– ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ಹಾರೋಹಳ್ಳಿ ಗ್ರಾಮದಲ್ಲಿ ಸಿಕ್ಕಿತ್ತು ಕಪ್ಪು ಶಿಲೆ
– ಜಮೀನಿನ ಮಾಲೀಕ, ಭೂಮಿ ಅಗೆದು ಶಿಲೆ ತೆಗೆದವರನ್ನೂ ಅಯೋಧ್ಯೆಗೆ ಕಳಿಸ್ತೀವಿ
– ಪಬ್ಲಿಕ್ ಟಿವಿ ಜೊತೆ ಶಾಸಕ ಜಿ.ಟಿ.ದೇವೇಗೌಡ ಮಾತು
ಮೈಸೂರು: ನಗರದ ಚಾಮುಂಡೇಶ್ವರಿ ಕ್ಷೇತ್ರದ ಹಾರೋಹಳ್ಳಿ ಗ್ರಾಮದಲ್ಲಿ ಸಿಕ್ಕ ಕಪ್ಪು ಶಿಲೆಯಲ್ಲಿ ಅಯೋಧ್ಯೆಯ ಬಾಲರಾಮನನ್ನು ಕೆತ್ತಲಾಗಿದೆ. ಹೀಗಾಗಿ ಈ ಕಪ್ಪು ಶಿಲೆ ಸಿಕ್ಕ ಜಾಗದಲ್ಲೇ ಶ್ರೀರಾಮ ದೇವಸ್ಥಾನ ಕಟ್ಟುವ ನಿರ್ಧಾರ ಮಾಡಲಾಗಿದೆ ಎಂದು ಶಾಸಕ ಜಿ.ಟಿ.ದೇವೇಗೌಡ (G.T.Deve Gowda) ತಿಳಿಸಿದ್ದಾರೆ.
ಅಯೋಧ್ಯೆಯ (Ayodhya) ಬಾಲರಾಮನ ಕೆತ್ತನೆಗೆ ಬಳಕೆಯಾದ ಕಪ್ಪು ಶಿಲೆ ಸಿಕ್ಕ ಜಮೀನಿನಲ್ಲಿ ಶ್ರೀರಾಮ ಮಂದಿರ (Ram Mandir) ಕಟ್ಟುವ ನಿರ್ಧಾರ ಮಾಡಲಾಗಿದೆ. ಜನವರಿ 22 ರಂದು ಬೆಳಗ್ಗೆ ಈ ದೇವಸ್ಥಾನದ ಭೂಮಿಪೂಜೆ ನಡೆಯಲಿದೆ ಎಂದು ಶಾಸಕರು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಶ್ರೀರಾಮನ ಪ್ರಾಣಪ್ರತಿಷ್ಠೆಗೆ ಮೋದಿ ಕಠಿಣ ವ್ರತ – ಪ್ರತಿದಿನ 1 ಗಂಟೆ ವಿಶೇಷ ಮಂತ್ರ ಪಠಣ
ಜಾಗ ಸಿಕ್ಕ ಸ್ಥಳದ 4 ಗುಂಟೆ ಜಮೀನನ್ನು ಮಂದಿರ ನಿರ್ಮಾಣಕ್ಕೆ ಸಂತೋಷದಿಂದ ಕೊಡುವುದಾಗಿ ಜಮೀನು ಮಾಲೀಕ ರಾಮದಾಸ್ ಹೇಳಿದ್ದಾರೆ ಎಂದು ‘ಪಬ್ಲಿಕ್ ಟಿವಿ’ ಜೊತೆ ಶಾಸಕ ಜಿ.ಟಿ.ದೇವೇಗೌಡ ಮಾಹಿತಿ ಹಂಚಿಕೊಂಡಿದ್ದಾರೆ.
ತಾಯಿ ಚಾಮುಂಡೇಶ್ವರಿ ಆಶೀರ್ವಾದದಿಂದ ನಮ್ಮ ಕ್ಷೇತ್ರದ ಗ್ರಾಮದಲ್ಲೇ ಕೃಷ್ಣ ಶಿಲೆ ಸಿಕ್ಕಿದೆ. ಆ ಶಿಲೆಯಿಂದ ಮೂಡಿಬಂದ ಶ್ರೀರಾಮ ಮೂರ್ತಿ ದರ್ಶನ ಪ್ರಪಂಚದಾದ್ಯಂತ ಶಾಶ್ವತವಾಗಿದೆ. ಇಂತಹ ಅವಕಾಶ ನಮ್ಮ ಕ್ಷೇತ್ರಕ್ಕೆ ಲಭಿಸಿದ್ದರಿಂದ ನಾನೂ ಕೂಡ ಸೌಭಾಗ್ಯವಂತ ಎಂದು ಖುಷಿ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ರಾಮಮಂದಿರ ಉದ್ಘಾಟನೆ : ಅವಕಾಶಕ್ಕಾಗಿ ಧನ್ಯವಾದ ಸಲ್ಲಿಸಿದ ರಿಷಬ್
ಜಮೀನನ ಮಾಲೀಕ ದಲಿತ ಸಮುದಾಯದವರು. ರಾಮಮಂದಿರಕ್ಕಾಗಿ ಜಮೀನನ್ನೇ ಬಿಟ್ಟುಕೊಡುತ್ತೇನೆ ಎಂದು ಒಪ್ಪಿಕೊಂಡಿದ್ದಾರೆ. ಇದೆಲ್ಲವನ್ನೂ ನೋಡಿದರೆ, ತಾಯಿ ಚಾಮುಂಡೇಶ್ವರಿ ಆಶೀರ್ವಾದ ಮತ್ತು ನಮ್ಮೆಲ್ಲರ ಸೌಭಾಗ್ಯ ಎಂದು ತಿಳಿಸಿದ್ದಾರೆ.
ಅಯೋಧ್ಯೆ ಶ್ರೀರಾಮಮಂದಿರ ಉದ್ಘಾಟನೆ ದಿನದಂದೇ ಮೈಸೂರಿನಲ್ಲಿ ಶಿಲೆ ಸಿಕ್ಕ ಜಾಗದಲ್ಲಿ ಭೂಮಿಪೂಜೆ ಮಾಡಲಾಗುವುದು. ಮೂರ್ತಿ ಕೆತ್ತನೆಗೆ ಅರುಣ್ ಯೋಗಿರಾಜ್ ಅವರನ್ನೇ ಸಂಪರ್ಕಿಸುತ್ತೇವೆ. ಅವರ ನಿರ್ದೇಶನದಂತೆಯೇ ನಡೆಯುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಪ್ರಾಣಪ್ರತಿಷ್ಠೆ ಕಣ್ತುಂಬಿಕೊಳ್ಳಲು ರಾಜ್ಯದಲ್ಲಿ ಸೋಮವಾರ ರಜೆ ಘೋಷಿಸಿ: ಸಿಎಂಗೆ ತೇಜಸ್ವಿ ಸೂರ್ಯ ಮನವಿ
ರಾಮಲಲ್ಲಾ ವಿಗ್ರಹ ಕೆತ್ತನೆಗೆ ಬಳಸಿರುವ ಶಿಲೆ ಸಿಕ್ಕ ಜಮೀನಿನ ಮಾಲೀಕರು, ಕಷ್ಟ ಪಟ್ಟು ಶಿಲೆಯನ್ನು ತೆಗೆದ ಶ್ರೀನಿವಾಸ್ ಮತ್ತು ಅವರ ಜೊತೆ ಕೆಲಸ ಮಾಡಿದವರನ್ನು ಅಯೋಧ್ಯೆಗೆ ಕಳುಹಿಸುತ್ತೇವೆ. ಅಲ್ಲಿ ಪ್ರತ್ಯೇಕವಾಗಿ ಪೂಜಾ ಕಾರ್ಯಕ್ರಮ ನೆರವೇರಿಸಿ ಬರುತ್ತೇವೆ ಎಂದು ತಿಳಿಸಿದ್ದಾರೆ.