Connect with us

ಮನೆ ಊಟದ ಬಳಿಕ ಜೈಲಧಿಕಾರಿಗಳ ಜೊತೆ ಶಶಿಕಲಾ ಮನವಿ ಏನ್ ಗೊತ್ತಾ?

ಮನೆ ಊಟದ ಬಳಿಕ ಜೈಲಧಿಕಾರಿಗಳ ಜೊತೆ ಶಶಿಕಲಾ ಮನವಿ ಏನ್ ಗೊತ್ತಾ?

ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜೈಲುಪಾಲಾಗಿರುವ ಶಶಿಕಲಾ ಇದೀಗ ಟೇಬಲ್ ಫ್ಯಾನ್ ಹಾಗೂ ಹಾಸಿಗೆ ನೀಡುವುಂತೆ ಜೈಲಿನ ಅಧಿಕಾರಿಗಳ ಜೊತೆ ಮನವಿ ಮಾಡಿದ್ದಾರೆ.

ಹೌದು. ತಮ್ಮ ವಯಸ್ಸು ಮತ್ತು ಅನಾರೋಗ್ಯದ ಹಿನ್ನೆಲೆಯಲ್ಲಿ ಜೈಲಿನಲ್ಲಿ ಈ ವ್ಯವಸ್ಥೆ ಕಲ್ಪಿಸುವಂತೆ ಆಪ್ತರ ಮೂಲಕ ಮನವಿ ಮಾಡಿಸಿದ್ದಾರೆ.

ಒಂದು ವಾರದ ಜೈಲುವಾಸದಲ್ಲಿ ಶಶಿಕಲಾ ಜೈಲಿನ ಬದುಕಿಗೆ ಹೊಂದಿಕೊಳ್ಳುತ್ತಿದ್ದಾರೆ. ರಕ್ತದೊತ್ತಡವೂ ನಿಯಂತ್ರಣದಲ್ಲಿದೆ. ಶಶಿಕಲಾ ಅವರಿಗೆ ಬೇಕಾದ ಸೌಲಭ್ಯಗಳನ್ನು ಅಧಿಕಾರಿಗಳು ನೀಡಿದ್ದಲ್ಲಿ ಅವರು ಜೈಲಿನಲ್ಲಿರುವಷ್ಟು ದಿನ ಆರಾಮಾಗಿರಬಹುದು. ಹೀಗಾಗಿ ಶಶಿಕಲಾ ಅವರು ಚೆನ್ನೈ ಕೇಂದ್ರ ಜೈಲಿಗೆ ಸ್ಥಳಾಂತರವಾಗುವವರೆಗೆ ಬೆಂಗಳೂರು ಜೈಲಿನಲ್ಲಿ ಅವರಿಗೆ ಹಾಸಿಗೆ, ಟೇಬಲ್ ಫ್ಯಾನ್ ಮತ್ತು ಬಾತ್‍ರೂಂ ಸೌಲಭ್ಯವನ್ನು ನೀಡಿ ಅಂತಾ ಎಐಎಡಿಎಂಕೆ ಕರ್ನಾಟಕ ಪ್ರಾಂತ್ಯದ ಕಾರ್ಯದರ್ಶಿ ಜೈಲಾಧಿಕಾರಿಯನ್ನು ಕೇಳಿಕೊಂಡಿದ್ದಾರೆ.

ಈ ಹಿಂದೆ ಮನೆಯಲ್ಲಿ ತಯಾರಿಸಿ ಆಹಾರ ಮತ್ತು ನೀರು ಬೇಕೆಂದು ಶಶಿಕಲಾ ಮನವಿ ಸಲ್ಲಿಸಿದ್ದರು. ಆದ್ರೆ ಜೈಲು ಅಧಿಕಾರಿಗಳು ಶಶಿಕಲಾ ಮನವಿಯನ್ನು ತಿರಸ್ಕರಿಸಿದ್ದರು. ಆ ಬಳಿಕ ಆರೋಗ್ಯ ಸಮಸ್ಯೆಯ ನೆಪವೊಡ್ಡಿ ಬೆಂಗಳೂರು ಜೈಲಿನಿಂದ ಚೆನ್ನೈ ಜೈಲಿಗೆ ಸ್ಥಳಾಂತರಿಸಬೇಕೆಂದು ಮನವಿ ಮಾಡಿದ್ದರು. ಆದ್ರೆ ಇದಕ್ಕೆ ಸೂಕ್ತ ಕಾರಣ ನೀಡಬೇಕೆಂದು ನ್ಯಾಯಾಲಯ ಹೇಳಿತ್ತು.

ಅಕ್ರಮ ಆಸ್ತಿ ಪ್ರಕರಣದಲ್ಲಿ ಜೈಲು ಪಾಲಾಗಿರುವ ಶಶಿಕಲಾ ದಂಡದ ಮೊತ್ತವಾಗಿರುವ 10 ಕೋಟಿ ರೂ. ಹಣವನ್ನು ಪಾವತಿಸದೇ ಇದ್ದರೆ 13 ತಿಂಗಳ ಕಾಲ ಹೆಚ್ಚುವರಿಯಾಗಿ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಜೈಲಿನ ಮುಖ್ಯ ಅಧೀಕ್ಷಕ ಕೃಷ್ಣಕುಮಾರ್ ಹೇಳಿದ್ದರು. 2014ರ ಸೆಪ್ಟೆಂಬರ್‍ನಲ್ಲಿ ಪರಪ್ಪನ ಅಗ್ರಹಾರದಲ್ಲಿ 21 ದಿನಗಳ ಕಾಲ ಕಳೆದ ಹಿನ್ನೆಲೆಯಲ್ಲಿ ಶಶಿಕಲಾ ಒಟ್ಟು 3 ವರ್ಷ, 11 ತಿಂಗಳು ಜೈಲಿನಲ್ಲಿ ಇರಬೇಕಾಗುತ್ತದೆ

ಜೈಲಿನಲ್ಲಿ ಈಗ ಹೇಗಿದ್ದಾರೆ?: ಸಾಧಾರಣ ಶಿಕ್ಷೆಯಲ್ಲಿ ಬಂಧನಕ್ಕೆ ಒಳಗಾದ ಜೈಲು ನಿಯಮಾವಳಿಗಳ ಪ್ರಕಾರ ಸಮವಸ್ತ್ರ ಮತ್ತು ಇತರೇ ಊಟದ ತಟ್ಟೆಗಳನ್ನು ನೀಡಲಾಗಿದೆ. ಭದ್ರತಾ ದೃಷ್ಟಿಯಿಂದ ಪ್ರತ್ಯೇಕವಾದ ಕೊಠಡಿಯಲ್ಲಿ ಮಹಿಳಾ ಬಂಧಿಗಳನ್ನು ಇಡಲಾಗಿದ್ದು, ಭದ್ರತೆಗೆ ಮಹಿಳಾ ಅಧೀಕ್ಷಕರನ್ನು ನೇಮಿಸಲಾಗಿದೆ. ವಿ.ಎನ್. ಸುಧಾಕರನ್ ಪುರುಷ ವಿಭಾಗದಲ್ಲಿದ್ದು, ಭದ್ರತೆಗೆ ವಿಶೇಷ ಪಹರೆ ನೇಮಿಸಿದೆ.

ಜೈಲಿನ ಊಟವನ್ನು ಇತರೇ ಬಂಧಿಗಳಿಗೆ ನೀಡುವಂತೆ ಇವರಿಗೂ ಅದೇ ಆಹಾರವನ್ನು ನೀಡಲಾಗುತ್ತಿದೆ. ಕಾರಾಗೃಹದ ವೈದ್ಯಾಧಿಕಾರಿಗಳಿಂದ ಆರೋಗ್ಯದ ತಪಾಸಣೆ ಮಾಡಿಸಿ ಸಂಬಂಧಿಸಿದ ಔಷಧಿಗಳನ್ನು ನೀಡಲಾಗಿದೆ. ಮನೋರಂಜನೆಗಾಗಿ ಇತರೇ ಬಂಧಿಗಳಂತೆ ಟಿವಿ ನೀಡಲಾಗಿದೆ.

ಅಕ್ರಮ ಆಸ್ತಿ ಪ್ರಕರಣ ಸಂಬಂಧಿಸಿದಂತೆ ವಿಶೇಷ ಕೋರ್ಟ್ ತೀರ್ಪಿನ ಬಳಿಕ ಶಶಿಕಲಾ 2014ರಲ್ಲಿ ಜಯಲಲಿತಾ ಜೊತೆ ಬೆಂಗಳೂರಿನ ಜೈಲಿನಲ್ಲಿ ಕೆಲ ವಾರಗಳನ್ನು ಕಳೆದಿದ್ದರು. ಇದಾದ ಬಳಿಕ ಹೈಕೋರ್ಟ್ ಈ ಪ್ರಕರಣದಲ್ಲಿ ಎಲ್ಲ ಆರೋಪಿಗಳನ್ನು ಖುಲಾಸೆಗೊಳಿಸಿದ ಪರಿಣಾಮ ರಿಲೀಫ್ ಸಿಕ್ಕಿತ್ತು. ಆದರೆ ಇಗ ಸುಪ್ರೀಂ ಕೋರ್ಟ್ ವಿಶೇಷ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿದ ಪರಿಣಾಮ ಅದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇಳವರಸಿ ಮತ್ತು ಸುಧಾಕರಣ್ ಜೊತೆ ಶಶಿಕಲಾ ಜೈಲುಪಾಲಾಗಿದ್ದಾರೆ.

Advertisement
Advertisement