ರಾಯಚೂರು: ಖಾಸಗಿ ಶಾಲೆಗಳಿಗೆ ನಮ್ಮ ಶಾಲೆಗಳು ಪೈಪೋಟಿ ಕೊಡುವಂತೆ ಕೆಲಸ ಮಾಡುತ್ತೇವೆ ಎಂದು ಸಚಿವ ಶ್ರೀರಾಮುಲು ವಿಶ್ವಾಸ ವ್ಯಕ್ತಪಡಿಸಿದರು.
ರಾಯಚೂರಿನ ಸಿಂಧನೂರು ತಾಲೂಕಿನ ಜವಳಗೇರಾದಲ್ಲಿ ಮೊರಾರ್ಜಿ ವಸತಿ ಶಾಲೆ ಉದ್ಘಾಟನೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕ ಭಾಗದಲ್ಲಿ ಬದಲಾವಣೆ ತರಲು ನಾನು ಮತ್ತು ಸಿಎಂ ಬೊಮ್ಮಾಯಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ. ಮೊರಾರ್ಜಿ ವಸತಿ ಶಾಲೆಯಲ್ಲಿ 250 ವಿದ್ಯಾರ್ಥಿಗಳು ಇದ್ದಾರೆ. 11 ಎಕರೆ 20 ಗುಂಟೆ ಸ್ಥಳದಲ್ಲಿ ಶಾಲೆ ನಿರ್ಮಾಣ ಮಾಡಲಾಗಿದೆ ಎಂದು ತಿಳಿಸಿದರು.
ಮಕ್ಕಳು ಒಳ್ಳೆಯ ಶಿಕ್ಷಣ ಪಡೆಯಬೇಕು. ಶಿಕ್ಷಣಕ್ಕೆ ದೊಡ್ಡ ಶಕ್ತಿ ಇದೆ. ಕತ್ತಲಿನಲ್ಲಿ ಇರುವವರನ್ನು ಬೆಳಕಿಗೆ ತರುವುದು ಶಿಕ್ಷಣ. ನಮ್ಮ ಶಾಲೆಗಳಲ್ಲಿ ಉತ್ತಮ ಶಿಕ್ಷಣ ನೀಡುವ ವ್ಯವಸ್ಥೆ ಇದೆ. ಖಾಸಗಿ ಶಾಲೆಗಳಿಗೆ ನಮ್ಮ ಶಾಲೆಗಳು ಪೈಪೋಟಿ ಕೊಡುವಂತೆ ಕೆಲಸ ಮಾಡುತ್ತೇವೆ. ಉತ್ತಮ ಪ್ರಜೆಗಳನ್ನು ನಿರ್ಮಿಸಲು ನಮ್ಮ ಶಾಲೆಗಳು ಮುಂದಾಗಿವೆ. ಸಮಗ್ರ ಅಭಿವೃದ್ಧಿ ಜೊತೆಗೆ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ನಂದಿಬೆಟ್ಟಕ್ಕೆ ಹರಿದು ಬಂದ ಜನಸಾಗರ – ಗಂಟೆಗಟ್ಟಲೇ ಸರದಿ ಸಾಲಿನಲ್ಲಿ ನಿಂತು ಹೈರಾಣಾದ ಪ್ರವಾಸಿಗರು
ಹಂತ-ಹಂತವಾಗಿ ಸಮಾಜದಲ್ಲಿ ಆರ್ಥಿಕ ಅಭಿವೃದ್ಧಿಗೆ ನಾವು ಒತ್ತು ನೀಡುತ್ತೇವೆ. ದೇಶದ 112 ಮಹತ್ವಾಕಾಂಕ್ಷೆ ಜಿಲ್ಲೆಯಲ್ಲಿ ರಾಯಚೂರು ಜಿಲ್ಲೆಯೂ ಇದೆ. ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ನಮ್ಮ ಸರ್ಕಾರ 3 ಸಾವಿರ ಕೋಟಿ ರೂ. ಕೊಟ್ಟಿದೆ. ಶಿಕ್ಷಣಕ್ಕೆ ಒತ್ತು ನೀಡುವುದೇ ನಮ್ಮ ಸರ್ಕಾರದ ಗುರಿ ಎಂದು ವಿವರಿಸಿದರು.