ನವದೆಹಲಿ: ಕಾಂಗ್ರೆಸ್ ಸಂಸದರ ಕ್ಷೇತ್ರಗಳನ್ನು ಜೆಡಿಎಸ್‍ಗೆ ಬಿಟ್ಟುಕೊಡಲ್ಲ. ಹಾಲಿ ಸಂಸದರಿರುವ ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿಗಳನ್ನೇ ಕಣಕ್ಕಿಳಿಸಬೇಕೆಂದು ಹೈಕಮಾಂಡ್‍ಗೆ ಮಾಜಿ ಸಿಎಂ ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ. ಈ ಮೂಲಕ ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದ ಜೆಡಿಎಸ್‍ಗೆ ಹಿನ್ನಡೆ ಆಗಿದೆ.
ದೆಹಲಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿ, “ಹಾಲಿ ಸಂಸದರಿಗೆ ಟಿಕೆಟ್ ತಪ್ಪಿಸಬೇಡಿ ಎಂದಿದ್ದೇನೆ. ವರಿಷ್ಠರಿಗೆ ಹಾಲಿ ಸಂಸದರಿಗೆ ಟಿಕೆಟ್ ನೀಡುವ ಬಗ್ಗೆ ಮಾತನಾಡಿದ್ದೇನೆ. ಸ್ಕ್ರೀನಿಂಗ್ ಸಮಿತಿ ಅಜೆಂಡಾ ಗೊತ್ತಿಲ್ಲ. ರಾಜ್ಯದಿಂದ ಪಟ್ಟಿ ಬಂದಿದೆ ಆ ಪಟ್ಟಿ ಆಧರಿಸಿ ಚರ್ಚೆ ನಡೆಸಿದ್ದೇನೆ. ಹಾಲಿ ಸಂಸದರ ಕ್ಷೇತ್ರಗಳು ಹೊರತು ಪಡಿಸಿ ಚರ್ಚೆ ಮಾಡುತ್ತೇವೆ. ಜೆಡಿಎಸ್‍ಗೆ ಕಾಂಗ್ರೆಸ್ ಹಾಲಿ ಸಂಸದರ ಸೀಟು ಕೊಡಬಾರದು ಎಂದು ಆಗಿದೆ. ಹಾಗಾಗಿ ಜೆಡಿಎಸ್ ಕೇಳಿದ್ದರೂ ನಾವು ಕೊಡುತ್ತೇವೆ ಎಂದು ಹೇಳಿಲ್ಲ” ಎಂದು ತಿಳಿಸಿದರು.
ಬಳಿಕ ನಿಖಿಲ್ ಸ್ಪರ್ಧೆ ಬಗ್ಗೆ ಮಾತಾಡಿದ್ದ ಸಿದ್ದರಾಮಯ್ಯ, ಮಂಡ್ಯದಿಂದ ಯಾರಿಗೆ ಟಿಕೆಟ್ ಕೊಡಬೇಕು ಎನ್ನುವುದು ಜೆಡಿಎಸ್ ನವರಿಗೆ ಬಿಟ್ಟ ವಿಚಾರ. ಅವರಿಗೆ ನೀಡಲಾದ ಕ್ಷೇತ್ರದಲ್ಲಿ ನಾವು ಮಧ್ಯಪ್ರವೇಶ ಮಾಡುವುದಿಲ್ಲ. ನಮ್ಮ ಕ್ಷೇತ್ರದಲ್ಲಿ ಯಾರಿಗೆ ಟಿಕೆಟ್ ಕೊಡಬೇಕು ಎನ್ನುವುದನ್ನು ಜೆಡಿಎಸ್‍ನವರು ಹೇಳಲ್ಲ ಎಂದರು.
ಸುಮಲತಾ ಅವರ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ, ಸುಮಲತಾ ಪರ ಯಾರು ಕಾಂಗ್ರೆಸ್ ನಾಯಕರು ಪ್ರಚಾರ ಮಾಡುತ್ತಿಲ್ಲ. ಸುಮಲತಾಗೆ ಟಿಕೆಟ್ ಸಿಗಲ್ಲ ಎಂದು ನಾನೇ ಹೇಳಿದ್ದೇನೆ. ಸುಮಲತಾ ಹಿಂದೆ ನಾನ್ಯಾಕೆ ನಿಂತುಕೊಳ್ಳಲಿ. ಡಿ.ಕೆ ಶಿವಕುಮಾರ್ ಮಂಡ್ಯ ನಾಯಕರ ಜೊತೆ ಸಭೆ ನಡೆಸಿದ್ದು ಗೊತ್ತಿಲ್ಲ. ಸುಮಲತಾ ಪರ ಪ್ರಚಾರ ಮಾಡಿರುವುದು ಗೊತ್ತಿಲ್ಲ ಎಂದರು.
ಹಾಸನದಲ್ಲಿ ಎ. ಮಂಜು ಬಿಜೆಪಿಗೆ ಹೋಗುವುದಿಲ್ಲ. ಅಲ್ಲದೇ ದೇವೇಗೌಡ ಅವರ ಕುಟುಂಬ ರಾಜಕಾರಣದಿಂದ ಮೈತ್ರಿ ಸರ್ಕಾರ ಮೇಲೆ ಪರಿಣಾಮ ಬೀರಲ್ಲ ಎಂದು ಹೇಳಿದ್ದಾರೆ. ಸುಮಲತಾ ಬಗ್ಗೆ ರೇವಣ್ಣ ಹೇಳಿಕೆ ನೀಡಿದ ವಿಷಯದ ಬಗ್ಗೆ ಮಾತನಾಡಿ, “ಸುಮಲತಾ ಬಗ್ಗೆ ಸಚಿವ ರೇವಣ್ಣ ಹಾಗೇ ಮಾತನಾಡಬಾರದಿತ್ತು” ಎಂದು ಹೇಳಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv