ಮಂಗಳೂರು: ಬಿಜೆಪಿ ಸರ್ಕಾರ (BJP Government) ದ ಅವಧಿಯಲ್ಲಿ ಜಾರಿಗೆ ಬಂದಿದ್ದ ಮತಾಂತರ ನಿಷೇಧ ಕಾಯಿದೆ (Anti-conversion Law) ಯನ್ನು ವಾಪಸ್ ಪಡೆಯುವ ಕಾಂಗ್ರೆಸ್ ಸರ್ಕಾರ (Central Government) ದ ನಿರ್ಧಾರವನ್ನು ಸ್ಪಷ್ಟವಾಗಿ ವಿರೋಧಿಸುವುದಾಗಿ ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ್ ಕಾಮತ್ (Vedavyas Kamath)ಹೇಳಿದ್ದಾರೆ.
ಮತಾಂತರ ಎಂಬದು ಒಂದು ಸಾಮಾಜಿಕ ಪಿಡುಗು. ಇದು ಸಮಾಜದ ಅವನತಿಗೆ ಕಾರಣವಾಗಬಲ್ಲದು ಎನ್ನುವ ಸದುದ್ದೇಶದಿಂದ ನಮ್ಮ ಸರ್ಕಾರದ ಅವಧಿಯಲ್ಲಿ ಬಲವಂತದ ಮತಾಂತರ ನಿಷೇಧಿಸುವ ಕಾಯಿದೆ ಜಾರಿಗೊಳಿಸಲಾಗಿತ್ತು. ಆದರೆ ಈಗ ಆಮಿಷಗಳನ್ನೊಡ್ಡಿ, ಬೆದರಿಸಿ ಮತಾಂತರ ಮಾಡುವವರಿಗೆ ಶಿಕ್ಷೆ ವಿಧಿಸುವ ಕಾನೂನನ್ನು ರದ್ದುಪಡಿಸುವ ನಿರ್ಧಾರ ಮೂಲಕ ಕಾಂಗ್ರೆಸ್ (Congress) ಸಮಾಜಕ್ಕೆ ಏನು ಸಂದೇಶ ನೀಡಲು ಹೊರಟಿದೆ?. ಮುಕ್ತವಾಗಿ ಮತಾಂತರಗೊಳಿಸಲು ಸಮಾಜ ವಿದ್ರೋಹಿಗಳಿಗೆ ಕಾಂಗ್ರೆಸ್ ಆಹ್ವಾನ ನೀಡುತ್ತಿದೆಯೇ ಎಂದು ಅವರು ಪ್ರಶ್ನಿಸಿದ್ದಾರೆ.
ಬಲವಂತದಿಂದ ಮತಾಂತರ ಮಾಡುವವರಿಗೆ ಕಾನೂನಿನಡಿಯಲ್ಲಿ ಶಿಕ್ಷೆಗೊಳಪಡಿಸುವ ಕಾಯಿದೆಯನ್ನು ರದ್ದುಪಡಿಸುವ ಮೂಲಕ ರಾಜ್ಯದಲ್ಲಿ ಮತಾಂತರಿಗಳ ಅಟ್ಟಹಾಸಕ್ಕೆ ರತ್ನ ಕಂಬಳಿ ಹಾಸುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ನಿರಂತರವಾಗಿ ಹಿಂದೂ ಸಮಾಜವನ್ನು ಒಡೆಯುವ ಕೃತ್ಯವನ್ನು ಕಾಂಗ್ರೆಸ್ ಬೆಂಬಲಿಸುತ್ತದೆ ಎಂದು ಶಾಸಕ ಕಾಮತ್ ಆರೋಪಿಸಿದ್ದಾರೆ.
ಮತಾಂತರ ನಿಷೇಧ ಕಾಯಿದೆಯನ್ನು ವಾಪಸ್ ಪಡೆಯುವ ತನ್ನ ನಿರ್ಧಾರವನ್ನು ಕಾಂಗ್ರೆಸ್ ಸರ್ಕಾರ ಹಿಂಪಡೆಯಬೇಕು. ಇಲ್ಲದೇ ಹೋದಲ್ಲಿ ಇಡೀ ಹಿಂದೂ ಸಮಾಜ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಿದೆ ಎಂದು ಎಚ್ಚರಿಸಿದರು. ಇದನ್ನೂ ಓದಿ: ಮತಾಂತರ ನಿಷೇಧ ಕಾಯ್ದೆ ವಾಪಸ್ – ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ