ಕಳೆದ ವರ್ಷ ಬಿಸಿಲು ಎಂದು ನಿಟ್ಟುಸಿರು ಬಿಟ್ಟವರಿಗೆ ಶಾಕ್ ಕೊಟ್ಟ ಹವಾಮಾನ ಇಲಾಖೆ

Public TV
1 Min Read
rcr summer baby 2

ರಾಯಚೂರು: ಹೈದರಾಬಾದ್ ಕರ್ನಾಟಕದ ತುಂಬು ಗರ್ಭಿಣಿಯರೆಲ್ಲಾ ನೋಡಲೇ ಬೇಕಾದ ಸ್ಟೋರಿ ಇದು. ಏಕೆಂದರೆ ಈ ಬಾರಿಯ ಬಿಸಿಲು ಜೀವಮಾರಕವಾಗಿದೆ. ಬಿಸಿಲನಾಡು ರಾಯಚೂರಿನಲ್ಲಂತೂ ಮಾರ್ಚ್ ತಿಂಗಳಿನಿಂದಲೇ ನವಜಾತ ಶಿಶುಗಳು ಸರತಿ ಸಾಲಿನಲ್ಲಿ ಆಸ್ಪತ್ರೆಗೆ ದಾಖಲಾಗುತ್ತಿವೆ. ವೈದ್ಯರ ಪ್ರಕಾರ ಬಿಸಿಲಿನಿಂದ ಗರ್ಭದಲ್ಲೇ ಜೀವಗಳು ಸಾವನ್ನಪ್ಪುತ್ತಿವೆ.

ಕಳೆದ ವರ್ಷವೇ ಬಿಸಿಲು ಎಂದು ನಿಟ್ಟುಸಿರು ಬಿಟ್ಟವರಿಗೆ ಭಾರತೀಯ ಹವಾಮಾನ ಇಲಾಖೆ ಮತ್ತೊಂದು ಶಾಕ್ ನೀಡಿದೆ. ಕಳೆದ ವರ್ಷಕ್ಕಿಂತ ಒಂದು ಡಿಗ್ರಿ ಸೆಲ್ಸಿಯಸ್‍ನಷ್ಟು ತಾಪಮಾನ ಈ ವರ್ಷ ಹೆಚ್ಚಾಗಲಿದೆ. ಈ ಹೆಚ್ಚಾದ ತಾಪಮಾನ ರಾಯಚೂರು, ಬಳ್ಳಾರಿ, ಕಲಬುರಗಿ, ಯಾದಗಿರಿ ನವಜಾತ ಶಿಶುಗಳ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತಿದೆ. ರಾಯಚೂರು ಜಿಲ್ಲೆಯಲ್ಲಂತೂ ಮಕ್ಕಳ ಆಸ್ಪತ್ರೆಗಳಲ್ಲಿ ಬೇಸಿಗೆ ಪರಿಣಾಮದ ಕಾಯಿಲೆಗಳಿಂದಲೇ ಶಿಶುಗಳು ದಾಖಲಾಗುತ್ತಿವೆ.

rcr summer baby

ಬ್ಲಡ್ ಯೂರಿಯಾ ಪ್ರಮಾಣ ಹೆಚ್ಚಾಗುವುದು, ತೂಕ ಕಡಿಮೆಯಾಗುವುದು, ಜ್ವರ, ಕಾಮಾಲೆ, ಕಡಿಮೆ ಮೂತ್ರ, ನಿರ್ಜಲ, ಕಿಡ್ನಿ ವೈಫಲ್ಯ ಸಮಸ್ಯೆಗಳಿಂದ ಶಿಶುಗಳು ಬಳಲುತ್ತಿವೆ. ಶಿಶುಗಳ ಮೇಲೆ ಬೇಸಿಗೆ ಪರಿಣಾಮದ ಬಗ್ಗೆ ನಿರಂತರ ಅಧ್ಯಯನ ನಡೆಸಿರುವ ರಾಯಚೂರಿನ ಶ್ರೀ ಅಮೃತ ಮಕ್ಕಳ ಆಸ್ಪತ್ರೆ ವೈದ್ಯರು ಮುಂದಿನ ಪರಿಣಾಮಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯ ರಿಮ್ಸ್ ಆಸ್ಪತ್ರೆ ಸೇರಿದಂತೆ ಖಾಸಗಿ ಆಸ್ಪತ್ರೆಗಳಲ್ಲಿ ನೂರಾರು ಮಕ್ಕಳು ನಿರ್ಜಲಿಕರಣದಿಂದ ದಾಖಲಾಗಿದ್ದಾರೆ.

rcr summer baby 1

ನಿರ್ಜಲೀಕರಣದಿಂದಾಗಿ ದೇಹದಲ್ಲಿ ನೀರಿನ ಅಂಶ ಹೊಂದಾಣಿಕೆಯಾಗದೆ ಜ್ವರ ಕಾಣಿಸಿಕೊಳ್ಳುತ್ತಿದೆ. ಇದು ನೇರವಾಗಿ ಮೂತ್ರಪಿಂಡಗಳ ಮೇಲೆ ಪರಿಣಾಮ ಬೀರುತ್ತಿದೆ. ಕೆಲ ಶಿಶುಗಳಲ್ಲಿ ಒಂದು ಕಿಡ್ನಿ ವೈಫಲ್ಯವಾದರೆ, ಇನ್ನೂ ಕೆಲ ಮಕ್ಕಳು ಎರಡು ಕಿಡ್ನಿ ಕಳೆದುಕೊಂಡು ಸಾವು-ಬದುಕಿನ ಮಧ್ಯೆ ಹೋರಾಡುತ್ತಿವೆ. ಮೊದಲ ಹೆರಿಗೆಯಾದರೆ ತಾಯಂದಿರಿಗೆ ಹಾಲುಣಿಸಲು ಬಾರದೆ ಶಿಶುಗಳು ನಾನಾ ಸಮಸ್ಯೆಗೆ ತುತ್ತಾಗುತ್ತಿವೆ. ರಾಯಚೂರು ಕೃಷಿ ವಿವಿಯ ಹವಾಮಾನ ತಜ್ಞರಂತೂ ಮೇ ತಿಂಗಳಲ್ಲಿ ತಾಪಮಾನ 45 ಡಿಗ್ರಿ ಸೆಲ್ಸಿಯಸ್ ತಲುಪಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಈ ವರ್ಷದ ಬಿಸಿಲು ನಿಜಕ್ಕೂ ಮಾರಣಾಂತಿಕವಾಗಿದೆ. ಎಚ್ಚರ ತಪ್ಪಿದರೆ ಶಿಶುಗಳ ಪಾಲಿಗೆ ಯಮಧೂತನಂತಾಗುತ್ತಿದೆ. ಪೋಷಕರು ಪುಟ್ಟಮಕ್ಕಳ ಆರೈಕೆಯಲ್ಲಿ ಬಹಳ ಎಚ್ಚರ ವಹಿಸಬೇಕಿದೆ. ದೇಹದಲ್ಲಿ ನೀರಿನಂಶ ಕಾಯ್ದುಕೊಳ್ಳುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಿ ಎಂದು ವೈದ್ಯರು ಸಲಹೆ ನೀಡುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *