ತುಮಕೂರು: ವರುಣಾದಲ್ಲಿ ನಮ್ಮ ಅಭ್ಯರ್ಥಿ ತಯಾರಾಗಿದ್ದಾರೆ. ವರುಣಾ ಕ್ಷೇತ್ರದಿಂದ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುತ್ತೇವೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ (HD Kumaraswamy) ಮಾಜಿ ಸಿಎಂ ಸಿದ್ದರಾಮಯ್ಯ ಅವರು ವರುಣಾ ಕ್ಷೇತ್ರದಿಂದ ಸ್ಪರ್ಧೆ ಮಾಡುವ ವಿಚಾರಕ್ಕೆ ತಿರುಗೇಟು ನೀಡಿದ್ದಾರೆ.
ತುಮಕೂರಿನ (Tumakuru) ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ ಸಂದರ್ಭ ಮಾತನಾಡಿದ ಕುಮಾರಸ್ವಾಮಿ, ಈಗಾಗಲೇ 3 ಜಿಲ್ಲೆಗಳ ರಥಯಾತ್ರೆ ಕಾರ್ಯಕ್ರಮ ಮುಗಿಸಿ ತುಮಕೂರಿಗೆ ಎಂಟ್ರಿ ಕೊಟ್ಟಿದ್ದೇವೆ. ತುಮಕೂರು ನಗರ ಕ್ಷೇತ್ರದಲ್ಲಿ ರಥಯಾತ್ರೆ ಪ್ರಾರಂಭ ಮಾಡುವ ಮುನ್ನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ, ಶಿವಕುಮಾರ ಶ್ರೀಗಳ ಗದ್ದುಗೆಗೆ ಪೂಜೆ ಸಲ್ಲಿಸಿ ಪಂಚರತ್ನ ರಥಯಾತ್ರೆ (Pancharatna Yatra) ಪ್ರಾರಂಭಿಸಿದ್ದೇವೆ ಎಂದು ತಿಳಿಸಿದರು.
ತುಮಕೂರು ನಗರ ಕ್ಷೇತ್ರದಲ್ಲಿ ಟಿಕೆಟ್ ಗೊಂದಲ ವಿಚಾರವಾಗಿ ಮಾತನಾಡಿದ ಅವರು, 2 ಬಾರಿ ಕಡಿಮೆ ಅಂತರದಲ್ಲಿ ಗೋವಿಂದರಾಜು ಸೋತಿದ್ದರೂ ಅವರು ಒಳ್ಳೆಯ ಕೆಲಸ ಮಾಡಿಕೊಂಡು ಬಂದಿದ್ದಾರೆ. ಗೋವಿಂದರಾಜುಗೆ ಟಿಕೆಟ್ ಕೊಡಲು ತೀರ್ಮಾನಿಸಲಾಗಿದೆ. ಇದರ ಬಗ್ಗೆ ಯಾವುದೇ ಗೊಂದಲ ಇಲ್ಲ ಎಂದರು.
ತಿಪಟೂರು ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಯಾವುದೇ ಅಭ್ಯರ್ಥಿ ಇಲ್ಲದ ವಿಚಾರವಾಗಿ ಮಾತನಾಡಿ, ಅಲ್ಲಿಗೆ ಸೂಕ್ತ ಅಭ್ಯರ್ಥಿಯನ್ನು ಹಾಕಲಾಗುವುದು. ಈ ಬಾರಿ ಶಿರಾದಲ್ಲಿಯೂ ಕೂಡಾ ಜೆಡಿಎಸ್ ಗೆಲ್ಲುತ್ತದೆ. ತುಮಕೂರು ಜಿಲ್ಲೆಯ 11 ಕ್ಷೇತ್ರದಲ್ಲಿ ಜೆಡಿಎಸ್ ಗೆಲ್ಲಲಿದೆ. ಈ ಬಾರಿ ಅತಂತ್ರ ಫಲಿತಾಂಶ ಬರುವ ಪ್ರಶ್ನೆಯೇ ಇಲ್ಲ. 123 ಸ್ಥಾನ ಗಳಿಸಿ ಜೆಡಿಎಸ್ ಅಧಿಕಾರಕ್ಕೆ ಬಂದೇ ಬರುತ್ತದೆ. ಹಂತ ಹಂತವಾಗಿ ಇಡೀ ರಾಜ್ಯ ಪಂಚರತ್ನ ಯಾತ್ರೆಗೆ ಹೋಗುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ವಿಧಾನಸಭೆ ಚುನಾವಣೆ: ಮೋದಿ ಜನಪ್ರಿಯತೆಗೆ ಕಾರಣ ಏನು? – ಜನಮನ ಗೆದ್ದ ಗುಜರಾತ್ ಮಾಡೆಲ್ ಯೋಜನೆಗಳೇನು?
ಜೆಡಿಎಸ್‌ನ ಅಭ್ಯರ್ಥಿಗಳ ಪಟ್ಟಿ ಸದ್ಯದಲ್ಲೇ ಪ್ರಕಟವಾಗಲಿದೆ. ಶುಭ ಗಳಿಗೆ, ಶುಭ ಮೂಹೂರ್ತ ನೋಡಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ. ರಾಜಕೀಯದ ಸುನಾಮಿ ಅಲೆ ಜೆಡಿಎಸ್ ಪರವಾಗಿ ಎದ್ದಿದೆ. ಎಲ್ಲಾ ರಾಜಕೀಯ ಪಕ್ಷಗಳು ಕೊಚ್ಚಿಹೋಗುತ್ತವೆ ಎಂದು ಟಾಂಗ್ ನೀಡಿದರು.
ಬಿಜೆಪಿ ಕಾರ್ಯಕ್ರಮಗಳಲ್ಲಿ ರೌಡಿಶೀಟರ್‌ಗಳು ಭಾಗಿಯಾಗಿರುವ ವಿಚಾರದ ಬಗ್ಗೆ ಮಾತನಾಡಿ, ನಾನು ಇಂತಹ ವಿಚಾರಕ್ಕೆ ಪ್ರಾಮುಖ್ಯತೆ ಕೊಡುವುದಿಲ್ಲ. ನನ್ನ ಗುರಿ ಇರುವುದು ಪಂಚರತ್ನ ಯಾತ್ರೆ ಮೂಲಕ ನಾಡಿನ ಜನರ ಸಮಸ್ಯೆಗಳಿಗೆ ಪರಿಹಾರ ಕೊಡುವುದು. ಯಾರ ಪಕ್ಷದಲ್ಲಿ ಯಾರನ್ನು ಸೇರಿಸಿಕೊಳ್ಳುತ್ತಾರೆ, ಯಾರನ್ನು ಕಳುಹಿಸುತ್ತಾರೆ ಎಂಬ ವಿಚಾರ ನನಗೆ ಬೇಡವಾದುದು ಎಂದರು. ಇದನ್ನೂ ಓದಿ: ಗಡಿ ವಿವಾದ – ರಾಜ್ಯದ ನಿಲುವು ಸಂವಿಧಾನಬದ್ಧ: ಬೊಮ್ಮಾಯಿ