ಶೀಘ್ರವೇ ಮಲ್ಲಾಬಾದ್ ಏತ ನೀರಾವರಿ ಯೋಜನೆ ಟೆಂಡರ್ ಕೈಗೆತ್ತಿಕೊಳ್ಳುತ್ತೇವೆ: ಡಿಸಿಎಂ ಡಿ.ಕೆ.ಶಿವಕುಮಾರ್

Public TV
1 Min Read
DK Shivakumar 5

ಬೆಳಗಾವಿ: ಶೀಘ್ರದಲ್ಲೇ ಮಲ್ಲಾಬಾದ್ ಏತ ನೀರಾವರಿ ಯೋಜನೆ ಟೆಂಡರ್ ಪ್ರಕ್ರಿಯೆ ಕೈಗೆತ್ತಿಕೊಳ್ಳಲಾಗುವುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಭರವಸೆ ನೀಡಿದರು.

ವಿಧಾನ ಪರಿಷತ್ತಿನ ಶೂನ್ಯ ವೇಳೆಯಲ್ಲಿ ಬಿಜೆಪಿ ಸದಸ್ಯರಾದ ಬಿ.ಜಿ.ಪಾಟೀಲ್ ಅವರು ಕಲಬುರ್ಗಿ ಮಲ್ಲಾಬಾದ್ ಏತ ನೀರಾವರಿ ಯೋಜನೆ ಟೆಂಡರ್ ಪ್ರಕ್ರಿಯೆ ಸ್ಥಗಿತಗೊಂಡಿದ್ದು, ಕೂಡಲೇ ಟೆಂಡರ್ ಕರೆದು ಕಾಮಗಾರಿ ಆರಂಭಿಸಬೇಕು ಎಂದು ಮನವಿ ಮಾಡಿದರು.

ಈ ವೇಳೆ ಮಾತನಾಡಿದ ನೀರಾವರಿ ಸಚಿವರೂ ಆದ ಶಿವಕುಮಾರ್ ಅವರು, ಬಿ.ಜಿ.ಪಾಟೀಲ್ ಅವರ ಬೇಡಿಕೆ ಸರಿಯಾಗಿದೆ. ಬೊಮ್ಮಾಯಿ ಅವರ ಸರ್ಕಾರದ ಬಜೆಟ್‌ನಲ್ಲಿ ನೀರಾವರಿ ಇಲಾಖೆಗೆ 22 ಸಾವಿರ ಕೋಟಿ ಅನುದಾನ ನೀಡಿದ್ದರು. ಆದರೆ, ನಿಗಮಗಳಲ್ಲಿ 28 ಸಾವಿರ ಕೋಟಿ ಮೊತ್ತದ ಕೆಲಸಗಳನ್ನು ಕೈಗೆತ್ತಿಕೊಳ್ಳಲಾಗಿತ್ತು. ಕೆಲಸ ಮಾಡಿಸಿ ಬಿಲ್ ಪಾವತಿ ಮಾಡದಿದ್ದರೆ ಅನಗತ್ಯ ಒತ್ತಡ ಬೀಳಲಿದೆ. ಕೇಂದ್ರ ಸರ್ಕಾರದಿಂದ ನಮಗೆ ಬರಬೇಕಾಗಿರುವ 5400 ಕೋಟಿ ಹಣ ಬಂದಿಲ್ಲ. ಹೀಗಾಗಿ ನಮ್ಮ ಬಜೆಟ್‌ನಲ್ಲಿ ಇದನ್ನು 16 ಸಾವಿರ ಕೋಟಿಗೆ ಇಳಿಸಲಾಗಿದೆ. ಕೋಲಾರದ ಎತ್ತಿನಹೊಳೆ ಯೋಜನೆ ಪರಿಸ್ಥಿತಿಯೂ ಹೀಗೆ ಇದೆ. ತುಮಕೂರಿಗೆ ನೀರು ಬರುವವರೆಗೂ ಕಾಮಗಾರಿ ಕೈಗೆತ್ತಿಕೊಳ್ಳದಂತೆ ತಡೆಹಿಡಿಯಲಾಗಿದೆ.

ಮೊನ್ನೆಯಷ್ಟೇ ಕೃಷ್ಣ ಮೇಲ್ದಂಡೆ ಯೋಜನೆ ವಿಚಾರವಾಗಿ ನಮ್ಮ ಮೇಲೆ ಒತ್ತಡ ಹಾಕಿದ್ದಾರೆ. ಈಗಾಗಲೇ ರಾಜ್ಯದಲ್ಲಿ 1.50 ಲಕ್ಷ ಕೋಟಿ ಮೊತ್ತದ ನೀರಾವರಿ ಯೋಜನೆ ಕೆಲಸಗಳು ನಡೆಯುತ್ತಿವೆ. ಆದರೆ ನನ್ನ ಇಲಾಖೆ ಬಜೆಟ್ ಇರುವುದು 16 ಸಾವಿರ ಕೋಟಿ. ಇದರಲ್ಲಿ 50% ಹಣ ಹಳೆ ಸಾಲಕ್ಕೆ ಪಾವತಿಯಾಗುತ್ತಿದೆ. 25% ಹಣ ಭೂಸ್ವಾಧೀನ ಪ್ರಕ್ರಿಯೆಗೆ ಹೋಗುತ್ತದೆ. ಇನ್ನು 25% ಹಣ ಮಾತ್ರ ಉಳಿಯುತ್ತದೆ. ಈ ಯೋಜನೆ ನಮ್ಮ ಗಮನದಲ್ಲಿದೆ. ನಿಮ್ಮ ಕಾಲದಲ್ಲಿ 130 ಕೋಟಿ ವೆಚ್ಚದ ಈ ಯೋಜನೆಗೆ ಅನುಮತಿ ನೀಡಲಾಗಿದ್ದು, ನಾವು ಮಾತು ಕೊಟ್ಟಿದ್ದು, ಈ ಯೋಜನೆಯನ್ನು ಶೀಘ್ರ ಕೈಗೆತ್ತಿಕೊಳ್ಳುತ್ತೇವೆ ಎಂದು ತಿಳಿಸಿದರು.

Share This Article