ಧಾರವಾಡ: ಪೌರತ್ವ ಕಾಯ್ದೆ ವಿರೋಧಿಸಿ ಮಾಜಿ ಸಚಿವ ಯು.ಟಿ ಖಾದರ್ ಹೇಳಿಕೆ ವಿಚಾರವಾಗಿ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿರುಗೇಟು ನೀಡಿದ್ದು, ನೀವು ಹಾಕುವ ಬೆಂಕಿಗೆ ನೀರು ಹಾಕಿ ನಂದಿಸುವ ಸಾಮರ್ಥ್ಯ ನಮಗಿದೆ ಎಂದು ತಿರುಗೇಟು ನೀಡಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಷ್ಟ್ರೀಯತೆ ಗಮನ ಇಟ್ಟುಕೊಂಡು ಪ್ರಜಾಪ್ರಭುತ್ವದ ದೇಗುಲವಾದ ಸಂಸತ್‍ನಲ್ಲಿ ಪೌರತ್ವ ಕಾಯ್ದೆ ತಿದ್ದುಪಡಿಯಾಗಿ ರೂಪಗೊಂಡಿದೆ. ಬಹುಮತದಿಂದ ತಿದ್ದುಪಡಿ ಮಸೂದೆ ಕಾಯ್ದೆಯಾಗಿ ಜಾರಿಗೆ ಬಂದಿದೆ. ಈ ತಿದ್ದುಪಡಿ ಕಾಯ್ದೆಯನ್ನು ಇಡೀ ರಾಷ್ಟ್ರವೇ ಸ್ವಾಗತಿಸಿದೆ. ಆದರೆ ಅಧಿಕಾರ ಕಳೆದುಕೊಂಡ ಕೆಲವರು ರಾಜಕೀಯ ಪ್ರೇರಿತ ಚರ್ಚೆಗಳನ್ನು ಮುಂದಿಟ್ಟಿದ್ದಾರೆ. ಜನರಿಗೆ ತಪ್ಪು ಸಂದೇಶ ರವಾನಿಸುತ್ತಿದ್ದಾರೆ ಎಂದು ಕಿಡಿಕಾರಿದರು.
Advertisement
Advertisement
ರಾಜ್ಯದಲ್ಲಿ ಬೆಂಕಿ ಬೀಳುತ್ತೆ ಅಂತಾ ಯು.ಟಿ ಖಾದರ್ ಹೇಳಿದ್ದಾರೆ. ಆದರೆ ವರುಣ ದೇವನ ಕೃಪೆಯಿಂದ ಕರ್ನಾಟಕದಲ್ಲಿ ಸಮೃದ್ಧವಾದ ಜಲವಿದೆ. ನದಿಗಳೆಲ್ಲಾ ಭರ್ತಿಯಾಗಿವೆ. ನೀವು ಹಾಕುವ ಬೆಂಕಿಗೆ ನೀರು ಹಾಕುವ ಸಾಮರ್ಥ್ಯ ನಮಗಿದೆ ಎಂದು ಸಚಿವರು ಕೈ ನಾಯಕನಿಗೆ ಟಾಂಗ್ ಕೊಟ್ಟರು.
Advertisement
ಇದೇ ವೇಳೆ ಹಿಂದಿನ ಸರ್ಕಾರ ಮಠಗಳಿಗೆ ನೀಡಿದ ಅನುದಾನ ದೇವಸ್ಥಾನಗಳಿಗೆ ವರ್ಗಾಯಿಸುವ ವಿಚಾರವಾಗಿ ಮಾತನಾಡಿ, 60 ಕೋಟಿ ಹಣವನ್ನು ಮಠಗಳಿಗೆ ನೀಡುವ ಪ್ರಸ್ತಾಪ ಇದೆ. ಯಾವುದೇ ಮಠಗಳನ್ನು ನಿರ್ಲಕ್ಷ್ಯ ಮಾಡುವುದಿಲ್ಲ. ಯಾವುದೇ ಸರ್ಕಾರ ಹಣ ನೀಡಿದ್ದರೂ ಅದನ್ನು ನಾವು ನ್ಯಾಯಸಮ್ಮತವಾಗಿ ತಲುಪಿಸುತ್ತೇವೆ ಎಂದು ಹೇಳಿದರು. ಮಠಗಳಿಗೆ ನೀಡುವ ಹಣವನ್ನು ಯಾವ ದೇವಸ್ಥಾನಕ್ಕೂ ನೀಡುತ್ತಿಲ್ಲ. ಹಣಕಾಸಿನ ಹೊಂದಾಣಿಕೆ ವಿಷಯದಲ್ಲಿ ಮಾತ್ರ ಸ್ವಲ್ಪ ತಡವಾಗಿದೆ. ಪರಿಶೀಲನೆ ಮಾಡಿ ಬಿಡುಗಡೆ ಮಾಡುತ್ತೇವೆ ಎಂದು ತಿಳಿಸಿದರು.