ವಿಜಯಪುರ: ನಾವು ನಮ್ಮ ಮನೆಯಲ್ಲಿ ಕುರಾನ್ ಜೊತೆಗೆ ಶ್ರೀಗಳ ಆಶೀರ್ವಚನವನ್ನೂ ಕೇಳುತ್ತಿದ್ದೆವು. ಶ್ರೀಗಳ ಚಿಂತನೆ ಒಂದು ಧರ್ಮಕ್ಕೆ ಮಾತ್ರ ಸೀಮಿತವಲ್ಲ ಎಂದು ಸಿದ್ದೇಶ್ವರ ಸ್ವಾಮೀಜಿಯವರ (Siddheshwar Swamiji) ಮುಸ್ಲಿಂ (Muslim) ಭಕ್ತರು ಭಾವನಾತ್ಮಕವಾಗಿ ಹೇಳಿಕೆ ನೀಡಿದ್ದಾರೆ.
ಸೋಮವಾರ ಸಂಜೆ 6 ಗಂಟೆ ವೇಳೆಗೆ ನಡೆದಾಡುವ ದೇವರು ಸಿದ್ದೇಶ್ವರ ಮಹಾಸ್ವಾಮಿ ಲಿಂಗೈಕ್ಯರಾಗಿರುವ ಹಿನ್ನೆಲೆ ಅವರ ಅಂತಿಮ ದರ್ಶನಕ್ಕಾಗಿ ಸಾವಿರಾರು ಭಕ್ತರ ದಂಡು ವಿಜಯಪುರಕ್ಕೆ (Vijayapura) ಆಗಮಿಸಿದೆ. ಇದೇ ವೇಳೆ ಅವರ ಅಂತಿಮ ದರ್ಶನಕ್ಕೆಂದು ಬಂದಿದ್ದ ಮುಸ್ಲಿಂ ಭಕ್ತರು ತಮಗಿದ್ದ ಅವರ ಮೇಲಿನ ಭಕ್ತಿ ಬಗ್ಗೆ ಗದ್ಗದಿತರಾಗಿ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ್ದಾರೆ.
“ನಾವು ಶ್ರೀಗಳು ಬದುಕಿದ್ದಾಗ ಅವರ ಮಠಕ್ಕೆ ಹೋಗಿ ಅವರ ಪ್ರವಚನ ಕೇಳಬೇಕೆಂದು ಬಹಳ ಬಾರಿ ಅಂದುಕೊಂಡಿದ್ದೆವು. ಆದರೆ ನಾವು ಇಂದು ಅವರು ನಮ್ಮೊಂದಿಗೆ ಇಲ್ಲದಿರುವಾಗ ಭೇಟಿಯಾಗುತ್ತೇವೆ ಎಂದುಕೊಂಡಿರಲಿಲ್ಲ. ಅವರ ಬಗೆಗಿನ ಒಂದು ನಿಜ ವಿಚಾರ ಏನೆಂದರೆ, ಅವರಿಗೆ ಮರಣ ಇಲ್ಲ ಎಂದು ಭಾವನಾತ್ಮಕವಾಗಿ ತಮ್ಮ ನೋವನ್ನು ತೋಡಿಕೊಂಡರು. ಇದನ್ನೂ ಓದಿ: ಉತ್ತರ ಕರ್ನಾಟಕದ ನಡೆದಾಡುವ ದೇವರು ಸಿದ್ದೇಶ್ವರ ಶ್ರೀ
ಕಳೆದ 5 ದಿನಗಳಿಂದ ಸಿದ್ದೇಶ್ವರ ಸ್ವಾಮೀಜಿ ಅನಾರೋಗ್ಯದಿಂದ ಬಳಲುತ್ತಿದ್ದರು. ಸಿದ್ದೇಶ್ವರ ಸ್ವಾಮೀಜಿ ಆರೋಗ್ಯ ಸ್ಥಿರವಾಗಿತ್ತು. ಆದರೆ ಸೋಮವಾರ ಮಧ್ಯಾಹ್ನ ಮತ್ತು ಸಂಜೆಯ ಹೆಲ್ತ್ ಬುಲೆಟಿನ್‌ನಲ್ಲಿ ಸ್ವಾಮೀಜಿಗೆ ಉಸಿರಾಟ ತೊಂದರೆ ಜಾಸ್ತಿಯಾಗಿದೆ. ಸ್ವಾಮೀಜಿ ಬಿಪಿ ಸ್ವಲ್ಪ ಕಡಿಮೆಯಾಗಿದೆ. ಸ್ವಾಮೀಜಿ ಆಹಾರ ತೆಗೆದುಕೊಳ್ಳುತ್ತಿಲ್ಲ. ಆದರೂ ಸಿದ್ದೇಶ್ವರ ಸ್ವಾಮೀಜಿ ಅವರ ಆರೋಗ್ಯ ಸ್ಥಿರವಾಗಿದೆ. ನಾವು ನಮ್ಮ ಶಕ್ತಿ ಮೀರಿ ಪ್ರಯತ್ನ ಪಡುತ್ತಿದ್ದೇವೆ. ಸ್ವಾಮೀಜಿ ಆಸ್ಪತ್ರೆಗೆ ಬರಲು ಒಪ್ಪುತ್ತಿಲ್ಲ. ಏನು ಚಿಕಿತ್ಸೆ ಕೊಡುತ್ತಿರೋ ಇಲ್ಲೇ ಕೊಡಿ ಎಂದು ಸ್ವಾಮೀಜಿ ಹೇಳಿದ್ದರು ಎಂದು ವೈದ್ಯರು ತಿಳಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸೋಮವಾರ ಸಂಜೆ 6:05ಕ್ಕೆ ಅವರು ಲಿಂಗೈಕ್ಯರಾಗಿದ್ದಾರೆ.
ಅವರ ಅಂತಿಮ ದರ್ಶನಕ್ಕಾಗಿ ನಗರದ ಸೈನಿಕ ಶಾಲೆ ಮೈದಾನದಲ್ಲಿ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ. ಧರ್ಮದ ಎಲ್ಲೆಯನ್ನು ಮೀರಿ ಶ್ರೀಗಳ ದರ್ಶನ ಪಡೆಯಲು ಸಾವಿರಾರು ಜನರು ಹರಿದು ಬಂದಿದ್ದಾರೆ. ಇದನ್ನೂ ಓದಿ: ಸಿದ್ಧೇಶ್ವರ ಶ್ರೀ ಲಿಂಗೈಕ್ಯ – ಕನ್ನಡದಲ್ಲೇ ಟ್ವೀಟ್ ಮಾಡಿ ಪ್ರಧಾನಿ ಮೋದಿ ಸಂತಾಪ