ಹಿಜಬ್‌ ಬಗ್ಗೆ ಎದ್ದಿದ್ದ 3 ಪ್ರಶ್ನೆಗಳಿಗೆ ಸಿಕ್ತು ಉತ್ತರ: ಅರ್ಜಿದಾರರು, ಸರ್ಕಾರ, ಹೈಕೋರ್ಟ್‌ ಹೇಳಿದ್ದೇನು?

Public TV
5 Min Read
HIJAB BANG

ಬೆಂಗಳೂರು: ಹಿಜಬ್‌ ಮುಸ್ಲಿಂ ಧರ್ಮದ ಅಗತ್ಯ ಆಚರಣೆ ಅಲ್ಲ ಎಂದು ಐತಿಹಾಸಿಕ ತೀರ್ಪು ಪ್ರಕಟಿಸುವ ಮೂಲಕ ಶಿಕ್ಷಣ ಸಂಸ್ಥೆಗಳಲ್ಲಿ ಎದ್ದಿದ್ದ ಧರ್ಮ ಸಂಘರ್ಷಕ್ಕೆ ಹೈಕೋರ್ಟ್‌ ಪೂರ್ಣ ವಿರಾಮ ಹಾಕಿದೆ.

ವಿಶ್ವ ಮಟ್ಟದಲ್ಲಿ ಸುದ್ದಿಯಾಗಿ ಭಾರೀ ಚರ್ಚೆಗೆ ಕಾರಣವಾಗಿದ್ದ ಹಿಜಬ್‌ ವಿವಾದ ಸಂಬಂಧ ಸುದೀರ್ಘ ವಿಚಾರಣೆ ನಡೆಸಿದ್ದ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ, ನ್ಯಾ. ಕೃಷ್ಣ ಎಸ್ ದೀಕ್ಷಿತ್ ಹಾಗೂ ಜೈಬುನ್ನೀಸಾ ಎಂ ಖಾಜಿ ನೇತೃತ್ವದ ಪೀಠ ಮಂಗಳವಾರ ಬೆಳಗ್ಗೆ 10:35ಕ್ಕೆ ಮಹತ್ವದ ತೀರ್ಪು ಪ್ರಕಟಿಸಿತು.

ತರಗತಿಗಳಲ್ಲಿ ಹಿಜಬ್‌ ನಿಷೇಧಕ್ಕೆ ಸಂಬಂಧಿಸಿದಂತೆ ಸರ್ಕಾರ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಎಲ್ಲ ಅರ್ಜಿಯನ್ನು ಕೋರ್ಟ್‌ ವಜಾ ಮಾಡಿದೆ.

ಹಿಜಬ್‌ ನಿಷೇಧಕ್ಕೆ ಸಂಬಂಧಿಸಿದಂತೆ 11 ದಿನಗಳ ಕಾಲ ಎರಡು ಕಡೆಯ ವಾದ ಪ್ರತಿವಾದ ಆಲಿಸಿದ್ದ ಹೈಕೋರ್ಟ್ ಫೆ.25 ರಂದು ವಿಚಾರಣೆ ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸಿತ್ತು. ಹೈಕೋರ್ಟ್‌ ತನ್ನ ತೀರ್ಪಿನಲ್ಲಿ ಮೂರು ಮಹತ್ವದ ಪ್ರಶ್ನೆಗಳಿಗೆ ಉತ್ತರ ನೀಡಿದೆ. ಈ ಪ್ರಶ್ನೆಗಳಿಗೆ ಅರ್ಜಿದಾರರ ಪರ ವಾದ ಏನಿತ್ತು? ಸರ್ಕಾರದ ಪರ ವಾದ ಏನಿತ್ತು ಎಂಬುದನ್ನು ಇಲ್ಲಿ ತಿಳಿಸಲಾಗಿದೆ. ಇದನ್ನೂ ಓದಿ: ಹಿಜಬ್‌ ನಿಷೇಧದ ಹೈಕೋರ್ಟ್‌ ತೀರ್ಪು ತೀವ್ರ ನಿರಾಶಾದಾಯಕ: ಕಾಶ್ಮೀರ ಮಾಜಿ ಸಿಎಂ

hijab mes college

ಪ್ರಶ್ನೆ 1. ಇಸ್ಲಾಂ ಧರ್ಮದ ಅಡಿಯಲ್ಲಿ ಹಿಜಬ್ ಧರಿಸುವುದು ಅತ್ಯಗತ್ಯ ಧಾರ್ಮಿಕ ಆಚರಣೆಯೇ?
ಅರ್ಜಿದಾರರ ವಾದ: ಇಸ್ಲಾಂ ಧರ್ಮಕ್ಕೂ ಮುನ್ನವೇ ಹಿಜಬ್‌ ಧರಿಸುವ ಪದ್ಧತಿ ಚಾಲ್ತಿಯಲ್ಲಿತ್ತು ಮತ್ತು ಕುರಾನ್‌ ಪ್ರಕಾರ ಮುಸ್ಲಿಂ ಮಹಿಳೆಯರು ತಲೆ, ಮುಖ, ಎದೆ ಭಾಗವನ್ನು ಮುಚ್ಚಲು ಹಿಜಬ್‌ ಧರಿಸುವುದು ಕಡ್ಡಾಯ. ಅದು ಅಲ್ಲಾನ ಕೊನೆಯ ಆಜ್ಞೆ. ಕೇಂದ್ರಿಯ ವಿದ್ಯಾಲಯಗಳಲ್ಲಿ ಈಗಲೂ ಹಿಜಬ್‌ ಧರಿಸಲು ಅವಕಾಶವಿದೆ.

ಸರ್ಕಾರದ ವಾದ: ಹಿಜಬ್‌ ಕಡ್ಡಾಯ ಆಚರಣೆ ಎಂದು ಅರ್ಜಿದಾರರು ಸಾಬೀತು ಪಡಿಸಬೇಕು. ಆದರೆ ಅರ್ಜಿದಾರರು ಕಡ್ಡಾಯ ಎಂಬುದಕ್ಕೆ ಯಾವುದೇ ದಾಖಲೆ ಸಲ್ಲಿಸಿಲ್ಲ. ಹಿಜಬ್‌ ಹಾಕದೇ ಇರುವುದು ಕೂಡ ಮುಸ್ಲಿಂ ಮಹಿಳೆಯರ ಅಭಿವ್ಯಕ್ತಿ ಸ್ವಾತಂತ್ರ್ಯ. ಈ ವಾದದ ಪ್ರಕಾರ ಹಿಜಬ್‌ ಕಡ್ಡಾಯವಲ್ಲ ಎನ್ನುವುದು ಸಾಬೀತಾಗುತ್ತದೆ.

ಹೈಕೋರ್ಟ್‌: ಮುಸ್ಲಿಂ ಮಹಿಳೆಯರು ಹಿಜಾಬ್ ಧರಿಸುವುದು ಇಸ್ಲಾಂ ಅಡಿಯಲ್ಲಿ ಅಗತ್ಯವಾದ ಧಾರ್ಮಿಕ ಆಚರಣೆಯ ಭಾಗವಲ್ಲ. ಹಿಜಬ್‌ ಅವಶ್ಯಕ ಆಚರಣೆ ಎಂಬ ಉಲ್ಲೇಖಕ್ಕೆ ಕುರಾನ್‌ನಲ್ಲಿ ಯಾವುದೇ ಆಧಾರವಿಲ್ಲ.

Hassan hijab
ಪ್ರಶ್ನೆ 2: ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಖಾಸಗಿತನದ ಹಕ್ಕಿನ ಅಡಿ ಹಿಜಬ್ ಧರಿಸುವುದು ಅತ್ಯಗತ್ಯ ಧಾರ್ಮಿಕ ಆಚರಣೆಯೇ?
ಅರ್ಜಿದಾರರ ವಾದ: ಸಾರ್ವಜನಿಕ ಸುವ್ಯವಸ್ಥೆ, ಆರೋಗ್ಯ ಇತ್ಯಾದಿ ವಿಚಾರ ಬಂದಾಗ ಸರ್ಕಾರ ಸಂವಿಧಾನ ನೀಡಿದ ಸ್ವಾತಂತ್ರ್ಯದ ಹಕ್ಕನ್ನು ನಿರ್ಬಂಧಿಸಬಹುದು. ಸರ್ಕಾರ ಮೂಲಭೂತ ಹಕ್ಕುಗಳನ್ನು ರಕ್ಷಿಸಬೇಕು. ಆದರೆ ಸಾರ್ವಜನಿಕ ಸುವ್ಯವಸ್ಥೆ ನೆಪದಲ್ಲಿ ಹಕ್ಕುಗಳನ್ನು ಧಮನಿಸಬಾರದು. ಸತಿ ಪದ್ದತಿ, ದೇವದಾಸಿ ಪದ್ದತಿ, ನರಬಲಿಯನ್ನು ನಿರ್ಬಂಧಿಸಬಹುದು. ಆದರೆ ಕಡ್ಡಾಯ ಆಚರಣೆಯನ್ನು ಶಾಲಾ ಸಮವಸ್ತ್ರದ ಹೆಸರಿನಲ್ಲಿ ನಿರ್ಬಂಧಿಸುವುದು ಸರಿಯಲ್ಲ. ದಕ್ಷಿಣ ಆಫ್ರಿಕಾ ಕೋರ್ಟ್‌ ಮೂಗುತಿ ಹಿಂದೂ ಸಂಪ್ರದಾಯದ ಭಾಗ ಎಂದು ಹೇಳಿ ಭಾರತ ಮೂಲದ ವಿದ್ಯಾರ್ಥಿನಿ ವಾದವನ್ನು ಎತ್ತಿ ಹಿಡಿದು ಶಾಲಾ ಆಡಳಿತ ಮಂಡಳಿಯ ವಾದವನ್ನು ತಿರಸ್ಕರಿಸಿತ್ತು. ಈ ಮೂಲಕ ಆಕೆಯ ಹಕ್ಕನ್ನು ರಕ್ಷಿಸಿತ್ತು. ಸಂವಿಧಾನದ 25(1)ನೇ ವಿಧಿಯ ಅಡಿ ನೀಡಲಾಗಿರುವಾಗ ಧಾರ್ಮಿಕ ಸ್ವಾತಂತ್ರ್ಯರಕ್ಷಣೆಯ ಹೊಣೆಯನ್ನು ಕಾಲೇಜು ಅಭಿವೃದ್ಧಿ ಸಮಿತಿಗೆ(ಸಿಡಿಸಿ) ನೀಡಿರುವುದು ಸಂವಿಧಾನ ವಿರೋಧಿ. ದನ್ನೂ ಓದಿ: ಹಿಜಬ್‌ ಕುರಿತ ಹೈಕೋರ್ಟ್‌ ಆದೇಶ ಪ್ರಶ್ನಿಸಿ ಸುಪ್ರೀಂಗೆ ಅರ್ಜಿ: ವಕ್ಫ್‌ ಬೋರ್ಡ್‌ ಅಧ್ಯಕ್ಷ

ಸರ್ಕಾರದ ವಾದ: ಹಿಜಬ್‌ ಇಸ್ಲಾಂ ಧರ್ಮದ ಆಚರಣೆಯ ಭಾಗವಲ್ಲ. ಶಬರಿಮಲೆ ಮತ್ತು ತ್ರಿವಳಿ ತಲಾಖ್‌ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಸಂವಿಧಾನದ ನೈತಿಕತೆ ಹಾಗೂ ವೈಯಕ್ತಿಕ ಘನತೆ ಪರೀಕ್ಷೆಯಲ್ಲಿ ಪಾಸಾಗಬೇಕು ಎಂದು ಹೇಳಿದೆ. ಹಿಜಬ್‌ ಮೇಲೆ ನಿರ್ಬಂಧ ಹೇರಿದರೆ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಯಾವುದೇ ಧಕ್ಕೆ ಆಗುವುದಿಲ್ಲ. ಹಿಜಬ್‌ ಇಸ್ಲಾಂನ ಭಾಗವಾಗಿರದ ಕಾರಣ ಸರ್ಕಾರ ಅದನ್ನು ಕಾನೂನಿನ ಮೂಲಕ ನಿರ್ಬಂಧಿಸಬಹುದು. ಶಾಲೆಯಲ್ಲಿ ಓದುತ್ತಿರುವ ಎಲ್ಲ ವಿದ್ಯಾರ್ಥಿಗಳು ಸಮಾನರಾಗಿರಬೇಕು ಎಂಬ ಕಾರಣಕ್ಕೆ ಸಮವಸ್ತ್ರವನ್ನು ತರಲಾಗಿದೆ. ಇದರಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ, ಖಾಸಗಿತನದ ಹಕ್ಕುಗಳ ನಿರ್ಬಂಧ ಬರುವುದಿಲ್ಲ.

ಹೈಕೋರ್ಟ್‌: ಶಾಲಾ ಸಮವಸ್ತ್ರದ ನಿಯಮ ಸರಿಯಾಗಿದ್ದು ವಿದ್ಯಾರ್ಥಿಗಳು ಇದನ್ನು ಆಕ್ಷೇಪಿಸುವಂತಿಲ್ಲ.

hijab udupi 1

ಪ್ರಶ್ನೆ 3: ಫೆಬ್ರವರಿ 5ರ ಸರ್ಕಾರಿ ಆದೇಶ ಸರಿಯಿದೆಯೇ?
ಅರ್ಜಿದಾರರ ವಾದ: ಶಾಲೆ, ಕಾಲೇಜುಗಳಲ್ಲಿ ಸಮವಸ್ತ್ರಕ್ಕೆ ಸಂಬಂಧಿಸಿದಂತೆ ಸರ್ಕಾರ ಇಲ್ಲಿಯವರೆಗೆ ಯಾವುದೇ ರೀತಿಯ ಸೂಚನೆಯೇ ನೀಡಿಲ್ಲ. ಸಮವಸ್ತ್ರಕ್ಕೆ ಸಂಬಂಧಿಸಿದಂತೆ ಸರ್ಕಾರ ಸಿಡಿಸಿಗೆ ಯಾವುದೇ ಅಧಿಕಾರ ನೀಡಿಲ್ಲ. ಹೀಗಾಗಿ ಕರ್ನಾಟಕ ಶಿಕ್ಷಣ ಕಾಯ್ದೆ 1983ರ ಪ್ರಕಾರ ಸಿಡಿಸಿಯೇ ಕಾನೂನು ಬಾಹಿರ. ಶಿಕ್ಷಣ ಕಾಯ್ದೆಯ ಅಡಿ ಪೋಷಕರು, ಶಿಕ್ಷಕರ ಸಮಿತಿ ರಚಿಸಲು ಅವಕಾಶವಿದೆ. ಆದರೆ ಕಾಲೇಜು ಅಭಿವೃದ್ಧಿ ಸಮಿತಿಗಲ್ಲ. ಶಾಸಕರ ನೇತೃತ್ವದಲ್ಲಿ ಸಿಡಿಸಿ ಕೆಲಸ ಮಾಡುತ್ತಿದೆ. ಈ ಸಮಿತಿ ಯಾರಿಗೂ ಉತ್ತರದಾಯಿಯಲ್ಲ. ಒಮ್ಮೆ ನಿಗದಿ ಪಡಿಸಿದ ಸಮವಸ್ತ್ರವನ್ನು 5 ವರ್ಷ ಬದಲಿಸಬಾರದು. ಬದಲಿಸುವ 1 ವರ್ಷಕ್ಕೆ ಮುನ್ನ ಪೋಷಕರಿಗೆ ನೋಟಿಸ್‌ ನೀಡಬೇಕೆಂಬ ನಿಯಮವಿದೆ. ಹಿಜಬ್‌ ವಿಚಾರದಲ್ಲಿ ನೋಟಿಸ್‌ ನೀಡಬೇಕಿತ್ತು. ಹಿಜಬ್‌ ಧಾರ್ಮಿಕ ಸಂಕೇತವಾದರೆ ಬಿಂದಿ, ಬಳೆ, ನಾಮ ಧಾರ್ಮಿಕ ಚಿಹ್ನಗಳೇ. ಸರ್ಕಾರ ಇವುಗಳಿಗೆ ನಿರ್ಬಂಧ ಹೇರದೇ ಮುಸ್ಲಿಂ ಹೆಣ್ಣು ಮಕ್ಕಳ ಹಿಜಬ್‌ ಅನ್ನೇ ಆಯ್ಕೆ ಮಾಡಿದ್ದು ಯಾಕೆ? ಸರ್ಕಾರ ಪೂರ್ವಗ್ರಹ ಪೀಡಿತವಾಗಿ ಈ ಆದೇಶ ಪ್ರಕಟಿಸಿದೆ.

ಸರ್ಕಾರದ ವಾದ: ಶಿಕ್ಷಣ ಕಾಯ್ದೆಯ ಸೆಕ್ಷನ್‌ 133ರ ಅಡಿ ಲಭ್ಯ ಇರುವ ಅಧಿಕಾರವನ್ನು ಬಳಸಿ ಫೆ.5 ರಂದು ಆದೇಶ ಹೊರಡಿಸಿದೆ. ಸಮವಸ್ತ್ರ ನಿಗದಿಪಡಿಸುವಂತೆ ಸಿಡಿಸಿಗಳಿಗೆ ನಿರ್ದೇಶಿಸಿದೆ. ಅದರಂತೆ ಸಿಡಿಸಿ ಸಮವಸ್ತ್ರವನ್ನು ನಿಗದಿ ಮಾಡಿದೆ. ವಿದ್ಯಾರ್ಥಿಗಳಲ್ಲಿ ಏಕತೆ, ಸಮಾನತೆ, ಶಿಸ್ತು ಮೂಡಿಸಲು ಸಮವಸ್ತ್ರವನ್ನು ನಿಗದಿ ಮಾಡಲಾಗಿದೆಯೇ ಹೊರತು ಬೇರೆ ಉದ್ದೇಶಕ್ಕಲ್ಲ. ಅರ್ಜಿದಾರರು ಈ ಆದೇಶವನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. 2013ರಲ್ಲೇ ಸಮವಸ್ತ್ರ ಕುರಿತು ನಿರ್ಣಯ ಅಂಗೀಕರಿಸಲಾಗಿದ್ದು 2014ರಿಂದಲೂ ಸಿಡಿಸಿ ರಚನೆಯಾಗಿದೆ. ಇಲ್ಲಿಯವರೆಗೆ ಈ ಸಮಿತಿಗಳನ್ನು ಪ್ರಶ್ನೆ ಮಾಡಿಲ್ಲ. ಸಿಡಿಸಿಗಳಿಗೆ ಕಾನೂನಿನ ಮಾನ್ಯತೆ ಇದ್ದು ಇದು ಶಾಸಕರ ಇಚ್ಛೆಯಂತೆ ಕಾರ್ಯ ನಿರ್ವಹಿಸುವುದಿಲ್ಲ.

mdk hijab 2

ಕೋವಿಡ್‌ 19 ಸಂದರ್ಭದಲ್ಲಿ ದೇವಾಲಯ, ಮಸೀದಿ, ಚರ್ಚ್‌ಗಳನ್ನು ಮುಚ್ಚಲಾಗಿತ್ತು. ಅಲ್ಲಿಗೆ ತೆರಳಿ ಪ್ರಾರ್ಥನೆ ಸಲ್ಲಿಸುವುದನ್ನು ನಿರ್ಬಂಧಿಸಲಾಗಿತ್ತು. ಆರೋಗ್ಯದ ಕಾರಣಕ್ಕೆ ಸರ್ಕಾರ ಈ ಆದೇಶವನ್ನು ಹೊರಡಿಸಲಾಗಿತ್ತು. ಇದರರ್ಥ ಅಗತ್ಯ ಸಂದರ್ಭದಲ್ಲಿ ಮೂಲಭೂತ ಹಕ್ಕುಗಳ ಚಲಾವಣೆಯನ್ನು ಸರ್ಕಾರ ನಿರ್ಬಂಧಿಸಬಹುದು. ಹೀಗಾಗಿ ಶಾಲಾ, ಕಾಲೇಜುಗಳಲ್ಲಿ ಯಾವುದೇ ಸಂಘರ್ಷ ನಡೆಯದೇ ಇರಲು ಸರ್ಕಾರ ಹಿಜಬ್‌ ನಿಷೇಧಿಸಿ ಸಮವಸ್ತ್ರವನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ. ಅರ್ಜಿದಾರರು ಆರೋಪಿಸಿರುವಂತೆ ಸಂವಿಧನಾದ ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ಎಲ್ಲೂ ಉಲ್ಲಂಘನೆಯಾಗಿಲ್ಲ.

ಹೈಕೋರ್ಟ್‌: ಸರ್ಕಾರದ ಆದೇಶ ಕಾನೂನು ಬದ್ಧವಾಗಿದೆ. ಶಾಲಾ, ಕಾಲೇಜುಗಳಲ್ಲಿ ಸಮವಸ್ತ್ರ ಕಡ್ಡಾಯ ಆದೇಶ ಪ್ರಕಟಿಸಲು ಸರ್ಕಾರಕ್ಕೆ ಅಧಿಕಾರವಿದೆ. ಧರ್ಮವಸ್ತ್ರಗಳಿಗೆ ಶಾಲೆಗಳಿಗೆ ಅವಕಾಶವಿಲ್ಲ.

Share This Article
Leave a Comment

Leave a Reply

Your email address will not be published. Required fields are marked *