು ಪೂರ್ವ ಭಾಗದಲ್ಲಿ ಮಾರುತಗಳು ರೂಪುಗೊಳ್ಳುತ್ತಿವೆ. ಇದರೊಂದಿಗೆ ಮೆಡಿಟರೇನಿಯನ್ ಪ್ರದೇಶದಲ್ಲಿಯೂ ಮಾರುತಗಳು ರೂಪಗೊಳ್ಳುತ್ತಿವೆ. ಇವು ಹೆಚ್ಚು ತೇವಾಂಶ ಹೊಂದಿವೆ. ಯುರೋಪ್ ಖಂಡದಿಂದ ಅರಬ್ಬಿ ಸಮುದ್ರದತ್ತ ಬರುವ ವೇಳೆ ಇವುಗಳ ತೇವಾಂಶ ಇನ್ನಷ್ಟು ಹೆಚ್ಚುತ್ತದೆ. ಇವೆರಡರ ಸಂಯೋಜನೆಯಾಗಲಿದ್ದು, ಕಡಿಮೆ ಅವಧಿಯಲ್ಲಿಯೇ ಹಲವು ಚಂಡಮಾರುತಗಳನ್ನು ಉಂಟು ಮಾಡಲಿದೆ. ಭಾನುವಾರದಿಂದಲೇ ಹಿಮಾಲಯದ ಪಶ್ಚಿಮ ಭಾಗಗಳಲ್ಲಿ ಹೊಸ ಮಾರುತಗಳು ಕಂಡುಬಂದಿವೆ ಎಂದು ಇಲಾಖೆ ತಿಳಿಸಿದೆ.
ದಕ್ಷಿಣ ಭಾರತದಲ್ಲಿ ಈ ಮಾರುತಗಳು 40ರಿಂದ 60 ಕಿ.ಮೀ. ವೇಗದಲ್ಲಿ ಗಾಳಿ ಬೀಸಲಿದ್ದು, ಗುಡುಗು, ಮಿಂಚಿನಿಂದ ಕೂಡಿದ ಭಾರೀ ಮಳೆಯಾಗಲಿದೆ ಅಂತಾ ಹವಾಮಾನ ಇಲಾಖೆ ತಿಳಿಸಿದೆ.